ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಮ್ಮ ಮನೆಯ ಮಗಳು, ಗೌರವದ ಬದುಕು ನೀಡಿ!

ವಾರದ ಸಂದರ್ಶನ
Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ರಾಜ್ಯದಲ್ಲಿ ಇವರ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವ ಅಕೈ ಪದ್ಮಶಾಲಿ ಈ ಅದೃಷ್ಟ ಪಡೆದಿದ್ದಾರೆ. ಸಂಗಮ ಸಂಸ್ಥೆಯ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದ ಅಕೈಯಮ್ಮ ಈಗ ‘ಒಂದೆಡೆ’ ಸಂಸ್ಥೆಯ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

ಗಂಡಾಗಿ ಹುಟ್ಟಿದ್ದ ಅವರು ನಂತರ ಹೆಣ್ಣಾದವರು. ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ವ್ಯಕ್ತಿಯನ್ನು ಮದುವೆಯಾಗಿ ಸುಖ ಸಂಸಾರವನ್ನೂ ನಡೆಸಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹೋರಾಟಗಳ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ. ಅವರ ಬೇಡಿಕೆ ಇಷ್ಟೆ. ‘ನಾವೂ ನಿಮ್ಮ ಮಕ್ಕಳು. ನಮಗೊಂದು ಗೌರವಯುತ ಬದುಕನ್ನು ಕೊಡಿ’.

*ಹತ್ತಾರು ವರ್ಷಗಳಿಂದ ನೀವು ಹೋರಾಟ ನಡೆಸಿಕೊಂಡು ಬಂದಿದ್ದೀರಿ. ಸಮಾಜದಲ್ಲಿ ಏನಾದರೂ ಬದಲಾವಣೆ ಕಾಣುತ್ತಿದೆಯೇ?
ಈ ಪ್ರಶ್ನೆಗೆ ನಾನೊಂದು ಘಟನೆಯನ್ನು ವಿವರಿಸಬೇಕು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಸಭೆಗೆ ಬಂದಿದ್ದರು. ಆಗ ಅವರು ಮಾತು ಆರಂಭಿಸುವ ಮುನ್ನ ‘ನಿಮ್ಮನ್ನು ಅಪ್ಪ ಅನ್ನಬೇಕೋ, ಅಮ್ಮ ಅನ್ನಬೇಕೋ’ ಎಂದು ಪ್ರಶ್ನಿಸಿದ್ದರು. ಆಗ ನಾನು ‘ನಾವೆಲ್ಲ ಸೀರೆ ಉಟ್ಟುಕೊಂಡಿರುವುದರಿಂದ ಅಮ್ಮ ಎಂದೇ ಕರೆಯಿರಿ’ ಎಂದಿದ್ದೆ. ಈಗ ಮೊನ್ನೆ ರಾಜ್ಯೋತ್ಸವದ ದಿನ ಪ್ರಶಸ್ತಿ ಪುರಸ್ಕೃತರಿಗೆ ಚಹಾಕೂಟ ಏರ್ಪಡಿಸಲಾಗಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ನೋಡಿ ‘ಏನು ಅಕ್ಕೈಯಮ್ಮಾ’ ಎಂದು ಕರೆದರು. ಅಷ್ಟರಮಟ್ಟಿಗೆ ಈಗ ಬದಲಾವಣೆಯಾಗಿದೆ. ಆದರೆ ಒಟ್ಟಾರೆಯಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ವಿಷಯದಲ್ಲಿ ಸಮಾಜ ಇನ್ನೂ ಬದಲಾಗಿಲ್ಲ. ಅವರನ್ನೂ ಮನುಷ್ಯರು ಎಂದು ತಿಳಿಯುತ್ತಿಲ್ಲ. ಅವರಿಗೂ ಭಾವನೆಗಳಿವೆ, ಸುಖ, ದುಃಖ ಗಳಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.

*ಲೈಂಗಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಯಾವುದು?
ಲೈಂಗಿಕ ಅಲ್ಪಸಂಖ್ಯಾತರಿಗೆ ಬೇಕಾದಷ್ಟು ಸಮಸ್ಯೆಗಳಿವೆ. ಆದರೆ ಪ್ರಮುಖ ಸಮಸ್ಯೆ ಎಂದರೆ ನಮ್ಮನ್ನು ಯಾರೂ ಮನುಷ್ಯರು ಎಂದೇ ಪರಿಗಣಿಸುವುದಿಲ್ಲ. ಹೆಣ್ಣು ಮತ್ತು ಗಂಡು ಎಂಬ ಎರಡೇ ವರ್ಗಕ್ಕೆ ಮಾನ್ಯತೆ ನೀಡುತ್ತಾರೆ. ಮೂರನೇ ವರ್ಗದ ಜನರು ಇದ್ದಾರೆ ಎಂದರೆ ಅವರು ತಮಾಷೆಯ ವ್ಯಕ್ತಿಗಳಾಗುತ್ತಾರೆ. ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ಬಿಟ್ಟರೆ ಅವರಿಗೆ ಬದುಕೇ ಇಲ್ಲ ಎನ್ನುವಂತಹ ವಾತಾವರಣ ಇದೆ. ನಾವು ಕೂಡ ನಿಮ್ಮ ಹಾಗೆ. ನಿಮಗೆ ಇರುವ ಎಲ್ಲ ಭಾವನೆಗಳು ನಮಗೂ ಇವೆ, ನಮ್ಮನ್ನೂ ನಿಮ್ಮಂತೆ ನೋಡಿಕೊಳ್ಳಿ ಎಂದರೆ ಯಾರೂ ಅರ್ಥವನ್ನೇ ಮಾಡಿಕೊಳ್ಳುತ್ತಿಲ್ಲ. ಭಾರತಕ್ಕೆ 1947ರಲ್ಲಿಯೇ ಸ್ವಾತಂತ್ರ್ಯ ಬಂದಿರಬಹುದು. ನಾವೀಗ 21ನೇ ಶತಮಾನದಲ್ಲಿ ಬದುಕುತ್ತಿರಬಹುದು. ಆದರೆ ಈಗಲೂ ನಮಗೆ ಸ್ವಾತಂತ್ರ್ಯ ಬಂದಿಲ್ಲ.

*ಯಾಕೆ, ಈಗ ಸರ್ಕಾರಗಳು ನಿಮ್ಮ ಪರವಾಗಿಲ್ಲವೇ? ನಿಮಗೆ ಸೌಲಭ್ಯ ನೀಡುತ್ತಿಲ್ಲವೇ?
2011ರಲ್ಲಿ ದೆಹಲಿ ಹೈಕೋರ್ಟ್ ನಮಗೆ ಮಾನ್ಯತೆ ನೀಡಿದ ನಂತರ ದೇಶದ ಹಲವಾರು ರಾಜ್ಯ ಸರ್ಕಾರಗಳು ಕಣ್ಣು ತೆರೆದವು. ಆದರೆ ಸುಪ್ರೀಂಕೋರ್ಟ್ ನಮಗೆ ಪ್ರತ್ಯೇಕ ಅಸ್ತಿತ್ವವನ್ನು ನಿರಾಕರಿಸಿತು. ಇದರಿಂದ ಭಾರತದ ಗೌರವ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಆಯಿತು. ಆದರೂ ಈಗ ಸರ್ಕಾರದ ಮಟ್ಟದಲ್ಲಿ ಬದಲಾವಣೆ ಆಗಿದೆ. ನಮಗೆ ಪಿಂಚಣಿ ನೀಡುವ, ಮನೆ, ನೌಕರಿ ನೀಡುವ ಮಾತನಾಡಲಾಗುತ್ತಿದೆ. ಈ ವಿಷಯಗಳಲ್ಲಿ ಕರ್ನಾಟಕ ಸರ್ಕಾರ ಉತ್ತಮ ಕೆಲಸವನ್ನೇ ಮಾಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರ ಪರವಾದ ನಿಲುವುಗಳನ್ನು ಪ್ರದರ್ಶಿಸಿದೆ.

ಆದರೂ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಈಗಲೂ ಲೈಂಗಿಕ ಅಲ್ಪಸಂಖ್ಯಾತರು ರಸ್ತೆ ಬದಿಯಲ್ಲಿ ಮಲಗುತ್ತಾರೆ. ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಲವಾರು ಮಂದಿ ಸೆಕ್ಸ್ ವರ್ಕರ್‌ಗಳಾಗಿದ್ದಾರೆ. ನಮ್ಮನ್ನು ಯಾರೂ ಮನೆಗೆ ಸೇರಿಸುವುದಿಲ್ಲ. ಕೆಲಸವನ್ನೂ ಕೊಡುವುದಿಲ್ಲ. ನಮಗೂ ಹೊಟ್ಟೆ ಇದೆ. ನಾನು ಬಟ್ಟೆ ತೊಟ್ಟುಕೊಳ್ಳಬೇಕು. ಅದಕ್ಕಾಗಿ ಭಿಕ್ಷಾಟನೆಯನ್ನಾದರೂ ಮಾಡಲೇಬೇಕಲ್ಲ. ನೀವು ನಮಗೆ ಕೊಡುವ ಒಂದೋ ಎರಡೋ ರೂಪಾಯಿಗಳು ನಿಮಗೆ ಏನೂ ಅಲ್ಲದೇ ಇರಬಹುದು. ಆದರೆ ನಮಗೆ ಅದೇ ದೊಡ್ಡದು. ಕೊಂಚ ನಮ್ಮ ಬಗ್ಗೆಯೂ ಚಿಂತನೆ ಮಾಡಿ.

ರಾಜ್ಯ ಸರ್ಕಾರ ನಮಗೆ ಮನೆ ನೀಡುವ ಯೋಜನೆ ರೂಪಿಸಿದೆ. ಆದರೆ ಅದು ಅನುಷ್ಠಾನವಾಗುತ್ತಿಲ್ಲ. ಈಗಿನ ವಸತಿ ಸಚಿವರಂತೂ ಆ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ನಗರ ಪ್ರದೇಶಗಳಲ್ಲಿ ನಮಗೆ ಬಾಡಿಗೆ ಮನೆಯೂ ಸಿಗುವುದಿಲ್ಲ. ನಾನು ಇಷ್ಟೆಲ್ಲಾ ಹೋರಾಟ ಮಾಡಿದ್ದರೂ ನನಗೆ ಬಾಡಿಗೆ ಮನೆ ಸಿಗಲು 3 ತಿಂಗಳು ಬೇಕಾಯಿತು. ಎಲ್ಲಿಯೇ ಹೋದರೂ ‘ಓಹೋ ನಿಮ್ಮನ್ನು ನೋಡಿದ್ದೇನೆ. ನೀವು ಟಿ.ವಿಯಲ್ಲಿ ಬರುತ್ತೀರಿ’ ಎನ್ನುತ್ತಾರೆ. ಆದರೆ ಮನೆ ಬಾಡಿಗೆ ಕೊಡಿ ಎಂದರೆ ನಮ್ಮವರು ಒಪ್ಪುವುದಿಲ್ಲ, ಕೊಡುವುದಿಲ್ಲ ಎನ್ನುತ್ತಾರೆ.

*ಸುಪ್ರೀಂಕೋರ್ಟ್ ಈಗ ನಿಮ್ಮನ್ನು ತೃತೀಯ ಲಿಂಗಿಗಳು ಎಂದು ಗುರುತಿಸಿದೆಯಲ್ಲ?
ಹೌದು ತೃತೀಯ ಲಿಂಗಿಗಳು ಎಂದು ಗುರುತಿಸಿದೆ. ಆದರೆ ಈ ಪ್ರಥಮಲಿಂಗಿಗಳು, ದ್ವಿತೀಯ ಲಿಂಗಿಗಳು, ತೃತೀಯ ಲಿಂಗಿಗಳು ಎಂದು ಹೆಸರಿಟ್ಟವರು ಯಾರು? ಇದರಲ್ಲಿ ಪ್ರಥಮ ಲಿಂಗಿಗಳು ಯಾರು? ಪುರುಷರನ್ನೇ  ಪ್ರಥಮ ಲಿಂಗಿಗಳು ಎಂದು ಗುರುತಿಸುವುದು ಯಾಕೆ? ಇದು ತಾರತಮ್ಯವಲ್ಲವೇ? ಹೆಣ್ಣಾಗಿ ಹುಟ್ಟಿ ಗಂಡಾಗುವುದು ಅಥವಾ ಗಂಡಾಗಿ ಹುಟ್ಟಿ ಹೆಣ್ಣಾಗುವುದು ಎಲ್ಲ ಪ್ರಕೃತಿ ನಿಯಮ. ಯಾರೂ ಹೀಗೆಯೇ ಹುಟ್ಟಬೇಕು ಎಂದು ಅಂದುಕೊಳ್ಳುವುದಿಲ್ಲ. ಸಲಿಂಗ ಕಾಮವೂ ಪ್ರಕೃತಿ ನಿಯಮ. ಸಮಾಜದಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದಿರಬಹುದು. ಆದರೂ ನಾವು ಇದ್ದೇವಲ್ಲ. ಇಲ್ಲವೇ ಇಲ್ಲ ಎನ್ನಲಾಗದು. ನಾವು ಇದ್ದೇವೆ ಎಂದ ಮೇಲೆ ನಮ್ಮ ಹಕ್ಕುಗಳನ್ನು ರಕ್ಷಿಸಲೇಬೇಕಲ್ಲ. ಸಮಾಜ ಇಷ್ಟು ಸಣ್ಣ ಸತ್ಯವನ್ನು ಅರಿತುಕೊಳ್ಳದಿದ್ದರೆ ಹೇಗೆ?

*ನಿಮ್ಮ ಜನಸಂಖ್ಯೆ ಎಷ್ಟು ಎನ್ನುವುದರ ಸಮೀಕ್ಷೆಯಾಗಿದೆಯೇ?
ಸರಿಯಾದ ಸಮೀಕ್ಷೆ ಇನ್ನೂ ಆಗಿಲ್ಲ. ರಾಜ್ಯದ ಅಥವಾ ಭಾರತದ ಜನಸಂಖ್ಯೆಯ ಶೇ 10ರಷ್ಟು ಲೈಂಗಿಕ ಅಲ್ಪಸಂಖ್ಯಾತರು ಇರಬಹುದು. ಕರ್ನಾಟಕದಲ್ಲಿ ಜನಸಂಖ್ಯೆಯ ಶೇ 10ರಷ್ಟು ಇದ್ದಾರೆ ಎನ್ನುವುದನ್ನು ಮರೆತು ಬಿಡೋಣ. ಕನಿಷ್ಠ 50 ಸಾವಿರ ಮಂದಿಯಾದರೂ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಅವರ ಯೋಗಕ್ಷೇಮವನ್ನು ಈ ಸಮಾಜ, ಸರ್ಕಾರ ನೋಡಿಕೊಳ್ಳಬೇಡವೇ?

*ನಿಮಗೆ ಈಗ ಮತದಾರರ ಚೀಟಿ, ಪಡಿತರ ಚೀಟಿಗಳನ್ನೂ ನೀಡಲಾಗುತ್ತಿದೆಯಲ್ಲವೇ?
ಹೌದು ನೀಡಲಾಗುತ್ತಿದೆ. ಆದರೆ ಮತದಾರರ ಚೀಟಿ, ಪಡಿತರ ಚೀಟಿಗಳನ್ನು ನೀಡುವಾಗ ಕಾಯಂ ವಿಳಾಸ ಕೇಳುತ್ತಾರೆ. ರಸ್ತೆ ಬದಿಯಲ್ಲಿ, ಮರದ ಕೆಳಗೆ ವಾಸಿಸುವ ನಾವು ಎಲ್ಲಿಂದ ಕಾಯಂ ವಿಳಾಸ ತಂದುಕೊಡೋಣ. ನ್ಯಾಯಮೂರ್ತಿ ಎಸ್‌.ಆರ್‌.ನಾಯಕ್‌ ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಯಂ ವಿಳಾಸ ಕೇಳಬಾರದು, ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು ಎಂದು ಸೂಚಿಸಿದ್ದರು. ಆದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ.

*ನಿಮ್ಮ ಹೋರಾಟಗಳಿಗೆ ಈಗಲೂ ಸೂಕ್ತ ಬೆಂಬಲ ಸಿಗುತ್ತಿಲ್ಲವೇ?
ಈಗ ಬೆಂಬಲ ಸಿಗುತ್ತಿದೆ. ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಅವರು ನಮಗೆ ಸಾಕಷ್ಟು ನೆರವು ನೀಡಿದರು. ನಮ್ಮ ಕಾನೂನು ಹೋರಾಟಗಳಿಗೂ ಬೆಂಬಲವಾಗಿ ನಿಂತರು. ಅದೇ ರೀತಿ ಶೋಭಾ ಕರಂದ್ಲಾಜೆ ಕೂಡ ನಮ್ಮ ಪರವಾಗಿದ್ದರು. ಆದರೆ ಇಷ್ಟು ಸಾಲದು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ ಸಮಾಜದಲ್ಲಿ ಬದಲಾವಣೆ ಕಾಣುತ್ತಿಲ್ಲ.

*ಕಾನೂನುಗಳು ನಿಮ್ಮ ಪರವಾಗಿಲ್ಲವೇ?
ಇಲ್ಲ. ನಮ್ಮ ವಿರುದ್ಧ ಇರುವ ಹಲವಾರು ಕಾನೂನುಗಳಿವೆ. ಎಲ್ಲ ಕಾನೂನುಗಳೂ ಸ್ತ್ರೀ ಮತ್ತು ಪುರುಷರಿಗೆ ಮಾತ್ರ ಸಂಬಂಧಪಟ್ಟಿವೆ. ಯಾವ ಕಾನೂನೂ ತೃತೀಯ ಲಿಂಗಿಗಳನ್ನು ಗುರುತಿಸುವುದೇ ಇಲ್ಲ. ಈ ಕಾನೂನುಗಳನ್ನು ತಿದ್ದುಪಡಿ ಮಾಡಿ ಸಂವಿಧಾನಬದ್ಧವಾಗಿಯೇ ನಮ್ಮನ್ನು ಈ ದೇಶದ ನಾಗರಿಕರು ಎಂದು ಗುರುತಿಸುವ ಕೆಲಸವಾಗಬೇಕಿದೆ.

*ಕರ್ನಾಟಕದಲ್ಲಿ ತೃತೀಯ ಲಿಂಗಿಗಳ ಪರವಾದ ನಿಯಮಾವಳಿಯನ್ನು ರೂಪಿಸಲಾಗಿತ್ತಲ್ಲವೇ?
ಹೌದು ಅಂತಹ ನಿಯಮವನ್ನು ರೂಪಿಸಲಾಗಿತ್ತು. ಆದರೆ ಅದನ್ನು ಅನುಷ್ಠಾನ ಮಾಡುತ್ತಿಲ್ಲ. ನಮ್ಮ ಶಾಸಕರು ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಸರ್ಕಾರದ ಮೇಲೆ ಒತ್ತಡ ಹಾಕಿ ಈ ನಿಯಮಗಳು ಜಾರಿಗೆ ಬರುವಂತೆ ಮಾಡಬೇಕು. ಆದರೆ ನಮ್ಮ ಪರವಾಗಿ ಮಾತನಾಡುವ ಶಾಸಕರನ್ನು ಎಲ್ಲಿಂದ ತರೋಣ?

*ಈಗ ತಮಿಳುನಾಡಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಪೊಲೀಸ್‌ ಅಧಿಕಾರಿಯಾಗಿದ್ದಾರೆ. ಈ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಇದು ಒಳ್ಳೆಯ ಬೆಳವಣಿಗೆ. ಯಾಕೆಂದರೆ ಪೊಲೀಸರೇ ನಮ್ಮ ಮೇಲೆ ಅತಿ ಹೆಚ್ಚಿನ ದೌರ್ಜನ್ಯ ಮಾಡುತ್ತಾರೆ. ಈಗ ನಮ್ಮವರೇ ಒಬ್ಬರು ಪೊಲೀಸರಾಗಿದ್ದಾರೆ ಎಂದರೆ ಅದು ಒಳ್ಳೆಯದು. ರಾಜ್ಯದಲ್ಲಿಯೂ ಇಂತಹ ಬೆಳವಣಿಗೆಗಳು ಆಗಬೇಕು.

*ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಏನನ್ನಿಸಿತು?
ನನಗೂ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಾರಾ ಎಂದು ಅನ್ನಿಸಿತು. ನಾನು ಮೊದಲು ಇದನ್ನು ನಂಬಲೇ ಇಲ್ಲ. ನಂತರ ಟಿ.ವಿಯಲ್ಲಿ ನನ್ನ ಹೆಸರು ಬರುತ್ತಿತ್ತು. ಅದನ್ನು ನೋಡಿ ನಂಬಿದೆ. ಇದು ನನಗೊಬ್ಬಳಿಗೇ  ಬಂದ ಪ್ರಶಸ್ತಿಯಲ್ಲ. ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಸಂದ ಪ್ರಶಸ್ತಿ ಇದು. ಇನ್ನಾದರೂ ನಮ್ಮನ್ನು ಮನುಷ್ಯರಂತೆ ಕಾಣಿ. ಅಷ್ಟೇ ನಮ್ಮ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT