ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವೇ ರ‍್ಯಾಂಪ್‌; ಅಲೆಗಳ ಕ್ಯಾಟ್‌ವಾಕ್!

ಮರೆಯಲಿ ಹ್ಯಾಂಗ್
Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೊ ಸ ಹೊಸ ಸ್ಥಳಗಳನ್ನು ನೋಡುವುದು ನನಗೆ ಮೊದಲಿನಿಂದಲೂ ತುಂಬ ಇಷ್ಟ. ಅದರಲ್ಲೂ ಹೋಗುವ ಸ್ಥಳದ ಬಗ್ಗೆ ಒಂದು ಸಣ್ಣ ಪಟ್ಟಿ ಕೂಡ ಮಾಡಿಟ್ಟುಕೊಂಡಿರುತ್ತೇನೆ. ನಾವು ಹೋಗುವ ಜಾಗ, ಅಲ್ಲಿನ ಊಟ, ವಿಶೇಷತೆಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಗೋವಾಕ್ಕೆ ನಾನು ಹೋಗಬೇಕಾದಾಗ ಮೊದಲು ಮಾಡಿದ್ದು ಇದೇ ಕೆಲಸವನ್ನು.

ದೇಶದ ಪಶ್ಚಿಮ ಕರಾವಳಿಯಲ್ಲಿರುವ ಅತ್ಯದ್ಭುತ ತಾಣಗಳಲ್ಲಿ ಗೋವಾ ಕೂಡ ಒಂದು. ಇದು ನನ್ನಿಷ್ಟದ ಪ್ರವಾಸಿ ತಾಣ. ಪಶ್ಚಿಮ ಘಟ್ಟಗಳ ಒಡಲಲ್ಲಿರುವ ಈ ಪುಟ್ಟ ರಾಜ್ಯ ಮ್ಯಾಂಗನೀಸ್, ಕಬ್ಬಿಣದ ಅದಿರಿನಿಂದ ಕೂಡಿದ ಗಟ್ಟಿ ನೆಲದ ಆಗರ. ಅರಬ್ಬೀ ಸಮುದ್ರ ಹೊತ್ತು ತರುವ ತಂಗಾಳಿಗೆ ಮೈಯೊಡ್ಡಿ ನಿಂತರೆ ವೇಗದ ಬದುಕಿನ ಜಂಜಾಟಗಳನ್ನೆಲ್ಲ ಮರೆತುಬಿಡಬಹುದು. ಅಷ್ಟರಮಟ್ಟಿಗೆ ಇದು ಪ್ರಶಾಂತ ತಾಣ.
ಒಂದೆಡೆ ಮಾಂಡೋವಿ, ಜುಹಾರಿ, ಛಾಪೋರಾ, ಸಾಲ್ ನದಿಗಳ ವಿಹಂಗಮ ನೋಟ ಕೈಬೀಸಿ ಕರೆದರೆ, ಇನ್ನೊಂದೆಡೆ ಅರಬ್ಬೀ ಸಮುದ್ರವನ್ನು ಅಪ್ಪಿಕೊಳ್ಳುವ ಮೂಲಕ ಗೋವಾ ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿದೆ.

ಅನೇಕ ರಾಜ-ಮಹಾರಾಜರ ಆಳ್ವಿಕೆ  ಕಂಡಿದ್ದ ಗೋವಾ, ಕೊನೆಗೆ ದಕ್ಕಿದ್ದು ಪೋರ್ಚುಗೀಸರಿಗೆ. ವಾಸ್ತವದಲ್ಲಿ ಭಾರತದ ಭೂಭಾಗ ಎನಿಸಿದ್ದರೂ 1960ರ ದಶಕದವರೆಗೂ ಇಲ್ಲಿ ಪೋರ್ಚುಗೀಸರದೇ ಆಡಳಿತವಿತ್ತಂತೆ. ಅವರ ಆಡಳಿತದ ಕುರುಹುಗಳಾಗಿ ಅನೇಕ ಬೆಸಿಲಿಕಾಗಳು, ಕ್ಯಾಥೆಡ್ರಲ್‌ಗಳು, ಸ್ಮಾರಕಗಳು ಇಲ್ಲಿ ಸಾಕ್ಷಿಯಾಗಿ ನಿಂತಿವೆ.

ಗೋವಾದಲ್ಲಿ ನನ್ನನ್ನು ಹೆಚ್ಚು ಸೆಳೆದಿದ್ದು ಅಲ್ಲಿಗೆ ಬರುವ ಪ್ರವಾಸಿಗರು. ದೇಶಿಯರ, ವಿದೇಶಿಯರ ಕಲರವ ಇಲ್ಲಿ ಯಾವಾಗಲೂ ಇರುತ್ತದೆ.  ಕಾಸ್ಮೋಪಾಲಿಟನ್ ಸಂಸ್ಕೃತಿಯ ನಗರ ಎನಿಸಿರುವ ಗೋವಾದ ಕಡಲ ತೀರಗಳಲ್ಲಿ ಹೆಜ್ಜೆ ಹಾಕುವುದು ನನಗೆ ಖುಷಿಕೊಡುತ್ತದೆ.
ಚಳಿಗಾಲದ ಗೋವಾ ನನಗೆ ಇಷ್ಟ. ಮುಂಜಾನೆ ಎದ್ದು ಕಡಲ ತೀರದಲ್ಲಿ ನಡೆಯುವಾಗ ತಂಪಾದ ಮರಳಿನ  ಸ್ಪರ್ಶ ಹಿತವೆನಿಸುತ್ತದೆ. ಪದೇ ಪದೇ ಕಾಲಿಗೆ ಮುತ್ತಿಟ್ಟು ಕಚಗುಳಿ ಇಡುವ ಅಲೆಗಳ ಆಟವನ್ನು ಅನುಭವಿಸುವುದೂ ಚೆಂದ. ಸೂರ್ಯಾಸ್ತವನ್ನು ನೋಡಿ, ಡಾಲ್ಫಿನ್‌ಗಳ ಜತೆ ಆಟವಾಡುವುದು ನನಗೆ ತುಂಬಾ ಇಷ್ಟ.  

ಮುದ ನೀಡುವ ಕಡಲ ತೀರ
ಗೋವಾದಲ್ಲಿರುವ ಬೀಚ್‌ಗಳ ಕುರಿತು ನನ್ನದು ಎಂದೂ ತೀರದ ಆಕರ್ಷಣೆ. ಕಣ್ಣು ಹಾಯಿಸಿದಷ್ಟು ದೂರವೂ ನೀರು. ಎಲ್ಲಾ ಮರೆತು ಆ

ದೂರದ ಕಡಲನ್ನು ನೋಡುವುದೇ ನನಗೆ ಹಿತ. ಗೋವಾದ ಒಡಲಿನಲ್ಲಿ ಸುಮಾರು ಹದಿನೆಂಟು ಬೀಚ್‌ ಇವೆಯಂತೆ. ಕಲಂಗಟ್ ಬೀಚ್, ಕ್ಯಾಂಡೊಲಿಮ್ ಬೀಚ್, ಭಾಗಾ ಬೀಚ್,  ಅಂಜುನಾ ಬೀಚ್... ಹೀಗೆ ಪಟ್ಟಿ ಬೆಳೆಯತ್ತದೆ. ಒಂದಕ್ಕಿಂತ ಒಂದು ವಿಭಿನ್ನ.

ನನ್ನೆಲ್ಲಾ ಕೆಲಸ ಬದಿಗೊತ್ತಿ ಗೋವಾಕ್ಕೆ ಹೊರಟೆನೆಂದರೆ ಏನೋ ಒಂದು ನೆಮ್ಮದಿ. ಇಲ್ಲಿಯ ತಂಪುಗಾಳಿಗೆ ಮೈಯೊಡ್ಡಿ ಕೈಯಲ್ಲೊಂದು ಪುಸ್ತಕ ಹಿಡಿದು ಕುಳಿತರೆ ನನಗೆ ಬೇರೆ ಯಾವುದೇ ಚಿಂತೆ ಕಾಡುವುದಿಲ್ಲ. ಕಡಲ ತೀರದ ಮರಳಿನಲ್ಲಿ ಆರಾಮದಾಯಕ ಹಾಸಿಗೆಗಳ ಮೇಲೆ ಮಲಗಿ, ಸುಡುಸುಡುವ ಬಿಸಿಲಿಗೆ ತಮ್ಮ ಬಿಳುಪಾದ ಮೈಯನ್ನೊಡ್ಡುವ ವಿದೇಶಿಯರು ಇಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಅವರು ಬದುಕುವ ಶೈಲಿ, ಬೆಳೆಸಿಕೊಂಡ ಜೀವನಪ್ರೀತಿ ನನಗೆ ಹೆಚ್ಚು ಇಷ್ಟವಾಗಿದ್ದು.

ಸಂಜೆಯಾಗುತ್ತಲೇ ಗೋವಾ  ಮತ್ತಷ್ಟು ರಂಗೇರುತ್ತದೆ. ವಿದೇಶಿಯರು ಬಿಯರ್, ವಿಸ್ಕಿ, ಗೋವಾ ಪೆನ್ನಿ ಹೀರುತ್ತಲೋ ಅಥವಾ ಸಿಗರೇಟು ಸೇದುತ್ತಲೋ ಸೂರ್ಯಾಸ್ತ ಆನಂದಿಸುತ್ತಾರೆ. ಕೆಲವು ದೇಶೀ ಪ್ರವಾಸಿಗರು ಕೂಡ ವಿದೇಶಿಯರಂತೆ ಇರುವುದನ್ನು ನಾನು ಇಲ್ಲಿ ನೋಡಿದ್ದೇನೆ.

ಕೋಲ್ವಾಬೀಚ್‌ನ ವಿಶೇಷ
ನಾನು ಕಂಡಂತೆ ಕುಟುಂಬ ಸಮೇತ ಪ್ರವಾಸ ಬರುವವರು ಕೋಲ್ವಾ ಬೀಚ್‌ಗೆ ಭೇಟಿ ನೀಡುತ್ತಾರೆ. ಇಲ್ಲಿ ವಿದೇಶೀಯರ ಹಾವಳಿ ಸ್ವಲ್ಪ ಕಡಿಮೆಯಂತೆ. ಅವರವರ ಅಭಿರುಚಿಗೆ ತಕ್ಕುದಾದ ಉಪಹಾರ ಗೃಹಗಳು ಮತ್ತು ಹೋಟೆಲ್‌ಗಳು ಇಲ್ಲಿವೆ. ಗೋವಾದ ಕ್ಯಾಂಡೋಲಿಮ್ ಅಥವಾ ಪಣಜಿ ರಸ್ತೆಗಳಲ್ಲಿ ಓಡಾಡುತ್ತಾ, ರಸ್ತೆ ಬದಿಯಿರುವ ಉಪಹಾರ ಗೃಹಗಳಲ್ಲಿ ‘ಮೇಡಿಟರೇನಿಯನ್’ ಅಥವಾ ‘ಕಾಂಟಿನೆಂಟಲ್’ ಶೈಲಿಯ ಊಟವನ್ನು ಸವಿಯಬಹುದು. ಎಷ್ಟೊಂದು ವೈವಿಧ್ಯದ ಖಾದ್ಯಗಳು! ಸವಿದವನೇ ಬಲ್ಲ ಊಟದ ಸವಿ.

ಆಟದ ಮೋಜು
ಇಲ್ಲಿನ ಬೀಚ್‌ಗಳಲ್ಲಿನ ಸಾಹಸ ಕ್ರೀಡೆ ನನಗೆ ತುಂಬ ಮಜಾ ನೀಡುವ ಸಂಗತಿ. ಜೆಟ್ ಸ್ಕೀ, ಬನಾನಾ ರೈಡ್, ಪ್ಯಾರಾ ಸೆಯ್ಲಿಂಗ್‌ನಂತಹ ಆಟ ಆಡುತ್ತಿದ್ದರೆ ಸಮಯ ಸರಿಯುವುದೇ ತಿಳಿಯುವುದಿಲ್ಲ. ಬೆಲೆ ಸ್ವಲ್ಪ ದುಬಾರಿಯಾದರೂ ಸಂಪೂರ್ಣ ಮನರಂಜನೆ ಸಿಕ್ಕಿತ್ತು ನನಗೆ. ಇನ್ನು ಊಟದ ವಿಷಯಕ್ಕೆ ಬಂದರೆ ನಾನು ಮಾಂಸಾಹಾರಿ.  ಚೆನ್ನಾಗಿರುವ ಸೀ ಫುಡ್ ಬಾಯಿ ಚಪ್ಪರಿಸಿಕೊಂಡು ತಿಂದಿದ್ದೇನೆ. ಅನೇಕ ರೆಸ್ಟೋರೆಂಟ್‌ಗಳು ಸೇರಿದಂತೆ ಅವರವರ ಅಭಿರುಚಿಗೆ ತಕ್ಕ ಊಟ ಒದಗಿಸುವ ಹೋಟೆಲ್‌ಗಳು ಇಲ್ಲಿವೆ.

ಗೋವಾ ಸುತ್ತ ಬೈಕ್‌ ಓಡಿಸುವ ನನ್ನಾಸೆಯೂ ನೇರವೇರಿದೆ. ಬೈಕ್‌, ಸ್ಕೂಟರ್‌ಗಳು ದಿನವೊಂದಕ್ಕೆ ಇಲ್ಲವೇ ವಾರಕ್ಕೆ ಇಂತಿಷ್ಟು ದರದಲ್ಲಿ ಬಾಡಿಗೆಗೆ ಸಿಗುತ್ತವೆ. ಹಾಗಾಗಿ ಖುಷಿಯಿಂದ ಬೈಕ್‌ ರೈಡ್‌ ಮಾಡಿ ಆನಂದಿಸಿರುವೆ.

ಕೈಬೀಸಿ ಕರೆಯುವ ಕೋಟೆ
ಒಂದಷ್ಟು ಹೊತ್ತು ಕಡಲು ನೋಡಿ ತಣಿದ ನಂತರ ಗೋವಾದ ಕೋಟೆಗಳನ್ನು ನೋಡಬಹುದು. ಪೋರ್ಚುಗೀಸರ ಪ್ರಭಾವ ಹೊಂದಿದ್ದ ಗೋವಾ ಕೋಟೆ ಹೆಸರುವಾಸಿಯಾದುದು. ಇಲ್ಲಿನ ಅಗುವಾಡಾ ಕೋಟೆ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಲ್ಲೊಂದು. ಕೋಟೆಯ ಮೇಲ್ಭಾಗದಲ್ಲಿ ನಿಂತು ಅರಬ್ಬಿ ಸಮುದ್ರದಲ್ಲಿ ಓಡಾಡುವ ಭವ್ಯವಾದ ಹಡಗುಗಳ ನೋಟವನ್ನು ನಾನು ಮರೆಯಲಾರೆ.

ದಿರಿಸು ಹೀಗಿರಲಿ...
ಗೋವಾದಲ್ಲಿ ಶಾರ್ಟ್ಸ್‌ನಂತಹ ಉಡುಪು ಧರಿಸಿದರೆ ಆರಾಮದಾಯಕ. ಬೂಟಿಗಿಂತಲೂ ಚಪ್ಪಲಿ ಇಲ್ಲಿ ಒಳ್ಳೆಯದು. ತುಂಬಾ ಹಣವನ್ನು ತೆಗೆದುಕೊಂಡು ತಿರುಗಾಡಬೇಡಿ. ಮೊಬೈಲ್ ಫೋನ್‌ ಅನ್ನು ಆದಷ್ಟು ಸೈಲೆಂಟ್‌ ಆಗಿರಿಸಿ, ರಜೆಯ ಮೋಜನ್ನು ಅನುಭವಿಸಿ.

ಮರೆಯಲಾಗದ ಮದುವೆ
ರೂಪದರ್ಶಿಯೊಬ್ಬಳ ಮದುವೆಯ ಸಲುವಾಗಿ ನಾನು ಇತ್ತೀಚೆಗೆ ಗೋವಾಕ್ಕೆ ಭೇಟಿ ನೀಡಿದ್ದೇನೆ. ಸೂರ್ಯಾಸ್ತದ ಸಮಯ ಆಕೆ ಮದುವೆಯ ಮಧುರ ಬಂಧನಕ್ಕೆ ಕಾಲಿಟ್ಟ ಕ್ಷಣವದು. ಬಾನೆಲ್ಲಾ ರಂಗಿನೋಕುಳಿಯಿಂದ ಕಂಗೊಳಿಸುತ್ತಿತ್ತು. ಆ ಮದುವೆ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.

ಭಾರತೀಯ ಫ್ಯಾಷನ್ ಕ್ಷೇತ್ರದಲ್ಲಿ ಪ್ರಸಾದ್ ಬಿದಪ್ಪ ಅವರದು ಚಿರಪರಿಚಿತ ಹೆಸರು. ದೇಶದ ಅನೇಕ ಪ್ರಸಿದ್ಧ ರೂಪದರ್ಶಿಗಳು, ಸೌಂದರ್ಯ ಸ್ಪರ್ಧೆ ವಿಜೇತರು, ಸಿನಿಮಾ ನಟಿಯರು, ಬಿದಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT