ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪ
Last Updated 28 ಮಾರ್ಚ್ 2015, 9:12 IST
ಅಕ್ಷರ ಗಾತ್ರ

ಚಾಮರಾಜನಗರ: ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪ ಸಂಬಂಧ ಇಲ್ಲಿನ ನಗರಸಭೆಯ ಅಧ್ಯಕ ಎಸ್‌. ನಂಜುಂಡಸ್ವಾಮಿ ವಿರುದ್ಧ ಇಲ್ಲಿನ ಜಿಲ್ಲಾ ಲೋಕಾಯುಕ್ತ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ. 2012ರ ನ. 7ರಂದು ಲಂಚ ನಿರೋಧ ಕಾಯ್ದೆ 1988ರ ಕಲಂ 13(1)(ಇ) ಸಹ ಕಲಂ 13(2) ಅನ್ವಯ ಆರೋಪಿ ನಂಜುಂಡಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು (ಮೊ.ಸಂ. 7/2012).

ಬಳಿಕ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಬಡಾವಣೆಯ ಅವರ ಮನೆ ಮೇಲೆ ಮೈಸೂರು– ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿತ್ತು. ನಂಜುಂಡಸ್ವಾಮಿ ಅರ್ಜಿಸಿರುವ ಆಸ್ತಿಪಾಸ್ತಿಯ ಪ್ರಮಾಣ ಬಲ್ಲ ಮೂಲಗಳ ಪ್ರಕಾರ ಶೇ 151.4ರಷ್ಟು ಹೆಚ್ಚಳ ಆಗಿರುವುದು ದಾಳಿ ವೇಳೆ ಬಯಲಾಗಿತ್ತು.

ಅವರು ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ಹೀಗಾಗಿ, ಕರ್ನಾಟಕ ಲೋಕಾಯುಕ್ತದ ಉಪ ಪೊಲೀಸ್‌ ಮಹಾನಿರೀಕ್ಷಕರು 2014ರ ಆಗಸ್ಟ್ 4ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ನಂಜುಂಡಸ್ವಾಮಿ ಗಳಿಸಿರುವ ಅಕ್ರಮ ಆಸ್ತಿ ಸಂಬಂಧ ವರದಿ ಸಲ್ಲಿಸಿದ್ದರು.

ನಂಜುಂಡಸ್ವಾಮಿ ಆದಾಯಕ್ಕಿಂತ ₹ 3,14,84,271 ಹೆಚ್ಚಿಗೆ ಗಳಿಸಿದ್ದಾರೆ. ಅವರನ್ನು ಲೋಕಾಯುಕ್ತ ನ್ಯಾಯಾಲಯ ದಲ್ಲಿ ವಿಚಾರಣೆಗೆ ಒಳಪಡಿಸಲು ಆದೇಶ ನೀಡುವಂತೆ ಕೋರಿದ್ದರು.  ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿದ್ದಿಕ್‌ ಪಾಷ ಅವರು, ಲಂಚ ನಿರೋಧ ಕಾಯ್ದೆ 1988ರ ಕಲಂ 13(1)(ಇ) ಸಹ ಕಲಂ 13(2) ಅಡಿಯಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ನಂಜುಂಡಸ್ವಾಮಿ ಅವರನ್ನು ವಿಚಾರಣೆಗೆ (ಪ್ರಾಸಿಕ್ಯೂಷನ್‌) ಒಳಪಡಿಸಲು ಲಂಚ ನಿರೋಧ ಕಾಯ್ದೆ 19(1)(ಸಿ) ಅನ್ವಯ ಆದೇಶ ನೀಡಿದ್ದರು. ಈ ಆದೇಶ ಜನವರಿ 6ರಂದು ಹೊರಬಿದ್ದಿತ್ತು. ಹೀಗಾಗಿ, ಲೋಕಾಯುಕ್ತ ಪೊಲೀಸರು ಬುಧವಾರ ಆರೋಪಿ ನಂಜುಂಡಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. 

ಅಕ್ರಮ ಆಸ್ತಿ ವಿವರ: ನಂಜುಂಡಸ್ವಾಮಿ ಮನೆ ಮೇಲೆ ನಡೆದ ದಾಳಿ ವೇಳೆ ನಗದು, ಚಿನ್ನಾಭರಣ ಪತ್ತೆಯಾಗಿತ್ತು. ಆರೋಪಿ ನಂಜುಂಡಸ್ವಾಮಿ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ₹ 2,77,89,595 ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ತಮ್ಮ ಸೇವಾವಧಿಯಲ್ಲಿ ಅವರು ಮಾಡಿರುವ ವೆಚ್ಚ ₹ 37,43,010. ಸ್ಥಿರ, ಚರಾಸ್ತಿ, ಖರ್ಚು–ವೆಚ್ಚದ ಅಂದಾಜಿನ ಮೌಲ್ಯ ₹ 3,15,32,605 ಆಗಿದೆ. ಆರೋಪಿತರ ಕುಟುಂಬ ಹೊಂದಿರುವ ಎಲ್ಲ ಮೂಲಗಳ ಒಟ್ಟು ಆದಾಯ ₹ 1,25,60,660. ಹೆಚ್ಚುವರಿಯಾಗಿ ಅವರು ₹ 1,89,72,005 ಮೌಲ್ಯದ ಸ್ಥಿರ, ಚರಾಸ್ತಿಯನ್ನು ಸಾರ್ವಜನಿಕ ಸೇವಾವಧಿಯಲ್ಲಿ ಅಕ್ರಮವಾಗಿ ಸಂಪಾದಿಸಿರುವುದು ದಾಳಿಯಲ್ಲಿ ಬಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT