ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿರಿಸು ಸಂಸ್ಕೃತಿ ಮತ್ತು ಮನಸ್ಥಿತಿ

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ನೋಡುವವರಿಗೆ ನಮ್ಮ ಬಾಹ್ಯಚಹರೆ ಶಿಷ್ಟವೆನ್ನಿಸದಿದ್ದರೆ, ನಮ್ಮಲ್ಲಿರಬಹುದಾದ ನಕಾರಾತ್ಮಕ ಅಂಶಗಳನ್ನು ಹುಡುಕಲು ನಾವೇ ಮಣೆ ಹಾಕಿಕೊಟ್ಟಂತೆ

‘ಚಡ್ಡಿಯಲ್ಲಿ ಬಂದಿದ್ದಕ್ಕೆ ಠಾಣೆಯಿಂದ ಹೊರಕ್ಕೆ!’ ತಲೆಬರಹದ ವರದಿ (ಪ್ರ.ವಾ., ಮೇ 14) ಗಮನಿಸಿದೆ. ಇಂಥದ್ದೆ ಪ್ರಸಂಗ ಹಿಂದೊಮ್ಮೆ ಸುದ್ದಿಯಾಗಿದ್ದು  ನೆನಪಾಯಿತು.

ನಗರದ ಶಾಲೆಯೊಂದರ ಆಡಳಿತ ಮಂಡಳಿಯು ಪೋಷಕರು ಮನೆಯುಡುಪಿನಲ್ಲೇ ತಮ್ಮ ಮಕ್ಕಳನ್ನು ಶಾಲೆಗೆ ಕರೆತರುವುದನ್ನು ವಿರೋಧಿಸಿತ್ತು. ಸೂಕ್ಷ್ಮವಾಗಿ ಅವಲೋಕಿಸಿದಾಗ ಇವೆರಡೂ ಸಂದರ್ಭಗಳು ಸೌಜನ್ಯ, ಸಹಜತೆಯ ಮಿತಿಯೊಳಗೇ ಇವೆ ಎನಿಸುತ್ತದೆ.

ಅವನ್ನು ಆಕ್ಷೇಪಿಸುವುದು ಮೊಸರಿನಲ್ಲಿ ಕಲ್ಲು ಹುಡುಕಿದಂತೆ. ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರಾಗಲಿ, ಶಾಲೆಯ ಆಡಳಿತ ವರ್ಗವಾಗಲಿ ತಾಕೀತು ಮಾಡಿ ತಂತಮ್ಮ ಸಾಮಾಜಿಕ ಕಾಳಜಿಯನ್ನು ಬದ್ಧತೆಯಿಂದ ನಿರ್ವಹಿಸಿದ್ದಾರೆನ್ನಲೇನಡ್ಡಿ? ಜವಾಬ್ದಾರಿ ಹೊತ್ತವರಿಂದ ಏನೆಲ್ಲ ಸುಧಾರಣೆಗಳನ್ನು ನಿರೀಕ್ಷಿಸುವ ನಾವು ಇಂತಹ ಸಣ್ಣದೊಂದು ಟೀಕೆಗೆ ಸಕಾರಾತ್ಮಕವಾಗಿ ಏಕೆ ಸ್ಪಂದಿಸುವುದಿಲ್ಲ,

ನಮ್ಮನ್ನು ನಾವು ಅವಲೋಕಿಸಿಕೊಳ್ಳುವುದಿಲ್ಲ? ಅಷ್ಟಕ್ಕೂ ಕಾನೂನೆಂದರೆ ಸಮಷ್ಟಿ ಹಿತಕ್ಕೆ ನಾವೇ ರೂಪಿಸಿಕೊಳ್ಳುವ ಇರಾದೆ. ಅದರ ಮೂಲ ಸಾಮಾನ್ಯ ಪ್ರಜ್ಞೆಯೆ ಹೊರತು ಬೇರೇನಲ್ಲ. ನಮ್ಮ ಮುಖ ಪ್ರಸನ್ನವಾಗಿರಬೇಕೆನ್ನಲು ಅಥವಾ ಎಡತಾಕುವ ಮುಳ್ಳನ್ನು ವಿಲೇವಾರಿಗೊಳಿಸಲು ಒಂದು ಕಾನೂನು ನಿರೀಕ್ಷಿಸಲಾದೀತೆ?

ಒಂದು ಪ್ರಸಂಗ ಉಲ್ಲೇಖನಾರ್ಹ. ಒಮ್ಮೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಬೆಂಗಳೂರಿನ ನಿವಾಸಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು  ಬೆಳಿಗ್ಗೆ ಒಂಬತ್ತು ಗಂಟೆಯ ಸುಮಾರಿಗೆ ಹೋದರಂತೆ. ‘ಸರ್ ಸ್ನಾನದ ಕೋಣೆಯಲ್ಲಿದ್ದಾರೆ, ದಯವಿಟ್ಟು ಆಸೀನರಾಗಿ’ ಎಂದರು ಆಪ್ತ ಸಿಬ್ಬಂದಿ. ಇಪ್ಪತ್ತೈದು ನಿಮಿಷಗಳ ನಂತರ ಸೂಟುಧಾರಿ ವಿಶ್ವೇಶ್ವರಯ್ಯನವರು ಮಾಸ್ತಿಯವರು ಕುಳಿತೆಡೆ ಬಂದರು.

ರುಮಾಲಿನಿಂದ ಬೂಟಿನವರೆಗೆ ಅವರ ದಿರಿಸನ್ನು ಗಮನಿಸಿದ ಮಾಸ್ತಿಯವರಿಗೆ ಆ ಪ್ರಶ್ನೆಯನ್ನು ಕೇಳದಿರಲಾಗಲಿಲ್ಲ; ‘ಸರ್, ಇದೇನು ವೃಥಾ ತರಾತುರಿ. ನಾನೇನು ಅಷ್ಟು ದೊಡ್ಡವನೆ? ಒಂದು ಟವೆಲ್ ಸುತ್ತಿಕೊಂಡು ಬಂದಿದ್ದರೂ ಆಗುತ್ತಿತ್ತಲ್ಲ?’.

ಅದಕ್ಕೆ ವಿಶ್ವೇಶ್ವರಯ್ಯನವರು ‘ಹೌದು ಸರಿಯೆ, ಆದರೆ ಈ ದಿರಿಸು ನನಗಲ್ಲ ನಿಮ್ಮ ಸಲುವಾಗಿ’ ಎಂದರಂತೆ. ವಸ್ತ್ರಪ್ರಜ್ಞೆಯೆಂದರೆ ಇದಲ್ಲವೇ? ನಾವು ತೊಡುವ ಉಡುಪು ನಮಗೆ ಮಾತ್ರವೆ ಒಪ್ಪಿಗೆಯಾಗುವುದರ ಜೊತೆಗೆ ನಮ್ಮನ್ನು ನೋಡುವವರಿಗೂ ಸಭ್ಯ, ವಿನೀತವೆನ್ನಿಸಬೇಕು.

ಮಹಾನ್ ನಾಟಕಕಾರ ಶೇಕ್ಸ್‌ಪಿಯರ್ ತನ್ನ ‘ಹ್ಯಾಮ್ಲೆಟ್’ ನಾಟಕದಲ್ಲಿ ಉಡುಪು ಎಂತಿರಬೇಕೆನ್ನುವುದನ್ನು ಬಿಂಬಿಸಿದ್ದಾನೆ. ದೊರೆಯ ಸಲಹೆಗಾರ ಪೊಲೊನಿಯಸ್ ತನ್ನ ಮಗ ಲೇರ್‌ಟೆಸ್‌ಗೆ ಬುದ್ಧಿಮಾತು ಹೇಳುವಾಗ ‘ಬೆಲೆ ಬಾಳುವ ಉತ್ತಮ ದಿರಿಸನ್ನೇ ಕೊಂಡುಕೊ. ಆದರೆ ಥಳುಕಿನ, ನಿನ್ನ ಸಹಪಾಠಿಗಳ ದಿರಿಸನ್ನು ಮೀರಿಸುವಂಥದ್ದು ಬೇಡ’ ಎನ್ನುತ್ತಾನೆ.

ನೋಡುವವರಿಗೆ ನಮ್ಮ ಬಾಹ್ಯಚಹರೆ ಶಿಷ್ಟವೆನ್ನಿಸದಿದ್ದರೆ  ನಮ್ಮಲ್ಲಿರಬಹುದಾದ ನಕಾರಾತ್ಮಕ ಅಂಶಗಳನ್ನು ಹುಡುಕಲು ಅವರಿಗೆ ನಾವೇ ಮಣೆ ಹಾಕಿಕೊಟ್ಟಂತಾಗುತ್ತದೆ. ಯಾರಾದರೂ ನೆಂಟರಿಷ್ಟರು ಮನೆಗೆ ಬರುತ್ತಾರೆಂದರೆ ಒಡನೆಯೆ ಅಸ್ತವ್ಯಸ್ತ ಸರಿಪಡಿಸಲು ಮುಂದಾಗುತ್ತೇವೆ.

ಚೆಲ್ಲಾಪಿಲ್ಲಿಯಾದ ವಸ್ತುಗಳು ಓರಣಗೊಳ್ಳುತ್ತವೆ. ದೀರ್ಘ ಪ್ರವಾಸ ಹೋದಾಗಲೂ ಕನಿಷ್ಠ ಮನೆ ಮುಂಭಾಗ ಗುಡಿಸಿ ಸಾರಿಸುವ ಏರ್ಪಾಡು ಮಾಡಿರುತ್ತೇವೆ.

ಪ್ರಕೃತಿಯ ಪ್ರತಿ ಸೃಷ್ಟಿಯಲ್ಲೂ ನಾಜೂಕು ವಿಜೃಂಭಿಸಿದೆ. ಸರ್ವವೂ ಅಲ್ಲಿ ವ್ಯವಸ್ಥಿತ. ಮನುಷ್ಯ ಶರೀರದ ಹೊರರೂಪದ ರಚನೆಯನ್ನೇ ತೆಗೆದುಕೊಂಡರೆ ಅಸದೃಶ ಅಚ್ಚುಕಟ್ಟುತನ, ನಾಜೂಕು ಎದ್ದು ಕಾಣುತ್ತದೆ. ಅಡಿಯಿಂದ ಮುಡಿತನಕ ಸಮ್ಮಿತಿ (ಸಿಮೆಟ್ರಿ).

ಕ್ರಮಬದ್ಧವಾಗಿ ಹರಡಿದ ಕೇಶ ರಾಶಿ, ದಂತಪಂಕ್ತಿ, ಉಗುರು,  ಹುಬ್ಬು... ಬಣ್ಣನೆಗೆ ಪದಗಳು ಸೋಲುತ್ತವೆ. ಹೇಗೆಂದರೆ ಹಾಗಿರಲು ನಿಸರ್ಗದಲ್ಲಿ ಕಿಂಚಿತ್ತೂ ಆಸ್ಪದವಿಲ್ಲ. ಎಲ್ಲಕ್ಕೂ ಸ್ಪಷ್ಟ ಗೊತ್ತು ಗುರಿ. ಉಡುಪು ಶಿಷ್ಟವಾಗಿದ್ದರೆ ನಮ್ಮನ್ನು ನೋಡುವ ಮಂದಿ ನಮ್ಮ ಬಗ್ಗೆ ಗಂಭೀರರಾದಾರು.

ನಾವೂ ಮಾದರಿಯೆನ್ನಿಸುತ್ತೇವೆ. ಮೊದಲ ನೋಟ ಬಹುಮುಖ್ಯ. ಅದುವೆ ತಕ್ಕ ನೋಟ. ಬದುಕಿನುದ್ದಕ್ಕೂ ಅದು ಫಲಕಾರಿ. ಶಿಸ್ತು, ಸಂಘಟನಾಚಾತುರ್ಯ ರೂಢಿಸಿಕೊಳ್ಳಲು ಚೊಕ್ಕ ಉಡುಪು ಪೂರಕ. ಇಸ್ತ್ರಿಯಿಲ್ಲದ ದಿರಿಸು, ಕೆದರಿದ ತಲೆಗೂದಲು, ಪಾಲೀಶು ಕಾಣದ ಬೂಟುಗಳು. ನೋಡುಗರಲ್ಲಿ ಈತ ಔದಾಸೀನ್ಯದ ಪ್ರತಿನಿಧಿಯೆನ್ನಿಸುವ ಸಾಧ್ಯತೆ ಹೆಚ್ಚು ತಾನೇ!?

‘ವರಸೆಗೆ ತಕ್ಕ ದಿರಿಸು’ ಎಂಬ ಗಾದೆ ಮಾತಿದೆ. ಇದಕ್ಕೆ ಸಂವಾದಿಯಾಗಿರುವ ‘ಉದರನಿಮಿತ್ತಮ್ ಬಹುಕೃತ ವೇಷಂ’ ಉಕ್ತಿಯ ಆಶಯ ಸಮಯೋಚಿತ ಉಡುಪಿನ ಅಗತ್ಯವನ್ನು ಮನಗಾಣಿಸುತ್ತದೆ. ಉಡುಗೆ ತೊಡುಗೆಯಲ್ಲಿ ನಿರಪೇಕ್ಷ ಶಿಷ್ಟತೆಯ ಪೋಷಣೆ ಸಂಸ್ಕೃತಿಯ ಭಾಗ. ಉಟ್ಟು ತೊಟ್ಟರೆ ಕಂಡವರು ಅಹುದೆನ್ನಬೇಕು.    

ನಮ್ಮ ಬೆನ್ನು ನಮಗೆ ಕಾಣದು! ನಾವು ಹೇಗೆ ತೋರುತ್ತೇವೆ ಎನ್ನುವುದನ್ನು ನಮ್ಮನ್ನು ಕಾಣುವವರ ಟೀಕೆ, ತರಾಟೆ, ತಾಕೀತುಗಳಿಂದಲೇ ಅರಿಯಬೇಕಾದ್ದು ಅನಿವಾರ್ಯ. ವೇಷಭೂಷಣದ ಶಿಷ್ಟತೆಗೆ ಒತ್ತು ನೀಡಿದಂತೆ ನಮ್ಮತ್ತ ಜನರ ದೃಷ್ಟಿ ಘನವಾಗುತ್ತದೆ.

ದಿರಿಸು ಸಂಸ್ಕೃತಿ, ಮನಸ್ಥಿತಿ, ಆತ್ಮಸ್ಥೈರ್ಯ, ಆಸಕ್ತಿಯ ಪ್ರತೀಕ. ಚಿಂತನಾ ಕ್ರಮಗಳ ನಿರ್ಧಾರಕ. ಅದು ಪ್ರಬುದ್ಧತೆ ಬಿಂಬಿಸುತ್ತದೆ. ಮಾತಿನ ಮೂಲಕ ಹೇಳಲಾಗದ್ದನ್ನು ತೊಡುವ ಉಡುಪು ಹೇಳುತ್ತದೆ.

ವಿಶ್ವಮಾನ್ಯ ಕಾದಂಬರಿಕಾರ ಚಾರ್ಲ್ಸ್ ಡಿಕನ್ಸ್ ‘ಸಭ್ಯ ಉಡುಪು ಎಲ್ಲ ಬಾಗಿಲುಗಳನ್ನೂ ತೆರೆಸುತ್ತದೆ’ ಎಂದಿದ್ದಾನೆ. ದಿರಿಸಿನಲ್ಲಿ ಉಪೇಕ್ಷೆ ನೈತಿಕ ಆತ್ಮಹತ್ಯೆಯೆಂಬ ನಿಷ್ಠುರ ಮಾತೂ ಉಂಟು! ಸಂದರ್ಭೋಚಿತ ಉಡುಪು ಸೌಜನ್ಯಕ್ಕೆ ಕಳಶವಿಟ್ಟಂತೆ. ಬೆಳಕು ಶಬ್ದಕ್ಕಿಂತ ವೇಗವಾಗಿ ಧಾವಿಸುತ್ತದೆ.

ಹಾಗಾಗಿ ನಾವು ಶಿಷ್ಟ ಉಡುಪಿನಿಂದ ನಮ್ಮ ಮಾತಿಗಿಂತ ಮೊದಲೇ ಪರರಿಗೆ ತಲುಪಿರುತ್ತೇವೆ. ಎಲ್ಲರೂ ವಾಗ್ಮಿಗಳಲ್ಲ, ಸಮರ್ಥ ಬರಹಗಾರರೂ ಅಲ್ಲ. ಕೆನಡಾದ ರಾಷ್ಟ್ರೀಯ ಸಂಶೋಧನಾಲಯ, ಒಬ್ಬರ ಉಡುಗೆ ತೊಡುಗೆ ಇನ್ನೊಬ್ಬರನ್ನು ಪ್ರಭಾವಿಸುವುದನ್ನು ಸಾಬೀತುಪಡಿಸಿದೆ. ಅಮೆರಿಕದ ಸಿಯಾಟಲ್‌ನಲ್ಲಿ ತಂಗಿದ್ದ ನನ್ನ ಅನುಭವವಿದು.

ನೆರೆಮನೆಯವರು ಭಾರತ ಪ್ರವಾಸ ಕೈಗೊಂಡವರೆ. ಅವರ ಪ್ರಶ್ನೆ ಎದುರಿಸಲಾರದಾದೆ: ‘ನಾವು ನಿಮ್ಮಲ್ಲಿಗೆ ಬಂದಾಗ ಸೆಕೆ ತಾಳಲಾರದೆ ಶಾರ್ಟ್ಸ್ ಧರಿಸುವುದೇನೊ ಸರಿ. ಆದರೆ ನಮ್ಮ ಆ ಅನಿವಾರ್ಯ ಅಲ್ಲಿನವರೆ ಆದ ನಿಮಗೇಕೆ?’

ಕ್ರಿಕೆಟ್ ಪಂದ್ಯದ ಆಟಗಾರ ಚೆಂಡು ಹಿಡಿಯಲು ಅನುಕೂಲವಾಗಲೆಂದು ತನ್ನ ಟೊಪ್ಪಿಗೆ ಹಿಂದೆ ಮುಂದೆ ಸರಿಸಿಕೊಳ್ಳುತ್ತಾನೆ. ಕೆಲವರು ಅದನ್ನೇ ಅನುಸರಿಸಿರುತ್ತಾರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT