ಪತ್ರ 1
‘ಉದಯರವಿ’ ತಾ. 24.1.56

ಪ್ರೀತಿಯ ಚಿರಂಜೀವಿ ತೇಜಸ್ವಿಗೆ,
ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು.

ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳು ಮಾಡದೆ ನಾಲ್ಕಾರು ಸಾರಿ ಶಾಂತ ಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು.
ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು– ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು. ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ– ನೀನೇನೋ ಇಂಜಕ್ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ.

ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದುವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ. ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು.
ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ತಿಳಿಸಿದಂತೆ– ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು.

ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಆವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೇ ನಿನಗೆ ಹೇಳುತ್ತಿದ್ದೇನೆ.

ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವ ಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿ ಕೊಡುತ್ತದೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ.

ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ, ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ.
ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗ ತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗ ತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವಾ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.

ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ.
ನೀನು ಶ್ರೀರಾಮಾಯಣದರ್ಶನಂ ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಆವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು.

ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ,

ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನ್ನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು.

ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು. ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವ ತನಕ ಅದನ್ನೇ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದಲ್ಲಿ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಎಸ್‌ಎಸ್‌ಎಲ್‌ಸಿ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ.

ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಹೊತ್ತಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು, ಈಗ ನೀನು ಆರ್ಟ್ಸ್ ತೆಗೆದುಕೊಂಡಿದ್ದೀಯೆ, ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನ ಮಾಡಬಲ್ಲುದು.

ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆಯು ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ.

ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ, ಶ್ರೇಯಸ್ಸು, ಅಭ್ಯುದಯ, ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ.

ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅವನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ.

ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯದ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈ ಚಾಚಿದರೆ!
ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.
ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!!
ಆಶೀರ್ವಾದಗಳು.
–ಕುವೆಂಪು

ಪತ್ರ 2
‘ಉದಯರವಿ’ 4.5.75

ಚಿ|| ತೇಜಸ್ವಿಗೆ,
ನಿನ್ನ ತಾರೀಖಿಲ್ಲದ ಕಾಗದ ತಲುಪಿತು.
ನಿನ್ನ ‘ನಿಗೂಢ ಮನುಷ್ಯರು’ ಸಿನಿಮಾ ಆಗುವ ವಿಚಾರ ಪತ್ರಿಕೆಯಲ್ಲಿ ಬಂದ ಹಾಗಿತ್ತು. ಯಾರಾದರೂ ಮಾಡಲಿ, ಚೆನ್ನಾಗಿ ಜಾತಿ

ಪಕ್ಷಪಾತದ ಸೋಂಕಿಲ್ಲದೆ ಮಾಡಬೇಕಾದ್ದು ಮುಖ್ಯ.

ಈಗ ಬ್ಯಾಂಕಿನ ಬಡ್ಡಿಯನ್ನು ಏರಿಸಿದ್ದಾರೆ 20%ಕ್ಕೆ. ನಾನು 30000 ಬೆಳೆಸಾಲ ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದೀಯ? ಬೆಳೆಸಾಲ ಎಂದರೆ ಏನು? ಯಾವಾಗ ತೀರಿಸಬೇಕು? ನೀನು ಹಿಂದೆಯೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದನ್ನೆಲ್ಲ ತೀರಿಸಿಯಾಯಿತೇ? ಅದಕ್ಕೆ ಎಷ್ಟು ಬಡ್ಡಿ ಹಾಕಿದ್ದರು ಅಥವಾ ಹಾಕಿದ್ದಾರೆ. ಆ ಸಾಲಕ್ಕೂ ಈ ಸಾಲಕ್ಕೂ ಏನು ವ್ಯತ್ಯಾಸ? ಏತಕ್ಕಾಗಿ ಈ ಹೊಸ ಸಾಲ ಎತ್ತುತ್ತೀಯಾ? ಈ ಸಾರಿ ಫಸಲು ಚೆನ್ನಾಗಿರುವುದರಿಂದ ಸಾಲವನ್ನೆಲ್ಲಾ ತೀರಿಸಿ ಬಿಡುತ್ತೇನೆ ಎನ್ನುತ್ತಿದ್ದಿ. ಆದರೆ ಸಾಲ ತೀರಿಸುವುದಕ್ಕೆ ಬದಲಾಗಿ 30000 ಎತ್ತುತ್ತೇನೆ ಎಂದು ಬರೆದಿದ್ದೀಯಲ್ಲಾ?

ನಾನೀಗ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ‘ಬೆರಳ್ಗೆ ಕೊರಳ್’ ನಾಟಕವನ್ನು ಅಚ್ಚು ಹಾಕಿಸುತ್ತಿದ್ದೇನೆ. ಎರಡಕ್ಕೂ ಒಟ್ಟು ಸುಮಾರು 35-40 ಸಾವಿರವಾಗುತ್ತದೆ. ಅಲ್ಲದೆ ತಾರಿಣಿಯ ಮನೆ ಕಟ್ಟಲೂ ಪ್ರಾರಂಭಿಸಿಯಾಗಿದೆ. ಅದಕ್ಕೂ ಬಹಳ ಬೇಕಾಗುತ್ತದೆ. ಆದ್ದರಿಂದ ತೊಂದರೆಯಾಗಿದೆ. ಆದ್ದರಿಂದ 30000 ಕೊಡಲು ಸಾಧ್ಯವಿಲ್ಲ. ಏನಾದರೂ ಅಲ್ಪಕ್ಕೆ ಪ್ರಯತ್ನ ಮಾಡಬಹುದೇನೋ ಬ್ಯಾಂಕಿನ ಲೆಖ್ಖ ನೋಡಿ ಹೇಳಬೇಕಾಗುತ್ತದೆ. ಅಲ್ಲದೆ ಫಿಕ್ಸೆಡ್ ಡಿಪಾಸಿಟ್ಟುಗಳನ್ನು ಅರ್ಧದಲ್ಲಿ ತೆಗೆಯಲಾಗುವುದಿಲ್ಲ.

ಒಂದುವೇಳೆ ನಿನಗೆ ಕೊಟ್ಟರೆ ನನಗೆ ಬೇಕಾದಾಗ ಯಾವಾಗ ಒಟ್ಟಿಗೆ ತೀರಿಸಲು ಸಾಧ್ಯವಾಗುತ್ತದೆ? ಪುಸ್ತಕಕ್ಕೆ ಕೊಡಬೇಕಾದ್ದನ್ನು ಒಂದು ವೇಳೆ ತಾತ್ಕಾಲಿಕವಾಗಿ ನಿನಗೆ ಕೊಟ್ಟರೆ ಪುಸ್ತಕ ಅಚ್ಚು ಮುಗಿದೊಡನೆ ಪ್ರೆಸ್ಸಿನವರಿಗೆ ಕೊಡಲು ನೀನು ತಟಕ್ಕನೆ ಕೊಡಲು ಸಾಧ್ಯವಾಗುತ್ತದೆಯೆ? ಹಿಂದೆ ನಿನ್ನ ಜೀಪಿನ ವ್ಯವಹಾರದಲ್ಲಿ 8000 ಮತ್ತು ಸ್ಕೂಟರಿನ ವ್ಯವಹಾರದಲ್ಲಿ 4000 ಕೊಟ್ಟಿದ್ದನ್ನೆ ಇದುವರೆಗೂ ಹಿಂದಿರುಗಿಸಲು ನಿನಗೆ ಸಾಧ್ಯವಾಗಿಲ್ಲ!!!

ನೀನು ಹಿಂದೆ ಬ್ಯಾಂಕಿನಿಂದ ನಿನಗೆ 80000 ಸ್ಯಾಂಕ್ಷನ್ ಆಗಿದೆ ಎಂದು ಹೇಳುತ್ತಿದ್ದೆ. ಅದೆಲ್ಲಾ ಏನಾಯಿತು?
ತೋಟದ ಜಮಾ ಖರ್ಚು ವೆಚ್ಚ ವಿವರ ಇಡುತ್ತಿದ್ದೀಯಾ? ನಾನು ಕೇಳಿದ್ದಕ್ಕೆಲ್ಲ ತುಸು ವಿವರವಾಗಿ ತಿಳಿಸುತ್ತೀಯ ಎಂದು ನಂಬಿದ್ದೇನೆ. ತಾರಿಣಿ-ಪ್ರಾರ್ಥನಾ ಈಗ ಇಲ್ಲಿಯೆ ಮನೆಯಲ್ಲಿ ಇದ್ದಾರೆ. ಚಿದಾನಂದರು ಮೊನ್ನೆ ದೆಹಲಿಗೆ, ಇಂಟರ್‌ವ್ಯೂಗೆ ಹೋಗಿದ್ದಾರೆ. ಐದಾರು ದಿನಗಳಾಗುತ್ತದಂತೆ ಅವರು ಬರುವುದು. ಅವರಿಗೆ ಸೋವಿಯತ್ PhD ಸ್ಕಾಲರ್‌ಷಿಪ್ ಸಿಗುವ ಸಂಭವವಿದೆಯಂತೆ. ಮೂರುವರ್ಷ ರಷ್ಯಾದಲ್ಲಿರುವುದಕ್ಕೂ ಹೋಗಿಬರುವುದಕ್ಕೂ ಅವರೇ ಖರ್ಚು ಕೊಡುತ್ತಾರಂತೆ.

ಮೊನ್ನೆ ಪ್ರಭುಶಂಕರ್ ಗುನ್ನರ್‌ಮಿರ್‌ಡಾಲ್ ಅರ್ಥಶಾಸ್ತ್ರಜ್ಞನ The Challenge of world poverty (ದಿ ಛಾಲೆಂಜ್ ಆಫ್ ವರ್ಲ್ಡ್ ಪಾವರ್ಟಿ) ಪುನಃ ಓದಲು ಕೊಟ್ಟಿದ್ದಾರೆ. ಆದರೆ Soft States ಇಂಡಿಯಾದಲ್ಲಿ ಆಗುತ್ತಿರುವ ಅವಿವೇಕ ಅನ್ಯಾಯಕ್ಕೆಲ್ಲ ಮೂಲ ಕಾರಣಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾನೆ. ಎಷ್ಟು ಹೊರದೇಶಗಳಿಂದ ಸಾಲವೆತ್ತಿದರೂ ನಮ್ಮ ದೇಶದಲ್ಲಿಯೆ ಆರ್ಥಿಕ ಮತ್ತು ಸಾಮಾಜಿಕ ಕ್ರ್ರಾಂತಿ ಆಗದಿದ್ದರೆ ಎಂದಿಗೂ ಈ ಬಡತನ ಹೋಗುವುದಿಲ್ಲ ಎಂದು ಬರೆದಿದ್ದಾನೆ.

ಚಿ|| ರಾಜೇಶ್ವರಿ ನಮಗೆ ಬರೆದ ಕಾಗದದಲ್ಲಿ ಮೊದಲ ಮಳೆಗೆ ಶೇಕಡ 30% ಹೂವು ಮಾತ್ರ ಅರಳಿವೆ. ಇನ್ನೊಂದು ಮಳೆ ಚೆನ್ನಾಗಿ ಆದರೆ ಉಳಿದ ಹೂ ಅರಳಬಹುದು ಎಂದು ಬರೆದಿದ್ದಳು. ನೀನು ಬರೆದಿರುವ ಭಾರಿ ಮಳೆಗಳಿಗೆ ಹೂವು ಪೂರ್ತಿ ಅರಳಿದುವೆ? ಮುಂದಿನ ಫಸಲು ಹೇಗಾಗುತ್ತಿದೆ?
ಆಶೀರ್ವಾದಗಳೊಂದಿಗೆ
–ಕುವೆಂಪು

ಅಂದಹಾಗೆ, ಕನ್ನಡ ಸಾಂಸ್ಕೃತಿಕ ಲೋಕದ ಪ್ರಸಿದ್ಧರು ತೇಜಸ್ವಿ ಅವರೊಂದಿಗೆ ಸಂವಾದಿಸಿರುವ ಪತ್ರಗಳೆಲ್ಲ ಒಟ್ಟಾಗಿ, ‘ತೇಜಸ್ವಿ ಪತ್ರಗಳು’ (ಪ್ರ: ಕನಸು ಪ್ರಕಾಶನ, ದೇರ್ಲ, ದಕ್ಷಿಣ ಕನ್ನಡ) ಹೆಸರಿನಲ್ಲಿ ಈಗ ಪುಸ್ತಕರೂಪ ತಾಳಿವೆ. ನರೇಂದ್ರ ರೈ ದೇರ್ಲ ಅವರು ಸಂಪಾದಿಸಿರುವ ಈ ಕೃತಿ (660 ಪುಟ, 700ಕ್ಕೂ ಹೆಚ್ಚು ಪತ್ರಗಳು) ಮೇ 10ರಂದು ಪುತ್ತೂರಿನಲ್ಲಿ ಬಿಡುಗಡೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.