ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್‌ ಜಾಮೀನು ಜೂ.27ರ ವರೆಗೆ ವಿಸ್ತರಣೆ

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆಹೆಲ್ಕಾ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರ ಜಾಮೀನು ಅವಧಿಯನ್ನು ಜೂನ್‌ 27ರ ವರೆಗೆ ವಿಸ್ತರಿಸಿ ಸುಪ್ರೀಂಕೋರ್ಟ್‌ ಮಂಗಳವಾರ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜೆ.ಎಸ್‌. ಖೇಹರ್‌ ಮತ್ತು ಸಿ. ನಾಗಪ್ಪನ್‌ ಅವರು ತೇಜ್‌ಪಾಲ್‌ ಅವರ ಜಾಮೀನು ಅವಧಿ ವಿಸ್ತರಿಸಿದರು.

‘ಈಗಾಗಲೇ ತೇಜ್‌ಪಾಲ್‌ ಅವರಿಗೆ ಜಾಮೀನು ನೀಡಲಾಗಿದೆ’ ಎಂದು ಅವರು ಹೇಳಿದರು.

ಇತ್ತೀಚೆಗೆ ನಿಧನರಾದ ಅವರ ತಾಯಿಯ ಕೆಲ ನಿರ್ದಿಷ್ಟ ವಿಧಿ ವಿಧಾನಗಳನ್ನು ಪೂರೈಸಬೇಕಾಗಿರುವುದರಿಂದ ಜಾಮೀನು ಅವಧಿಯನ್ನು ಕನಿಷ್ಠ ಮೂರು ವಾರಗಳ ವರೆಗೆ ವಿಸ್ತರಿಸಬೇಕೆಂದು ತೇಜ್‌ಪಾಲ್‌ ಪರ ವಾದಿಸಿದ ಹಿರಿಯ ವಕೀಲ ಮತ್ತು ಮಾಜಿ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌  ಅವರು ನ್ಯಾಯಾಲಯವನ್ನು ಕೋರಿದರು.

‘ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಸುಪ್ರೀಂಕೋರ್ಟ್‌ ಮಧ್ಯಾಂತರ ಜಾಮೀನು ನೀಡಿದರೂ ತೇಜ್‌ಪಾಲ್‌ ಅವರನ್ನು ತಡವಾಗಿ ಬಿಡುಗಡೆ ಮಾಡಲಾಯಿತು. ಇದರಿಂದ ಅವರು ತಮ್ಮ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ರೀತಿಯ ನಡವಳಿಕೆ ಸರಿಯಲ್ಲ’ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಆರೋಪಿ ತೇಜ್‌ಪಾಲ್‌ ಅವರು ಜೈಲಿನ ಒಳಗಡೆ ಮೊಬೈಲ್‌ ಬಳಸುತ್ತಿದ್ದರು. ಪ್ರಕರಣದ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು  ಮತ್ತು ಅವರ ಸಹೋದ್ಯೋಗಿಯ ತಾಯಿಯ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪವೂ ಅವರ ಮೇಲಿದೆ’ ಎಂದು ಗೋವಾ ಪೊಲೀಸರ ಪರ ವಾದಿಸಿದ ವಕೀಲರು ಜಾಮೀನು ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ಇದನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಲಿಲ್ಲ.

ತೇಜ್‌ಪಾಲ್‌ ಅವರು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ನ್ಯಾಯಾಲಯದಲ್ಲಿ ತಪ್ಪದೆ ಹಾಜರಾಗಬೇಕೆಂದು ಸುಪ್ರೀಂಕೋರ್ಟ್‌ ಇದೇ ವೇಳೆ ಸ್ಪಷ್ಟಪಡಿಸಿದೆ.

ತೇಜ್‌ಪಾಲ್‌ ಅವರು ಸೋಮವಾರ ಮಧ್ಯಾಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೇಜ್‌ಪಾಲ್‌ ಅವರಿಗೆ ಸುಪ್ರೀಂಕೋರ್ಟ್‌ ಮೇ 19ರಂದು ಮೂರು ವಾರ ಮಧ್ಯಾಂತರ ಜಾಮೀನು ನೀಡಿತ್ತು. ಮೇ 18ರಂದು ತೇಜ್‌ಪಾಲ್‌ ಅವರ ತಾಯಿ ನಿಧನ ಹೊಂದಿದ್ದರು.

ಕಳೆದ ನವೆಂಬರ್‌ನಲ್ಲಿ ಗೋವಾದ ಹೋಟೆಲ್‌ವೊಂದರಲ್ಲಿ ಸಹೋದ್ಯೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ತೇಜ್‌ಪಾಲ್‌ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT