ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗೆ ಸಿದ್ಧವಾದ ಎತ್ತರದ ಪಾಪಸ್‌ಕಳ್ಳಿ

Last Updated 23 ಜನವರಿ 2015, 6:57 IST
ಅಕ್ಷರ ಗಾತ್ರ

ಧಾರವಾಡ: ಅತಿ ಎತ್ತರ ಪಾಪಸ್‌ಕಳ್ಳಿ ಬೆಳೆಸಿ, ಗಿನ್ನಿಸ್‌ ದಾಖಲೆ ಮಾಡಿದ್ದ ಇಲ್ಲಿನ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು, ಇದೀಗ ತನ್ನದೇ ದಾಖಲೆ ಮುರಿಯುವ ಮತ್ತೊಂದು ಪ್ರಯತ್ನ ನಡೆಸಿದೆ.

ಇಲ್ಲಿನ ಸತ್ತೂರಿನಲ್ಲಿರುವ ಎಸ್‌­ಡಿಎಂ ಕಾಲೇಜಿನ ಉದ್ಯಾನ­ದಲ್ಲಿರುವ ‘ಸೆರಿಯುಸ್‌ ಪೆರುವಿ­ಯೆನ್ಸ್‌’ ಎಂಬ ಪ್ರಭೇದಕ್ಕೆ ಸೇರಿದ ಪಾಪಸ್‌ಕಳ್ಳಿಯು ಈಗ 105.8 ಅಡಿ ಎತ್ತರ ಬೆಳೆದು ನಿಂತಿದೆ. 2002ರ ಆಗಸ್ಟ್‌ 15­ರಂದು ಸ್ವಾತಂತ್ರ್ಯ ದಿನಾಚರಣೆ ಅಂಗ­ವಾಗಿ ಹಮ್ಮಿ­ಕೊಂಡಿದ್ದ ವನಮಹೋ­ತ್ಸವ ಕಾರ್ಯ­ಕ್ರಮದ ಸಂದರ್ಭದಲ್ಲಿ ಈ ಸಸಿ ನೆಡಲಾಗಿತ್ತು. ಪ್ರತಿ ವರ್ಷ 3ರಿಂದ 4 ಅಡಿ ಎತ್ತರ ಬೆಳೆಯುವ ಈ ಪಾಪಸ್‌ಕಳ್ಳಿಯು 2009ರಲ್ಲಿ 78.8 ಅಡಿ ಬೆಳೆದು ನಿಂತಿತ್ತು. ಆಗ ಈ ಗಿಡ ಗಿನ್ನಿಸ್‌ ದಾಖಲೆ ಸೇರಿತ್ತು. ಇದಾದ ನಂತರ ಮುಂದಿನ ಆರು ವರ್ಷಗಳಲ್ಲಿ 27 ಅಡಿಗಳಷ್ಟು ಎತ್ತರಕ್ಕೆ ಬೆಳೆದಿದೆ!

‘ನಾಲ್ಕು ಅಂತಸ್ತಿನ ಕಟ್ಟಡ ಹಾಗೂ ಅದರ ಮೇಲೆ ಸ್ಥಾಪಿಸಲಾದ ಗೋಪು­ರದ ಎತ್ತರವನ್ನೂ ಮೀರಿ ಗಿಡ ಬೆಳೆದು ನಿಂತಿದೆ. ಗಿಡದ ಬೆಳವಣಿಗೆಗೆ ಪೂರಕವಾಗಿ ಆಯಾ ಹಂತದಲ್ಲಿ ತಂತಿಯ ಆಸರೆ ನೀಡಲಾಗಿದೆ. ಗಿಡದ ಎತ್ತರ ಅರಿಯಲು ಅದಕ್ಕೆ ಅಳತೆ ಟೇಪ್‌ ಹಚ್ಚಲಾಗಿದೆ. ಈ ಗಿಡ ಮಾರ್ಚ್‌ನಿಂದ ಅಕ್ಟೋಬರ್‌ ತಿಂಗಳ ಅಂತರದಲ್ಲಿ ಹೂವು ಹಾಗೂ ಹಣ್ಣು ಬಿಡುತ್ತಿದ್ದು, ಹಣ್ಣು ರುಚಿಯಾಗಿ­ರುತ್ತದೆ’ ಎಂದು ಸಂಸ್ಥೆಯ ಕಾರ್ಯ­ದರ್ಶಿ ಡಾ.ಜಿನೇಂದ್ರ ಪ್ರಸಾದ್‌ ತಿಳಿಸಿದರು.

‘ದಾಖಲೆ ನಿರ್ಮಿಸುವ ಸಲು­ವಾಗಿಯೇ ದಕ್ಷಿಣ ಆಫ್ರಿಕಾದ ಈ ಸಸ್ಯ­ವನ್ನು ತಂದು ಇಲ್ಲಿ ನೆಡಲಾಗಿತ್ತು. ಗಿಡ ಬೆಳೆದಂತೆ ಕೊಂಬೆಗಳು ಬರು­ತ್ತವೆ. ಅವುಗಳನ್ನು ಆಗಾಗ ಕತ್ತರಿ­ಸು­ತ್ತೇವೆ. ಉಳಿದಂತೆ 3ರಿಂದ 4 ದಿನ­ಗಳಿ­ಗೊಮ್ಮೆ ನೀರು, ಪ್ರತಿ ಎರಡು ತಿಂಗಳಿ­ಗೊಮ್ಮೆ ಸಗಣಿ ಗೊಬ್ಬರ ನೀಡುತ್ತಾ ಆರೈಕೆ ಮಾಡಿಕೊಂಡು ಬರುತ್ತಿದ್ದೇವೆ. ಕಟ್ಟಡದ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗದಿರುವು­ದ­ರಿಂದ ಈ ಗಿಡವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ತುಸು ಕಷ್ಟ’ ಎಂದು ಇಲ್ಲಿನ ಉದ್ಯಾನದ ನಿರ್ವಹಣೆಯ ಹೊಣೆ ಹೊತ್ತ ಈರಣ್ಣ ಹಾಗೂ ಸುರೇಂದ್ರ ಶೇಲಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT