ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೀತೆ ಪರಿಷ್ಕರಣೆ ವಿವಾದ: ಒಂದಷ್ಟು ಗೊಂದಲ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾಡಗೀತೆ ಪರಿಷ್ಕರಣೆ ವಿವಾದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ (ಪ್ರ.ವಾ. ಅಂತರಾಳ,  ನ. ೨೨-). ಡಾ.ಚನ್ನವೀರ ಕಣವಿಯವರು ‘ಜಯ ಭಾರತ ಜನನಿಯ ತನುಜಾತೆ’ ನಾಡ­ಗೀತೆಯನ್ನು ಕುರಿತಂತೆ ‘ಕುವೆಂಪು ಇದನ್ನು ನಾಡಗೀತೆಗೆಂದು ಬರೆದಿದ್ದಲ್ಲ, ‘ಕೊಳಲು’ ಸಂಕಲನದ ಗೀತೆ ಇದು’ ಎಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ­ಅವರ ಅಭಿಪ್ರಾಯದಲ್ಲಿ ‘ಕುವೆಂಪು ಅವರು ಈ ಗೀತೆಯನ್ನು ರಚಿಸಿ­ದಾಗ ಇದು ನಾಡಗೀತೆ­ಯಾಗು­ತ್ತದೆ ಎಂದು ಭಾವಿಸಿರಲಿಲ್ಲ’. ಪ್ರೊ.ಕೆ.ಎಸ್. ನಿಸಾರ್ ಅಹ­ಮದ್ ಅವರು ‘ಕುವೆಂಪು ಬಂದು ತಮ್ಮ ಹಾಡನ್ನು ನಾಡಗೀತೆ ಮಾಡಿ ಎಂದು ಯಾರಲ್ಲೂ ವಿನಂತಿ­ಸಿರಲಿಲ್ಲ’ ಎಂದಿದ್ದಾರೆ.  ಈ ಹಿರಿಯರು ಕುವೆಂಪು ಅವರು ತಮ್ಮ ‘ನೆನಪಿನ ದೋಣಿ’ಯಲ್ಲಿ (ಪುಟ ೫೪೫) ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸ­ಬೇಕು ಎಂದು ವಿನಂತಿಸಿ­ಕೊಳ್ಳು­ತ್ತೇನೆ:

‘ಇದೊಂದು ಸ್ವಾರಸ್ಯದ ವಿಷಯ. ೧೯೨೪-೨೫ರ ನನ್ನೊಂದು ಹಸ್ತಪ್ರತಿಯಲ್ಲಿ ‘ಕರ್ನಾಟಕ ರಾಷ್ಟ್ರಗೀತೆ’ ಎಂಬ ಕವನವಿದೆ. ಅದು ನನ್ನ ‘ಜಯಹೇ ಕರ್ಣಾಟಕ ಮಾತೆ’ ಎಂಬ ನಾಡ­ಗೀತೆಯ ಪ್ರಪಿತಾಮಹನೋ, ಪ್ರಪ್ರಪಿತಾಮಹನೋ ಆಗಿರ­ಬೇಕು. ಠಾಕೂರರ ಜನಗಣಮನದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣ ಸ್ಥಿತಿಯಂತಿದೆ ಅದು. ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯಾಗಿ ಸ್ವೀಕರಿಸಿದಾಗ ಮೂರು ನಿಮಿಷ­ಗಳಲ್ಲಿ ಅದನ್ನು ಹಾಡಿ ಮುಗಿಸು­ವಂತೆ ಸಂಗ್ರಹಿಸಿಕೊಳ್ಳಲಾಯಿತು. ೪೭ ವರ್ಷಗಳ ಅನಂತರ  ೧೯೭೨ನೇ ಜುಲೈ ತಿಂಗಳಿನಲ್ಲಿ ಇಂದು (ನಾನೀಗ ಇದನ್ನು ಬರೆಯುತ್ತಿರುವುದು ೨೭-೭-೧೯೭೨) ನಾಡಿಗೆ ಕರ್ಣಾಟಕ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನ­ಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿದ ನಾಡ­ಗೀತೆಯನ್ನು ಸರಕಾರವೂ ಒಪ್ಪುತ್ತದೆಂದು ಹಾರೈಸುತ್ತೇನೆ’.

ಕುವೆಂಪು ಅವರು ಟ್ಯಾಗೋರರ ‘ಜನಗಣಮನ’ ‘ರಾಷ್ಟ್ರ­ಗೀತೆ’ಯಾದ ಹಾಗೆ ತಮ್ಮ ಗೀತೆಯೂ ಕರ್ನಾಟಕದ ‘ನಾಡ­ಗೀತೆ’­­ಯಾಗಬೇಕೆಂಬ ಸದಾಶಯದಿಂದಲೇ ಬರೆದಿದ್ದಾರೆ. ‘ನಾಡಗೀತೆ’ಯೊಂದನ್ನು ಹಾಡಲು ಬೇಕಾದ ಸಮಯ, ರೀತಿ– ರಿವಾಜುಗಳ ಕಲ್ಪನೆ ಅವರಿ­­ಗಿತ್ತು. ಹಾಗಾಗಿ ಇದೊಂದು ಉದ್ದೇಶ­ಪೂರ್ವಕ ರಚನೆ­ಯಾಗಿದೆ. ಸರ್ಕಾರ ಇದನ್ನು ‘ನಾಡಗೀತೆ­’ ಯನ್ನಾಗಿ ಸ್ವೀಕರಿಸ­ಬೇಕೆಂಬ ಆಳದ ತುಡಿತವೂ ಅವರಿಗಿತ್ತು ಎನ್ನು­ವುದು ಮೇಲಿನ ಉಲ್ಲೇಖ­ದಿಂದ ಸ್ಪಷ್ಟವಾಗು­ತ್ತದೆ. ಹಿರಿಯರು ತಮ್ಮ ನಿಲುವನ್ನು ಕುರಿತು ಮರುಚಿಂತನೆ ಮಾಡ­ಬೇಕೆಂದು ವಿನಂತಿಸುವೆ.

ಡಾ.ಎಂ. ಚಿದಾನಂದ ಮೂರ್ತಿಯವರು ಕುವೆಂಪು ಅವರ ನಾಡಗೀತೆಯನ್ನು ಸಾರಾಂಶೀ­ಕರಿಸುತ್ತ ‘ಕರ್ನಾ­ಟಕದ ಹೆಮ್ಮೆಯ ವಿದ್ಯಾರಣ್ಯ, ಬಸವಣ್ಣ, ಮಧ್ವರಂಥ ಶ್ರೇಷ್ಠ ಸಾಧಕರಿಗೆ, ಚಿಂತಕರಿಗೆ,  ಪಂಪ, ರನ್ನ, ಪೊನ್ನ, ಜನ್ನ, ಲಕ್ಷ್ಮೀಶ­ರಂತಹ ಶ್ರೇಷ್ಠ ಕವಿಗಳಿಗೆ  ಕರ್ನಾಟಕ ಮಾತೆ ಜನ್ಮ ನೀಡಿದ್ದಾಳೆ’ ಎಂದಿದ್ದಾರೆ. ಇದು ಕುವೆಂಪು ಅವರ ನಾಡಗೀತೆಯಲ್ಲಿ ‘ಮಧ್ವ’ರ ಹೆಸರು ಇದೆ ಎಂಬ ತಪ್ಪು ಕಲ್ಪನೆ­ಯನ್ನು ಮೂಡಿ­ಸು­ತ್ತದೆ. ಈ ಕುರಿತು ಈಗಾಗಲೇ ನಡೆದ ವಾಗ್ವಾದ­ಗಳನ್ನು ಮರೆ­ಮಾಚುತ್ತದೆ. ಚಿದಾನಂದಮೂರ್ತಿ­ಅವರು ತಮ್ಮ ಲೇಖನದ ಆರಂಭ­ದ­ಲ್ಲಿಯೇ ‘ರಾಷ್ಟ್ರಕವಿ ಕುವೆಂಪು ೧೯೩೦ರಲ್ಲಿ ರಚಿಸಿದ ‘ಜೈ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಟುಗಳನ್ನು ಪಡೆಯಿತು’ ಎಂದು ಉಲ್ಲೇಖಿಸಿರು­ವು­ದ­ರಿಂದ ಮೇಲೆ ಸೂಚಿಸಿದ ತಪ್ಪು ಅಭಿಪ್ರಾಯ ಮೂಡುತ್ತದೆ. ಇಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸ್ಪಷ್ಟೀ­­ಕರಣವನ್ನು ಗಮನಿಸಬೇಕು.

‘ನಾಡಗೀತೆಯಲ್ಲಿ ಮಧ್ವರ ಹೆಸರು ಸೇರಿಸ­ಬೇಕೆಂದು ಕುವೆಂಪು ಅವರ ಹತ್ತಿರ ಬಂದವ­ರೇನೂ ಬ್ರಾಹ್ಮಣ­ರಾಗಲೀ, ಮಧ್ವ ಮತಾನುಯಾಯಿಗ­ಳಾ­ಗಲೀ ಅಲ್ಲ. ಅವರ ಚಿತಾವಣೆ­ಯಿಂದ ಪ್ರಭಾವಿತಗೊಂಡ ಹಲವು ಮತಮೂಢ ­ಶೂದ್ರರೇ ಮುಂದಾಗಿದ್ದು. ತಾವು ಯಾರ ಪರವಾಗಿ ದನಿ ಎತ್ತಿದರೋ ಅವರೇ ಈ ರೀತಿ ವರ್ತಿಸುವುದನ್ನು ಕಂಡು ಕುವೆಂಪು ಏನಾದರೂ ಮಾಡಿಕೊಳ್ಳಿ ಎಂದು ಹೇಳಿಕಳಿಸಿದರೇ ಹೊರತು ಅದರ ತಿದ್ದುಪಡಿಗಳನ್ನು ತಾವೇ ಮಾಡಿ­ಕೊಟ್ಟ­ರೆಂಬುದು ಹಾಗೂ ಅದಕ್ಕೆ ಅವರ ಸಮ್ಮತಿ ಇತ್ತೆಂಬುದೂ ಶುದ್ಧ ಸುಳ್ಳು’ (ಕುವೆಂಪು: ಶತಮಾನದ ಶಿಖರ, ಪುಟ ೫).

ಕರ್ನಾಟಕ ಸರ್ಕಾರವು 2004ರ ಫೆ. 23­ರಂದು ಅಧಿಕೃತವಾಗಿ ಘೋಷಿಸಿದ ಈ ನಾಡ­ಗೀತೆ­ಯನ್ನು, ಹಿರಿಯರಿಗೆ ನಿಲ್ಲಲು ತೊಂದರೆ ಹಾಗೂ ಬೇರೆ ಬೇರೆ ಧಾಟಿ, ಲಯಗಳಲ್ಲಿ ಹಾಡುತ್ತಿರುವ ಕಾರಣಗಳಿಂದ ಮೊಟಕುಗೊಳಿಸಿ ಪರಿಷ್ಕರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿಯಮಿ­ಸಿದ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಡಾ.ಚನ್ನವೀರ ಕಣವಿ­ಯವರು. ಅವರು ಕುವೆಂಪು ನಾಡ­ಗೀತೆಯ  ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸಾಲನ್ನು ತೆಗೆದಿದ್ದಾ­ರೆಂದು ಸುದ್ದಿ ಹಬ್ಬಿಸಿರುವ ಹಾಗೂ ಆ ಸುದ್ದಿಯನ್ನೇ ನಂಬಿ ಕೆಲವರು ವಿರೋಧಿ ಹೇಳಿಕೆ ನೀಡುತ್ತಿ­ರುವುದರ ಬಗ್ಗೆ ನೈತಿಕ ಆಕ್ರೋಶ­ವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಆಧಾರ ರಹಿತವಾಗಿ ಹೇಳಿಕೆ ನೀಡುವುದು ತಪ್ಪು.

ರವೀಂದ್ರನಾಥ  ಟ್ಯಾಗೋರ್‌ ಅವರಿಗೆ ತಮ್ಮ ಗೀತೆ ‘ರಾಷ್ಟ್ರ­ಗೀತೆ’ ಆಗಬೇಕೆಂಬ ಉದ್ದೇಶವಿರಲಿಕ್ಕಿಲ್ಲ. ಹೀಗಾಗಿ ಅವರ ಐದು ಭಾಗಗಳ ಸುದೀರ್ಘ ಪದ್ಯದ ಒಂದು ಭಾಗವನ್ನು ಎತ್ತಿಕೊಂಡು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಲಾಗಿದೆ.
ಒಂದು ವೇಳೆ ಮೊದಲ ಭಾಗದಲ್ಲಿ ಇನ್ನೂ ಕೆಲವು ಸಾಲುಗಳಿದ್ದರೂ ಅದನ್ನು ಒಪ್ಪಿಕೊಳ್ಳ­ಲಾಗುತ್ತಿತ್ತು. ಆದರೆ ಕುವೆಂಪು  ಅವರು ಟ್ಯಾಗೋರರ ಪರಿಷ್ಕೃತ ರಾಷ್ಟ್ರಗೀತೆಯನ್ನು ಅನುಲಕ್ಷಿಸಿ ಸಾಕಷ್ಟು ಯೋಚಿಸಿ ‘ನಾಡಗೀತೆ’ಗಾಗಿಯೇ ಈ ಗೀತೆಯನ್ನು ಬರೆದಿರುವುದರಿಂದ ಅದನ್ನು ಮತ್ತೆಮತ್ತೆ ಮೊಟ­ಕು­ಗೊಳಿಸುವ ಅಥವಾ ಬೇರೇ­ನನ್ನೋ ಸೇರಿಸುವ ಪ್ರಯತ್ನ ಕುವೆಂಪು ಅವರ ವ್ಯಕ್ತಿತ್ವಕ್ಕೆ ಗೌರವ ತರುವಂಥದ್ದಲ್ಲ.
-ಡಾ.ಎಂ.ಡಿ. ಒಕ್ಕುಂದ, ಧಾರವಾಡ
                           ******
ಕತ್ತರಿ ಹಾಕಿದರೆ ಕವಿ ಭಾವಕ್ಕೆ ಪೆಟ್ಟು

ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪರಿ­ಷ್ಕ­ರಣೆ ಸಂಬಂಧದ  ‘ಅಂತರಾಳ’ ಪುಟದ ಲೇಖನಗಳು ಚಿಂತನೆಗೆ ಹಚ್ಚು­ವಂತಿವೆ. ಬಹುತೇಕ ಲೇಖಕರು ಸದ್ಯದ ಗೀತೆಯ ಸ್ವರೂಪದ ಬದಲಾವಣೆ ಬೇಡ, ಇದರಿಂದ ಗೀತೆಯ ಭಾವಕ್ಕೆ ಪೆಟ್ಟು ಬಿದ್ದಂತಾ­ಗುತ್ತದೆ ಎಂದಿದ್ದಾರೆ.

ಕುವೆಂಪು ಅವರ ಈ ಗೀತೆಯನ್ನು 2004ರಲ್ಲಿ ನಾಡ­ಗೀತೆ­ಯಾಗಿ ಪ್ರಕಟಿಸುವ ಮುಂಚೆಯೇ ಗೀತೆಯ ಉದ್ದ, ಅದನ್ನು ಹಾಡಲು ಬೇಕಾಗುವ ವೇಳೆ ಬಗ್ಗೆ ಯೋಚಿಸಬೇಕಿತ್ತು. ಆದರೆ ಈಗ ಗೀತೆ ಪ್ರತಿಯೊಬ್ಬ ಕನ್ನಡಿಗನ ನಾಲಗೆ ಮೇಲೆ ನಲಿ­ದಾಡುತ್ತಿರುವಾಗ ಇದರ ರೂಪ ಬದಲಿ­ಸಲು ಹೊರಟಿರು­ವುದು ಸರಿಯಲ್ಲ. ನಾಡಗೀತೆ ಪರಿಷ್ಕರಣ ಸಮಿತಿ ಅಧ್ಯಕ್ಷ ಚನ್ನವೀರ ಕಣವಿ ಅವರು, ‘ನಾಡಗೀತೆ ಸುದೀರ್ಘವಾಗಿರುವುದ­ರಿಂದ ಬಹಳಷ್ಟು ಜನರಿಗೆ ಅಷ್ಟು ಸಮಯ ನಿಂತುಕೊಳ್ಳಲು ಕಷ್ಟವಾಗುತ್ತದೆ ಎಂಬುದು ಪರಿಷ್ಕರ­ಣೆಗೆ ಮುಂದಾಗಿರುವುದರ ಹಿಂದಿನ ಮುಖ್ಯ ಕಾರಣ’ ಎಂದಿರುವುದು ಸರಿಯಲ್ಲ.

ನಾಡಗೀತೆಯನ್ನು ನಿಂತೇ ಹಾಡಬೇಕೆಂಬ ನಿಯಮ ಸಡಿಲಿ­ಸಲಿ.  ನಿಂತು ಹಾಡು­ವುದು ಕುಳಿತು ಹಾಡುವುದು ಮುಖ್ಯ­ವಲ್ಲ. ಆದರೆ ಗೀತೆ ಹಾಡುವಾಗ ಅದರ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳು­ವುದು ಮುಖ್ಯ. ರಾಷ್ಟ್ರಗೀತೆ ಒಂದನ್ನು ನಿಂತು ಹಾಡಿದರೆ ಸಾಕು. ಎಂ. ಚಿದಾನಂದ­ಮೂರ್ತಿ ­ಅವರು ‘ಗೀತೆ ಸಂಕ್ಷಿಪ್ತವಾಗಲಿ; ನಾಡಪ್ರೇಮ ಉಕ್ಕಲಿ’ ಎಂದಿದ್ದಾರೆ. ಗೀತೆ ಸಂಕ್ಷಿಪ್ತ­­­ವಾದ ತಕ್ಷಣ ನಾಡಪ್ರೇಮ ಉಕ್ಕುವುದಿಲ್ಲ. ಈಗಿನ ನಾಡಗೀತೆ ಅದ್ಭುತವಾದ ಗೀತೆ. ಈ ಗೀತೆಯ ಒಂದು ಪದವೂ ಕಡಿತವಾಗಬಾರದು.
-ಕೆ.ಪಿ. ವಿಷ್ಣುವರ್ಧನ, ಕೊಡಗವಳ್ಳಿಹಟ್ಟಿ, ಹೊಳಲ್ಕೆರೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT