ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ–ಕಾಲಗಳ ಮೀರಿದ ಲೇಖಕ

Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅಬ್ಬಬ್ಬಾ, ಎಂತಹ ಪ್ರಖರ ವಿಚಾರಧಾರೆ, ನಿಖರ ಮಾತು. ನಮ್ಮಂತಹ ಪ್ರಗತಿಪರ ಬರಹಗಾರರಿಗೆಲ್ಲ ದೊಡ್ಡ ಧ್ವನಿ ಆಗಿದ್ದರಲ್ಲ ಅನಂತಮೂರ್ತಿ! ಸಾಂಸ್ಕೃತಿಕ ಬಿಕ್ಕಟ್ಟುಗಳು ಹೆಚ್ಚುತ್ತಿರುವ ಈಗಿನ ಸನ್ನಿವೇಶದಲ್ಲಿ ನಮಗೆ ಅವರ ಅಗತ್ಯ ಈ ಹಿಂದೆಂದಿಗಿಂತ ಹೆಚ್ಚಾಗಿತ್ತು. ಯಾಕೆ, ಅವರು ನಮ್ಮ ಮೇಲೆ ಅಷ್ಟೊಂದು ಸಿಟ್ಟು ಮಾಡಿಕೊಂಡು ಹೀಗೆ ಇದ್ದಕ್ಕಿದ್ದಂತೆ ಹೊರಟುಬಿಟ್ಟರು? ಜಾತ್ಯತೀತ ಮನೋಭಾವದ, ಪ್ರಗತಿಪರ ನಿಲುವಿನ ಜನ ಮಾರ್ಗದರ್ಶನ ಪಡೆಯಲು ಇನ್ನು ಎಲ್ಲಿಗೆ ಹೋಗುವುದು?

ಇಷ್ಟಕ್ಕೂ ನಮ್ಮ ಅನಂತಮೂರ್ತಿ ಅವರನ್ನು ಏನೆಂದು ಗುರ್ತಿಸುವುದು? ಸಾಹಿತಿಯೇ, ಸಾಂಸ್ಕೃತಿಕ ರಾಯಭಾರಿಯೇ, ಶಿಕ್ಷಕನೇ, ಚಿಂತಕನೇ, ಸಮಾಜ­ವಾದಿಯೇ, ದಕ್ಷ ಆಡಳಿತಗಾರನೇ ಅಥವಾ ಜಾತ್ಯತೀತ ನಿಲುವಿನ ಪ್ರತಿಪಾದಕನೇ? ಹೌದು, ಅವರೂ ಎಲ್ಲವೂ ಆಗಿದ್ದರು. ರಾಮಮನೋಹರ ಲೋಹಿಯಾ ಅವರ ಅನುಯಾಯಿಯಾಗಿದ್ದ ಅನಂತಮೂರ್ತಿ ಅವರಲ್ಲಿ ನಾನು ಅಪ್ಪಟ ಸಮಾಜವಾದಿಯನ್ನು ಕಂಡಿದ್ದೇನೆ. ಅವರನ್ನು ಶ್ರೇಷ್ಠ ಸಾಹಿತಿ ಎಂದು ಗುರ್ತಿಸಲು ‘ಸಂಸ್ಕಾರ’ಕ್ಕಿಂತ ಬೇರೆ ಕಾದಂಬರಿ ಬೇಕೇ?

ಕೇರಳದ ಕೊಟ್ಟಾಯಂ ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರು ಮಾಡಿದ ಶೈಕ್ಷಣಿಕ ಸಾಧನೆಗಳ ಕುರಿತು ನನ್ನ ಮಲೆಯಾಳಿ ಸ್ನೇಹಿತರು ಈಗಲೂ ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ತರಗತಿಗಳಲ್ಲಿ ಜಾತ್ಯತೀತ ಮನೋಭಾವಕ್ಕೆ ನೀರೆರೆದು ಪೋಷಿಸಿದವರು ಅವರು. ಕಾಳಿದಾಸನಿಂದ ಷೇಕ್ಸ್‌ಪಿಯರ್‌ವರೆಗೆ ದೇಶ–ಕಾಲ–ಭಾಷೆಗಳ ಗಡಿಯಾಚೆಗೂ ಅವರು ಹೊಂದಿದ್ದ ಸಾಹಿತ್ಯ ಪ್ರೀತಿ ನನಗೆ ಈಗಲೂ ಒಂದು ಬೆರುಗು.

ಕರ್ನಾಟಕದ ಜನ ಸಮುದಾಯ, ಅನಂತಮೂರ್ತಿ ಅವರ ನಿರ್ಗಮನವನ್ನು, ತಮ್ಮ ರಾಜ್ಯದ ಸಾಂಸ್ಕೃತಿಕ ವಲಯಕ್ಕೆ ಉಂಟಾದ ದೊಡ್ಡ ಹಾನಿ ಎಂದು ವ್ಯಾಖ್ಯಾನಿಸುತ್ತದೆ. ಆದರೆ, ಕರ್ನಾಟಕದ ಹೊರಗಿನವಳಾದ ನಾನು ಹೇಳುತ್ತೇನೆ, ಈ ಹಿರಿಯ ಚೇತನದ ಅಗಲಿಕೆ ಭಾರತೀಯ ಸಾಹಿತ್ಯ ಲೋಕಕ್ಕೆ ಬಿದ್ದಿರುವ ಒಂದು ದೊಡ್ಡ ಪೆಟ್ಟು ಎಂದು. ಅನಂತಮೂರ್ತಿ ಅವರನ್ನು ಯಾವ ಕಾರಣಕ್ಕೂ ಕೇವಲ ಕನ್ನಡದ ಪ್ರಭಾವಳಿಯಲ್ಲಿ ಇಟ್ಟು ನೋಡಲು ಸಾಧ್ಯವಿಲ್ಲ.

ಸಾಹಿತ್ಯವೂ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಮುನ್ನಡೆಯಬೇಕು ಎನ್ನುವುದು ಅನಂತಮೂರ್ತಿ ಅವರ ನಿಲುವಾಗಿತ್ತು. ಅದು ಅವರ ಬರಹಗಳಲ್ಲೂ ಪ್ರತಿಬಿಂಬಿತವಾಗಿತ್ತು. ಅವರ ‘ಸಂಸ್ಕಾರ’ ಕಾದಂಬರಿ ನನಗೆ ಬಲು ಇಷ್ಟವಾದ ಕೃತಿ. ಇಂಗ್ಲಿಷ್‌, ತೆಲುಗು ಅನುವಾದ ಎರಡನ್ನೂ ನಾನು ಅನೇಕ ಬಾರಿ ಓದಿದ್ದೇನೆ. ಚಲನಚಿತ್ರವನ್ನೂ ವೀಕ್ಷಿಸಿದ್ದೇನೆ. ನನ್ನ ಮೇಲೆ ಗಾಢ ಪರಿಣಾಮ ಬೀರಿದ ಕೃತಿ ಅದು. ‘ಭಾರತೀಪುರ’ವೂ ಹಿಡಿಸಿದೆ. ಇಂಗ್ಲಿಷ್‌ ಇಲ್ಲವೆ ತೆಲುಗು ಭಾಷೆಗಳಿಗೆ ಅನುವಾದಗೊಂಡ ಅವರ ಯಾವ ಕಥೆಯನ್ನೂ ನಾನು ಓದದೆ ಬಿಟ್ಟಿಲ್ಲ.

ಮೈಸೂರಿನ ಆ ನೆನಪು ನನಗಿನ್ನೂ ಹಸಿರಾಗಿದೆ. ನ್ಯಾಷನಲ್‌ ಬುಕ್‌ ಟ್ರಸ್ಟ್‌ ಆಫ್‌ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ದೇಶದ ಹಲವು ಹಿರಿಯ ಸಾಹಿತಿಗಳ ಜತೆಜತೆಗೆ ಅನಂತಮೂರ್ತಿ ಮತ್ತು ನಾನು ಪಾಲ್ಗೊಂಡಿದ್ದೆವು. ಅವರ ಎದುರು ನಾನು ನನ್ನ ಕಥೆಯೊಂದರ ಇಂಗ್ಲಿಷ್‌ ಅನುವಾದವನ್ನು ಓದಿ ಹೇಳಿದ್ದೆ. ಕುತೂಹಲದಿಂದ ಕೇಳಿಸಿಕೊಂಡಿದ್ದ ಅವರು, ಮೂಲ ತೆಲುಗು ಕಥೆಯನ್ನೂ ಓದಿಸಿಕೊಂಡು ಕೇಳಿದ್ದರು. ಮೆಚ್ಚುಗೆ ಮಾತುಗಳನ್ನಾಡಿದ್ದರು. ಅದು ನನ್ನ ಬದುಕಿನ ಮಧುರ ಕ್ಷಣ.

ವೈಚಾರಿಕ ಕಿಡಿ ಹೊತ್ತಿಸುವಲ್ಲಿ ಸಿದ್ಧಹಸ್ತರಾಗಿದ್ದ ಅನಂತಮೂರ್ತಿ, ಬಿಸಿಯಾದ ವಾತಾವರಣದಲ್ಲಿ ನಗೆಬುಗ್ಗೆ ಹರಿಸುವ ಮೂಲಕ ತಂಪೆರೆಯುವಲ್ಲೂ ನಿಸ್ಸೀಮರಾಗಿದ್ದರು. ಅವರೊಡನೆ ಕೆಲ ಕ್ಷಣ ಕಳೆದರೆ ನಮ್ಮ ಜ್ಞಾನಕ್ಕೆ ಹೊಸ ಹೊಳಪು ಬರುತ್ತಿತ್ತು. ಘಟನೆಗಳನ್ನು ಕಥೆಯಂತೆ ಅವರು ಬಣ್ಣಿಸಿ ಹೇಳುತ್ತಿದ್ದರೆ, ಎದುರಿಗೆ ಕುಳಿತವರಿಗೆ ಮೈಯೆಲ್ಲ ಕಿವಿಯಾಗಿ ಕೇಳುವ ತವಕ. ಶುಷ್ಕವಾದ ರಾಜಕೀಯ, ಶೈಕ್ಷಣಿಕ ಘಟನೆಗಳಿಗೂ ರಸವತ್ತಾದ ಕಥೆ ರೂಪ ನೀಡುವ ತಾಕತ್ತು ಅವರಿಗೆ ಸಿದ್ಧಿಸಿದ್ದಾದರೂ ಎಲ್ಲಿಂದ?

ಹೌದು, ಮತ್ತೆ ಆ ಪ್ರಶ್ನೆ ಕಾಡುತ್ತಿದೆ: ಹುಸಿ ನಾಯಕರ ಮುಖವಾಡವನ್ನು ನಿರ್ಭಿಡೆಯಿಂದ ಕಳಚಿ ಹಾಕುತ್ತಿದ್ದ, ತಳ ಸಮುದಾಯದ ಬೆಂಬಲಕ್ಕೆ ಧ್ವನಿ ಎತ್ತಿ ನಿಲ್ಲುತ್ತಿದ್ದ, ಸಂವಿಧಾನದ ಆಶಯಗಳನ್ನು ಪ್ರೀತಿಸುತ್ತಿದ್ದ, ಸಮಾನತೆಯನ್ನು ಪ್ರತಿಪಾದಿಸುತ್ತಿದ್ದ, ದೇಶದ ಸಾಹಿತ್ಯದ ಕ್ಯಾನ್‌ವಾಸ್‌ನಲ್ಲಿ ದಕ್ಷಿಣ ಭಾರತದ ಗುರುತು ಮೂಡಿಸಿದ್ದ ಅನಂತಮೂರ್ತಿ ಏಕೆ ಹೀಗೆ ಹೊರಟುಬಿಟ್ಟರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT