ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿನ ಕುರಿ ಮಾಡೋ ಯತ್ನ ಫಲಿಸಲ್ಲ

ವಾರದ ಸಂದರ್ಶನ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ರಾಜ್ಯದ ಗೃಹಮಂತ್ರಿಯಾಗಿ 2 ವರ್ಷ ಪೂರೈಸಲಿರುವ ಕೆ.ಜೆ.ಜಾರ್ಜ್ ಬೇರೆ ಬೇರೆ ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿದ್ದಾರೆ. ಅತ್ಯಾಚಾರ ಪ್ರಕರಣಗಳ ಹೆಚ್ಚಳ, ಡಿ.ಕೆ.ರವಿ ಸಾವು, ಮಲ್ಲಿಕಾರ್ಜುನ ಬಂಡೆ ಸಾವು, ತೀರ್ಥಹಳ್ಳಿ ನಂದಿತಾ ಸಾವು ಮುಂತಾದ ಪ್ರಕರಣಗಳ ಜೊತೆ ಈಗ ಅವರ ಪತ್ನಿ ನಿವೇಶನ ಪಡೆದ ಪ್ರಕರಣ ಕೂಡ ಚರ್ಚೆಯಲ್ಲಿದೆ. ವಿರೋಧ ಪಕ್ಷಗಳಿಂದ ‘ರಾಜ್ಯದ ಅತ್ಯಂತ ದುರ್ಬಲ ಗೃಹ ಮಂತ್ರಿ’ ಎಂಬ ಟೀಕೆಗೆ ಒಳಗಾಗಿರುವ ಜಾರ್ಜ್ ತಮ್ಮ ಮೇಲಿನ ಎಲ್ಲ ಆರೋಪಗಳಿಗೆ ಉತ್ತರಿಸುವ ಯತ್ನವನ್ನು ಇಲ್ಲಿ ಮಾಡಿದ್ದಾರೆ. ‘ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ ಎಂಬಂತೆ ವಿರೋಧ ಪಕ್ಷಗಳವರು ಕುರಿಯನ್ನು ನಾಯಿ, ನಾಯಿ ಎಂದು ಕರೆದು ಅದನ್ನು ನಾಯಿ ಮಾಡುವ ಯತ್ನದಲ್ಲಿದ್ದಾರೆ. ಆದರೆ ಕುರಿಗೆ ನೀವು ಎಷ್ಟೇ ಬಾರಿ ನಾಯಿ ಎಂದು ಕರೆದರೂ ಅದು ಕುರಿಯೇ ಆಗಿರುತ್ತದೆ. ಅದೆಂದಿಗೂ ನಾಯಿ ಆಗಲ್ಲ’ ಎನ್ನುತ್ತಾರೆ ಅವರು.

ಕುರಿ, ನಾಯಿ ಹಾಗಿರಲಿ, ನೀವು ದುರ್ಬಲ ಗೃಹ ಮಂತ್ರಿ  ಹೌದೋ ಅಲ್ಲವೋ?
ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ. ದರ್ಪ ತೋರುವುದಿಲ್ಲ. ಯಾರಿಂದಲೂ ಲಂಚ ಪಡೆಯುವುದಿಲ್ಲ. ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇನೆ. ಅದಕ್ಕೇ ನನ್ನನ್ನು ದುರ್ಬಲ ಮಂತ್ರಿ ಎನ್ನುತ್ತಾರೆ.

ಅಧಿಕಾರಿಗಳಿಗೆ ನೀವು ಮುಕ್ತ ಹಸ್ತ ನೀಡಿದ್ದೀರಿ. ಆದರೆ ನಿಮಗೆ ಮುಖ್ಯಮಂತ್ರಿ ಮುಕ್ತ ಅವಕಾಶ ನೀಡಿದ್ದಾರಾ?
ಹೌದು, ಮುಖ್ಯಮಂತ್ರಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.

ನಿಮ್ಮ ಖಾತೆಯಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲವೇ? ವರ್ಗಾವಣೆ ವಿಚಾರದಲ್ಲಿಯೂ ಅವರು ಕೈ ಹಾಕುವುದಿಲ್ಲವೇ?
ಇಲ್ಲ, ಅವರು ಯಾವುದರಲ್ಲಿಯೂ ಕೈ ಹಾಕುವುದಿಲ್ಲ. ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗೇ ಇದೆ. ಅದನ್ನು ಕೂಡ ನನ್ನ ಸಲಹೆ ಪಡೆದೇ ಮಾಡುತ್ತಾರೆ.

ನೀವು ದುರ್ಬಲ ಎಂದೇ ನಿಮಗೆ ಸಲಹೆಗಾರರೊಬ್ಬರನ್ನು ನೇಮಕ ಮಾಡಲಾಗಿದೆಯಲ್ಲವೇ?
ಅದು ನಿಮ್ಮ ತಪ್ಪು ತಿಳಿವಳಿಕೆ. ಕೆಂಪಯ್ಯ ಉತ್ತಮ ಮತ್ತು ದಕ್ಷ ಅಧಿಕಾರಿ ಯಾಗಿದ್ದವರು. ಅವರು ಬೆಂಗಳೂರು ನಗರದ ಡಿಸಿಪಿಯಾದಾಗಿನಿಂದಲೂ ನನಗೆ ಪರಿಚಿತರು. ಪೊಲೀಸ್‌ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇದೆ ಎಂದು ನಾನೇ ಅವರನ್ನು ಸಲಹೆಗಾರರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ.

ಪೊಲೀಸ್‌ ಇಲಾಖೆ ಕೆಂಪಯ್ಯ ಹಿಡಿತದಲ್ಲಿ ಇಲ್ಲವೇ?
ನಾನು ಗೃಹ ಸಚಿವ. ಪೊಲೀಸ್‌ ಇಲಾಖೆ ನನ್ನ ಹಿಡಿತದಲ್ಲಿದೆ. ಕೆಂಪಯ್ಯ ಹಿಡಿತದಲ್ಲಿ ಇಲ್ಲ. ಅವರು ನನಗೆ ಸಹಾಯ ಮಾಡುತ್ತಾರೆ. ಅವರು ಒಳ್ಳೆಯ ಸಲಹೆಗಳನ್ನು ಮಾತ್ರ ನೀಡುತ್ತಾರೆ. ಯಾವಾಗಲೂ ನನ್ನ ದಾರಿ ತಪ್ಪಿಸಲಿಲ್ಲ.

ಇಷ್ಟೆಲ್ಲಾ ಇದ್ದರೂ ನೀವು ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ ನಿರ್ವಹಣೆಯಲ್ಲಿ ಹಿನ್ನಡೆ ಅನುಭವಿಸಿದ್ದು ಯಾಕೆ?
ಡಿ.ಕೆ.ರವಿ ಪ್ರಕರಣದಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ನೀವು ಹೇಳುತ್ತೀರಿ ಅಷ್ಟೆ. ನಾವು ನಮ್ಮ ಕೆಲಸವನ್ನು ಸರಿಯಾಗಿಯೇ ಮಾಡಿದ್ದೇವೆ. ನಮಗೂ ಒಂದಿಷ್ಟು ನಿಯಮಾವಳಿಗಳಿವೆ. ಅದರಂತೆ ನಡೆದುಕೊಂಡಿದ್ದೇವೆ. ಕೆಲವು ಮಾಧ್ಯಮದವರು, ವಿರೋಧ ಪಕ್ಷಗಳು ಈ ಪ್ರಕರಣವನ್ನು ಬೇರೆ ಕಡೆಗೆ ಎಳೆದುಕೊಂಡು ಹೋದವು.

ಮಾಧ್ಯಮಗಳ ಮೇಲೆ ನಿಮಗೆ ಯಾಕೆ ಸಿಟ್ಟು?
ನನಗೆ ಸಿಟ್ಟು ಇಲ್ಲ. ಆದರೆ ಯಾವುದೇ ಪ್ರಕರಣದಲ್ಲಿ ಅವರು ತೀರ್ಪು ನೀಡಬಾರದು. ಪೊಲೀಸ್‌ ವಿಚಾರಣೆ ನಡೆಯುವುದಕ್ಕೆ ಮೊದಲೇ ಅವರು ತೀರ್ಪು ನೀಡಿದರೆ ಹೇಗೆ?

ಹೋಗಲಿ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ವಿಳಂಬ ಮಾಡಿದ್ದು ಯಾಕೆ?
ನಾವು ಎಲ್ಲಿ ವಿಳಂಬ ಮಾಡಿದೆವು? 7 ದಿನದಲ್ಲಿ ಸಿಬಿಐಗೆ ಒಪ್ಪಿಸಿದ್ದೇವೆ. ದೇಶದಲ್ಲಿ ಯಾವುದೇ ಪ್ರಕರಣವನ್ನು 7 ದಿನದಲ್ಲಿ ಸಿಬಿಐಗೆ ಒಪ್ಪಿಸಿದ ಉದಾಹರಣೆ ಇದೆಯೇ? ಆತ್ಮಹತ್ಯೆ, ಕೊಲೆ ಏನೇ ಆದರೂ ಮೊದಲು ಸ್ಥಳೀಯ ಪೊಲೀಸರೇ ತನಿಖೆ ನಡೆಸಬೇಕು. ಆತ್ಮಹತ್ಯೆ ಆದ ತಕ್ಷಣವೇ ಸಿಬಿಐಗೆ ಒಪ್ಪಿಸಬೇಕು ಎಂದರೆ  ಫ್ಯಾನಿಗೆ ನೇತಾಡುತ್ತಿರುವ ಹೆಣವನ್ನು ತೆಗೆಯಲೂ ಸಿಬಿಐನವರೇ ಬರಬೇಕಾ? ಎಲ್ಲದಕ್ಕೂ ಒಂದು ನೀತಿ ನಿಯಮ ಇರುತ್ತದೆ. ಅದನ್ನು ಪಾಲಿಸಲೇಬೇಕಾಗುತ್ತದೆ.

ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರಕ್ಕೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಕೆಟ್ಟ ಹೆಸರು ಬಂದಿದ್ದು ಸುಳ್ಳೇ?
ಅವೆಲ್ಲಾ ಪ್ರತಿಪಕ್ಷಗಳ ಹುನ್ನಾರ ಅಷ್ಟೆ. ಈಗ ಸಿಬಿಐ ತನಿಖೆ ನಡೆಯುತ್ತಿದೆ. ಅದರ ವರದಿ ಬರಲಿ. ಅಲ್ಲಿಯವರೆಗೆ ಕೊಂಚ ತಾಳ್ಮೆ ಇರಲಿ. ಸಿಬಿಐ ವರದಿ ಬರುವುದಕ್ಕೆ ಮೊದಲೇ ಈ ಬಗ್ಗೆ ತಕರಾರು ತೆಗೆಯುವುದು ಸರಿಯಲ್ಲ.

ಸರ್ಕಾರ ಜನಾಭಿಪ್ರಾಯದ ವಿರುದ್ಧ ನಡೆದುಕೊಳ್ಳಲಿಲ್ಲವೇ?
ಜನಾಭಿಪ್ರಾಯ ಎಂದರೆ ಏನು? ಯಾವುದು ಜನಾಭಿಪ್ರಾಯ? ರಾಜ್ಯದಲ್ಲಿ 6.5 ಕೋಟಿ ಜನ ಇದ್ದಾರೆ. ಅವರೆಲ್ಲಾ ಬಂದು ಡಿ.ಕೆ.ರವಿ ಕೊಲೆಯಾಗಿದೆ ಎಂದಿದ್ದಾರಾ? ಸರ್ಕಾರ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಅದು ಜನರಿಗೆ ಅರ್ಥವಾಗುತ್ತದೆ.

ಆಯ್ತು ನೀವು ನಿಯಮದ ಪ್ರಕಾರವೇ ನಡೆದುಕೊಂಡಿದ್ದೀರಿ ಎಂದುಕೊಳ್ಳೋಣ. ಆದರೆ ಈ ವಿಷಯವನ್ನು ಪ್ರತಿಪಕ್ಷಗಳು ಉಪಯೋಗಿಸಿಕೊಳ್ಳುತ್ತವೆ ಎನ್ನುವುದನ್ನು ಗ್ರಹಿಸಲು ವಿಫಲರಾದಿರಿ ಅಲ್ಲವೇ?
ಪ್ರತಿಪಕ್ಷಗಳು ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಅದಕ್ಕೆ ಜಾತಿ ಬಣ್ಣವನ್ನೂ ಕೊಡುತ್ತವೆ. ಸಿಬಿಐ ವರದಿ ಬರಲಿ ಸ್ವಾಮಿ. ಎಲ್ಲರ ಬಣ್ಣ ಬಯಲಾಗುತ್ತದೆ. ಕೊಂಚ ಕಾಯಿರಿ. ಎಲ್ಲ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಪ್ರತಿಪಕ್ಷಗಳು ಕೇಳುತ್ತವೆ. ಮಲ್ಲಿಕಾರ್ಜುನ ಬಂಡೆ ಸಾವು, ತೀರ್ಥಹಳ್ಳಿ ನಂದಿತಾ ಪ್ರಕರಣ ಎಲ್ಲವನ್ನೂ ಸಿಬಿಐ ತನಿಖೆಗೆ ಒತ್ತಾಯಿಸಲಾಯಿತು. ಹೀಗೆ ಎಲ್ಲವನ್ನೂ ಸಿಬಿಐಗೆ ಕೊಡುವುದಾದರೆ ಇಲ್ಲಿನ ಪೊಲೀಸ್‌ ಇಲಾಖೆಗೆ ಏನು ಕೆಲಸ? ಪೊಲೀಸ್‌ ಇಲಾಖೆಯ ಬಾಗಿಲು ಮುಚ್ಚಬಹುದಲ್ಲ. ಅವರು ಹಾಗೆಯೇ ಹೇಳಲಿ. ನಾವು ಪೊಲೀಸ್‌ ಇಲಾಖೆ ಬಾಗಿಲು ಮುಚ್ಚಲು ಸಿದ್ಧರಿದ್ದೇವೆ. ಆದರೆ ನೆನಪಿಟ್ಟುಕೊಳ್ಳಿ. ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ. ಯಾವುದೇ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು.

ಅವರು ರಾಜಕೀಯ ಮಾಡುತ್ತಾರೆ ಎಂದರೆ ನೀವೂ ರಾಜಕೀಯ ಮಾಡಬಹುದಲ್ಲ?
ಪ್ರತಿಪಕ್ಷಗಳು ರಾಜಕೀಯ ಮಾಡುತ್ತವೆ ಎಂದು ಆಡಳಿತ ಪಕ್ಷದವರೂ ರಾಜಕೀಯ ಮಾಡಲಾಗದು. ಅಲ್ಲದೆ ಪ್ರತಿಪಕ್ಷಗಳ ಆರೋಪಗಳಿಗೆ ಕೆಲವು ಮಾಧ್ಯಮಗಳು ವಿಪರೀತ ಪ್ರಚಾರ ನೀಡಿದವು. ಇದು ಕೂಡ ಘಟನೆಯ ತನಿಖೆ ಮೇಲೆ ಪರಿಣಾಮ ಬೀರಿತು.

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು ಸುಳ್ಳೇ?
ಅತ್ಯಾಚಾರ ಪ್ರಕರಣ ಹೆಚ್ಚಾಗಿಲ್ಲ. ಆದರೆ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದು ಹೆಚ್ಚಾಗಿದೆ. ನಿರ್ಭಯಾ ಪ್ರಕರಣದ ನಂತರ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ಹೀಗಾಗಿದೆ. ಅಲ್ಲದೆ ಅತ್ಯಾಚಾರ ಪ್ರಕರಣವನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಅದರ ಫಲ ಇದು. ಕರ್ನಾಟಕದಲ್ಲಿ ಮಾತ್ರ ಅಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಅತ್ಯಾಚಾರ ಪ್ರಕರಣಗಳ ದಾಖಲೆ ಹೆಚ್ಚಾಗಿದೆ. ಗುಜರಾತ್‌ನಲ್ಲಿಯೂ ಇಷ್ಟೇ ಪ್ರಮಾಣದ ಅತ್ಯಾಚಾರ ಪ್ರಕರಣಗಳು ನಡೆದಿವೆ.

ಶಾಲೆಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ರಾಜ್ಯಕ್ಕೆ ಕೆಟ್ಟ ಹೆಸರು ತಂದಿದ್ದು ನಿಜವಲ್ಲವೇ?
ಶಾಲೆಗಳ ಕೋಣೆಯಲ್ಲಿ ಏನು ನಡೆಯುತ್ತದೆ ಎಂದು ನಮ್ಮ ಪೊಲೀಸರು ಹೋಗಿ ಪರಿಶೀಲನೆ ಮಾಡಲು ಸಾಧ್ಯವೇ? ಆದರೂ ಸಾಧ್ಯವಿದ್ದ ಎಲ್ಲ ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ಪ್ರಕರಣ ನಡೆದ ನಂತರ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದೇವೆ. ಅತ್ಯಾಚಾರಿಗಳ ಮೇಲೆ ಗೂಂಡಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತಂದಿದ್ದೇವೆ. ಇನ್ನಷ್ಟು ಕಾನೂನು ತಿದ್ದುಪಡಿ ಮಾಡಲು ಸಲಹೆ ನೀಡುವಂತೆ ತಜ್ಞರ ಸಮಿತಿ ರಚಿಸಿದ್ದೇವೆ. ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು 10 ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕೇಳಿಕೊಂಡಿ ದ್ದೇವೆ. ನ್ಯಾಯಮೂರ್ತಿಗಳ ಕೊರತೆ ಇರುವುದರಿಂದ ಸದ್ಯಕ್ಕೆ ಮೂರು  ನ್ಯಾಯಾಲಯ ಸ್ಥಾಪಿಸುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇವೆಲ್ಲವನ್ನೂ ನೀವು ಗಮನಿಸಿ ನಮಗೆ ಮೆಚ್ಚುಗೆ ಸೂಚಿಸಬೇಕು ಅಲ್ಲವೇ?

ನೀವು ಪ್ರಾಮಾಣಿಕ ಎನ್ನುತ್ತೀರಿ. ಆದರೆ ನಿಮ್ಮ ಪತ್ನಿ ಅಕ್ರಮವಾಗಿ ನಿವೇಶನ  ಪಡೆದ ಆರೋಪ ಇದೆಯಲ್ಲ?
ಪೂರ್ಣ ವಿಷಯ ಗೊತ್ತಿಲ್ಲದೆ ನೀವು ಹೀಗೆಲ್ಲಾ ಹೇಳಬಾರದು. ಡಿ.ಕೆ.ರವಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಸ್‌.ಆರ್‌.ಹಿರೇಮಠ ನನ್ನ ವಿರುದ್ಧ ಆರೋಪ ಮಾಡಿದ್ದರು. ನನ್ನ ಕಂಪೆನಿಗಳ ಮೇಲೆ ರವಿ ದಾಳಿ ನಡೆಸಲು ಬಯಸಿದ್ದರು ಎಂದು ಹೇಳಿದ್ದರು. ಅದಕ್ಕೆ ಸಂಬಂಧಿಸಿದಂತೆ ದಾಖಲೆ ಕೊಡಿ ಎಂದರೆ ನನ್ನ ಪತ್ನಿ ನಿವೇಶನ ಪಡೆದಿದ್ದಾಳೆ ಎಂದು ದಾಖಲೆ ಕೊಟ್ಟಿದ್ದಾರೆ. ಅದೂ ಸುಳ್ಳು ದಾಖಲೆ.  ನನ್ನ ಪತ್ನಿ ಪಡೆದ ನಿವೇಶನವನ್ನು 2011ರಲ್ಲೇ ವಾಪಸು ನೀಡಿದ್ದಾಳೆ. ಸಮಾಜ ಪರಿವರ್ತನೆ ಮಾಡುತ್ತೇನೆ ಎನ್ನುವವರು ಹೀಗೆಲ್ಲಾ ಆರೋಪ ಮಾಡಬಾರದು. ಹಿರೇಮಠ ಅವರು ವಿರೋಧ ಪಕ್ಷಗಳು ಹೇಳಿದಂತೆ ಆರೋಪ ಮಾಡುತ್ತಾರೆ.

ಪ್ರತಿಪಕ್ಷಗಳಿಗೆ ನಿಮ್ಮ ಮೇಲೆ ಯಾಕೆ ಸಿಟ್ಟು?
ಹಿಂದೆ ಆಡಳಿತ ನಡೆಸಿದವರಿಗೆ ಈಗಲೂ ತಮ್ಮ ಸರ್ವಾಧಿಕಾರ ಇರಬೇಕು ಎಂಬ ಭಾವನೆ ಇದೆ. ಅದಕ್ಕೆ ನಾನು ಅವಕಾಶ ನೀಡುತ್ತಿಲ್ಲ. ಅದಕ್ಕೇ ನನ್ನ ಮೇಲೆ ಆರೋಪ ಮಾಡುತ್ತಾರೆ.

ಎಲ್ಲಾ ಹೋಗಲಿ. ಗೃಹ ಇಲಾಖೆಯಲ್ಲಿ ಜಾರ್ಜ್ ಛಾಪು ಏನಿದೆ?
ಹಳಿ ತಪ್ಪಿದ ಇಲಾಖೆಯನ್ನು ಸರಿದಾರಿಗೆ ತಂದಿದ್ದೇನೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಪಡಿಸಿದ್ದೇನೆ. ಎಲ್ಲಿಯೂ ಗೋಲಿಬಾರ್‌ ಆಗಿಲ್ಲ. ಇಲಾಖೆ ಆಧುನೀಕರಣ ಮಾಡಿದ್ದೇನೆ. 8500 ಪೊಲೀಸರ ನೇಮಕಾತಿಗೆ ಚಾಲನೆ ನೀಡಿದ್ದೇನೆ. ತರಬೇತಿ ಸೌಲಭ್ಯ ಹೆಚ್ಚಿಸಿದ್ದೇನೆ. 750 ಎಸ್‌ಐಗಳ ನೇಮಕ ಮಾಡಲಾಗಿದೆ. ಮಹಿಳೆಯರಿಗೆ ಶೇ 20ರಷ್ಟು ಮೀಸಲಾತಿ ನೀಡ ಲಾಗಿದೆ. ಆದಿವಾಸಿಗಳ ನೇಮಕ ಮಾಡಿಕೊಳ್ಳಲು ನಿಯಮಾವಳಿ ಸಡಿಲಿಸಲಾಗಿದೆ. ಪೊಲೀಸರಿಗೆ ಕ್ಯಾಂಟೀನ್‌ ವ್ಯವಸ್ಥೆ, 7,500 ಮನೆಗಳ ನಿರ್ಮಾಣ. ಇವೆಲ್ಲ ನನ್ನ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT