ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣಾ ಮಂಡಳಿ ಸದ್ಯಕ್ಕಿಲ್ಲ

ಕಾವೇರಿ: ರಾಜ್ಯದ ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ಭರವಸೆ
Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸರ್ವ­ಪಕ್ಷಗಳ ನಿಯೋಗಕ್ಕೆ ಮಂಗಳವಾರ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬಾರದು ಎಂದು ಆಗ್ರಹಿಸಿತು. ಈ ನಿಯೋಗದ ಮನವಿಯನ್ನು ತಾಳ್ಮೆಯಿಂದ ಕೇಳಿದ ನರೇಂದ್ರ ಮೋದಿ, ಸರ್ಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪ ಇಲ್ಲವೆಂದು ಸ್ಪಷ್ಟಪಡಿಸಿದ್ದಾಗಿ ಸಿದ್ದರಾಮಯ್ಯ ಅನಂತರ ಪತ್ರಕರ್ತರಿಗೆ ತಿಳಿಸಿದರು.

‘ತಮಿಳುನಾಡು ಮುಖ್ಯಮಂತ್ರಿ ನಿರ್ವ­ಹಣಾ ಮಂಡಳಿ ರಚಿಸಬೇಕೆಂದು ಕೇಳಿ­ದ್ದಾರೆ. ಅವರ ಮನವಿಯನ್ನು ಆಲಿಸಿ­ದ್ದೇನೆ. ನೀವು ಮಂಡಳಿ ಮಾಡುವುದು ಬೇಡ ಎಂದು ಒತ್ತಾಯ ಮಾಡುತ್ತಿ­ದ್ದೀರಿ. ನಿಮ್ಮ ಮಾತುಗಳಿಗೂ ಕಿವಿಗೊಟ್ಟಿ­ದ್ದೇನೆ. ಆದರೆ, ಈ ಸಂಬಂಧದ ಟಿಪ್ಪಣಿ ಸಿದ್ಧ­ವಾಗಿದೆ ಎನ್ನುವ ಸುದ್ದಿ­ಯನ್ನು ಮಾಧ್ಯಮಗಳಲ್ಲಿ ಓದಿದ್ದೇನೆ. ಅದು ಹಿಂದಿನ ಸರ್ಕಾರ ಆರಂಭಿಸಿದ ಪ್ರಕ್ರಿಯೆ ಇದ್ದಿರಬಹುದು. ನಮ್ಮ ಸರ್ಕಾರದ ಮುಂದೆ ಇಂಥ ಪ್ರಸ್ತಾಪ­ವಿಲ್ಲ’ ಎಂದು ಮೋದಿ ಖಚಿತಪಡಿಸಿದ್ದಾಗಿ ಮುಖ್ಯ­ಮಂತ್ರಿ ವಿವರಿಸಿದರು.

‘ಕರ್ನಾಟಕದ ಜನರಿಗೆ ಕಾವೇರಿ ಜೀವನದಿ ಎಂಬ ಸಂಗತಿ ನನಗೆ ಗೊತ್ತಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇ­ಗೌಡರು ಈಚೆಗೆ ಭೇಟಿ ಮಾಡಿ ಎಲ್ಲ ಸಂಗತಿ ತಿಳಿಸಿದ್ದಾರೆ. ಆದರೆ, ಇದರ ಹಿಂದಿ­ರುವ ರಾಜಕಾರಣದ ಬಗ್ಗೆ ನನಗೆ ಅರಿವಿಲ್ಲ’ ಎಂದು ಪ್ರಧಾನಿ ಮಾರ್ಮಿಕ­ವಾಗಿ ಹೇಳಿದರೆಂದು ವಿಶ್ವಸನೀಯ ಮೂಲ­ಗಳು ತಿಳಿಸಿವೆ.

ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿಯಲ್ಲಿ ಕರ್ನಾಟಕ, ತಮಿಳು­ನಾಡು, ಕೇರಳ ಮತ್ತು ಪುದುಚೇರಿ ನಡು­ವಣ ನೀರಿನ ವಿವಾದಕ್ಕೆ ಸಂಬಂಧಿ­ಸಿದಂತೆ ಐತೀರ್ಪು ನೀಡಿದೆ. ಕಳೆದ ವರ್ಷದ ಫೆಬ್ರು­ವರಿಯಲ್ಲಿ ಕೇಂದ್ರ ಸರ್ಕಾರ ಐತೀರ್ಪು ಕುರಿತು ಅಧಿಸೂಚನೆ ಹೊರ­ಡಿ­ಸಿದೆ. ಈ ಅಧಿಸೂಚನೆ ಸುಪ್ರೀಂಕೋರ್ಟ್‌ ನೀಡಲಿರುವ ತೀರ್ಪಿನ ವ್ಯಾಪ್ತಿ-­ಗೊಳ­ಪಟ್ಟಿರುತ್ತದೆ ಎಂದೂ ಹೇಳಲಾಗಿದೆ.

ಇದಾದ ಬಳಿಕ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರಿ ತಮಿಳುನಾಡು ಸರ್ವೋಚ್ಚ ನ್ಯಾಯಾಲ­ಯದಲ್ಲಿ ಮಧ್ಯಾಂತರ ಅರ್ಜಿ ಸಲ್ಲಿಸಿದೆ. ಕಾವೇರಿ ಐತೀರ್ಪು ಪ್ರಶ್ನಿಸಿರುವ ಕರ್ನಾಟಕ ಮತ್ತಿತರ ರಾಜ್ಯಗಳ ಸಿವಿಲ್‌ ಮೇಲ್ಮನವಿಗಳು ಮತ್ತು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ತಮಿಳು­ನಾಡು ಸಲ್ಲಿಸಿರುವ ಮಧ್ಯಾಂತರ ಅರ್ಜಿ ಶೀಘ್ರ ವಿಚಾರಣೆಗೆ ಬರಲಿದ್ದು, ತಮಿಳುನಾಡು ಒತ್ತಡಕ್ಕೆ ಮಣಿದು ಆತುರದಲ್ಲಿ ನಿರ್ವಹಣಾ ಮಂಡಳಿ ರಚಿಸ­ಬಾರದು ಎಂದು ನಿಯೋಗ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಜಲ ಸಂಪನ್ಮೂಲ ಸಚಿವಾಲಯ ಕಾರ್ಯ­ದರ್ಶಿ ನೇತೃತ್ವದಲ್ಲಿ ಉಸ್ತು­ವಾರಿ ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಮಿತಿ ಸದಸ್ಯರಾಗಿದ್ದಾರೆ. ಉಸ್ತುವಾರಿ ಸಮಿತಿ ಸತತವಾಗಿ ಸಭೆ ನಡೆಸುತ್ತಿದೆ.

ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಹೀಗಿರುವಾಗ ಕಾವೇರಿ ನಿರ್ವಹಣಾ ಮಂಡಳಿ ರಚಿಸು­ವುದು ಸೂಕ್ತವಲ್ಲ. ಇದರಿಂದ ಕರ್ನಾಟಕಕ್ಕೆ ಅನ್ಯಾಯ­ವಾಗಲಿದೆ ಎಂದು ನಿಯೋಗ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿತು.

ಮುಖ್ಯಮಂತ್ರಿಗಳ ನೇತೃತ್ವದ ನಿಯೋಗದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯದ ವಿವಿಧ ಪಕ್ಷಗಳ ನಾಯಕರು, ಸಂಸದರು ಪಾಲ್ಗೊಂಡಿ­ದ್ದರು. ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ನಿಯೋಗದಲ್ಲಿರಲಿಲ್ಲ. ಆದರೆ, ಮಂಡ್ಯ ಲೋಕಸಭಾ ಸದಸ್ಯ ಪುಟ್ಟರಾಜು ಜೆಡಿಎಸ್‌ ಪಕ್ಷವನ್ನು ಪ್ರತಿನಿಧಿಸಿದ್ದರು. ಬೆಳಿಗ್ಗೆ ಮುಖ್ಯಮಂತ್ರಿ ಕರೆದಿದ್ದ ಸಂಸದರ ಉಪಾಹಾರ ಸಭೆಯಲ್ಲಿ ದೇವೇಗೌಡರು ಕಾವೇರಿ ವಿವಾದ– ಹೋರಾಟದ ಹಿನ್ನೆಲೆ ಕುರಿತು ಎಲ್ಲರಿಗೂ ಅರ್ಥವಾಗುವಂತೆ ಸವಿವರ­ವಾಗಿ ಮಾತನಾಡಿದರು.

ಜಯಾ ವಿರುದ್ಧ ಕರುಣಾ ವಾಗ್ದಾಳಿ
ಚೆನ್ನೈ (ಪಿಟಿಐ): ಕಾವೇರಿ ಜಲ ವಿವಾ­ದಕ್ಕೆ ಸಂಬಂಧಿಸಿದಂತೆ ಬದ್ಧ ರಾಜಕೀಯ ವೈರಿಗಳಾದ ತಮಿಳುನಾಡು ಮುಖ್ಯ­ಮಂತ್ರಿ ಜೆ. ಜಯಲಲಿತಾ ಮತ್ತು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರ ನಡುವೆ ಮಾತಿನ ಸಮರ ಮುಂದುವರಿದಿದೆ.

ಈ ವಿವಾದದಲ್ಲಿ ಸರ್ವಪಕ್ಷಗಳ ಸಭೆ ಕರೆ­ಯುವ ಅವಶ್ಯಕತೆ ಇಲ್ಲ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚಿಸು­ವಂತೆ ಕೇಂದ್ರದ ಮೇಲೆ ತಕ್ಷಣ ಒತ್ತಡ ಹೇರದೆ ಕಾಲಾವಕಾಶ ನೀಡಬೇಕು ಎಂಬ ಜಯಾ ಹೇಳಿಕೆ­ಗೆ ಕರುಣಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕಾವೇರಿ ವಿವಾದ­ವನ್ನು ಜಯಾ ಗಂಭೀರ­ವಾಗಿ ಪರಿಗಣಿ­ಸುವ ಬದಲಿಗೆ ಕೇಂದ್ರವನ್ನು ಬೆಂಬಲಿಸಲು ಹೆಚ್ಚು ಆಸಕ್ತಿ ವಹಿಸಿರುವಂತೆ ಕಾಣುತ್ತಿದೆ‘ ಎಂದು ಕರುಣಾ ಮಂಗಳ­ವಾರ ಹೇಳಿಕೆಯೊಂದ­ರಲ್ಲಿ ಟೀಕಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ­ಪಕ್ಷಗಳ ಸಭೆ ಕರೆದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ನಿಯೋಗ ಕೊಂಡೊಯ್ದು, ಕಾವೇರಿ ನಿರ್ವಹಣಾ ಮಂಡಳಿ ರಚಿಸ­ದಂತೆ ಒತ್ತಡ ಹೇರಲು ನಿರ್ಧರಿಸಿರುವು­ದನ್ನು ಕರುಣಾ ಪ್ರಸ್ತಾಪಿಸಿದ್ದಾರೆ.

‘ಸರ್ವ­ಪಕ್ಷಗಳ ಸಭೆ ಕರೆಯುವ ಅವಶ್ಯ­­­ಕತೆ ಇಲ್ಲ ಎನ್ನು­ತ್ತಿ­ರುವ ಜಯಾ, ತಕ್ಷಣ ಸಭೆ ಕರೆದು ಎಲ್ಲ ಪಕ್ಷಗಳ ಅಭಿ­ಪ್ರಾಯ ಪಡೆ­ದರೆ, ಅದರಿಂದ ಅವರಿಗೇ ಹೆಚ್ಚು ಬಲ ಸಿಗುತ್ತದೆಯಷ್ಟೇ’ ಎಂದೂ ಕರುಣಾ ಹೇಳಿದ್ದಾರೆ. ಈ ಹಿಂದಿನ ತಮ್ಮ ಸರ್ಕಾರ ಕಾವೇರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಜಯಾ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.

ಲೋಕಸಭೆಯಲ್ಲೂ ಪ್ರತಿಧ್ವನಿ
ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಎಐಎಡಿಎಂಕೆ ನಾಯಕ ತಂಬಿದುರೈ ಮಂಗಳವಾರ ಲೋಕಸಭೆ­ಯಲ್ಲಿ ಮಾಡಿದ ಒತ್ತಾಯ ಕರ್ನಾಟಕದ ಸಚಿವರು ಹಾಗೂ ಸಂಸದರ ಪ್ರತಿಭಟನೆಗೆ ಕಾರಣ­ವಾಯಿತು.

ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ತಂಬಿದುರೈ, ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಇದರಿಂದ ಕೆರಳಿದ ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ. ಸದಾನಂದ­ಗೌಡ ಎಐಎಡಿಎಂಕೆ ನಾಯಕರ ಹೇಳಿಕೆಯನ್ನು ಬಲವಾಗಿ ವಿರೋಧಿ­ಸಿದರು. ಬಿಜೆಪಿ ಸಚಿವರಿಗೆ ಕಾಂಗ್ರೆಸ್‌ ಸದಸ್ಯರಾದ ಧ್ರುವನಾರಾಯಣ, ಡಿ.ಕೆ. ಸುರೇಶ್‌, ಮುದ್ದಹನುಮೇಗೌಡ, ಬಿ.ವಿ. ನಾಯಕ್‌ ದನಿಗೂಡಿಸಿದರು.

ಕಾವೇರಿ ವಿವಾದ ಸುಪ್ರೀಂ ಕೋರ್ಟ್‌ ಮುಂದಿದ್ದು, ಸದನದಲ್ಲಿ ಚರ್ಚೆ ಮಾಡುವುದರಿಂದ ನ್ಯಾಯಾಲಯದ ಹಕ್ಕಿಗೆ ಚ್ಯುತಿ ಉಂಟುಮಾಡಿದಂತಾ­ಗುತ್ತದೆ. ಈ ಹಿನ್ನೆಲೆಯಲ್ಲಿ ತಂಬಿದುರೈ ಹೇಳಿಕೆಯನ್ನು ದಾಖಲೆಯಿಂದ ತೆಗೆದು­ಹಾಕಬೇಕೆಂದು ಅನಂತ ಕುಮಾರ್‌ ಆಗ್ರಹಿಸಿದರು.

ಸ್ಪೀಕರ್‌ ಪೀಠದಲ್ಲಿದ್ದ ಅರ್ಜುನ್‌ ಚರಣ್‌ ಸೇಠಿ, ಎಐಎಡಿಎಂಕೆ ನಾಯಕರ ಹೇಳಿಕೆಯನ್ನು ಪರಿಶೀಲಿಸಿ ನ್ಯಾಯಾಲಯದ ಹಕ್ಕಿಗೆ ಚ್ಯುತಿ ಬರುವುದಾದರೆ ದಾಖಲೆಯಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT