ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಎದೆಯೊಳಗೊಂದು ಅಣುಬಾಂಬ್ ಇದೆಯೇ?

ಅಕ್ಷರ ಗಾತ್ರ

ಒಡಲ ಸಂಕಟಕೆ ಗಡಿಯಿಲ್ಲ
ಮಾನವ ಎಂಬೋನು
ಮಣ್ಣಿಗೆ ಮಾಲೀಕ ಆದನೆಂಬ
ಮತ್ತಿನಲಿ ಗೆರೆ ಎಳೆದು
ಗಡಿ ಎಂದ

ಹಮ್ಮಿನಲಿ ಬೀಗಲು
ಕಾದಾಟದಾಟ ಆಡಿದ
ಜೀವಗಳು ಶವವಾದವು, ಗಡಿ ಆಚೆ-ಈಚೆ
ಎರಡೂ ಕಡೆ ಹರಿದ ನೆತ್ತರೊಂದೇ
ಆದರೂ

ಗಡಿಯ ಮ್ಯಾಜಿಕ್ನಿಂದ
ಜೀವತೆತ್ತವರು ವೀರಮರಣ ಹೊಂದಿದರು
ಜೀವ ತೆಗೆದವರು ವೀರಯೋಧರಾದರು
ಒಡಲು ಅನುಭವಿಸುವ ಸಂಕಟಕೆ
ಗಡಿಯೂ ಇಲ್ಲ, ಆಚೆ-ಈಚೆಯೂ ಇಲ್ಲ

ಮೇಲಿನ ಈ ಪದ್ಯವನ್ನು ನಾನು ಬರೆದದ್ದು ‘ಯುದ್ಧ ಬೇಡ ಶಾಂತಿ ಬೇಕು’ ಎಂಬ ಮೌನ ಪ್ರತಿಭಟನೆಯ ಭಾಗವಾಗಿ ಪ್ರಕಟಿಸಿದ ಕರಪತ್ರಕ್ಕಾಗಿ. ಪದ್ಯಕ್ಕೆ ಪ್ರೇರಣೆಯಾದದ್ದು, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ– ‘ಈ ಕಡೆ ಸಾಯುತ್ತಾರೋ ಆಕಡೆ ಸಾಯುತ್ತಾರೋ ಒಟ್ಟಿನಲ್ಲಿ ಸಾಯುವವರು ನನ್ನ ಹೊಟ್ಟೆಯ ಮಕ್ಕಳೇ ಅಲ್ಲವೇ?’ ಎಂಬ ಗಡಿ ಭಾಗದ ಹಳ್ಳಿಯ ಹಿರಿಯ ಮಹಿಳೆಯೊಬ್ಬಳು ಆಡಿದ ಮಾತುಗಳು. ಅಣುಬಾಂಬಿಗೆ ಬಲಿಯಾದವರ ನೆನಪಿಗೆ ಮತ್ತು ಜಗತ್ತನ್ನು ಅಣ್ವಸ್ತ್ರಗಳ ಶಾಪದಿಂದ ವಿಮುಕ್ತಗೊಳಿಸಲು ಸಂಕಲ್ಪ ತೊಡುವ ದಿನವಾಗಿ ಆಚರಿಸುವ ‘ಹಿರೋಷಿಮಾ ದಿನ’ದ ಹಿನ್ನೆಲೆಯಲ್ಲಿ ನನ್ನ ಕವಿತೆ ಮತ್ತೆ ನೆನಪಾಗುತ್ತಿದೆ.

ನಾಝಿ ಆಳ್ವಿಕೆಯ ಯೂರೋಪಿನಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬಂದ ಭೌತಶಾಸ್ತ್ರಜ್ಞರಾದ ಲಿಯೋ ಸ್ಜಿಲಾರ್ಡ್ ಮತ್ತು ಆಲ್ಬರ್ಟ್ ಐನ್‌ಸ್ಟಿನ್ ಅವರುಗಳಿಗೆ, ಪ್ರಮುಖ ವಿಜ್ಞಾನಿಗಳನ್ನು ಬಳಸಿಕೊಂಡು ಅಣುಬಾಂಬುಗಳನ್ನು ತಯಾರಿಸುವ ಯೋಜನೆಯನ್ನು ಜರ್ಮನಿಯ ಹಿಟ್ಲರ್‌ ಹೊಂದಿದ್ದಾನೆ ಎಂಬ ಅನುಮಾನವಿತ್ತು. ಹಾಗಾಗಿ ಅವರು ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರಿಗೆ ಪತ್ರವೊಂದನ್ನು ಬರೆದು, ಹಿಟ್ಲರ್‌ನ ಯೋಜನೆಯನ್ನು ತಲೆಕೆಳಗು ಮಾಡುವ ಕಾರ್ಯತಂತ್ರವನ್ನು ರೂಪಿಸಬೇಕೆಂದು ಮನವಿ ಮಾಡಿಕೊಂಡರು. ಇದನ್ನು ಗಂಭೀರವಾಗಿ ಪರಿಗಣಿಸಿದ ರೂಸ್‌ವೆಲ್ಟ್, ಅಣುಬಾಂಬ್ ತಯಾರಿಕೆಯ ಜವಾಬ್ದಾರಿಯನ್ನು ಭೌತಶಾಸ್ತ್ರಜ್ಞನಾದ ಜೆ. ರಾಬರ್ಟ್ ಓಪನ್ ಹೈಮರ್ ಅವರಿಗೆ ವಹಿಸಿದರು. ಆತ ತನ್ನ ದೇಶದ ಅತ್ಯುತ್ತಮ ವಿಜ್ಞಾನಿಗಳನ್ನು ಬಳಸಿಕೊಂಡು ಅಣುಬಾಂಬ್ ತಯಾರಿಸಿದ. ಆ ವೇಳೆಗಾಗಲೇ ರೂಸ್‌ವೆಲ್ಟ್ ತೀರಿಕೊಂಡು, ಹ್ಯಾರಿಟ್ರೂಮನ್ ಅಮೆರಿಕದ ಅಧ್ಯಕ್ಷರಾಗಿದ್ದರು.

ಎರಡನೇ ಮಹಾಯುದ್ಧದ ಸಮಯದಲ್ಲಿ ‘ಬಿಗ್ ಬ್ರದರ್’ ಮತ್ತು ‘ನಾಟಿಬಾಯ್’ ಎಂಬ ಎರಡು ಅಣುಬಾಂಬ್‌ಗಳನ್ನು ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಹಾಕಲು ಹ್ಯಾರಿಟ್ರೂಮನ್ ಆದೇಶಿಸಿದರು. ಇದರ ಉದ್ದೇಶ ಜಪಾನ್ ಯುದ್ಧ ನಿಲ್ಲಿಸಿ ಶರಣಾಗುವಂತೆ ಮಾಡುವುದು ಎಂದು ಅಮೆರಿಕ ಅಧಿಕೃತ ಹೇಳಿಕೆ ನೀಡಿತು. ಆದರೆ, ಅಣುಬಾಂಬ್ ಪ್ರಯೋಗಕ್ಕೆ ಹಿರೊಷಿಮಾ ಮತ್ತು ನಾಗಾಸಾಕಿಯನ್ನು ಆರಿಸಿಕೊಳ್ಳುವುದಕ್ಕಿದ್ದ ಕಾರಣ ಅದರ ಭೌಗೋಳಿಕತೆ. ಒಂದು ಬಾಂಬಿನಿಂದ ಎಷ್ಟು ಜನರು ಸಾಯುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು. ಹಾಗಾಗಿ ಪಾರಾಗಲು ಜನರಿಗೆ ಕಷ್ಟವಾಗುವ, ಗುಡ್ಡಗಳಿಂದ ಸುತ್ತುವರಿದ ಹಿರೋಷಿಮಾವನ್ನು ಆರಿಸಿಕೊಳ್ಳಲಾಯಿತು. ಅವರುಗಳ ಲೆಕ್ಕಾಚಾರ ಸುಳ್ಳಾಗಲ್ಲಿಲ್ಲ.

1945 ಆಗಸ್ಟ್ 6ರಂದು 3.5 ಲಕ್ಷದಷ್ಟು ಜನಸಂಖ್ಯೆ ಇದ್ದ ಹಿರೋಶಿಮಾ ಪಟ್ಟಣದ ಮೇಲೆ ಹಾಕಿದ ಬಾಂಬ್ ಸ್ಫೋಟಗೊಂಡಾಗ ಅದು ಬಲಿತೆಗೆದುಕೊಂಡಿದ್ದು 2 ಲಕ್ಷ ಜನರನ್ನು. ಆಗಸ್ಟ್ 9ರಂದು 2.70 ಲಕ್ಷ ಜನಸಂಖ್ಯೆ ಇದ್ದ ನಾಗಾಸಾಕಿಯ ಮೇಲೆ ಹಾಕಿದ ಬಾಂಬ್‌ನಿಂದಾಗಿ ಬಲಿಯಾದವರು 1 ಲಕ್ಷ 40 ಸಾವಿರ ಜನ. ತೀರಿಕೊಂಡ ಲಕ್ಷಾಂತರ ಅಮಾಯಕ ಜನರ ಮತ್ತು ಇಂದಿಗೂ ಸುರುಟಿದ ಮಕ್ಕಳನ್ನು ಹೆರುವ ಜಪಾನಿನ ತಾಯಂದಿರಿಗೆ ಉತ್ತರ ಹೇಳುವ ನೈತಿಕ ಜವಾಬ್ದಾರಿ ಯಾರನ್ನೂ ಕಾಡಲಿಲ್ಲ.

ಇದೇ ಜಪಾನಿ ಸೇನೆ ತನ್ನ ಕಾಮತೃಷೆಗಾಗಿ ಏಶಿಯಾದ ಫಿಲಿಪೈನ್ಸ್, ಚೀನಾ, ಕೊರಿಯಾ ಮತ್ತು ಇಂಡೋನೇಶಿಯಾದ ಮಹಿಳಾ ಸಮುದಾಯವನ್ನ ‘ಕಂಫರ್ಟ್‌ ವಿಮೆನ್’ ಎಂಬ ಹೆಸರಿನಲ್ಲಿ ಬಳಸಿಕೊಂಡಿತು. ಸೇನೆಯವರ ಸುಖಕ್ಕಾಗಿ ಪ್ರಾಣಿಗಳಂತೆ ಎರಡೂವರೆ ಲಕ್ಷದಷ್ಟು ಮಹಿಳೆಯರನ್ನು ಬಲವಂತವಾಗಿ ಹೊತ್ತೊಯ್ಯಲಾಗಿತ್ತು. ಯುದ್ಧ ಮುಗಿದ ಮೇಲೆ ಕೆಲವು ಮಹಿಳೆಯರ ತಲೆಗಳನ್ನು ಕಡಿಯಲಾಯಿತು.

ಕೆಲವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಜ್ಞಾಪಿಸಲಾಯಿತು. ಕೆಲವರನ್ನು ಕಂದಕಗಳಲ್ಲಿ ಹೂಳಲಾಯಿತು. ಬಿಟ್ಟು ಹೋದ ಮಹಿಳೆಯರು ಸಾಹಸ ಪಟ್ಟು ಹಿಂತಿರುಗಿ ಬಂದು ಸಂಘಟಿತರಾಗಿ ಹೋರಾಟ ಮಾಡಿದರು. ಅಂತಹ ಒಬ್ಬ ಮಹಿಳೆ ತ್ರಿಸ್ಟೆಟಾ ಅಲ್ಕೂಬರ್.

‘‘ಬಾರಿಯಾಕೂಗಾನ್‌ನಿಂದ ನನ್ನನ್ನು ಜಪಾನಿ ಸೈನಿಕರು ಬಲವಂತವಾಗಿ ಹೊತ್ತೈದಾಗ ನನಗೆ ಹದಿನಾರು ವರ್ಷವಿರಬೇಕು. ಮೊದಲ ಸಲ ನನ್ನ ಮೇಲೆ ಎರಗಿದಾಗ ತೀವ್ರವಾಗಿ ಪ್ರತಿಭಟಿಸಿದೆ. ಕೈ ಮೂಳೆ ಮುರಿಯುವವರೆಗೂ ಹೊಡೆದು ಅತ್ಯಾಚಾರ ಮಾಡಿದರು. ಅಂದಿನಿಂದ ಪ್ರತಿರಾತ್ರಿ 8ರಿಂದ 9 ಸೈನಿಕರಿಗೆ ನನ್ನ ದೇಹ ಆಹಾರವಾಗುತ್ತಿತ್ತು. ನೂರಾರು ಸೈನಿಕರಿಗೆ ಹೊತ್ತು ತಂದಿದ್ದ ಮಹಿಳೆಯರ ದೇಹವನ್ನು ಹಂಚಲಾಗುತ್ತಿತ್ತು. ಅವರು ಸರದಿಯಲ್ಲಿ ಒಬ್ಬೊಬ್ಬರೇ ಬಂದು ಎರಗಿ ಹೋಗುತ್ತಿದ್ದರು. ಮುಟ್ಟಿನ ದಿನಗಳಲ್ಲಿ ಕೂಡ ಬಿಡುವು ನೀಡುತ್ತಿರಲಿಲ್ಲ. ‘ಉಟ್ಟ ಬಟ್ಟೆಯಲ್ಲೇ ಮುಟ್ಟಿನ ರಕ್ತವನ್ನು ಒರೆಸಿಕೊ’ ಎಂದು ಅಬ್ಬರಿಸಿ ಮುಂದುವರೆಯುತ್ತಿದ್ದರು. ನಾನು ಕಿರಿಯವಳಾದ್ದರಿಂದ ಲೈಂಗಿಕತೆಯ ಯಾವ ಅನುಭವವೂ ಇರಲಿಲ್ಲ. ಸತತವಾಗಿ ನನ್ನ ಮೇಲೆ ನಡೆದ ಅತ್ಯಾಚಾರದಿಂದ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಜಪಾನಿ ಸೈನಿಕರ ಟೋಪಿ, ಸಮವಸ್ತ್ರ ಮತ್ತು ಶೂಗಳನ್ನು ಕಂಡರೆ ಎದೆ ನಡುಗುತ್ತಿತ್ತು.

ತಪ್ಪಿಸಿಕೊಳ್ಳುವ ಆಸೆಯಿತ್ತು. ಆದರೆ ನಮ್ಮ ಕೈಲಿ ರಾಶಿ ರಾಶಿ ಮರಳನ್ನು ಚೀಲಗಳಿಗೆ ತುಂಬಿಸುತ್ತಿದ್ದರಿಂದ ಆದ ಕಂದಕಗಳೇ ನಮಗೆ ಸಮಾಧಿಯಾಗುವ ಭಯ ಕಾಡುತ್ತಿತ್ತು. 1942ರಿಂದ 1944ರವರೆಗೂ ಇದು ಮುಂದುವರೆಯಿತು. ಅಮೆರಿಕದವರು ವಿಮಾನ ದಾಳಿ ಶುರುಮಾಡಿದಾಗ ಎದುರಿಸಲು ಜಪಾನ್ ಸೇನೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಂಡೆವು. ಮುಂದೆ ಫಿಲಿಪೈನ್ಸ್‌ನ ಕಂಫರ್ಟ್ ಟಾಸ್ಕ್ ಫೋರ್ಸ್‌ನೊಡನೆ ಕೈಜೋಡಿಸಿ ನನ್ನಂತ ಹಲವಾರು ಫಿಲಿಪೈನ್ಸಿನ ಮಹಿಳೆಯರಿಗೆ ಅನ್ಯಾಯ ಮಾಡಿದ ಜಪಾನ್ ಸರ್ಕಾರದ ವಿರುದ್ಧ ವಕಾಲತ್ತು ಹಾಕಲು ನಿರ್ಧರಿಸಿದೆ. ಆ ಮಹಿಳೆಯರು ತಮ್ಮ ಇಳಿವಯಸ್ಸಿನಲ್ಲಿ ನಡೆಸಿದ ಹೋರಾಟದ ಫಲವಾಗಿ ವಿಶ್ವಸಂಸ್ಥೆಯು ಅವರಿಗೆ ಪರಿಹಾರ ಕೊಡಿಸಿತು. ಅಲ್ಲದೆ ಜಪಾನಿನ ಪ್ರಧಾನಿಯು 1995ರಲ್ಲಿ ಸಾರ್ವಜನಿಕವಾಗಿ ಲಿಖಿತರೂಪದಲ್ಲಿ ಕ್ಷಮೆ ಕೇಳಿದರು. ಆಪತ್ರ ಹೀಗಿದೆ:

ಎಲ್ಲಾ ಸಾಂತ್ವನ ಮಹಿಳೆಯರಿಗೂ ನನ್ನ ತಪ್ಪೊಪ್ಪಿಗೆ
ಜಪಾನ್ ಸರ್ಕಾರ ಮತ್ತು ಜಪಾನ್ ಜನತೆಯ ಸಹಕಾರದೊಂದಿಗೆ ‘ಏಶಿಯನ್ ಫಂಡ್’ (ಜಪಾನಿನ ಮಿಲಿಟರಿ ದೌರ್ಜನ್ಯದಲ್ಲಿ ಬದುಕುಳಿದ ಸಾಂತ್ವನ ಮಹಿಳೆಯರಿಗಾಗಿ ಜಪಾನ್ ಸರ್ಕಾರ ಸ್ಥಾಪಿಸಿದ ನಿಧಿ) ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ, ಯುದ್ಧದ ಸಮಯದಲ್ಲಿ ಸಾಂತ್ವನ ಮಹಿಳೆಯರ ಮೇಲೆ ನಡೆದ ಅತ್ಯಾಚಾರಕ್ಕೆ ನಾವು ಜಪಾನಿಯರು ಪಶ್ಚಾತಾಪ ಪಡುತ್ತೇವೆ. ನನ್ನ ವೈಯಕ್ತಿಕ ಭಾವನೆಗಳನ್ನು ಇಲ್ಲಿ ತಿಳಿಸಲು ಬಯಸುತ್ತೇನೆ. ಜಪಾನಿನ ಮಿಲಿಟರಿ ಅಧಿಕಾರವು ಶಾಮೀಲಾಗಿದ್ದ ‘ಸಾಂತ್ವನ ಮಹಿಳೆಯರು’ ಎಂಬ ವಿಷಯವು ಬಹಸಂಖ್ಯಾ ಮಹಿಳೆಯರ ಘನತೆ, ಗೌರವದ ಮೇಲೆ ನಡೆದ ಘೋರ ಅವಮಾನವನ್ನು ತಿಳಿಸುತ್ತದೆ. ಜಪಾನಿನ ಪ್ರಧಾನಿಯಾಗಿ ನಾನು, ಅಳತೆಗೆ ನಿಲುಕದ ದಾರುಣ ಯಾತನೆ ಅನುಭವಿಸಿ, ಮಾಯದ ದೈಹಿಕ – ಮಾನಸಿಕ ಗಾಯಗಳನ್ನು ಅನುಭವಿಸಿದ ಎಲ್ಲರಿಗೂ ಪ್ರಾಮಾಣಿಕವಾಗಿ, ವಿನಮ್ರನಾಗಿ ಕ್ಷಮೆ ಯಾಚಿಸುತ್ತೇನೆ.

ನಾವು ಭೂತದ ಭಾರದಿಂದ ಜಾರಿಕೊಳ್ಳಲಾಗುವುದಿಲ್ಲ ಹಾಗೆಯೇ ಭವಿಷ್ಯದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ನಮ್ಮ ದೇಶ ತನ್ನ ನೈತಿಕ ಹೊಣೆಯನ್ನು ನೋವಿನಿಂದ ಅರಿತುಕೊಂಡಿದೆ. ಪಶ್ಚಾತಾಪ, ತಪ್ಪೊಪ್ಪಿಗೆ ಭಾವನೆಗಳಿಂದ ಮುಚ್ಚು ಮರೆಯಿಲ್ಲದೆ ಭೂತದ ಇತಿಹಾಸವನ್ನು ಒಪ್ಪಿಕೊಳ್ಳುತ್ತದೆ. ಮತ್ತು ಈ ಭಾವನೆಗಳನ್ನು ನಿಖರವಾಗಿ ಮುಂದಿನ ಸಂತತಿಗೂ ತಲುಪಿಸುತ್ತೇವೆ. ಮಹಿಳೆಯರ ಘನತೆ ಮತ್ತು ಗೌರವದ ಮೇಲಾಗುತ್ತಿರುವ ಹಿಂಸೆ, ಅನ್ಯಾಯಗಳನ್ನು ತೊಡೆದು ಹಾಕುವ ಕಾರ್ಯದಲ್ಲಿ ಜಪಾನ್ ಸಕ್ರಿಯವಾಗಿ ಭಾಗವಹಿಸಬೇಕು. ಮುಂದಿನ ಜೀವನದಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಶಾಂತಿ ಸಿಗಲೆಂದು ನನ್ನ ಹೃದಾಂತರಾಳದಿಂದ  ಪ್ರಾರ್ಥಿಸುತ್ತೇನೆ.
ಗೌರವಯುತವಾಗಿ ತಮ್ಮವ

–ರ‍್ಯೂಟಿರೊ ಹಿಳಿಮೆಟೊ

ಬಾಂಬು ತಯಾರಿಕೆಯ ಭಾಗವಾಗಿದ್ದ ವಿಜ್ಞಾನಿಗಳಾದ ರಾಬರ್ಟ್ ಓಪನ್‌ಹೈಮರ್, ಹ್ಯಾನ್ಸ್ ಬೆತೆ, ರಿಚರ್ಡ್ ಫೆನ್‌ಮನ್ ಅವರಿಗೆ ತಾವು ಸೃಷ್ಟಿಸಿರುವುದು ಉಂಟು ಮಾಡಬಹುದಾದ ಭೀಕರ ಪರಿಣಾಮಗಳ ಅರಿವಿತ್ತು. ಆ ಕಾರಣದಿಂದಲೇ ಅವರು ಶಾಂತಿಗಾಗಿ ಹೋರಾಡುತ್ತಿದ್ದ ಮಹಾತ್ಮ ಗಾಂಧಿ, ಸಿ.ವಿ. ರಾಮನ್, ನೆಹರು, ಬರ್ಟಂಡ್ ರಸೆಲ್ ಅಂಥವರೊಂದಿಗೆ ಸೇರಿ ಜಗತ್ತನ್ನು ಅಣ್ವಸ್ತ್ರಗಳಿಂದ ಸಂಪೂರ್ಣವಾಗಿ ಬಿಡುಗಡೆ ಮಾಡಬೇಕೆಂದು ಅಣ್ವಸ್ತ್ರರಾಷ್ಟ್ರಗಳ ನಾಯಕರುಗಳಿಗೆ ವಿನಂತಿಸಿಕೊಂಡರು. ತನ್ನ ಸಂಶೋಧನೆಯ ಸೂತ್ರದ ಫಲವಾಗಿ ರೂಪುಗೊಂಡ ಬಾಂಬುಗಳು ಕಾರಣವಾದ ಹಿರೋಷಿಮಾ ಮತ್ತು ನಾಗಾಸಾಕಿ ದುರಂತಗಳಿಂದ ನೊಂದ ಐನ್‌ಸ್ಟೈನ್ 1947ರಲ್ಲಿ ನೀಡಿದ ಪ್ರತಿಕ್ರಿಯೆ ಹೀಗಿದೆ: ‘‘ವಿಜ್ಞಾನಿಗಳಾದ ನಾವು ಅಣುಶಕ್ತಿ ಮತ್ತು ಸಮಾಜದ ಮೆಲೆ ಅದರ ಪರಿಣಾಮವನ್ನು ಕುರಿತಂತೆ ಜನಸಮಾನ್ಯರಿಗೆ ತಿಳಿವಳಿಕೆ ಮೂಡಿಸುವ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಂತಿಲ್ಲ. ಈ ಒಂದು ಅಂಶದ ಮೇಲೆ ನಮ್ಮ ಭವಿಷ್ಯದ ರಕ್ಷಣೆ ಮತ್ತು ಆಶಾಕಿರಣ ನಿಂತಿದೆ.

ಪ್ರಜ್ಞಾವಂತ ನಾಗರಿಕರು ಜೀವದ ಉಳಿವಿಗಾಗಿ ಹೋರಾಡುತ್ತಾರೆಯೇ ವಿನಾ ಸಾವಿಗಾಗಿ ಅಲ್ಲ ಎಂಬ ವಿಷಯವನ್ನು ನಾವು ನಂಬುತ್ತೇವೆ’’. ಜೀವಿಗಳ ಮಾರಣಹೋಮವಾದ ಪ್ರತಿಯೊಂದು ಯುದ್ಧದ ಹಿಂದೆಯೂ ಕೆಲಸ ಮಾಡಿರುವುದು ಸಂಪತ್ತು, ಅಧಿಕಾರ, ಪ್ರಾಬಲ್ಯ ಮತ್ತು ಮಹತ್ವಾಕಾಂಕ್ಷೆಯ ದಾಹ ಹಾಗೂ ಜನ, ನೆಲ, ಜಲ, ಸಂಪತ್ತೆಲ್ಲವು ಗೆದ್ದು ಸ್ವಾಧೀನ ಪಡಿಸಿಕೊಳ್ಳಬೇಕಾದ ಸರಕುಗಳು ಎನ್ನುವ ಭಾವ.

ದೇಶಪ್ರೇಮದ ಹೆಸರಿನಲ್ಲಿ ಯುದ್ಧದಂತಹ ಜೀವಹಾನಿಯನ್ನೇ ಸಮರ್ಥಿಸಿಕೊಳ್ಳಲಾಗುತ್ತದೆ. ನನಗಿಲ್ಲಿ ದಲೈಲಾಮಾರ ಮಾತುಗಳು ನೆನಪಾಗುತ್ತದೆ. ಟಿಬೆಟಿನ ಯುವಕ ಅವರನ್ನು ಒಮ್ಮೆ ‘ಬೌದ್ಧನಾಗಿ ನಾನು ಯಾರನ್ನೂ ದ್ವೇಷಿಸಬಾರದು. ಆದರೆ ಚೈನಾದ ಧ್ವಜವನ್ನೋ ಸೈನಿಕರನ್ನೋ ನೋಡಿದಾಗ ನನ್ನಲ್ಲಿ ದ್ವೇಷದ ಭಾವ ಮೂಡುತ್ತದೆ. ಅದನ್ನು ಹೇಗೆ ಮೀರಲಿ’ ಎಂದು ಕೇಳಿದನಂತೆ. ಅದಕ್ಕೆ ಅವರು– ‘ದೇಶ ಪ್ರೇಮವೆಂದರೆ ನಿನ್ನ ದೇಶದ ಮೇಲಿನ ಪ್ರೇಮಕ್ಕಿಂತ ಚೈನಾದೇಶದ ಮೇಲಿನ ದ್ವೇಷ ಎಂದು ನೀನು ಭಾವಿಸಿದ್ದೀಯ’ ಎಂದರಂತೆ. 

ಅನುಕ್ಷಣವೂ ಚಲನಶೀಲವಾಗಿರುವ ಗೆಲ್ಲು, ಆಳು, ವಶಪಡಿಸಿಕೊ, ಸಂಹರಿಸು ಎನ್ನುವ ಧೋರಣೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿರುವವರು ಮಕ್ಕಳು ಮತ್ತು ಮಹಿಳೆಯರು. ಮನುಷ್ಯರ ಅಧಿಕಾರದ, ದುರಾಸೆಯ ದಾಹದ ಆಳವನ್ನು ಕೆದಕಿದರೆ ಅದು ಬಂದು ನಿಲ್ಲುವುದು ನಮ್ಮ ಮನದೊಳಗಿನ ದಾಹದ ಸೆಲೆಯತ್ತ. ಎಲ್ಲರ ಎದೆಯೊಳಗಿನ ಕ್ರೌಯದ ಸೆಲೆಗಳೇ ಹಿಟ್ಲರ್‌ನನ್ನು ರೂಪಿಸಿದ್ದು. ಅವನು ಎಲ್ಲರೊಳಗಿನ ಕ್ರೌಯದ ಸಂಕೇತ. ನಮ್ಮೊಳಗಿನ ಕ್ರೌರ್ಯವನ್ನು ಪ್ರಶ್ನಿಸಿಕೊಳ್ಳದೆ ಸಂಕೇತಗಳನ್ನು ಮುರಿಯಲಾಗದು. ಮುರಿದುಕೊಳ್ಳದಿದ್ದರೆ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT