ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕನ್ನಡದ ಕಂದ...

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘‘1975ರಲ್ಲಿ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆದೆ. ಆಗ ನನಗೆ 7 ವರ್ಷ. 1986ರಲ್ಲಿ ನಾಯಕ ನಟನಾಗಿ ನಾಲ್ಕಾರು ತೆಲುಗು ಸಿನಿಮಾಗಳಲ್ಲಿ ನಟಿಸಿದೆ. ಆದರೆ ಯಾವ ಚಿತ್ರವೂ ಕೈ ಹಿಡಿಯಲಿಲ್ಲ. ಅಪ್ಪ ಬಿ.ಜೆ. ಶರ್ಮ, ಅಮ್ಮ ಕೃಷ್ಣ ಜ್ಯೋತಿ ಕಂಠದಾನ ಕಲಾವಿದರು. ಅಪ್ಪನಿಗೆ ನನಗಿಂತಲೂ ದೃಢವಾದ ದನಿ ಇದೆ. ‘ಬಬ್ರುವಾಹನ’, ‘ಮಯೂರ’, ‘ನಾ ನಿನ್ನ ಮರೆಯಲಾರೆ’ ಇತ್ಯಾದಿ ರಾಜಕುಮಾರ್ ಅವರ ತೆಲುಗಿಗೆ ರೀಮೇಕ್ ಆದ ಚಿತ್ರಗಳಿಗೆ ಅವರು ದನಿ ನೀಡಿದ್ದಾರೆ.

ನಾನು ತೆಲುಗಿನಲ್ಲಿ ರಘುವರನ್‌, ಅಮರೀಷ್ ಪುರಿ, ದೇವರಾಜ್, ಚರಣರಾಜ್ ಇತ್ಯಾದಿ ಹಲವಾರು ದಕ್ಷಿಣ ಭಾರತದ ಕಲಾವಿದರಿಗೆ ಕಂಠದಾನ ಮಾಡಿದ್ದೇನೆ. ಬಾಲ್ಯದಲ್ಲಿ ಅಮ್ಮ ಕುದುರೆ ಸವಾರಿ, ಶಾಸ್ತ್ರೀಯ ನೃತ್ಯ, ಸಂಗೀತವನ್ನು ಕಲಿಸಿದ್ದರು. ಅವರು ಅಂದು ಕಲಿಸಿದ ಪಾಠಗಳು ಇಂದು ಅನುಕೂಲಕ್ಕೆ ಬರುತ್ತಿವೆ. ‘ನೀನು ಡಬ್ಬಿಂಗ್‌ಗೆ ಸೀಮಿತವಾಗದೆ ಒಂದಲ್ಲಾ ಒಂದು ದಿನ ದೊಡ್ಡ ಕಲಾವಿದನಾಗುತ್ತೀಯಾ’ ಎನ್ನುವ ವಿಶ್ವಾಸದ ಮಾತುಗಳನ್ನು ಅವರು ಹೇಳುತ್ತಿದ್ದರು. ಕಂಠದಾನ ಕಲಾವಿದನಾಗಲು ಸಿನಿಮಾ ವಲಯಕ್ಕೆ ಬರಲಿಲ್ಲ. ನಟನಾಗುವ ತುಡಿತವಿತ್ತು.

ಆದರೆ ಅವಕಾಶಗಳ ಕೊರತೆ. ಮದುವೆ, ಸಂಸಾರ ಆರ್ಥಿಕ ಹೊರೆಯ ಕಾರಣದಿಂದ ಡಬ್ಬಿಂಗ್ ಕಲಾವಿದನಾದೆ. ಏಳು ರಾಜ್ಯ ಪ್ರಶಸ್ತಿಗಳೂ ಬಂದವು. ಕನ್ನಡದಲ್ಲಿ 1991ರಲ್ಲಿ ‘ಹಳ್ಳಿ ಕೃಷ್ಣ ಡೆಲ್ಲಿ ರಾಧ’, ‘ಮನಮೆಚ್ಚಿದ ಸೊಸೆ’ ಚಿತ್ರಗಳಲ್ಲಿ ನಟಿಸಿದೆ. ಆದರೆ ಪೂರ್ಣ ತೃಪ್ತಿ ಸಿಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಟನಾಗಲಿಲ್ಲವಲ್ಲ ಎನ್ನುವ ಕೊರಗು ಇತ್ತು.   

‘ಕೆಂಪೇಗೌಡ’ ಚಿತ್ರ ನನಗೆ ಬ್ರೇಕ್‌ ಕೊಟ್ಟು ಬದುಕು ಬದಲಿಸಿತು. ಆ ಚಿತ್ರಕ್ಕೆ ನಾನು ಆಯ್ಕೆಯಾಗಿದ್ದೇ ಅದೃಷ್ಟ. ಪ್ರಕಾಶ್ ರಾಜ್ ಅವರ ಪಾತ್ರವನ್ನು ತುಂಬಬೇಕಿತ್ತು. ಅದೇ ದೊಡ್ಡ ಸವಾಲು. ‘ಕೆಂಪೇಗೌಡ’ದಲ್ಲಿನ ಆರ್ಮುಗ ಬದುಕು ಬದಲಿಸಿಬಿಟ್ಟ. ಆನಂತರ ಅವಕಾಶಗಳು ಹೇರಳವಾಗಿ ಬರುತ್ತಿವೆ. ಅದಕ್ಕೂ ಮುನ್ನ ತೆಲುಗಿನ ‘ಅರುಂಧತಿ’ ಚಿತ್ರವೂ ನನ್ನ ಬದುಕಿನಲ್ಲಿ ನೆನಪಿಸಿಕೊಳ್ಳಬೇಕಾದ ಚಿತ್ರ. ಅಲ್ಲಿಯವರೆಗೂ ತೆರೆಯ ಹಿಂದೆ ಇದ್ದವನನ್ನು ಗುರ್ತಿಸಿದ್ದು ‘ಅರುಂಧತಿ’. ಆ ಚಿತ್ರಕ್ಕೆ ವಾಯ್ಸ್‌ ಮುಖ್ಯ. ಆರಂಭವಾಗುವುದು ದನಿಯಿಂದಲೇ. ಸೋನು ಸೂಧ್ ಅವರಿಗೆ ಕಂಠದಾನ ಮಾಡಿದ್ದೆ.

2003ರಲ್ಲಿ ಕನ್ನಡದಲ್ಲಿ ‘ದುರ್ಗಿ’ ಚಿತ್ರಕಥೆಯನ್ನು ಮಾಡಿಟ್ಟುಕೊಂಡಿದ್ದೆ. ಅದು ನಾಯಕನಿಗೆ ಸಿದ್ಧವಾದ ಕತೆ. ಕಥೆಯನ್ನು ರಾಮು ಕೇಳಿದರು. ‘ಮಾಲಾಶ್ರೀ ಅವರಿಗೆ ಮಾಡೋಣ’ ಎಂದರು. ಅಲ್ಪಸ್ವಲ್ಪ ಕಥೆ ಬದಲಿಸಿದೆ. ನನ್ನ ಬಳಿ ಸ್ವಮೇಕ್‌ನ ಹಲವು ಚಿತ್ರಕತೆಗಳಿವೆ. ತೆಲುಗಿನಲ್ಲೂ ನಿರ್ದೇಶನಕ್ಕೆ ಮುಂದಾಗಿದ್ದೆ ಆದರೆ ಅದೃಷ್ಟ ಕೈಗೂಡಲಿಲ್ಲ.

ಕನ್ನಡಕ್ಕೆ ಜೈ
ಮೂಲತಃ ತೆಲುಗು ನಟ. ಆರಂಭದಲ್ಲಿ ಅಲ್ಲಿಯೇ ಹೆಚ್ಚು ಗಮನ ಕೇಂದ್ರೀಕರಿಸಿದ್ದು. ಅಲ್ಲಿ ಅವಕಾಶಗಳು ಸಿಕ್ಕಲಿಲ್ಲ. ಹಾಗೆಂದು ಯಾರನ್ನೂ ದೂರುವುದಿಲ್ಲ. ತೆಲುಗಿನಲ್ಲಿ ಖ್ಯಾತರಾದ ನಟ–ನಿರ್ದೇಶಕರು ನನಗೆ ಸ್ನೇಹಿತರು–ಪರಿಚಿತರು. ನನ್ನ ನಟನೆ ಎಲ್ಲರಿಗೂ ಗೊತ್ತು, ಅವರ ಎಲ್ಲ ಸಿನಿಮಾಗಳಿಗೂ ನಾನು ಬೇಕೇ ಬೇಕು. ಇದನ್ನು ಹೆಮ್ಮೆಯಿಂದ ಹೇಳುತ್ತಿರುವೆ. ಆದರೆ ಅವರೆಲ್ಲ ಬಯಸುವುದು– ನಟನಾಗಿ ಅಲ್ಲ, ಡಬ್ಬಿಂಗ್ ಕಲಾವಿದನಾಗಿ. ಆದರೆ ಯಾರೂ ನಟಿಸಲು ಅವಕಾಶಗಳನ್ನು ಕೊಡಲಿಲ್ಲ.

ಒಬ್ಬ ನಿರ್ದೇಶಕ ಸ್ನೇಹಿತರನ್ನು ಕೇಳಿದೆ, ‘ನಾನು ಚೆನ್ನಾಗಿ ನಟಿಸುವೆ. ನನ್ನ ಬಗ್ಗೆ ನಿಮಗೆ ಗೊತ್ತು. ಆದರೆ ಯಾಕೆ ಪಾತ್ರ ಕೊಡುವುದಿಲ್ಲ’ ಎಂದು. ‘ರವಿ ಅದೆಲ್ಲವೂ ನನಗೆ ನೆನಪು ಇರುವುದಿಲ್ಲ. ನೀನೇ ಆ ಸಮಯದಲ್ಲಿ ಬಂದು ಭೇಟಿ ಮಾಡಬೇಕು. ಅದೇ ಡಬ್ಬಿಂಗ್ ಥಿಯೇಟರ್‌ ಬಾಗಿಲಿಗೆ ಹೋದ ತಕ್ಷಣವೇ ನೀನು ನೆನಪಾಗುತ್ತೀಯಾ’ ಎಂದರು.

ಕನ್ನಡದಲ್ಲಿ ನನಗೆ ಬೆಳ್ಳಿತಟ್ಟೆಯಲ್ಲಿ ಊಟ ಹಾಕಿ ಗೌರವ ಮರ್ಯಾದೆ ಕೊಟ್ಟಿದ್ದಾರೆ. ನಾಲ್ಕು ವರ್ಷದಿಂದ ಕುಟುಂಬ ಸಮೇತನಾಗಿ ನಾನು ಬೆಂಗಳೂರಿಗೆ ಶಿಫ್ಟ್ ಆಗಿದ್ದೇನೆ. ನಾನು ಕನ್ನಡಿಗ.

ಡಬ್ಬಿಂಗ್ ಬೇಡ
ನಾನು ಮೂಲತಃ ಡಬ್ಬಿಂಗ್ ಕಲಾವಿದ. ಡಬ್ಬಿಂಗ್ ಬಂದರೆ ಹೆಚ್ಚು ಅನುಕೂಲ ಆಗುವುದು ನನಗೆ. ನಾಲ್ಕಾರು ವರ್ಷದಲ್ಲಿಯೇ ದೊಡ್ಡ ಮನೆ ಕಟ್ಟಿಬಿಡುವೆ. ಆದರೆ ಖಂಡಿತಾ ಕನ್ನಡಕ್ಕೆ ಡಬ್ಬಿಂಗ್ ಬೇಡ. ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರಗಳು ಇಲ್ಲಿ ಪೈಪೋಟಿ ನೀಡುತ್ತಿವೆ. ಕನ್ನಡ ಚಿತ್ರಕ್ಕೆ ಡಬ್ಬಿಂಗ್ ಸಂಕಷ್ಟವನ್ನು ತಂದೊಡ್ಡುತ್ತದೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT