ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜವಾದ ಸಾಹಿತಿ ಮನುಜ ಪಕ್ಷಪಾತಿ

Last Updated 26 ಜನವರಿ 2016, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಜವಾದ ಸಾಹಿತಿ ರಾಜಕೀಯ ಪಕ್ಷಗಳ ಸದಸ್ಯ ಆಗಿರುವುದಿಲ್ಲ. ಶುದ್ಧ ಮನುಜ ಪಕ್ಷಪಾತಿ ಆಗಿರುತ್ತಾನೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಕನ್ನಡ ಬಳಗ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಾಯ್ಕಿಣಿ ಜಗತ್ತು’ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.

‘ಮುಂಬೈ, ನನಗೆ ಜೀವಪೋಷಕದ ಆವರಣವಾಗಿ ಕಂಡಿತು. ಎಲ್ಲ ಮಧ್ಯಮ, ಕೆಳ ಮಧ್ಯಮ ವರ್ಗದವರು ಬದುಕು ಕಟ್ಟಿಕೊಳ್ಳಲು ಅನುಕೂಲಕರ ವಾತಾವರಣ ಅಲ್ಲಿದೆ. ನನ್ನ ತಾಯಿ, ತಂದೆ ಮುಂಬೈಗೆ ಬಂದರೆ ಊರಿಗೆ ಹೋಗುತ್ತಿರಲಿಲ್ಲ’ ಎಂದರು. ‘ನನ್ನ ಕಥೆಗಳಲ್ಲಿ ವರ್ಣನೆಗೊಂಡ ಮುಂಬೈ ಇಂದು ಬದಲಾಗಿರಬಹುದು. ಆದರೆ ಆತ್ಮ, ಮನಸ್ಸು ಹಾಗೇ ಇದೆ. ತೂಫಾನ್‌ ಮೇಲ್ ಕಥೆಯಲ್ಲಿ ಇರುವ ಪಾತ್ರಧಾರಿಗಳು ಈಗ ಏನು ಮಾಡುತ್ತಿದ್ದಾರೆ ಎಂದು ಹುಡುಕಾಟ ನಡೆಸಿ ನನಗೊಬ್ಬರು ಪತ್ರ ಬರೆದಿದ್ದಾರೆ’ ಎಂದು ಹೇಳಿದರು.

‘ನಾನು ಯೋಜನಾಬದ್ಧವಾಗಿ ಕಥೆ ಬರೆಯುವುದಿಲ್ಲ. ಕಥಾವಸ್ತು ಎಲ್ಲಿಗೆ ಕೊಂಡೊಯ್ಯುತ್ತೋ ಹಾಗೆ ಬರೆಯುತ್ತಾ ಸಾಗುತ್ತೇನೆ. ಮಕ್ಕಳ ಸಾಹಿತ್ಯವನ್ನೂ ರಚಿಸುವ ಉದ್ದೇಶವಿದೆ’ ಎಂದರು. ‘ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಪಾಲಕರು, ಶಿಕ್ಷಕರು ಮಕ್ಕಳ ಸಾಹಿತ್ಯವನ್ನು ಓದಬೇಕಿದೆ’ ಎಂದು ಮನವಿ ಮಾಡಿದರು.

‘ನಟ ಡಾ.ರಾಜ್‌ಕುಮಾರ್‌ ಅವರ ಒಡನಾಟದಿಂದ ಸಾಹಿತ್ಯ, ಜೀವನಕ್ಕೆ ಬೇಕಾದ ವಿಷಯಗಳನ್ನು ತಿಳಿದೆ. ನನ್ನ ಮೇಲೆ ಅವರು ಆಳವಾದ ಪ್ರಭಾವ ಬೀರಿದ್ದಾರೆ’ ಎಂದರು. ‘ನನಗೆ ಸಾಮಾಜಿಕ ಜಾಲತಾಣಗಳ ಮೇಲೆ ವೈರಾಗ್ಯವಿಲ್ಲ. ಇವು ಏನೂ ಮಾಡದೆಯೇ ಮಾಡಿದೆ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಅಲ್ಲದೆ, ನನಗೆ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳುವಷ್ಟು ವ್ಯವಧಾನ, ಸಮಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಯ್ಕಿಣಿ ಕಾವ್ಯ ಗುರುತಿಸದ ವಿಮರ್ಶಕರು
‘ಜಯಂತ ಕಾಯ್ಕಿಣಿ ಅವರು  ಶ್ರೇಷ್ಠ ಕತೆಗಾರ ಮಾತ್ರವಲ್ಲ ಉತ್ತಮ ಕವಿಯೂ ಹೌದು. ಆದರೆ, ವಿಮರ್ಶಕರು ಕಾಯ್ದಿಣಿ ಅವರನ್ನು ಕವಿಯಾಗಿ ಪರಿಗಣಿಸಿಲ್ಲ’ ಎಂದು ಕಥೆಗಾರ ಎಸ್‌.ದಿವಾಕರ್ ಬೇಸರ ವ್ಯಕ್ತಪಡಿಸಿದರು.

ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘20ನೇ ಶತಮಾನದ ಕಾವ್ಯ ಪರಂಪರೆಯಲ್ಲಿ ಕಾಣದ ವಿಭಿನ್ನ ಕಾವ್ಯ ಧ್ವನಿ ಕಾಯ್ಕಿಣಿ ಅವರ ಅವರ ಕವನಗಳಲ್ಲಿ ಕಾಣಬಹುದು. ಅವರ ಕಾವ್ಯದ ಬಗ್ಗೆ ವಿಶ್ಲೇಷಣೆ, ವಿಮರ್ಶೆ ಮಾಡುವ ಸಿದ್ಧ ಮಾದರಿ ರೂಪುಗೊಂಡಿಲ್ಲ. ಅವರ ಕತೆಗಳಲ್ಲಿ ಪಾತ್ರಗಳ ಮೂಲಕ ಚಲನಶೀಲತೆ ಇದೆ. ಕಾವ್ಯದಲ್ಲಿ ಚಲಿಸದ ಚಿತ್ರಗಳು ಇವೆ’ ಎಂದರು.

‘ಅವರ ಕವನಗಳಲ್ಲಿ ಎದ್ದು ಕಾಣುವುದು ಶಬ್ದ ಚಿತ್ರಗಳ ಮೆರವಣಿಗೆ.  ಅವರ ಕವನಗಳು ಒಂದು ರೀತಿಯ ಹೇಳಿಕೆಗಳಾಗದೆ ಚಿತ್ರಗಳಲ್ಲಿ ಮುಳುಗಿ ಹೋಗುತ್ತವೆ. ಅವುಗಳನ್ನು ಸುಲಭದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು. ಕವಿತೆಗಳಲ್ಲಿ ಅನುಭವಕ್ಕೆ ತೆರೆದುಕೊಳ್ಳುವ ಕ್ರಿಯೆಯನ್ನು ಕಾಣಬಹುದು. ಅವರ ಕವನಗಳಲ್ಲಿ ಲಯ, ಪ್ರತಿಮೆ ನಿರ್ಮಾಣ, ಧ್ವನಿ ಶಕ್ತಿ ಇದೆ. ವಿಭಿನ್ನ ಪ್ರಯೋಗಶೀಲತೆ, ಭಾವನೆಗಳ ಸಂದರ್ಭ, ಆಂತರಿಕ ಸಂಘರ್ಷಗಳ ಬಗೆಗಿನ ಸಂಶೋಧನೆಯಿಂದ ಕಾವ್ಯ ಸೃಷ್ಟಿಯಾಗಿದೆ’ ಎಂದು ಅವರು ವಿಶ್ಲೇಷಿಸಿದರು.

ಕಾಯ್ಕಿಣಿ ಹೇಳಿದ ಸ್ವಾರಸ್ಯಕರ ಘಟನೆಗಳು
ವಾಹಿನಿಯೊಂದರಲ್ಲಿ ಕೆಲಸ ಸಿಕ್ಕಿದ್ದರಿಂದ ಹೈದರಾಬಾದ್‌ಗೆ ಬಂದೆ. ರಾಮೋಜಿ ಫಿಲಂ ಸಿಟಿಯಲ್ಲಿ ವಾಹಿನಿಯ ಕಚೇರಿ ಇತ್ತು. ಊರಿಗೆ ಪತ್ರ ಬರೆದು ಅಲ್ಲೇ ಇದ್ದ ಅಂಚೆಪೆಟ್ಟಿಗೆಗೆ ಹಾಕಿದೆ. ಆಶ್ಚರ್ಯವೆಂದರೆ ಅದು ಸಿನಿಮಾಗೆಂದು ನಿರ್ಮಿಸಿದ್ದ ಅಂಚೆಪೆಟ್ಟಿಗೆ! ಅಲ್ಲಿಂದ ಪತ್ರವನ್ನು ಹೊರ ತೆಗೆಯಲು ಎರಡು ದಿನ ಹಿಡಿಯಿತು!

ರಾಮೋಜಿ ಫಿಲಂ ಸಿಟಿಯಲ್ಲಿ ದೇವರಿಲ್ಲದ ದೇವಸ್ಥಾನವಿತ್ತು. ಮಂತ್ರಿಗಳು, ಸಿನಿಮಾದವರಿಗೆ ಬೇಕಾದ ದೇವರನ್ನು ಅಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು!

ನನ್ನ ಬಾಳ ಸಂಗಾತಿಗೆ ಹೇಳದ ಸುಂದರ ಸಾಲುಗಳನ್ನು ಸಿನಿಮಾ ಹೀರೋಗಳಿಗೆ ಬರೆದಿದ್ದೇನೆ. ಸಿನಿಮಾ ಸಾಹಿತ್ಯ ಪೂರಕ ಸಾಹಿತ್ಯ. ನನ್ನ ಜೀವನ ದರ್ಶನ ಅಲ್ಲ.

ನನ್ನ ತಾಯಿ ಬಹಳ ಕಾಳಜಿಯಿಂದ ಬೆಳೆಸಿದರು. ಹೀಗಾಗಿ ಸೈಕಲ್‌ ಸಹ ಕೊಡಿಸಿರಲಿಲ್ಲ. ಸಮುದ್ರ ತಡಿಯಲ್ಲಿ ಹುಟ್ಟಿ ಬೆಳೆದು ಈಜು ಬಾರದ ವ್ಯಕ್ತಿ ಇದ್ದರೆ ಅದು ನಾನೊಬ್ಬನೇ!

ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ ಇತ್ತು. ಅದಕ್ಕೆಂದು ಸಂಗ್ರಹಿಸಿದ್ದ ಹಣವನ್ನು ಬಾಲಕಿಯರ ತಂಡದ ನಾಯಕಿ ನನ್ನ ಕೈಗೆ ನೀಡಬೇಕಿತ್ತು. ಈ ಒಂದು ಗಳಿಗೆಗೆ ಕಾದಿದ್ದೆ ಹಾಗೂ ಹಿಂದಿನ ದಿನವೇ ಮಾನಸಿಕವಾಗಿ ಸಿದ್ಧತೆ ನಡೆಸಿದ್ದೆ. ಅಂದು ಆಕೆ ನೇರವಾಗಿ ಬಂದವಳೇ ನನ್ನ ಕೈಗಿಡುವ ಬದಲು ಕೆಳಗಿಟ್ಟು ಹೋದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT