ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸೊಗಡಿನ ಮೆರವಣಿಗೆ ಮುನ್ನುಡಿ

ಸಮ್ಮೇಳನದ ಮುನ್ನಾದಿನ ಮಾರ್ದನಿಸಿದ ಕನ್ನಡದ ಗಟ್ಟಿದನಿ
Last Updated 31 ಜನವರಿ 2015, 20:03 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುನ್ನುಡಿಯಾಗಿ ಶನಿವಾರ ಇಲ್ಲಿ ನಡೆದ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಮೆರವಣಿ­ಗೆಯಲ್ಲಿ ಕನ್ನಡದ ಗಟ್ಟಿ ದನಿ ಮಾರ್ದನಿ­ಸಿತು.

ಸಾವಿರಾರು ಕಂಠಗಳಿಂದ ಏಕಕಾಲಕ್ಕೆ ಭುವನೇಶ್ವರಿಯ ಜೈಕಾರ ಮೊಳಗಿತು. ರಾಜ್ಯದ ವಿವಿಧ ಭಾಗಗಳಿಂದ ಬಂದ ಕಲಾ ತಂಡಗಳ ಪ್ರದರ್ಶನದ ಮಧ್ಯದಲ್ಲಿ ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ದಂಪತಿಯ ಮೆರವಣಿಗೆ ನಡೆಯಿತು.

ಸಂಜೆ 4ಗಂಟೆಗೆ ಶ್ರವಣಬೆಳಗೊಳ ಮಠದ ಆವರಣದಲ್ಲಿರುವ ಯಾತ್ರಿ ನಿವಾಸಕ್ಕೆ ಬಂದ ಸಮ್ಮೇಳನಾಧ್ಯಕ್ಷರನ್ನು ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಲೋಕೋಪಯೋಗಿ ಇಲಾಖೆ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ­ರಾದ ಸಿ.ಎನ್‌. ಬಾಲಕೃಷ್ಣ, ಎ. ಮಂಜು ಮತ್ತಿತ­ರರು ಫಲ ತಾಂಬೂಲಗಳನ್ನು ಕೊಟ್ಟು, ಮಾಲೆ ಹಾಕಿ ಸ್ವಾಗತಿಸಿದರು. ಬಳಿಕ ಸಿದ್ದಲಿಂಗಯ್ಯ ದಂಪತಿಯನ್ನು ತಳಿರು ತೋರಣಗಳಿಂದ, ತಾವರೆ ದಳದ ಮಾದರಿಯಲ್ಲಿ ಸಿಂಗರಿಸಿದ್ದ ಎತ್ತಿನ ಗಾಡಿಯ ಮೇಲೆ ಕೂರಿಸಲಾಯಿತು. ಗಾಡಿಯ ಮೇಲೇರಿದ ಸಿದ್ದಲಿಂಗಯ್ಯ ಮೊದಲು ನೆರೆದಿದ್ದ ಸಾವಿರಾರು ಜನರಿಗೆ ಕೈಮುಗಿದರು. ಉಸ್ತುವಾರಿ ಸಚಿವ ಮಹದೇವಪ್ಪ ಅವರು ಗಾಡಿ ಏರಿ ಸಿದ್ದಲಿಂಗಯ್ಯ ಅವರಿಗೆ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಮಾಲೆ ಹಾಕಿದರು. ಪತ್ನಿ ರಮಾ ಅವರಿಗೂ ಹಸಿರು ವರ್ಣ, ಬಂಗಾ­ರದ ಜರಿಗಳ ಪೇಟ ತೊಡಿಸಿ, ಕೈಗೆ ಕನ್ನಡ ಧ್ವಜ­ವನ್ನು ನೀಡಲಾಯಿತು. ಇದಾದ ಬಳಿಕ ಅರಕಲ­ಗೂಡು ಶಾಸಕ ಎ. ಮಂಜು ‘ಅಧ್ಯಕ್ಷ ದಂಪತಿ’ಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.

ಕೊನೆಯಲ್ಲಿ ಬಿಳಿ ಪಂಚೆ, ಬಿಳಿ ಅಂಗಿ, ಹೆಗಲ ಮೇಲೆ ಬಿಳಿಯ ಶಲ್ಯ ಹಾಕಿ­ಕೊಂಡು, ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ಗಾಡಿಯೇರಿ ಚಾಟಿ ಬೀಸುತ್ತ ಸಾರಥಿಯ ಪಾತ್ರ ವಹಿಸಿದರು. ಆ ಕ್ಷಣದಲ್ಲಿ ಮುಗಿಲು ಮುಟ್ಟುವಂತೆ ಜೈಕಾರ ಮೊಳಗಿದವು.
ಅಲ್ಲಿಂದ ಎರಡೂವರೆ ಕಿ.ಮೀ. ದೂರ ಕ್ರಮಿಸಲು ಮೆರವಣಿಗೆಗೆ ಎರಡೂವರೆ ಗಂಟೆಗೂ ಹೆಚ್ಚು ಕಾಲಾವಕಾಶ ಹಿಡಿಯಿತು.
ಮೆರವಣಿಗೆಯ ಮುಂದೆ ಪೂರ್ಣ­ಕುಂಭ­ಗಳನ್ನು ಹೊತ್ತ ಮಹಿಳೆಯರು, ಹಿಂದೆ ಹಲವು ಎತ್ತಿನ ಗಾಡಿಗಳಲ್ಲಿ ವಿವಿಧ ಸಂಘಟನೆಗಳ ಪ್ರತಿ­ನಿಧಿ­ಗಳು, ಕಲಾ ತಂಡಗಳು ಮೆರವಣಿಗೆ ನಡೆಸಿದವು.

ಕಂಸಾಳೆ, ಜಗ್ಗಲಿಗೆ ಮೇಳ, ಡೊಳ್ಳು ಕುಣಿತ, ಯಕ್ಷಗಾನ, ಮರಗಾಲು, ವೀರಗಾಸೆ, ವಿವಿಧ ಸ್ತಬ್ಧಚಿತ್ರಗಳನ್ನು ಒಳಗೊಂಡ ಭವ್ಯ ಮೆರವಣಿಗೆ­ಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಕನ್ನಡಪರ ಘೋಷಣೆ­ಗಳನ್ನು ಕೂಗಿದರು. ತಾಯಿ ಭುವ­ನೇಶ್ವರಿಯ ಜೈಕಾರದ ಜೊತೆಗೆ ‘ಬೆಳಗಾವಿ ನಮ್ಮದು, ಕಾಸರಗೋಡು ನಮ್ಮದು’ ಎಂಬ ಘೋಷಣೆಗಳೂ ಕೇಳಿಬಂದವು.

ಸಂಜೆ ಏಳು ಗಂಟೆಗೆ ಮೆರವಣಿಗೆ ಪ್ರಧಾನ ವೇದಕೆಯ ಮುಂದಿನ ಅ.ನ. ಕೃಷ್ಣರಾಯ ಮಹಾಮಂಟಪಕ್ಕೆ ತಲು­ಪಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ನಿಕಟಪೂರ್ವ ಸಮ್ಮೇ­ಳನದ ಅಧ್ಯಕ್ಷ ನಾ. ಡಿಸೋಜ, ಶಾಸಕರು, ಅಧಿ­ಕಾರಿ­ಗಳು ಅಲ್ಲಿ ಮತ್ತೊಮ್ಮೆ ಅಧ್ಯಕ್ಷ­ರನ್ನು ಬರ­ಮಾಡಿಕೊಂಡರು. ನೆರೆದಿದ್ದ ಸಾವಿರಾರು ಜನರು ಮತ್ತೆ ಕನ್ನಡ ಮಾತೆ, ಕನ್ನಡದ ಕವಿಗಳು, ಲೇಖಕರು, ಕಾದಂಬರಿಕಾರರ ಹೆಸರು ಹಿಡಿದು ಜೈಕಾರ ಕೂಗಿ ಕನ್ನಡದ ಧ್ವನಿಯನ್ನು ಮುಗಿಲು ಮುಟ್ಟಿಸುವ ಮೂಲಕ ಭಾನುವಾರ (ಫೆ. 1)ದಿಂದ ಆರಂಭವಾ­ಗಲಿರುವ ‘ಅಕ್ಷರ ಜಾತ್ರೆ’ಗೆ ಗಟ್ಟಿ ದನಿಯ ವೇದಿಕೆ ನಿರ್ಮಿಸಿಕೊಟ್ಟರು.

ಇಂಥ ಮೆರವಣಿಗೆ ಇದೇ ಮೊದಲು: ‘ಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ಮತ್ತು ಅಧ್ಯಕ್ಷನಾಗಿ ಒಟ್ಟು 13 ಸಮ್ಮೇಳನ­ಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ದೇಸಿ ಸೊಗಡಿನ ಮೆರವಣಿಗೆ ನೋಡಿದ್ದು ಇದೇ ಮೊದಲು. ಸಾಹಿತ್ಯ ಪರಿಷತ್ತು ಶತ­ಮಾನೋತ್ಸವ ಆಚರಿ­ಸುತ್ತಿರುವ ಸಂದರ್ಭದಲ್ಲಿ ಆಯೋಜಿ­ಸಿರುವ ಈ ಮೆರವಣಿಗೆ ಅತ್ಯಂತ ಸಕಾಲಿಕವಾ­ದುದು’ ಎಂದು ಪುಂಡಲೀಕ ಹಾಲಂಬಿ ಸಂತಸ ವ್ಯಕ್ತಪಡಿಸಿದರು.

‘ಎತ್ತಿನ ಗಾಡಿ ಗ್ರಾಮೀಣ ಬದುಕಿನ ಚಿಹ್ನೆ. ಸಿದ್ದಲಿಂಗಯ್ಯ ಅವರು ಸ್ವತಃ ಗ್ರಾಮೀಣ ಪ್ರದೇಶ­ದಿಂದ ಬಂದವರು ಮತ್ತು ಗ್ರಾಮದೇವತೆಗಳ ಬಗ್ಗೆ ಸಂಶೋ­ಧನೆ ನಡೆಸಿದವರು. ಆ ದೃಷ್ಟಿ­ಯಿಂದಲೂ ಇದು ಅರ್ಥಪೂರ್ಣ ಮೆರವಣಿಗೆ. ಇಂಥ ಹಬ್ಬಗಳಲ್ಲಿ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT