ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ನಾಡಲ್ಲಿ ಬಿಜೆಪಿಗೆ ಹುಮ್ಮ ಸ್ಸು

Last Updated 9 ಮೇ 2016, 4:32 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಹಿಂದೆ ವಿಧಾನಸಭೆ ಚುನಾವಣೆ ನಡೆದಾಗೆಲ್ಲ, ‘ಈ ಸಲವಾದರೂ ಖಾತೆ ತೆರೆಯಲು ಸಾಧ್ಯವೇ’ ಎಂಬ ಲೆಕ್ಕಾಚಾರ ಬಿಜೆಪಿ ವಲಯಗಳಲ್ಲಿ ಇರುತ್ತಿತ್ತು.   ಇತರ ಪಕ್ಷಗಳು ಮಾತ್ರ ಅದನ್ನು ಅನುಮಾನದಿಂದಲೇ ನೋಡುತ್ತಿದ್ದವು.

ಆದರೆ ಈ ಬಾರಿ ಬಿಜೆಪಿಗೆ ಹಿಂದೆಂದಿಗಿಂತಲೂ ಹೆಚ್ಚಿನ ನಿರೀಕ್ಷೆ ಇದೆ. ಅದಕ್ಕೆ ತಕ್ಕ ಕಾರಣಗಳೂ ಇವೆ. ಕಳೆದ ಕೆಲವು ಚುನಾವಣೆಗಳಿಂದ ಹೆಚ್ಚುತ್ತಲೇ ಇರುವ ಮತ ಗಳಿಕೆ ಪ್ರಮಾಣ, ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರ ಮಹಾನಗರಪಾಲಿಕೆಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದು   ಬಿಜೆಪಿಯ ವಿಶ್ವಾಸ ಗರಿಗೆದರಿಸಿದೆ. ಜತೆಗೆ ಈ ಬಾರಿ ಅದು  ಕೂಡ ಮೈತ್ರಿಕೂಟವನ್ನು ರಚಿಸಿಕೊಂಡಿದೆ. ಕೇರಳದ ದೊಡ್ಡ ಜಾತಿಗಳಲ್ಲಿ ಒಂದಾದ ಈಳವ ಸಮಾಜದ ಸಂಘಟನೆ ಶ್ರೀ ನಾರಾಯಣ ಧರ್ಮ ಪರಿಪಾಲನಂನ ಕಾರ್ಯದರ್ಶಿಯಾಗಿರುವ ವೇಳುಪಳ್ಳಿ ನಟೇಶನ್‌ ಸ್ಥಾಪಿಸಿದ ಭಾರತ ಧರ್ಮ ಜನ ಸೇನಾ (ಬಿಜೆಡಿಎಸ್‌) ಮತ್ತು ಇತರ ಕೆಲವು ಸಣ್ಣ ಪಕ್ಷಗಳು ಬಿಜೆಪಿಯೊಂದಿಗೆ ಸೇರಿಕೊಂಡಿವೆ.

ಬಿಜೆಪಿ ಪರವಾಗಿರುವವರಲ್ಲಿ ಅತಿ ಉತ್ಸಾಹ ಕಾಣಿಸುತ್ತಿದೆ. ಇಲ್ಲಿನ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಸ್ಥಾನದ ಮುಂಭಾಗದ ಬೀದಿಯಲ್ಲಿರುವ ಕುರುಕ್ಷೇತ್ರ ಬುಕ್‌ ಸೆಂಟರ್‌ ಎಂಬ ಅಧ್ಯಾತ್ಮ ಪುಸ್ತಕಗಳ ಅಂಗಡಿಯಲ್ಲಿ ಮಾತಿಗೆ ಸಿಕ್ಕ ಉಣ್ಣಿಕೃಷ್ಣನ್‌ ಅವರ ಮಾತುಗಳಲ್ಲಿಯೂ ಅದೇ ಉತ್ಸಾಹ ಇತ್ತು.
‘ಹಲವು ಚುನಾವಣೆಗಳಿಂದಲೂ ನಾವು ಸ್ಪರ್ಧಿಸುತ್ತಲೇ ಇದ್ದೇವೆ. ಆಗೆಲ್ಲ ನಮಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಈ ಬಾರಿ ನಮ್ಮ ಫಲಿತಾಂಶ ಎಲ್ಲರನ್ನೂ ಅಚ್ಚರಿಗೆ ಕೆಡವಲಿದೆ’ ಎಂದು ಅವರು ಹೇಳುತ್ತಿದ್ದರು.

‘ನಾವು’ ಎಂದರೆ ಬಿಜೆಪಿ. ನಿವೃತ್ತ ಎಂಜಿನಿಯರ್‌ ಉಣ್ಣಿಕೃಷ್ಣನ್‌ ವಿದ್ಯಾರ್ಥಿ ದೆಸೆಯಿಂದಲೇ ಆರ್‌ಎಸ್‌ಎಸ್‌ ಕಾರ್ಯಕರ್ತ. ಈಗ ಆರ್‌ಎಸ್‌ಎಸ್‌ ನಡೆಸುವ ಕುರುಕ್ಷೇತ್ರ ಪುಸ್ತಕದ ಅಂಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಂಗಡಿಯಲ್ಲಿದ್ದ ಅಜಿತ್‌ ಕುಮಾರ್‌ ಅವರು ಆರೆಸ್ಸೆಸ್‌ನ ‘ಗೋಕುಲಂ’ ಎಂಬ ಸಂಸ್ಥೆಯನ್ನು  ನೋಡಿಕೊಳ್ಳುತ್ತಿದ್ದಾರೆ. ಮಾತಿಗೆ ಅವರೂ ಸೇರಿಕೊಂಡರು.

‘ಇಲ್ಲಿ ಬಿಜೆಪಿಗಿಂತ ಆರೆಸ್ಸೆಸ್‌ ಹೆಚ್ಚು ಶಕ್ತಿಶಾಲಿ. ರಾಜ್ಯದ  ಮೂಲೆ ಮೂಲೆಯಲ್ಲಿಯೂ ಇರುವ ಕಾರ್ಯಕರ್ತರು ಬಿಜೆಪಿ ಗೆಲುವಿಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅದು ಈ ಬಾರಿ ವ್ಯರ್ಥವಾಗದು’ ಎಂದು ಅಜಿತ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ  ಈ ಬಾರಿ ಖಾತೆ ತೆರೆಯುವುದು ಖಚಿತವೇ’ ಎಂಬ ಪ್ರಶ್ನೆ ಅವರನ್ನು ಕೆರಳಿಸಿತು. ’ನಾವು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಕೇರಳದ ಜನರ  ಮನಸ್ಸು ಬದಲಾಗಿದೆ. ಬದಲಾವಣೆ ಗುಪ್ತಗಾಮಿನಿಯಾಗಿದೆ. 40–45 ಕ್ಷೇತ್ರಗಳಲ್ಲಿ ಗೆಲುವು ಖಚಿತ. ತಿರುವನಂತಪುರದಲ್ಲಿಯೇ ನಾಲ್ಕು ಸ್ಥಾನ ಗೆಲ್ಲುತ್ತೇವೆ. ಫಲಿತಾಂಶದ ದಿನ ನಿಮಗಿದು ತಿಳಿಯಲಿದೆ’ ಎಂದು ಇಬ್ಬರೂ ತಮ್ಮ ಲೆಕ್ಕಾಚಾರ ಮುಂದಿಟ್ಟರು.

ಕೇರಳದ ಹೆಚ್ಚಿನ ಜನ ದನದ ಮಾಂಸ ತಿನ್ನುತ್ತಾರೆ. ಇದನ್ನು ವಿರೋಧಿಸುವ ಬಿಜೆಪಿಯನ್ನು ಜನ ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ, ಉಣ್ಣಿಕೃಷ್ಣನ್‌  ಮತ್ತು ಅಜಿತ್‌ ಕೊಟ್ಟ ಉತ್ತರ ಕೇರಳದಲ್ಲಿ ಬಿಜೆಪಿಯ ಭಿನ್ನ ನಿಲುವು ಮತ್ತು ಕಾರ್ಯತಂತ್ರವನ್ನು ತೆರೆದಿಟ್ಟಿತು. ‘ಇಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು ಮಾತ್ರವಲ್ಲ ಹಿಂದುಗಳು ಕೂಡ ದನದ ಮಾಂಸ ತಿನ್ನುತ್ತಾರೆ. ಅದೊಂದು  ವಿಷಯವೇ ಅಲ್ಲ.  ಅವರವರಿಗೆ ಬೇಕಾದ್ದು ಅವರವರು ತಿಂದುಕೊಳ್ಳಲಿ. ಮುಸ್ಲಿಮರ ಮತಗಳೂ ಸಾಕಷ್ಟು ಪ್ರಮಾಣದಲ್ಲಿ ಬಿಜೆಪಿಗೆ ಬೀಳಲಿದೆ’ ಎಂದರು.

ಆದರೆ  ಪಾಳಯಂ ಮಾರುಕಟ್ಟೆಯಲ್ಲಿ ಸಣ್ಣ ಕಿರಾಣಿ ಅಂಗಡಿ  ಇರಿಸಿಕೊಂಡಿರುವ ರಮೇಶ್‌ ಅವರ ಅಭಿಪ್ರಾಯ ಮೇಲಿನ ಇಬ್ಬರ ಮಾತನ್ನು ಸಮರ್ಥಿಸಿಕೊಳ್ಳುವಂತೆ ಇರಲಿಲ. ‘ಯಾಕೊ ಬಿಜೆಪಿ ನಮ್ಮ ರಾಜ್ಯಕ್ಕೆ ಒಗ್ಗದ ಪಕ್ಷ’ ಎನ್ನುವುದು ಅವರ ನಿಲುವು. ಯಾಕೆ ಎಂದು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ‘ಜನರನ್ನು ವಿಭಜಿಸುತ್ತಾರೆ, ಕೋಮುಗಳ ನಡುವೆ ದ್ವೇಷ ಬಿತ್ತುತ್ತಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಆಟೊ ಚಾಲಕ  ಮನೋಜ್‌.

ಬಿಜೆಪಿ ಬಗ್ಗೆ ಒಲವು ವ್ಯಕ್ತಪಡಿಸದ ಈ ಇಬ್ಬರೂ ಸ್ಪಷ್ಟವಾಗಿ ಹೇಳಿದ್ದು ‘ಈ ಬಾರಿ ಒ. ರಾಜಗೋಪಾಲ್‌ ಗೆಲ್ಲುತ್ತಾರೆ. ಬಿಜೆಪಿಗೆ ಒಂದು ಸ್ಥಾನವಂತೂ ಖಚಿತ’.
ಬಿಜೆಪಿಯ ಹಿರಿಯ ಮುಖಂಡ ರಾಜಗೋಪಾಲ್‌ ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆಯವರೆಗೆ ಸ್ಪರ್ಧಿಸಿದ್ದಾರೆ. ಒಮ್ಮೆಯೂ ಗೆದ್ದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಶಶಿ ತರೂರ್‌ ವಿರುದ್ಧ ಅಲ್ಪ ಅಂತರದಿಂದ ಸೋತಿದ್ದಾರೆ.

ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಗೋಪಾಲ್‌ ಸ್ಪರ್ಧಿಸಿರುವ  ನೇಮಂ ಸೇರಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರ್‌ ಸ್ಪರ್ಧಿಸಿರುವ ವಟ್ಟಿಯೂರ್‌ಕಾವ್‌, ಕ್ರಿಕೆಟಿಗ ಶ್ರೀಶಾಂತ್‌ ಸ್ಪರ್ಧಿಸಿರುವ ತಿರುವನಂತಪುರ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ವಿ. ಮುರಳೀಧರನ್‌ ಸ್ಪರ್ಧಿಸಿರುವ ಕಳಕೂಟಂಗಳಲ್ಲಿಯೂ ಬಿಜೆಪಿಗೆ ಮುನ್ನಡೆ ಇತ್ತು.

ರಾಜಗೋಪಾಲ್‌ಗೆ ಹಾಲಿ ಶಾಸಕ ಎಲ್‌ಡಿಎಫ್‌ನ (ಸಿಪಿಎಂ ನೇತೃತ್ವದ ಎಡರಂಗ) ವಿ. ಶಿವಂಕುಟ್ಟಿ ಕಠಿಣ ಸ್ಪರ್ಧೆ ಒಡ್ಡಿದ್ದಾರೆ. ‘ರಾಜಗೋಪಾಲ್‌ ಅವರ ಹಾಗೆಯೇ ಶಿವಂಕುಟ್ಟಿಯೂ ಒಳ್ಳೆಯವರು. ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ’ ಎಂದು ಹೇಳಿದವರು  ನೇಮಂನಲ್ಲಿ ಹೋಟೆಲ್‌ ಇರಿಸಿಕೊಂಡಿರುವ  ಸುಶೀಲ.
‘ಈ ಇಬ್ಬರ ಅಬ್ಬರದ ನಡುವೆ ಯುಡಿಎಫ್‌್ (ಕಾಂಗ್ರೆಸ್‌ ನೇತೃತ್ವದ ಪ್ರಜಾಸತ್ತಾತ್ಮಕ ರಂಗ) ಅಭ್ಯರ್ಥಿ ವಿ. ಸುರೇಂದ್ರನ್ ಪಿಳ್ಳೆ ಗೆದ್ದರೂ ಆಶ್ಚರ್ಯ ಇಲ್ಲ’ ಎನ್ನುತ್ತಾರೆ ಕಾಟಾಕಡ ತಂಬಿ. ಈ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ಮತಗಳು ನಿರ್ಣಾಯಕ. ಅದು ಯಾವಾಗಲೂ ಯುಡಿಎಫ್‌ಗೇ ಬೀಳುತ್ತದೆ ಎಂಬುದು ಅವರ ಸಮರ್ಥನೆ.

‘ಈ ನಾಲ್ಕು ಕ್ಷೇತ್ರಗಳಲ್ಲಿಯೂ ಇತರ ಪಕ್ಷಗಳಿಂದ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಮರ್ಥ ಅಭ್ಯರ್ಥಿಗಳಿದ್ದರೆ ಬಿಜೆಪಿಗೆ ಅನಾಯಾಸ ಗೆಲುವು ಅಸಾಧ್ಯ’  ಎಂಬುದು ಸಾಲಿಡಾರಿಟಿ ಮೂವ್‌ಮೆಂಟ್‌ ಎಂಬ ಸಂಘಟನೆಯ ವಕ್ತಾರ ಶಬೀರ್‌ ಅಭಿಪ್ರಾಯ.

ಈಳವರ ಮತ ಯಾರಿಗೆ?: ಈಳವರು ಈತನಕ ಎಡರಂಗವನ್ನು ಬೆಂಬಲಿಸಿಕೊಂಡು ಬಂದವರು. ಆದರೆ ಈ ಬಾರಿ ಅವರ ಜಾತಿ ಸಂಘಟನೆಯ ಮುಖಂಡ ನಟೇಶ್‌ ಹೊಸ ಪಕ್ಷ ಕಟ್ಟಿದ್ದಾರೆ. ಜಾತಿಯ ಮತಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಸಾಧ್ಯವಾದೀತೇ,  ಅದನ್ನು ಬಿಜೆಪಿಗೂ ಕೊಡಿಸುವಲ್ಲಿ ಅವರು ಯಶಸ್ವಿಯಾಗಲಿದ್ದಾರೆಯೇ ಎಂಬುದರ ಮೇಲೆಯೂ ಕೇರಳದಲ್ಲಿ ಬಿಜೆಪಿ ಭವಿಷ್ಯ ನಿಂತಿದೆ  ಎಂದು ಕೇರಳ ಸ್ವತಂತ್ರ ಮೀನುಗಾರರ ಒಕ್ಕೂಟದ ಅಧ್ಯಕ್ಷ ಟಿ. ಪೀಟರ್‌ ಹೇಳುತ್ತಾರೆ. ಬಿಜೆಪಿ ಗೆದ್ದರೂ ಮುನ್ನಡೆ ಅತ್ಯಲ್ಪವಷ್ಟೇ ಇರುತ್ತದೆ ಎಂಬುದು  ಅವರ ವಿಶ್ಲೇಷಣೆ.

ಶ್ರೀಶಾಂತ್‌ ಕಣಕ್ಕಿಳಿಸಿ ಬಿಜೆಪಿ ಎಡವಿತೇ?: ಬಿಜೆಪಿಗೆ ಅತ್ಯಂತ ಹೆಚ್ಚು ಅವಕಾಶ ಇದ್ದದ್ದು ತಿರುವನಂತಪುರ ಪೂರ್ವ ಕ್ಷೇತ್ರದಲ್ಲಿ. ಆದರೆ ಕ್ರಿಕೆಟಿಗ ಶ್ರೀಶಾಂತ್‌ ಅವರನ್ನು ಕಣಕ್ಕಿಳಿಸಿ ಬಿಜೆಪಿ ಅದನ್ನು ಕಳೆದುಕೊಂಡಿತು ಎಂದು ಹಲವರು ಹೇಳುತ್ತಿದ್ದಾರೆ. ‘ಮೋಸದಾಟದಲ್ಲಿ ಸಿಲುಕಿ ರಾಜ್ಯದ ಮಾನ ಕಳೆದವರು’ ಎಂದು ಜನರು ಶ್ರೀಶಾಂತ್‌ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅವರು ತಿರುವನಂತಪುರದವರೂ ಅಲ್ಲ. ‘ಏನು ಗೊತ್ತು ರಾಜಕೀಯ  ಅವರಿಗೆ’ ಎಂದು ಆಟೊ ಚಾಲಕ ಮನೋಜ್‌ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT