ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿ ವೇಗ ಹೆಚ್ಚಿಸಿದ ಪ್ರಧಾನಿ: ಕೇಂದ್ರ ಸಚಿವ

ಎರಡು ವರ್ಷ ಪೂರೈಸಿದ ಕೇಂದ್ರ ಸರ್ಕಾರ– ‘ವಿಕಾಸ ಪರ್ವ’ ಕಾರ್ಯಕ್ರಮ ಉದ್ಘಾಟನೆ
Last Updated 8 ಜೂನ್ 2016, 6:47 IST
ಅಕ್ಷರ ಗಾತ್ರ

ರಾಯಚೂರು: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ದೇಶದ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಜನರ ಹಿತಕ್ಕಾಗಿ ಮೋದಿ ಅವರು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರದ ರಸಗೊಬ್ಬರ ಖಾತೆಯ ರಾಜ್ಯ ಸಚಿವ ಹಂಸರಾಜ ಗಂಗಾರಾಂ ಅಹಿರ್‌ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಿದ ನಿಮಿತ್ತ ಬಿಜೆಪಿ ಜಿಲ್ಲಾ ಘಟಕದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ  ಮಂಗಳವಾರ ಆಯೋಜಿಸಿದ್ದ  ‘ವಿಕಾಸ ಪರ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಬಂಡವಾಳ ಹರಿದು ಬರಲು ನರೇಂದ್ರ ಮೋದಿ ಅವರು ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಪ್ರಧಾನಿ ಅವರ  ವಿದೇಶ ಪ್ರವಾಸವನ್ನು ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಡವರ, ನಿರುದ್ಯೋಗಿಗಳ, ಮಹಿಳೆಯರ ಉದ್ಧಾರಕ್ಕೆ ಮೋದಿ ವಿಶಾಲ ದೃಷ್ಟಿಕೋನದಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ. ಭಾರತದ ಕಡೆಗೆ ವಿಶ್ವ ನೋಡುವಂತಹ ಕಾರ್ಯವನ್ನು ಮೋದಿ ಅವರ ನೇತೃತ್ವದ ಸರ್ಕಾರ ಎರಡು ವರ್ಷಗಳಲ್ಲಿ ಮಾಡಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥನಾಥ ಸಿಂಗ್‌ ಮಾತನಾಡಿ, ಇಂದಿರಾ ಗಾಂಧಿ, ರಾಜೀವ್‌ಗಾಂಧಿ, ಸೋನಿಯಾ ಗಾಂಧಿ ಅವರು ಗರೀಬಿ ಹಠಾವೋ ಘೋಷಣೆಗಳನ್ನು ಮಾಡಿದ್ದಾರೆ. ಆದರೆ, ದೇಶದಿಂದ ಬಡತನ ಮಾತ್ರ ತೊಲಗಲಿಲ್ಲ. ಗರೀಬಿ ಹಠಾವೋ ನಿಟ್ಟಿನಲ್ಲಿ ಮೋದಿ ಅವರು ನಿಜವಾದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯಕ್ಕೆ ಯುಪಿಎ ಸರ್ಕಾರಕ್ಕಿಂತ ಎನ್‌ಡಿಎ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ಆದರೆ, ಕಾಂಗ್ರೆಸ್ಸಿಗರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ವಿವಿಧ ಯೋಜನೆಗಳ ಮೂಲಕ ರಾಜ್ಯಗಳಿಗೆ ಭಿಕ್ಷೆಯಂತೆ ಅನುದಾನ ನೀಡಲಾಗುತ್ತಿತ್ತು. ಆದರೆ, ಪ್ರಧಾನಿ ಮೋದಿ ಅವರು ಇದನ್ನು ಹೋಗಲಾಡಿಸಿ ರಾಜ್ಯಗಳಿಗೆ ನೀಡುವ ನೇರ ಅನುದಾನನ್ನು ಹೆಚ್ಚು ಮಾಡಿದ್ದಾರೆ ಎಂದರು.

ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಕಾಂಗ್ರೆಸ್‌ ಹೊರಟಿದೆ. ಆದ್ದರಿಂದ ಬಿಜೆಪಿಯವರು ಸತ್ಯವನ್ನು ಹತ್ತು ಬಾರಿ ಹೇಳಿ ಅದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಆಗ ಜನರಿಗೆ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿಯುತ್ತದೆ ಎಂದರು.

ಯುಪಿಎ ಸರ್ಕಾರ ಇದ್ದಾಗ ಪ್ರತಿದಿನ 3.5 ಕಿ.ಮೀ. ಹೆದ್ದಾರಿ ಅಭಿವೃದ್ಧಿ ಆಗುತ್ತಿತ್ತು. ಈಗ ದಿನಕ್ಕೆ 21 ಕಿ.ಮೀ. ಅಭಿವೃದ್ಧಿ ಆಗುತ್ತಿದೆ. ಈ ವರ್ಷಾಂತ್ಯಕ್ಕೆ ಇದನ್ನು 30 ಕಿ.ಮೀ.ಗೆ ಹೆಚ್ಚುವ ಗುರಿಯನ್ನು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೊಂದಿದ್ದಾರೆ ಎಂದರು.

ಕೊಪ್ಪಳ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಮಾತನಾಡಿ, ಮೋದಿ ಅವರು ವಿಶ್ವವನ್ನು ಗೆದ್ದ ನಾಯಕ. ಜನಧನ ಯೋಜನೆ ಮೂಲಕ ದೇಶದ 21 ಕೋಟಿ ಬಡವರಿಗೆ ಬ್ಯಾಂಕ್‌ ಖಾತೆ ತರೆದಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ತಿಪ್ಪರಾಜು ಹವಾಲ್ದಾರ ಮಾತನಾಡಿ, ದೇಶ ಸ್ವಾತಂತ್ರ್ಯಗೊಂಡ ನಂತರ ಹಲವು ವರ್ಷಗಳು ದೇಶವನ್ನಾಳಿದ ಕಾಂಗ್ರೆಸ್‌ ಇದುವರೆಗೆ ಲೆಕ್ಕ ನೀಡಿಲ್ಲ. ಆದರೆ, ಎರಡು ವರ್ಷ ಅಧಿಕಾರ ನಡೆಸಿದ ಮೋದಿ ಅವರ ಸರ್ಕಾರ ‘ವಿಕಾಸ ಪರ್ವ’ದ ಮೂಲಕ ಜನರಿಗೆ ಲೆಕ್ಕ ನೀಡುತ್ತಿದೆ ಎಂದು ಹೇಳಿದರು.

ಶಾಸಕ ಕೆ.ಶಿವನಗೌಡ ನಾಯಕ, ರಾಜ್ಯ ಕಾರ್ಯದರ್ಶಿ ಎನ್‌.ಶಂಕರಪ್ಪ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಬ್ಯಾಗವಾಟ್‌, ಮಾಜಿ ಶಾಸಕ ಗಂಗಾಧರ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT