ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸರ ಪದಗಳ ರಸಧಾರೆ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಸಾಮಾನ್ಯ ಕೇಳುಗರನ್ನೂ ಸುಲಭವಾಗಿ ಸೆಳೆಯುವ ಶಕ್ತಿ ದಾಸರ ಪದಗಳಿಗಿದೆ. ಪುರಂದರದಾಸರು ಸೇರಿದಂತೆ ಎಲ್ಲ ಹರಿದಾಸರು ರಚಿಸಿದ ದೇವರನಾಮಗಳಲ್ಲಿ ಸಾಹಿತ್ಯ, ಸಂಗೀತ ಸಮೃದ್ಧವಾಗಿದ್ದು, ಕೇಳುಗರ ಮನಸ್ಸಿಗೆ ಖುಷಿ ಕೊಡುತ್ತದೆ.

ಕರ್ನಾಟಕ ಸಂಗೀತ ವಿದುಷಿ ನಾಗಮಣಿ ಶ್ರೀನಾಥ್ ಅವರ ಶಿಷ್ಯ ಗಣೇಶ್ ಬೀಜಾಡಿ ಹಾಡಿರುವ `ಎಂದಪ್ಪಿಕೊಂಬೆ ರಂಗಯ್ಯನ' ದಾಸರ ಪದಗಳ ಸಿ.ಡಿ. ಹೊರಬಂದಿದ್ದು, ಇದರಲ್ಲಿ ಹಾಡಿರುವ ದೇವರನಾಮ ಭಕ್ತಿರಸವನ್ನು ಉಕ್ಕಿಸುತ್ತದೆ. ಸಂಗೀತ ಇಂಪಾಗಿದೆ. ಸಂಗೀತ ಸಂಯೋಜನೆ ಮನಸೆಳೆಯುವಂತಿದೆ.

ಇದರಲ್ಲಿ ಪುರಂದರದಾಸರು, ಕರಿಗಿರಿ ವಿಠಲ, ಹೆಳವನಕಟ್ಟೆ ಗಿರಿಯಮ್ಮ, ವಲ್ಲಭಾಚಾರ್ಯ ಅವರು ರಚಿಸಿದ ಒಟ್ಟು 20 ದಾಸರ ಪದಗಳಿವೆ. ರಾಗ ಸಂಯೋಜನೆಯನ್ನು ಎಂ.ಎಸ್. ಗಿರಿಧರ್, ಸಂಗೀತ ನಿರ್ವಹಣೆಯನ್ನು ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರು ಮಾಡಿದ್ದಾರೆ.

ದೇವರನಾಮಗಳನ್ನು ಗಣೇಶ್ ರಸವತ್ತಾಗಿ ಹಾಡಿದ್ದಾರೆ. ಉತ್ತಮ ಶಾರೀರ, ಸ್ಪಷ್ಟವಾದ ಸಾಹಿತ್ಯ ಉಚ್ಚಾರದಿಂದ ಸಿ.ಡಿ. ಜನಪ್ರಿಯವಾಗಿದೆ. ಶ್ರೀಕೃಷ್ಣನ ಮೇಲೆಯೇ ರಚಿತವಾದ ಹಾಡುಗಳು ಅವನ ಸಂಪೂರ್ಣ ವ್ಯಕ್ತಿತ್ವನ್ನು ಕಟ್ಟಿಕೊಡುತ್ತವೆ.

ದೇವರನಾಮಗಳನ್ನೇ ಕೇಳಿ ಏಕತಾನತೆ ಉಂಟಾಗುವುದನ್ನು ತಪ್ಪಿಸಲು ಮಧ್ಯೆ ಮಧ್ಯೆ ಗಾಯಕರು ಶ್ಲೋಕಗಳನ್ನೂ ರಾಗಬದ್ಧವಾಗಿ ಹಾಡಿದ್ದಾರೆ. ಕೊನೆಗೆ ಹಾಡಿರುವ `ಕಾಲ ಮೇಲೆ ಮಲಗಿ' ಎಂಬ `ಉಗಾಭೋಗ' ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಸೊಗಸಾಗಿದೆ.

ಗಣೇಶ್ ಬೀಜಾಡಿ ಅವರು ಸಂಗೀತದ ಆರಂಭಿಕ ಅಭ್ಯಾಸವನ್ನು ವಿದ್ವಾನ್ ಶ್ರೀವತ್ಸ ಅವರ ಬಳಿ ಕಲಿತವರು. ಶ್ರೀರಂಗಪಟ್ಟಣದಲ್ಲಿ ಬೇಕರಿ ಕೆಲಸ ಮಾಡಿಕೊಂಡು ಅಲ್ಲಿಂದ ಮೈಸೂರಿಗೆ ಸಂಗೀತ ಕಲಿಕೆಗಾಗಿಯೇ ಓಡಾಡುತ್ತಿದ್ದರು. ಅದಾಗಿ ವಿದ್ವತ್ ಪಾಠವನ್ನು ಉಡುಪಿಯ ವಾಸುದೇವ ಭಟ್ ಮತ್ತು ಎಂ.ಎಸ್. ಗಿರಿಧರ್ ಅವರ ಬಳಿ ಕಲಿತರು.

ಹಾಗೆಂದು ಇವರ ಕುಟುಂಬದಲ್ಲಿ ಸಂಗೀತದ ಹಿನ್ನೆಲೆ ಏನೂ ಇಲ್ಲ. ಮನೆಯಲ್ಲಿ ಮೀನುಗಾರಿಕೆ ಮತ್ತು ಹೈನುಗಾರಿಕೆಯೇ ಕುಲಕಸುಬು. ಇವರಿಗೆ ಸಂಗೀತದ ಪ್ರೇರಣೆ ನೀಡಿದವರು ವಿದ್ಯಾಭೂಷಣರು, ನಾಗಮಣಿ ಶ್ರೀನಾಥ್, ವಾಸುದೇವ ಭಟ್, ಎಂ.ಎಸ್. ಗಿರಿಧರ್, ನರಹರಿ ದೀಕ್ಷಿತ್, ರಾಮಕೃಷ್ಣ ಉಪಾಧ್ಯಾಯ ಮುಂತಾದವರು.

ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿರುವ ಅನುಭವ ಇವರದ್ದು. ಶಿವನ ಮೇಲೆ ಇರುವ ಗೀತೆಗಳು `ಶಿವೋಹಂ' ಹೆಸರಿನಲ್ಲಿ ಸಿ.ಡಿ. ಆಗಿದೆ. `ಬಾರೋ ಮುರಾರಿ' ಹೆಸರಿನ ಓಂಕಾರ್ ಆಡಿಯೊ ಹೊರತಂದಿರುವ ಆಲ್ಬಂ ಹೊರಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT