ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ಬಾಬು ಶುಕ್ಲಪಕ್ಷ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

‘ಸುಪ್ರಭಾತ’, ‘ಲಾಲಿ’, ‘ಅಮೃತ ವರ್ಷಿಣಿ’ಯಂಥ ವಿಭಿನ್ನ ಸಿನಿಮಾಗಳ ದಿನೇಶ್ ಬಾಬು ಹಲವು ದಿನಗಳ ಬಳಿಕ ಮತ್ತೊಂದು ಸಿನಿಮಾದೊಂದಿಗೆ ಸುದ್ದಿಯಲ್ಲಿದ್ದಾರೆ. ‘ಪ್ರಿಯಾಂಕ’ ಸಿನಿಮಾದ ತಾಂತ್ರಿಕ ಕೆಲಸಗಳಲ್ಲಿ ಮಗ್ನರಾಗಿದ್ದ ಅವರು ‘ಚಂದನವನ’ದ ಜತೆ ನಡೆಸಿದ ಮಾತುಕತೆಯ ಒಂದಷ್ಟು ತುಣುಕುಗಳು ಇಲ್ಲಿವೆ.

ಚಿತ್ರರಂಗದಲ್ಲಿ ಯಾಕೋ ಇಷ್ಟು ದಿನ ಕಾಣಿಸಲೇ ಇಲ್ಲವಲ್ಲ?
ನನಗೆ ಒಂದಷ್ಟು ವೈಯಕ್ತಿಕ ಕೆಲಸಗಳಿದ್ದವು. ಹೀಗಾಗಿ ಇಲ್ಲಿ ಮಾತ್ರವಲ್ಲ; ಬೇರೆ ಕಡೆಯೂ ಅಷ್ಟೇನೂ ನಾನು ಕಾಣಿಸಿಕೊಂಡಿಲ್ಲ. ಇಷ್ಟು ದಿನ ಕೇರಳದಲ್ಲಿ ಇದ್ದೆ. ಅಲ್ಲಿ ನನ್ನ ತಂದೆ ಇದ್ದಾರೆ. ಅವರಿಗೀಗ 92 ವರ್ಷ ವಯಸ್ಸು! ಅವರ ಜತೆ ಒಂದಷ್ಟು ದಿನ ಕಳೆದೆ. ಸಿನಿಮಾ ಮಾಡೋಣ ಅಂತ ಅನಿಸಿದಾಗ ‘ಪ್ರಿಯಾಂಕ’ ಸೆಟ್ಟೇರಿತು.

‘ಪ್ರಿಯಾಂಕ’ ಚಿತ್ರದ ಬಗ್ಗೆ ಹೆಚ್ಚು ಸುದ್ದಿಯೇ ಇರಲಿಲ್ಲವಲ್ಲ..?
ಅದಕ್ಕೆ ಇಂಥದೇ ಅಂತ ಉದ್ದೇಶವೇನಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಚಿತ್ರದ ಮುಹೂರ್ತ ನಡೆಯಿತು. ಮೋಹನ್ ಇದರ ನಿರ್ಮಾಪಕರು. ಸತತ 32 ದಿನಗಳ ಕಾಲ ಚಿತ್ರೀಕರಣ ನಡೆಸಿದ ಬಳಿಕ, ಪ್ರಚಾರ ನಡೆಸೋಣ ಅಂತ ನಿರ್ಧರಿಸಿದೆವು. ಇನ್ನೊಂದು ತಿಂಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಬಗೆಯಲ್ಲಿ ಸಿನಿಮಾದ ಪ್ರಚಾರ ನಡೆಸಲಿದ್ದೇವೆ. ಈ ಸಿನಿಮಾದ ಹಾಡುಗಳನ್ನು ನೋಡುತ್ತಿದ್ದರೆ ನಿಮ್ಮದೇ ನಿರ್ದೇಶನದ ‘ಅಮೃತ ವರ್ಷಿಣಿ’ ನೆನಪಾಗುತ್ತದೆ...
ಅಂದರೆ ನಾನು ಹಾಗೂ ನನ್ನ ‘ಅಮೃತ ವರ್ಷಿಣಿ’ಯನ್ನು ನೀವು ಮರೆತಿಲ್ಲ ಅಂದಾಯ್ತು! ವೆರಿ ಗುಡ್! ಆದರೆ ನಾನು ಈ ಚಿತ್ರದ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ಈ ಸಿನಿಮಾ ತೆರೆ ಕಂಡ ಮೇಲಷ್ಟೇ ಅದರ ಹೂರಣ ಏನೆಂಬುದು ಗೊತ್ತಾಗುತ್ತದೆ.

ಇದು ನೈಜ ಘಟನೆ ಆಧರಿಸಿದ್ದೇ ಅಥವಾ ಕಾಲ್ಪನಿಕ ಕಥೆಯೇ?
ಇದೊಂದು ಸಸ್ಪೆನ್ಸ್ ಥ್ರಿಲ್ಲರ್. ಬೆಂಗಳೂರಿನಲ್ಲಿ 2014ರಲ್ಲಿ ನಡೆದ ಕ್ರೈಂ ಘಟನೆಯನ್ನು ಆಧರಿಸಿ ನಾನು ಬರೆದ ಕಥೆಯಿದು. ನನ್ನ ಮೆಚ್ಚಿನ ತಾಣವಾದ ಮೈಸೂರು ಸೇರಿದಂತೆ ಸಕಲೇಶಪುರ, ಹೊರನಾಡು, ಬಾಳೂರು ಟೀ ಎಸ್ಟೇಟ್ ಇತರ ಕಡೆಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಕುಟುಂಬದ ಎಲ್ಲರೂ ಕುಳಿತುಕೊಂಡು ನೋಡುವ ಸದಭಿರುಚಿಯ ಚಿತ್ರ ಎಂದಂತೂ ಖಚಿತವಾಗಿ ಹೇಳಬಲ್ಲೆ.

ಇಷ್ಟು ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬಂದಿರುವ ನಿಮಗೆ ಇಲ್ಲೇನಾದರೂ ಬದಲಾವಣೆ ಕಾಣುತ್ತಿದೆಯೇ?
ಖಂಡಿತ... ಸಾಕಷ್ಟು ಬದಲಾವಣೆ ಗಮನಿಸಿದ್ದೇನೆ. ಯುವ ನಿರ್ದೇಶಕರು ಒಳ್ಳೊಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಉತ್ಸಾಹಿಗಳು ಸಾಲುಸಾಲಾಗಿ ಬರುತ್ತಿದ್ದಾರೆ. ಚಿತ್ರ ನಿರ್ಮಾಣ ವಿಧಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಅವಧಿಯಲ್ಲಿ ನಾನು ಹಲವು ಉತ್ತಮ ಸಿನಿಮಾಗಳನ್ನು ಸಹ ನೋಡಿದ್ದೇನೆ. ಇದೆಲ್ಲವನ್ನೂ ಗಮನಿಸಿದರೆ, ಕನ್ನಡ ಚಿತ್ರರಂಗ ಒಳ್ಳೆಯ ದಾರಿಯಲ್ಲಿ ಸಾಗುತ್ತಿದೆ ಅನಿಸಿದೆ.   

ಮುಂದಿನ ಸಿನಿಮಾ ಕನ್ನಡದ್ದೇ ಅಥವಾ ...?
ಇಲ್ಲ. ‘ಪ್ರಿಯಾಂಕ’ ಬಿಡುಗಡೆಯಾಗುವತನಕ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳುವುದಿಲ್ಲ. ಹಾಗೆಂದು ಸುಮ್ಮನೇ ಕುಳಿತುಕೊಳ್ಳುವುದೂ ಇಲ್ಲ. ಈಗಾಗಲೇ ಒಂದೆರಡು ಚಿತ್ರಕಥೆ ಸಿದ್ಧಪಡಿಸುತ್ತಿದ್ದೇನೆ. ‘ಪ್ರಿಯಾಂಕ’ ಮುಗಿದ ಬಳಿಕವಷ್ಟೇ ಆ ಬಗ್ಗೆ ಮುಂದುವರಿಯುವೆ.

ನಿಮ್ಮ ಸಿನಿಮಾದಲ್ಲಿ ಅಭಿನಯಿಸಲು ಪ್ರಕಾಶ್ ರೈ ಕಾತರದಿಂದ ಕಾಯುತ್ತಿದ್ದರಂತೆ?
ಕೇಳಿದ ತಕ್ಷಣವೇ ಪ್ರಕಾಶ್ ರೈ ಒಪ್ಪಿದ್ದು ನನಗೆ ತುಂಬ ಖುಷಿ ನೀಡಿತು. ‘ಪ್ರಿಯಾಂಕ’ದಲ್ಲಿ ಅವರದು ತನಿಖಾಧಿಕಾರಿ ಪಾತ್ರ. ತಮಾಷೆ ಮಾಡುತ್ತಲೇ ತನಿಖೆ ನಡೆಸುವ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಂದು ಅವರದು ಕಾಮಿಡಿ ಪಾತ್ರ ಅಲ್ಲ. ಅವರ ಮಾತು ಹಾಗೂ ಹಾವಭಾವದಲ್ಲಿ ಹಾಸ್ಯ ಇದೆ.

ತೇಜಸ್ ಹಾಗೂ ಪ್ರಿಯಾಂಕಾ ಉಪೇಂದ್ರ ಬಗ್ಗೆ...?
ಪ್ರೇಕ್ಷಕರಿಗೆ ಚಿರಪರಿಚಿತ ಮುಖ ಆಗಿರಬಾರದು ಹಾಗೂ ಯಾವುದೇ ತರಹದ ನಿರೀಕ್ಷೆ ಇರಬಾರದು. ಅಂಥ ಯುವಕನ ಹುಡುಕಾಟ ನಡೆಸಿದ್ದೆ. ‘ಒಗ್ಗರಣೆ’ ನೋಡಿದ ಬಳಿಕ ತೇಜಸ್ ಅವರನ್ನು ಆಯ್ಕೆ ಮಾಡಿದೆ. ಯಾಕೆಂದರೆ, ಈಗಾಗಲೇ ಹೇಳಿದ ಕ್ರೈಂ ಘಟನೆಯಲ್ಲಿ ಇದ್ದ ಹುಡುಗನ ವಯಸ್ಸಿಗೂ ತೇಜಸ್ ವಯಸ್ಸಿಗೂ ಸರಿಯಾದ ಹೋಲಿಕೆ ಇದೆ. ಇನ್ನು ಪ್ರಿಯಾಂಕಾ ಬಗ್ಗೆ ಏನು ಹೇಳಲಿ? ಅವರೊಬ್ಬ ಉತ್ತಮ ಕಲಾವಿದೆ. ಇದರಲ್ಲಿ ಅವರು ಪ್ರಬುದ್ಧ ಅಭಿನಯ ನೀಡಿದ್ದಾರೆ.

ಸದ್ದುಗದ್ದಲವಿಲ್ಲದೇ ಸಿನಿಮಾದ ಕೆಲಸಗಳನ್ನೆಲ್ಲ ಪೂರೈಸಿದ್ದೀರಿ. ತೆರೆಗೆ ಬರುವುದು ಯಾವಾಗ?
ಚಿತ್ರದ ಎಲ್ಲ ತಾಂತ್ರಿಕ ಕೆಲಸಗಳು ಹೆಚ್ಚುಕಮ್ಮಿ ಮುಗಿದಿವೆ. ಬಹುಶಃ ಜೂನ್‌ನಲ್ಲಿ ‘ಪ್ರಿಯಾಂಕ’ ಬರಲಿದೆ. ಇಷ್ಟು ದಿನ ಪ್ರಚಾರ ಇರಲಿಲ್ಲ. ಈಗಷ್ಟೇ ಆ ಕೆಲಸವನ್ನೂ ಶುರು ಮಾಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT