ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಶದ ದಾರಿಯಲ್ಲಿನ ಗಂಡಿಗೆ ಮರುಗುತ್ತ...

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ತನಗೆ ಹೆಣ್ಣುಮಗುವೇ ಬೇಕೆಂದು ಹಂಬಲಿಸಿ, ಹೆಣ್ಣಾಗಿ ತಾನು ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಆ ಮಗುವನ್ನು ದಿಟ್ಟ ಹುಡುಗಿಯಾಗಿ ಬೆಳೆಸಬೇಕೆಂದು ಕನಸು ಕಾಣುತ್ತಿದ್ದ ಗೆಳತಿ ಹೆತ್ತಾಗ ಮಗುವನ್ನು ನೋಡಲು ಹೋಗಿದ್ದೆ. ಆಕೆ ಗಂಡುಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಖುಷಿಯ ನಡುವೆಯೇ ತುಸು ಬಾಡಿದ ಮುಖ ಹೊತ್ತ ಅವಳನ್ನು ನಾನು ಸಂತೈಸಬೇಕಿತ್ತು. ನಮ್ಮ ಸುತ್ತ ಎಲ್ಲಿ ನೋಡಿದರೂ ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳನ್ನೇ ಕೇಳಿ ಕೇಳಿ ರೋಸಿ ಹೋದ ನನಗೆ ಅನಿಸಿತ್ತು. ‘ಯಾಕೆ ಬೇಸರ ಮಾಡ್ಕೋತೀಯಾ? ನಿನಗೆ ಮಗಳು ಹುಟ್ಟಿದ್ದರೆ ಅವಳನ್ನೇನೋ ನೀನು ಸಬಲಳನ್ನಾಗಿ ಮಾಡಬಹುದು. ಆದರೆ ಜೊತೆಗಿರುವ ಗಂಡು ಸಂವೇದನಾಶೀನಾಗಿರುವುದೂ ಮುಖ್ಯ ಅಲ್ಲವೇ? ಇಂದು ಗಂಡುಮಕ್ಕಳನ್ನೂ ಸೂಕ್ಷ್ಮವಾಗಿ ಬೆಳೆಸಬೇಕಾದ ದೊಡ್ಡ ಹೊಣೆ ನಮ್ಮ ಮೇಲಿದೆ. ಅದನ್ನು ನಿಭಾಯಿಸೋಣ’.

ಇವತ್ತು ಸಾವಿರಾರು ಜನ ಬೀದಿಗಿಳಿದಿದ್ದಾರೆ, ಘೋಷಣೆಗಳನ್ನು ಕೂಗುತ್ತಿದ್ದಾರೆ, ‘ಅತ್ಯಾಚಾರ ಮಾಡಿದವರನ್ನು ನೇಣಿಗೆ ಹಾಕಿ, ಗಡೀಪಾರು ಮಾಡಿ’ ಎಂಬಂತಹ ರೋಷಾವೇಶದ ಮಾತುಗಳನ್ನು ಆಡುತ್ತಿದ್ದಾರೆ. ಅವರ ಆವೇಶ ಉಚಿತವಾದದ್ದೇ. ಆದರೆ ನಮ್ಮ ಸಹಜೀವಿಯೊಬ್ಬ ತನ್ನ ಜೊತೆಗಿರುವ ಜೀವದ ಘನತೆಯನ್ನೂ ಲೆಕ್ಕಿಸದೇ ಎರ್ರಾಬಿರ್ರಿಯಾಗಿ ವರ್ತಿಸುತ್ತಿದ್ದಾನೆ ಎಂದಾದಾಗ ಅವನ ವರ್ತನೆಯನ್ನು ಖಂಡಿಸುವ ಜೊತೆಗೇ ಅರ್ಥೈಸಿಕೊಳ್ಳುವ ಹೊಣೆಯೂ ನಮ್ಮ ಮೇಲಿದೆ ಅಲ್ಲವೇ?

ಯಾವ ಪ್ರಾಣಿಗಳಲ್ಲೂ ಕಾಣದ ಈ ದೌರ್ಜನ್ಯ ಮನುಷ್ಯರಲ್ಲೇ ಯಾಕೆ ಇಂತಹ ಅತಿರೇಕದ ಪ್ರಮಾಣದಲ್ಲಿ ನಡೆಯುತ್ತಿದೆ? ಹೆಣ್ಣನ್ನು ದಮನಿಸಿ ಭೋಗಿಸಿದ ಅವನೂ ಸಾಗುತ್ತಿರುವುದು ಅಧಃಪತನದ ಹಾದಿಯಲ್ಲಿಯೇ. ಹೀಗಿರುವಾಗ ನಾವು ಇಡುತ್ತಿರುವ ಹೆಜ್ಜೆಗಳು ಎಲ್ಲೋ ಎಡವಿವೆ. ಇದಕ್ಕೆ ನಮ್ಮ ಸಮಾಜ ಹೆಣ್ಣುಗಂಡನ್ನು ನೋಡುವ ಬಗೆ, ಲೈಂಗಿಕತೆಯ ಬಗ್ಗೆ ನಮ್ಮ ನಂಬಿಕೆ ಮತ್ತು ಭ್ರಮೆಗಳು ಹೇಗೆ ಕಾರಣವಾಗಿವೆ ಎಂಬುದನ್ನು ನಾವು ಗಮನಿಸುವ ಅಗತ್ಯವಿದೆ.

ಹೆಣ್ಣಿನ ಲೈಂಗಿಕತೆ ಮತ್ತು ಗಂಡಿನ ಲೈಂಗಿಕತೆಯನ್ನು ನೋಡುವ ಬಗೆ ರೂಢಿಗತವಾಗಿ ಬೆಳೆದುಬಂದಿರುವ ಬಗೆಯನ್ನು ನಾವು ಗಮನಿಸಿದಾಗ ಇದು ನಮಗೆ ಸ್ಪಷ್ಟವಾಗುತ್ತದೆ. ಒಬ್ಬ ಹುಡುಗಿ ಹೆಣ್ಣಾಗುವ ಪ್ರಕ್ರಿಯೆಗೆ ನಮ್ಮಲ್ಲಿ ಇಲ್ಲದ ಮಹತ್ವವಿದೆ. ಆಕೆಯ ವ್ಯಕ್ತಿತ್ವದ ಅರಳುವಿಕೆಯ ಒಂದು ಘಟ್ಟ ಎಂಬುದಕ್ಕಿಂತ ಹೆಚ್ಚಾಗಿ ಆಕೆಯ ಫಲವತ್ತತೆಯ ಮೇಲೆ ಹೆಚ್ಚಿನ ಒತ್ತು ನೀಡಿ ಯಾರದೋ ಬೀಜವನ್ನು ಹೊರುವ ಕ್ಷೇತ್ರವಾಗಿ ಅವಳನ್ನು ಸಜ್ಜುಗೊಳಿಸುವ ರೀತಿ ಇದು. ಈ ದಾರಿಯಲ್ಲಿ ಆಕೆಯ ಲೈಂಗಿಕತೆಯ ಮೇಲೆ ಕಟ್ಟುಪಾಡುಗಳೇ ಹೆಚ್ಚು. ಹೀಗಿದ್ದರೂ ಅವಳ ದೇಹದ ಬದಲಾವಣೆಯನ್ನು ನಮ್ಮ ಸಮಾಜ ಅಡ್ರೆಸ್ ಮಾಡುತ್ತದೆ, ತಪ್ಪೋ ಸರಿಯೋ ಅದು ಎರಡನೇ ಪ್ರಶ್ನೆ.

ಆದರೆ ಒಬ್ಬ ಹುಡುಗ ಗಂಡಾಗುವ ಪ್ರಕ್ರಿಯೆಯನ್ನು ನಾವು ಅಡ್ರೆಸ್ ಮಾಡುವುದೇ ಇಲ್ಲ. ಹೆಣ್ಣು ಮದುವೆಯ ಚೌಕಟ್ಟಿನಲ್ಲಿ ಹೆತ್ತು ತನ್ನ ಹೆಣ್ತನವನ್ನು ಸಾಬೀತುಪಡಿಸಬೇಕಾಗುತ್ತದೆ. ಅದೇ ಗಂಡು ತನ್ನನ್ನು ಗಂಡು ಎಂದು ಸಾಬೀತುಪಡಿಸುವುದು ಹೆಣ್ಣನ್ನು ಆಳುವ ಮೂಲಕ ಎಂಬ ಅಘೋಷಿತ ಅಭಿಪ್ರಾಯ ನಮ್ಮಲ್ಲಿದೆ. ಹೆಣ್ಣು ಹೇಗೆ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಂಡು ಸಂಸಾರವನ್ನು ಸರಿದೂಗಿಸಿಕೊಂಡು ಹೋಗಬೇಕೆಂದು ಪುಟಗಟ್ಟಲೆ ಬರವಣಿಗೆ ನಮಗೆ ಸಿಗುತ್ತದೆ.

ಆದರೆ ಗಂಡಿನ ಬಗ್ಗೆ ಇಂತಹವು ತುಂಬಾ ಕಡಿಮೆ. ‘ಕೆಸರು ಮೆಟ್ಟಿದರೂ ನೀರು ಬಂದಾಗ ತೊಳೆದು ಶುಭ್ರ’ ಆಗಬಹುದಾದ ರಿಯಾಯಿತಿ ಅವನಿಗೆ ನೀಡಿರುವುದರಿಂದ ಆತ ತನ್ನ ವರ್ತನೆಗಳ ಪರಿಣಾಮಗಳ ಬಗ್ಗೆ ಸಾಕಷ್ಟು ಯೋಚಿಸುವುದಿಲ್ಲ. ಈ ಎಲ್ಲ ಕಾರಣಗಳಿಂದ ತನ್ನ ಬದುಕು ಹತೋಟಿ ಮೀರಿ ಸಾಗಿ ಸಹಜೀವಿಯ ಬದುಕನ್ನು ಧ್ವಂಸ ಮಾಡುವುದರೊಂದಿಗೆ ತಾನೂ ಅವನತಿಯ ಹಾದಿ ಕಾಣುತ್ತಿರುವ ಗಂಡುಜೀವಿಯ ಬಗ್ಗೆ ಅಕ್ಕರೆಯಿಂದ ವಿಚಾರಿಸಿಕೊಳ್ಳುವ ಅಗತ್ಯ ಇದೆ.

ಅತ್ಯಾಚಾರದ ಆರೋಪಿಯಾಗಿ ಬಾಲಮಂದಿರಕ್ಕೆ ಸೇರಿರುವ ಹದಿನಾರರ ಹರೆಯದ ಹುಡುಗನ ಕಣ್ಣಲ್ಲಿ ಅದೇನೋ ವಿಷಾದ. ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಬಗ್ಗೆ ಅಯ್ಯೋ ಅನಿಸಿದಷ್ಟೇ ಇವನನ್ನು ನೋಡುವಾಗಲೂ ಹೊಟ್ಟೆ ಉರಿಯುತ್ತದೆ. ತನಗಿಂತ ತುಸು ದೊಡ್ಡ ವಯಸ್ಸಿನ ಹುಡುಗರ ಚಿತಾವಣೆಗೆ ಗುರಿಯಾಗಿ ಈತ ಸಹಪಾಠಿಯೊಬ್ಬಳ ಮೇಲೆ ಎರಗಿದ್ದ. ತನ್ನ ಮನಸ್ಸಿನಲ್ಲಿ ಹುಟ್ಟಿದ ಲೈಂಗಿಕ ಭಾವನೆಗಳನ್ನು ಸರಿದೂಗಿಸಿಕೊಳ್ಳಲಾಗದ ಹದಿವಯಸ್ಸಿನ ಈತನಿಗೆ ಜೊತೆಯಾಗಿರುವವರು ಹಿರಿಯ ಉಡಾಳ ಹುಡುಗರು. ‘ಯಾಕೋ ಹೆದರ್ಕೋತೀಯಾ? ಏನಾಗಲ್ವೋ... ನೀನು ನಿಜ್ವಾಗ್ಲೂ ಗಂಡಸಾಗಿದ್ರೆ ಅದ್ಯಾಕೆ ಹೆದರ್ಕೋತಾ ಇದ್ದೆ?’... ಇಂತಹ ಮಾತುಗಳ ಹೊಡೆತಕ್ಕೆ ಸಿಕ್ಕಿ ಈತ ನಿರ್ಜನ ಪ್ರದೇಶದಲ್ಲಿ ಶಾಲೆಗೆ ಹೋಗುವ ಹುಡುಗಿಯ ಅಸಹಾಯಕತೆಯನ್ನು ತನ್ನ ಪುರುಷತ್ವ ಸಾಬೀತುಪಡಿಸುವ ಪ್ರಯೋಗಕ್ಕೆ ಈಡು ಮಾಡಿದ್ದ. ಅತೀವ ಪಾಪಪ್ರಜ್ಞೆಯಲ್ಲಿ ಬಳಲುತ್ತಿರುವ ಹುಡುಗನಿಗೆ ಈಗಲೂ ಸರಿಯಾದ ಸಮಾಲೋಚನೆ ಸಿಗದಿದ್ದಲ್ಲಿ ಮತ್ತೆ ಇವನು ಹತಾಶೆಯಿಂದ ಅಂತಹ ಕೃತ್ಯಕ್ಕಿಳಿಯುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಆರ್ಥಿಕವಾಗಿ ತಳಮಟ್ಟದಲ್ಲಿರುವ ಸಮುದಾಯ ಇಕ್ಕಟ್ಟಿನಲ್ಲಿ ಜೊತೆಜೊತೆಗೆ ವಾಸಿಸುವ ಪ್ರಸಂಗ ಬರುತ್ತದೆ. ಆಗ ಯಾರೋ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ, ಸ್ನಾನ ಮಾಡುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಕೂಲಿಕೆಲಸ ಮಾಡುತ್ತಾ ಜೋಪಡಿಯಲ್ಲಿ ವಾಸ ಮಾಡುವ ಯುವಕನನ್ನು ಅಚಾನಕ್ಕಾಗಿ ನಿರುದ್ದಿಶ್ಯವಾಗಿ ಅವನ ಕಣ್ಣಿಗೆ ಬಿದ್ದ ಪಕ್ಕದ ಮನೆಯ ವಿವಾಹಿತ ಮಹಿಳೆ ಸ್ನಾನ ಮಾಡುವ ದೃಶ್ಯ ವಿಹ್ವಲಗೊಳಿಸಿದೆ. ತನ್ನ ಒಂಟಿ ಕ್ಷಣಗಳಲ್ಲಿ ಮನಸ್ಸಿನ ಆವೇಗಕ್ಕೆ ಸಿಕ್ಕಿ ಅವನು ಹಿಡಿತ ಕಳೆದುಕೊಂಡಿದ್ದಾನೆ. ಅವನ ಬಗ್ಗೆ ಸೋದರ ವಾತ್ಸಲ್ಯ ಹೊಂದಿದ ಆ ಮಹಿಳೆಯ ಬಗ್ಗೆ ಕೆಟ್ಟ ಯೋಚನೆ ಮಾಡಿದೆ, ಎಂಬ ಅಪರಾಧಿ ಪ್ರಜ್ಞೆಯಿಂದ ನರಳುವ ಅವನಿಗೆ ಹೊರಬರಲು ದಾರಿ ಇಲ್ಲದೆ ಅಸ್ವಸ್ಥನಾಗಿದ್ದಾನೆ. ಈ ಅಸ್ವಸ್ಥತೆ ಅವನನ್ನು ಎಲ್ಲಿಗೆ ಕರೆದೊಯ್ಯಬಲ್ಲದು? ಎಂದು ಚಿಂತಿಸುವಂತಾಗುತ್ತದೆ.

ಹೈಸ್ಕೂಲಿಗೆ ಹೋಗುತ್ತಿರುವ ಹದಿನಾಲ್ಕು ವರ್ಷದ ಹುಡುಗನನ್ನು ಸಣ್ಣವಯಸಿನಲ್ಲೇ ವಿಧವೆಯಾಗಿ ಮನೆಯಲ್ಲಿರುವ ಅತ್ತೆಯಿಂದ ಅಪ್ಪಿಕೊಳ್ಳುವುದು, ಗುಪ್ತಾಂಗ ಸ್ಪರ್ಶಿಸುವುದು ಇವುಗಳಿಗೆ ಒಳಗಾದ ಹುಡುಗ ಉದ್ರೇಕದಿಂದ ಪಕ್ಕದ ಮನೆಯ ಸಣ್ಣ ಹುಡುಗಿಯ ಮೇಲೆ ಅತ್ಯಾಚಾರವೆಸಗಲು ಹೋಗಿದ್ದ. ಈಗ ಅಪರಾಧಿಯಾಗಿ ಕಟಕಟೆಯಲ್ಲಿದ್ದಾನೆ. ತನ್ನ ದೇಹದಲ್ಲಿ ಏನಾಗುತ್ತಿದೆ ಎನ್ನುವುದು ಅವನಿಗೇ ಅರ್ಥವಾಗುತ್ತಿಲ್ಲ.

ಆಪ್ತಸಮಾಲೋಚಕಿ ಆಗಿರುವ ಗೆಳತಿ ಹೇಳುವಂತೆ ಈ ಬಗೆಯ ಸನ್ನಿವೇಶದಲ್ಲಿ ಸಿಲುಕಿರುವ ಹುಡುಗರು ಒಂದೋ ಉಡಾಫೆಯನ್ನು ಬೆಳೆಸಿಕೊಂಡು ಇಂತಹ ಮತ್ತಷ್ಟು ಕೃತ್ಯಗಳತ್ತ ಮನಸ್ಸು ಹಾಯಿಸುತ್ತಾರೆ, ಇಲ್ಲಾ ಅಪರಾಧಿ ಪ್ರಜ್ಞೆಯಿಂದ ನರಳುತ್ತಾರೆ. ಇನ್ನು ಕೆಲವರು ತಾವು ನೇರವಾಗಿ ಅತ್ಯಾಚಾರ ನಡೆಸದೇ ಇದ್ದರೂ ಯಾವುದೋ ಸನ್ನಿವೇಶದಲ್ಲಿ ಉದ್ರೇಕಕ್ಕೊಳಗಾದ ಕಾರಣ ತಪ್ಪಿತಸ್ಥ ಭಾವನೆಯಿಂದ ನರಳುತ್ತಾರೆ.

ಇದೊಂದು ಕಡೆಯಾದರೆ ಇನ್ನೊಂದು ಕಡೆ ಹೆಣ್ಣಿನ ಮೇಲೆ ಹಿಡಿತ ಸಾಧಿಸುವುದು ಯಶಸ್ಸಿನ ದ್ಯೋತಕವಾಗಿದೆ. ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಸಾರುವ ರಾಷ್ಟ್ರೀಯ ಸಂಘಟನೆಯ ಹಿರಿಯ ನಾಯಕ ‘ಯುದ್ಧ ಸಮಯದಲ್ಲಿ ಅತ್ಯಾಚಾರವನ್ನೂ ಶತ್ರುಗಳ ವಿರುದ್ಧದ ಅಸ್ತ್ರವಾಗಿ ಬಳಸಿಕೊಳ್ಳಬೇಕು’ ಎಂದು ದಾಖಲಿಸಿದರೆ, ಅದನ್ನು ಪ್ರಾಯೋಗಿಕವಾಗಿ ಮಾಡಿಸಿದ ನಾಯಕರು ನಮ್ಮ ನಡುವೆ ಇದ್ದಾರೆ. ಹೀಗೆ ಇದು ಯುದ್ಧತಂತ್ರವೂ ಆಗಿದೆ. ಜೊತೆಗೆ ಸ್ವಾಭಿಮಾನದ ಸೊಕ್ಕಿನ ಹೆಣ್ಣನ್ನು ದಮನಗೊಳಿಸುವುದು ಆಕೆಯ ಮೇಲೆ ಲೈಂಗಿಕ ಆಕ್ರಮಣ ನಡೆಸುವ ಮೂಲಕ ಎಂಬ ಮನೋಭಾವ ಹೆಜ್ಜೆಹೆಜ್ಜೆಗೂ ದುಡಿಯುವ ಹೆಣ್ಣಿಗೆ ಎದುರಾಗುತ್ತದೆ. ಈ ದಮನರೂಪೀ ಪುರುಷತ್ವದ ಕಲ್ಪನೆ ನಮ್ಮ ನೆಲದಲ್ಲಿ ಸಾವಿರಾರು ವರ್ಷದಿಂದ ಬೇರೂರಿಬಿಟ್ಟಿದೆ.

ಆರ್ಥಿಕವಾಗಿ ಬಲಹೀನನಾಗಿರುವ ವ್ಯಕ್ತಿ ತನ್ನ ಎಲ್ಲ ಬಗೆಯ ಹತಾಶೆಯನ್ನೂ ಹೆಣ್ಣಿನ ದೇಹವನ್ನು ದಮನಿಸುವ ಮೂಲಕ ತೋರಿಸುತ್ತಾನೆ. ಶ್ರೀಮಂತ ತನ್ನ ಕಾಮದಾಸೆಗೆ ಅವಳನ್ನು ಬಳಸಿ ದುಡ್ಡಿನ ಮೂಲಕ ಅನ್ಯಾಯವನ್ನು ಅಳಿಸಿಹಾಕುತ್ತಾನೆ. ತನಗಿಂತ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ತನ್ನ ಸ್ಥಾನಬಲದಿಂದಲೇ ಮಹಿಳೆಯ ಅಸಹಾಯಕತೆಯನ್ನು ತನ್ನ ದಾಹ ಶಮನಗೊಳಿಸಿಕೊಳ್ಳಲು ಬಳಸುತ್ತಾನೆ. ಇಲ್ಲಿ ಎಲ್ಲೂ ಅವನು ತನ್ನ ದೌರ್ಬಲ್ಯಕ್ಕೆ ನೇರವಾಗಿ ಮುಖಾಮುಖಿಯಾಗುವುದಿಲ್ಲ. ಬದಲಾಗಿ ತನ್ನ ಅಸಹಾಯಕತೆಯ ಕ್ಷಣಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯವೆಸಗಿ ಹುಸಿ ಗಂಡಸುತನವನ್ನು, ವಿಜಯವನ್ನು ಮೆರೆಯುತ್ತಾನೆ.

ಹೆಣ್ಣು ದುರ್ಬಲಳು ಎಂದು ನಮ್ಮ ಸಮಾಜ ತಿಳಿದುಕೊಂಡಿದೆ. ಆಕೆ ಹೆಚ್ಚಿನ ದೌರ್ಜನ್ಯಕ್ಕೆ ಒಳಗಾಗುವ ಕಾರಣ ಆಕೆಗೆ ಸಹಾಯ ಮಾಡುವ ಹಲವು ರೀತಿಯ ವ್ಯವಸ್ಥೆಗಳು ನಮ್ಮಲ್ಲಿ ಇವೆ. ಬೆಂಗಳೂರಿನಲ್ಲಿ ಆಪ್ತಸಮಾಲೋಚಕಿ ಆಗಿರುವ ಆತ್ಮೀಯರೊಬ್ಬರು ಹೇಳುವಂತೆ, ಗಂಡುಮಕ್ಕಳ ಮನೋಲೈಂಗಿಕ ಬೆಳವಣಿಗೆಗೆ ಸ್ಪಂದಿಸುವ ವಾತಾವರಣ ನಮ್ಮಲ್ಲಿ ತುಂಬಾ ಕಡಿಮೆ ಇದೆ. ಜೊತೆಗೆ ಅವರ ದುರ್ಬಲ ಕ್ಷಣಗಳನ್ನು ಅರೋಗ್ಯಕರ ರೀತಿಯಲ್ಲಿ  ಸ್ವೀಕರಿಸದೇ ‘ಒಬ್ಬ ಗಂಡು ಹುಡುಗನಾಗಿ ಈ ರೀತಿ ನಡ್ಕೊಳೋಕೆ ನಾಚಿಕೆ ಆಗಲ್ವಾ’ ಎಂಬ ಬಗೆಯಲ್ಲಿ ಸುತ್ತಲಿನವರ ಪ್ರತಿಕ್ರಿಯೆ ಇರುತ್ತದೆ. ತನ್ನಲ್ಲಿ ಸಹಜವಾಗಿ ಆಗುವ ನಿಮಿರುವಿಕೆ, ಸ್ಖಲನ ಇವುಗಳ ಬಗ್ಗೆ ಇಲ್ಲಸಲ್ಲದ ಕಲ್ಪನೆಗಳನ್ನು ಇರಿಸಿಕೊಂಡು ಮನಸ್ಸಿನಲ್ಲಿಯೇ ತೊಳಲಾಡುತ್ತಾರೆ. ತನ್ನ ನಿಯಂತ್ರಣದಲ್ಲಿ ದೈಹಿಕ ಬದಲಾವಣೆಯ ಜೊತೆಗೆ ಇದರ ಬಗ್ಗೆ ಜನಪ್ರಿಯ ಪತ್ರಿಕೆಗಳು ಬಿತ್ತುವ ಹುಚ್ಚು ತಿಳಿವಳಿಕೆಗಳು, ಪುರುಷತ್ವವನ್ನು ಹೆಚ್ಚಿಸಿಕೊಳ್ಳಿ ಎನ್ನುವ ಜಾಹೀರಾತುಗಳು, ಪ್ರಚೋದನೆ ನೀಡುವ ದೃಶ್ಯಮಾಧ್ಯಮಗಳು, ಕಡಿಮೆ ದುಡ್ಡಿನಲ್ಲಿ ಬಹಳ ಸುಲಭವಾಗಿ ದಕ್ಕುವ ನೀಲಿ ಚಿತ್ರಗಳು ಬಿತ್ತುವ ಪುರುಷತ್ವದ ಕಲ್ಪನೆ ಆಘಾತ ಉಂಟುಮಾಡುವಂಥದ್ದು.

ಹೀಗಾಗಿ ಗಂಡು ಮಕ್ಕಳ ಈ ಬಗೆಯ ಸಂಕಟಗಳನ್ನು, ದುರ್ಬಲ ಕ್ಷಣಗಳನ್ನು ಹಂಚಿಕೊಳ್ಳುವಂತಹ ಮುಕ್ತತೆ ಇರುವ ಅವಕಾಶಗಳು ನಮ್ಮಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹೆಣ್ಣುಮಕ್ಕಳಿಗೆ ಹತ್ತು ಹಲವು ಸಹಾಯವಾಣಿಗಳಿವೆ, ಜೈವಿಕ ನೆಲೆಯ ಸಮಸ್ಯೆಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. ಇಂದು ಹೆಣ್ಣುಮಕ್ಕಳು ತಮ್ಮ ಹಳೆಯ ಸಾಂಪ್ರದಾಯಿಕ ಪಾತ್ರಗಳನ್ನು ಬದಿಗಿರಿಸಿ ಹೊಸ ಸಾಧ್ಯತೆಗಳತ್ತ ಮುಖಮಾಡುತ್ತಿದ್ದಾರೆ. ಆದರೆ ಇದಕ್ಕನುಗುಣವಾಗಿ ನಮ್ಮ ಕುಟುಂಬದ ವಿನ್ಯಾಸ ಬದಲಾಗಿಲ್ಲ. ಹೀಗಾಗಿ ಮನೆಯೊಳಗೆ, ಹೊರಗೆ ಎರಡೂ ಕಡೆಯ ಜವಾಬ್ದಾರಿಗಳನ್ನು ಎಷ್ಟು ಸಮರ್ಥವಾಗಿ ಹೊರುತ್ತೇನೆಂದರೂ ಆಕೆಗೂ ಮಿತಿ ಇರುವುದು ಸ್ಪಷ್ಟ. ಆದರೆ ಗಂಡು ಬದಲಾವಣೆಯ ಗತಿಗೆ ಹೊಂದಿಕೊಳ್ಳುವಲ್ಲಿ ಹಳೆಯ ಸಾಂಪ್ರದಾಯಿಕ ಪಾತ್ರಕ್ಕೇ ಆತುಕೊಂಡಿದ್ದಾನೆ. ಹೀಗಾಗಿ ಮನೆಯೊಳಗೆ ಹೊರಗೆ ಬದಲಾಗಿರುವ ಹೆಣ್ಣಿನ ಪಾತ್ರದೊಂದಿಗೆ ಹೊಂದಿಕೊಳ್ಳುವುದು ನಮ್ಮಲ್ಲಿ ಅನೇಕರಿಗೆ ತುಂಬಾ ಕಷ್ಟವೆನಿಸುತ್ತಿದೆ. ಹೀಗೆ ಹುಟ್ಟಿಕೊಳ್ಳುವ ವೈಮನಸ್ಸುಗಳನ್ನು ಸರಿಪಡಿಸಲು ಆಪ್ತಸಮಾಲೋಚನೆ ಅಗತ್ಯವಿದೆ.

ಬದಲಾಗುತ್ತಿರುವ ಜಂಡರ್ ರೋಲ್ಸ್‌ಗೆ ಅನುಗುಣವಾಗಿ ಮತ್ತೆ ನಮ್ಮ ನಡುವಣ ಸಂಬಂಧಗಳನ್ನು ಮರುವಿನ್ಯಾಸಗೊಳಿಸಿಕೊಳ್ಳಲು ಅನುವಾಗುವಂತೆ ಚರ್ಚಿಸಲು ಅವಕಾಶ ಲಭ್ಯವಾಗಬೇಕು. ಬೆಂಗಳೂರು ಮುಂತಾದ ಕೆಲವು ದೊಡ್ಡ ನಗರಗಳಲ್ಲಿ ಮಾತ್ರ ಇಂತಹ ಗುಂಪುಗಳು ಇವೆ. ಉಳಿದಂತೆ ನಮ್ಮ ದೈಹಿಕ ಅನುಭವಗಳ ಬಗ್ಗೆ, ಸಂಬಂಧಗಳ ನಡುವಣ ಸಮಸ್ಯೆ ಬಗ್ಗೆ ಆರೋಗ್ಯಕರವಾಗಿ ಮುಕ್ತ ಚರ್ಚೆ ಮಾಡುವ ಅವಕಾಶಗಳು ಇಲ್ಲ. ಮತ್ತು ಎಷ್ಟೋ ಸಲ ಅವನ ದೈಹಿಕ, ಸಂಬಂಧಗಳ ಸಮಸ್ಯೆಗಳಿಗೆ ದೊರೆಯುವ ಸಲಹೆ ಸಾಂಪ್ರದಾಯಿಕ ನೆಲೆಯದ್ದೇ ಆಗಿರುತ್ತದೆ.

ನಮ್ಮ ನಡುವೆ ಬಿತ್ತಲಾಗುತ್ತಿರುವ ಹೆಣ್ಣಿನ ಕಲ್ಪನೆ, ಒಂದಡೆ ಆಕೆಯ ಜೈವಿಕ ನೆಲೆಯಿಂದ, ಪೋಷಣೆಯ ನೆಲೆಯಿಂದ ನಿರ್ದೇಶಿತವಾದರೆ ಇನ್ನೊಂದೆಡೆ ಆಕೆಯನ್ನು ಭೋಗದ ವಸ್ತು ಎಂಬಂತೆ ನೋಡಲಾಗುತ್ತದೆ. ಇದನ್ನೇ ಖ್ಯಾತ ಮನೋವಿಶ್ಲೇಷಕ ಸುಧೀರ್ ಕಾಕರ್ ‘ಮದರ್-ವೋರ್ ಡೈಕಾಟಮಿ’ ಎಂದು ವ್ಯಾಖ್ಯಾನಿಸಿದ್ದಾರೆ. ಇದರಾಚೆಗೆ ಅಸ್ತಿತ್ವವಿರುವ ಒಂದು ಹೆಣ್ಣಾಗಿ ಅವಳನ್ನು ನೋಡುವುದು ನಮ್ಮ ಸಮಾಜಕ್ಕೆ ತೀರಾ ಹೊಸತು. ಅದೇ ರೀತಿಯಲ್ಲಿ ಸಣ್ಣಂದಿನಿಂದಲೇ ಹೆಣ್ಣನ್ನು ಕುಟುಂಬದ ಪೋಷಣೆಯ ಹೊಣೆಗೆ ಒಗ್ಗಿಸುವಂತೆ ಗಂಡನ್ನು ಬೆಳೆಸುವ ಬಗೆ ಇಲ್ಲ. ಅವನು ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಹೊಣೆ ಹೊತ್ತಿರುವವನು ಎಂದಾದರೂ ಬಹುತೇಕ ಸಂದರ್ಭದಲ್ಲಿ ಅದೂ ಇಲ್ಲ. ಸಕಲ ಸವಲತ್ತುಗಳನ್ನು ಅನುಭವಿಸುತ್ತಾ ಆಳುವ ಗಂಡಿನ ಮಾದರಿ ಹೇಗಾದರೂ ಸರಿ ಪುರುಷತ್ವವನ್ನು ಸಾಬೀತುಪಡಿಸುವ ಹುಂಬತನಕ್ಕೆ ಅವರನ್ನು ದೂಡುತ್ತದೆ.

ಈ ಎಲ್ಲ ನೆಲೆಯಲ್ಲಿ ಪುರುಷತ್ವವನ್ನು ಮತ್ತು ಸ್ತ್ರೀತ್ವವನ್ನು ಮರುನಿರ್ವಚಿಸಿಕೊಳ್ಳುವ ಅಗತ್ಯವಿದೆ. ಹೇಗೆ ಕೇವಲ ಮಕ್ಕಳನ್ನು ಹೆರುವುದು, ಸಕಲ ಸವಲತ್ತುಗಳನ್ನು ಒದಗಿಸುವುದಷ್ಟೇ ಹೆಣ್ತನವಲ್ಲವೋ ಹಾಗೇ ಕೇವಲ ಮಕ್ಕಳನ್ನು ಹುಟ್ಟಿಸುವುದು, ಹೆಣ್ಣನ್ನು ಪ್ರವೇಶಿಸುವುದಷ್ಟೇ ಗಂಡಸುತನವಲ್ಲ. ಸಹಜೀವಿಯೊಂದಿಗೆ ಸ್ಪಂದಿಸುತ್ತಾ ಬದುಕುವ, ಅವರ ಅಸ್ತಿತ್ವವನ್ನು ಮನ್ನಿಸುವ, ಕುಟುಂಬವನ್ನು ಸಲಹುವ ಪುರುಷನ ಮಾದರಿ ನಮ್ಮ ಸಂಸ್ಕೃತಿಯ ಚೌಕಟ್ಟಿನೊಳಗೆ ಬರಬೇಕಾಗಿದೆ. ಆಳುವ ಪುರುಷ ನಮಗೆ ಬೇಡ, ಜೊತೆಗೆ ಬದುಕುವ ಸಹಜೀವಿ ಬೇಕು ಎಂಬ ಅರಿವಿನೊಂದಿಗೆ ಹೊರಡಬೇಕಾಗಿದೆ. ಗೆಳೆಯನೊಬ್ಬ ಹೇಳುವ ಹಾಗೆ– ‘ಗಂಡು ತನ್ನೊಳಗಿನ ಹೆಣ್ಣನ್ನು ಜಾಗೃತಗೊಳಿಸಿಕೊಂಡರೆ, ಹೆಣ್ಣು ತನ್ನೊಳಗಿನ ಗಂಡನ್ನು ಜಾಗೃತಗೊಳಿಸಿಕೊಂಡರೆ ನೋಡುವ ಬಗೆ ಬದಲಾಗಬಹುದು’.

ಹೊಸ ಬಗೆ ಸಖ್ಯದ ಜವಾಬ್ದಾರಿ
‘ಏ ಒಬ್ಬಳೇ ಹೋಗ್ಬೇಡ್ವೇ, ನಾನೇ ಕರ್ಕೊಂಡು ಹೋಗ್ತೀನಿ’– ಎಲ್ಲಿಗೆಂದರಲ್ಲಿಗೆ ಉತ್ಸಾಹದಿಂದ ಜಿಗಿದುಬಿಡುವ ಪುಟ್ಟಿಗೆ ಅಣ್ಣನ ತಾಕೀತು. ‘ಲೋ, ನನಗೆ

ಒಬ್ಬಳೇ ಹೋಗೋಕೆ ಗೊತ್ತುಬಿಡು, ನೀನೇನೂ ಬಾಡಿಗಾರ್ಡ್ ಆಗಿ ಬರುವ ಅಗತ್ಯವಿಲ್ಲ’– ಪುಟ್ಟಿಯ ಆತ್ಮವಿಶ್ವಾಸದ ಮಾತು.

ಅದೇ ಪುಟ್ಟಿ ಈಗ ಬೆಳೆದು ತಾಯಿಯಾಗಿದ್ದಾಳೆ. ಆಕೆ ಈಗ ತನಗೆ ಬೇಕಾದೆಡೆಗೆ ಧೈರ್ಯವಾಗಿ ಹೋಗಬಲ್ಲಳು, ನಿರ್ಭಿಡೆಯಿಂದ ಮಾತಾಡಬಲ್ಲಳು. ಈಗ ಆಕೆಗೆ ಒಬ್ಬ ಮಗ ಇದ್ದಾನೆ. ಸುತ್ತಲಿನ ಗೆಳತಿಯರ ಜೊತೆ ಅವರವರ ಮಕ್ಕಳ ಬಗ್ಗೆ ಮಾತಾಡುವಾಗ ಅವಳಲ್ಲಿ ಆತಂಕದ ಎಳೆ ಸುಳಿಯುತ್ತದೆ.

ಇವತ್ತು ಹೆಣ್ಣುಮಕ್ಕಳು ಅಸ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ, ನಿರಂತರ ಎಚ್ಚರದಿಂದ, ಪ್ರಯತ್ನದಿಂದ ಸ್ಥಾಪಿಸಿಕೊಳ್ಳುವ ಅಗತ್ಯವಿರುವ ಕಾರಣ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಬಗ್ಗೆ ಬೆಳೆಯುತ್ತಲೇ ಅರಿವುಳ್ಳವರಾಗಲು ಹೆಚ್ಚಿನ ಪ್ರಯತ್ನ ಅಗತ್ಯವಿಲ್ಲ. ಅದು ಅವರ ಬದುಕಿನ ಪ್ರಶ್ನೆ. ಅವರು ಈ ಸಮಾಜದಲ್ಲಿ ಎಲ್ಲ ಅರ್ಥದಲ್ಲಿ ಜೀವಂತವಾಗಿರಲು ತಮ್ಮನ್ನು ಸಜ್ಜುಗೊಳಿಸಿಕೊಳ್ಳದೇ ಹೋದರೆ ಅವರ ಅಸ್ಮಿತೆಯೇ ಅಳಿಯುತ್ತದೆ. ಅದೇ ನಮ್ಮ ಹುಡುಗರ ಮುಂದಿರುವ ಮಾದರಿಯಾಚೆಗೆ ಅವರನ್ನು ಕರೆದೊಯ್ಯುವುದು ಹೇಗೆ? ಈ ಮಗುವಿಗೆ, ಅಮ್ಮನಿಗೆ ಎಲ್ಲಾ ಬಗೆಯ ಕೆಲಸಗಳಲ್ಲಿ ನೆರವಾಗುವ, ತನ್ನನ್ನು ಗೌರವಿಸುವ ಅಪ್ಪನಂಥವರು ಮಾದರಿಯಾಗುತ್ತಾರೋ? ಅಥವಾ ಸುತ್ತ ಸದಾ ಗದ್ದಲ ಮಾಡುವ ಯಾವುದೋ ಸೇನೆಯವರೋ, ಗಂಡುದರ್ಪ ತೋರಿಸುವ ಅಂಕಲ್‌ಗಳೋ, ಸದಾ ಮನೆಯಲ್ಲಿದ್ದು ಬಗೆಬಗೆ ತಿಂಡಿ ಮಾಡಿಕೊಡುವ ಸಹಪಾಠಿಗಳ ತಾಯಂದಿರೋ?

‘ನಿನ್ನ ಅಸ್ತಿತ್ವಕ್ಕೆ ಬೆಲೆ ಇದೆ, ಬರೇ ನಿನ್ ಹೆಣ್ತನಕ್ಕಲ್ಲ’ ಎಂಬ ಕೈಫಿ ಅಜ್ಮಿ ಮಾತು ನೆನಪಾಗುತ್ತದೆ. ಆಗ ಪುಟ್ಟಿಗೆ ಎಲ್ಲೋ ಕಳೆದುಹೋಗಿರುವ ತನ್ನ ಸಂಗಾತಿಯ ಜೊತೆಜೊತೆಗೇ ಸಾಗುವ ಸಹಚರ, ಸಖನನ್ನು ಮತ್ತೆ ಕಾಣುವ ಯತ್ನಕ್ಕೆ ಹುಮ್ಮಸ್ಸು ಬರುತ್ತದೆ. ‘ಹೆಣ್ಣನ್ನು ಒಬ್ಬ ಸರ್ವಿಸ್ ಪ್ರೊವೈಡರ್ ಆಗದೇ ಸಖಿಯಾಗಿ ನೋಡುವ ಗಂಡುಮಕ್ಕಳನ್ನು ಬೆಳೆಸುವ ಜವಾಬ್ದಾರಿ ಸ್ತ್ರೀಯರ ಪರವಾಗಿ ಮಾತಾಡುವ ನಮ್ಮ ಮೇಲಿದೆಯಲ್ಲ... ಆ ಹೊಣೆಯನ್ನು ನಾವು ಹೊತ್ತುಕೊಳ್ಳಲೇಬೇಕು’ ಎಂಬ ಗೆಳತಿಯರ ಮಾತು ಹೊಸ ಬಗೆ ಸಖ್ಯದ ಆಖ್ಯಾನಕ್ಕೆ ಮೊದಲ ಸಾಲು ಬರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT