ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ಇದ್ದರೂ ಕರ್ತವ್ಯದಲ್ಲಿ ಇನ್‌ಸ್ಪೆಕ್ಟರ್‌

Last Updated 23 ಅಕ್ಟೋಬರ್ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾ ಪ್ರಜೆಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕಬ್ಬನ್‌ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಉದಯ ಭಾಸ್ಕರ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಟಿ ಸಿವಿಲ್‌ ಕೋರ್ಟ್‌ ಮತ್ತು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಸೂಚನೆ ನೀಡಿದ್ದರೂ ಈವರೆಗೂ ಇಲಾಖೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಉದಯ ಭಾಸ್ಕರ್‌ ಪ್ರಕರಣದ ಬಗ್ಗೆ ಎಸಿಪಿ ಆಗಿದ್ದ ಎನ್‌.ಎಂ.ನ್ಯಾಮಗೌಡ ಅವರು ಹಿರಿಯ ಅಧಿಕಾರಿ­ಗಳಿಗೆ ಸಲ್ಲಿಸಿದ ವರದಿಯಲ್ಲಿ ‘ಭಾಸ್ಕರ್‌ ಅವರು ತನಿಖೆಗೆ ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಅಲ್ಲದೇ, ಅವರು ರಾಜ್ಯದ ಗೃಹ  ಸಚಿವರು, ಅವರ ಪುತ್ರ ಹಾಗೂ ಆತನ ಸ್ನೇಹಿತನೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದರು. ಅಲ್ಲದೇ   ಅವರ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಮತ್ತು ಹೆಚ್ಚುವರಿ ಕಮಿಷನರ್‌ ಕಮಲ್‌ ಪಂತ್‌ ಅವರ ಮೇಲೆ ಒತ್ತಡ ಹೇರಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಇನ್‌ಸ್ಪೆಕ್ಟರ್‌ ಉದಯ ಭಾಸ್ಕರ್‌ ಅವರ ಸೂಚನೆ­ಯಂತೆ ಠಾಣೆಯ ಕಾನ್‌ಸ್ಟೆಬಲ್‌­ಗಳಾದ ವಿಠಲ್‌ ಕುಮಾರ್‌, ಸುಧಾಕರ್‌,  ಕುಮಾರ್‌  ಮತ್ತು ನರಸಿಂಹ­ರಾಜು ಅವರು 2013ರ ಡಿಸೆಂಬರ್‌ 18ರಂದು ರಾತ್ರಿ 9ರ ಸುಮಾರಿಗೆ ನಗರದ ಖಾಸಗಿ ಹೋಟೆಲ್‌ ಒಂದರಲ್ಲಿ ಚೀನಾದ ವೆಂಗ್‌ ಪಿಂಗ್‌ ಎಂಬ ಮಹಿಳೆ ಮತ್ತು ಆಕೆಯ ಸ್ನೇಹಿತ ಜೆಂಗ್‌ ಕ್ಸಿಂಗು ಅವರಿಂದ ಲ್ಯಾಪ್‌ಟಾಪ್‌, ವಾಚ್‌, 1 ಲಕ್ಷ ಯೆನ್‌  ಮತ್ತು 10 ಬಾಕ್ಸ್‌ ರಕ್ತ ಚಂದನ ವಶಕ್ಕೆ ಪಡೆದಿದ್ದರು.ಆದರೆ, ಅವರ ವಿರುದ್ಧ ದೂರು ದಾಖಲಿ­ಸಿಕೊಳ್ಳದೆ ಬಿಟ್ಟು ಕಳಿಸಿದ್ದರು. ಅಲ್ಲದೇ, ರೂ10 ಲಕ್ಷ ಹಣ ನೀಡ­ದಿದ್ದರೆ ದೂರು ದಾಖಲಿಸ­ಲಾಗುವುದು ಎಂದು ಬೆದರಿಸಿದ್ದರು ಎಂದು ತಿಳಿದು ಬಂದಿದೆ.

ವೆಂಗ್‌ ಪಿಂಗ್‌ ಮತ್ತು ಜೆಂಗ್‌ ಕ್ಸಿಂಗು ಅವರು ಡಿ. 20ರಂದು  ಠಾಣೆಗೆ ತೆರಳಿ ಎಸ್‌ಐ ಭರತ್‌ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿ ಭಾಸ್ಕರ್‌ ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ಭರತ್‌ ಅವರು ಭಾಸ್ಕರ್‌ ಅವರ ಸೂಚನೆ ಮೇರೆಗೆ ಚೀನಾ ಪ್ರಜೆಗಳನ್ನು ಬೆದರಿಸಿ ಕಳಿಸಿ, ಆ ವಿಷಯವನ್ನು ಠಾಣೆಯ ಎಸಿಪಿ  ಎನ್‌.ಎಂ.ನ್ಯಾಮ­ಗೌಡ ಅವರಿಗೆ ತಿಳಿಸಿದ್ದರು.

ಭಾಸ್ಕರ್‌ ಅವರು ಚೀನಾ ಪ್ರಜೆಗಳಿಂದ ಲಂಚ ಕೇಳಿದ್ದರು ಎಂಬ ವಿಷಯವನ್ನು ನ್ಯಾಮಗೌಡ ಅವರು ಡಿಸಿಪಿ ಆಗಿದ್ದ  ರವಿಕಾಂತೇಗೌಡ ಅವರ ಗಮನಕ್ಕೆ ತಂದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಚೀನಾ ಮಹಿಳೆಯಿಂದ ರಕ್ತ ಚಂದನ ವಶಪಡಿಸಿಕೊಂಡು, ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಆಗ  ಭಾಸ್ಕರ್‌ ಅವರ ವಿರುದ್ಧ ದೂರು ದಾಖಲಿಸಿ­ಕೊಳ್ಳಲಾಗಿತ್ತು. ಈ ಸಂಬಂಧ ಜುಲೈ 11ರಂದು ನಗರದ ಎಂಟನೇ ಎಸಿಎಂಎಂ ನ್ಯಾಯಾಲಯಕ್ಕೆ ಭಾಸ್ಕರ್‌ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಚೀನಾ ಪ್ರಜೆಗಳು ಹಾಗೂ ಭಾಸ್ಕರ್ ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿತ್ತು.

ಫೆ.4 ರಂದು ನಡೆದಿದ್ದ ರಾಜ್ಯಮಟ್ಟದ ಐಪಿಎಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಎಚ್ಎಎಲ್‌ ಠಾಣೆ ಇನ್‌ಸ್ಪೆಕ್ಟರ್‌ ರಾಜೇಶ್‌ ಮತ್ತು ಕಬ್ಬನ್‌ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್ ಉದಯ ಭಾಸ್ಕರ್ ಅವರ ವಿರುದ್ಧ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರ ಸಮ್ಮುಖ­ದಲ್ಲೇ ಸೂಚನೆ ನೀಡಿದ್ದರು. ಆದರೆ, ಈವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಾನೂನು ಬಾಹಿರವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಪ್ರಕರಣದಲ್ಲಿ  ವೆಂಗ್‌ ಪಿಂಗ್‌ ಮತ್ತು ಜೆಂಗ್‌ ಕ್ಸಿಂಗು ಅವರನ್ನು  ಬಂಧಿಸಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಚೀನಾ ರಾಯಭಾರಿ ಕಚೇರಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಕರೆ ಮಾಡಿ ದೂರಿದ್ದಾರೆ ಎಂಬ ಅಂಶ ಸಹ ಬೆಳಕಿಗೆ ಬಂದಿದೆ.

ಒತ್ತಡ ಹೇರಿಲ್ಲ: ಸಚಿವ ಜಾರ್ಜ್‌
‘ಕಬ್ಬನ್‌ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಉದಯ ಭಾಸ್ಕರ್‌ ಅವರ ವಿರುದ್ಧ ಕ್ರಮ ಕೈಗೊಳ್ಳ­ದಂತೆ ನಾನಾಗಲಿ, ಕುಟುಂಬದ ಸದಸ್ಯ­ರಾಗಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.
‘ಮುಖ್ಯಮಂತ್ರಿಗಳ ಜೊತೆ ಹಲವು ಬಾರಿ ಸಭೆ ನಡೆಸಿ ಭಾಸ್ಕರ್‌ ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸ­ಲಾಗಿದೆ. ಯಾವ ಪ್ರಭಾವಕ್ಕೂ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆಯೂ ಹೇಳಲಾಗಿದೆ. ತಪ್ಪಿತಸ್ಥರನ್ನು ಸರ್ಕಾರ ರಕ್ಷಿಸುವುದಿಲ್ಲ. ಯಾರೇ ತಪ್ಪು ಮಾಡಿ­ದರೂ ಕಾನೂನಿನ ಅಡಿ ಕ್ರಮ ಕೈಗೊಳ್ಳ­ಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT