ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ಸೊರಗಿದ ಕ್ರೀಡಾಂಗಣ

Last Updated 24 ಜುಲೈ 2014, 10:24 IST
ಅಕ್ಷರ ಗಾತ್ರ

ದೇವನಹಳ್ಳಿ: ಮುರಿದಿರುವ ಬಾಗಿಲು, ಮೈದಾನದಲ್ಲಿ ಬೆಳೆದಿರುವ ಗಿಡಗಂಟಿ, ಕೊಚ್ಚಿ ಹೋಗಿರುವ ಟ್ರ್ಯಾಕ್ ಮೇಲಿನ ಮಣ್ಣು, ಮೈದಾನದ ಮಧ್ಯೆ ಉಳಿದು­ಕೊಂಡಿರುವ ವಿದ್ಯುತ್ ಕಂಬಗಳು, ಅನೈತಿಕ ಚಟುವಟಿಕೆಗೆ ಸಾಕ್ಷಿಯಾಗಿ ಕಾಣುವ ವಿವಿಧ ವಸ್ತುಗಳು.

ಇಲ್ಲಿನ ತಾಲ್ಲೂಕು ಕೇಂದ್ರದಲ್ಲಿರುವ ಏಕೈಕ ಕ್ರೀಡಾಂಗಣದ ದುಸ್ಥಿತಿ ಇದು. 15 ತಿಂಗಳ ಹಿಂದೆ ಉದ್ಘಾಟನೆಗೊಂಡ ಕ್ರೀಡಾಂಗಣ ಸಮರ್ಪಕ ನಿರ್ವಹಣೆ ಇಲ್ಲದೆ ಕ್ರೀಡಾ ಚಟುವಟಿಕೆಗಳಿಗೆ ಸದು­ಪಯೋಗವಾಗದೆ ಅನೈತಿಕ ಚಟುವಟಿಕೆ­ಗಳ ಕೇಂದ್ರವಾಗುತ್ತಿದೆ.

ಬಹುನಿರೀಕ್ಷಿತ ಕ್ರೀಡಾಸಕ್ತರ ಆಶಯ­ದಂತೆ ಇಲ್ಲಿನ ಪ್ರಥಮ ದರ್ಜೆ ಕಾಲೇಜು ಬಳಿ ನಿರ್ಮಾಣಗೊಂಡಿರುವ ತಾಲ್ಲೂ­ಕಿನ ಏಕೈಕ ಉತ್ತಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಮತ್ತು ಆಶಯ ದೊಂದಿಗೆ 20 ಎಕರೆ ವಿಸ್ತೀರ್ಣದಲ್ಲಿ ₨ 74 ಲಕ್ಷ ವೆಚ್ಚದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ಅನುದಾನದಲ್ಲಿ ನಿರ್ಮಿಸ­ಲಾಗಿದೆ. ಕಳೆದ ವಿಧಾನಸಭೆ ಚುನಾ­ವಣೆಗೂ ಮುನ್ನ ತರಾತುರಿ ಯಲ್ಲಿ ಈ ಕ್ರೀಡಾಂಗಣ ವನ್ನು ಉದ್ಘಾಟನೆ ಮಾಡ­ಲಾಗಿತ್ತು. ಆದರೆ, ಕ್ರೀಡಾಂಗಣದ ಸ್ಥಿತಿ­ಗತಿಯ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದುವರೆಗೂ ಗಮನ ಹರಿಸುತ್ತಿಲ್ಲ ಎಂದು ಹಿರಿಯ ಕ್ರೀಡಾ­ಪಟುಗಳು ದೂರುತ್ತಾರೆ.

ಕ್ರೀಡಾಂಗಣದಲ್ಲಿ ಅಳವಡಿಸಿರುವ ‘ಸ್ಟ್ಯಾಂಡರ್ಡ್ ಟ್ರ್ಯಾಕ್’ ವ್ಯಾಪ್ತಿಯಲ್ಲಿ ಹಾದುಹೋಗಿರುವ ವಿದ್ಯುತ್ ಕಂಬ­ಗಳನ್ನು ಇದುವರೆಗೂ ಸ್ಥಳಾಂತರ­ಗೊಂಡಿಲ್ಲ. ನಿರ್ಮಿಸಿರುವ ಟ್ರ್ಯಾಕ್‌ಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಕೆಲ ದಿನಗಳ ಹಿಂದೆ ಸುರಿದ ಅಲ್ಪಸ್ವಲ್ಪ ಮಳೆಗೆ ಟ್ರ್ಯಾಕ್ ಮೇಲಿನ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ  ಟ್ರ್ಯಾಕ್‌ಗೆ ಅಳ­ವಡಿಸಿ­ರುವ ಕಲ್ಲು ಮತ್ತು ಇಟ್ಟಿಗೆ ಚೂರು­ಗಳು ಅಭ್ಯಾಸ ನಿರತ ಕ್ರೀಡಾ ಪಟುಗಳ ಪಾಲಿಗೆ ಮುಳ್ಳಾಗಿ ಪರಿಣಮಿ­ಸಿವೆ. ಟ್ರ್ಯಾಕ್‌ನಿಂದ ಹೊರ ಹರಿಯುವ ನೀರು ಸರಾಗವಾಗಿ ಇತರೆಡೆ ಹರಿ­ಯಲು ವ್ಯವಸ್ಥೆಯಾಗಿಲ್ಲ ಎಂಬುದು ಕ್ರೀಡಾ­ಪಟುಗಳ ದೂರು.

ಕ್ರೀಡಾಂಗಣದ ಒಂದು ಬದಿಯಲ್ಲಿ ನಿರ್ಮಾಣವಾಗಿರುವ ಪೆವಿಲಿಯನ್ ಹಿಂಬದಿಯಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೊಠಡಿ ನಿರ್ಮಿಸ­ಲಾಗಿದೆ. ಆದರೆ ನೀರಿನ ವ್ಯವಸ್ಥೆ­ಯಾಗಿಲ್ಲ. ಯಾವುದೇ ಕೊಠಡಿಗಳಿಗೆ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲ. ಬಾಗಿಲು ಕಿಟಕಿಗಳನ್ನು ಕಿಡಿಗೇಡಿಗಳು ಮುರಿದಿದ್ದು, ಅನೈತಿಕ ಚಟುವಟಿಕೆಗೆ ಕುರುಹುಗಳಾಗಿ ಮದ್ಯದ ಬಾಟಲಿಗಳು ಇತರೆ ಪರಿ­ಕರಗಳು ಸಾಕ್ಷಿಯಾಗಿ ಕಾಣುತ್ತವೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ, ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ­ರುವ ಮತ್ತು ಭಾಗವಹಿಸುತ್ತಿರುವ ಅನೇಕ ಪ್ರತಿಭಾನ್ವಿತ ಕ್ರೀಡಾ ಪಟುಗಳಿ­ದ್ದಾರೆ. ರಾಜ್ಯಮಟ್ಟದಲ್ಲಿ ವಿವಿಧ ಕ್ರೀಡೆ­ಗಳಲ್ಲಿ ಭಾಗವಹಿಸಿ ಪದಕಗಳನ್ನು ಕೊರ­ಳಿಗೆ ಹಾಕಿಸಿ ಕೊಂಡವರ ಆಟ­ಗಾರ ರಿ­ಗೇನು ಕೊರತೆಯಿಲ್ಲ. ಆದರೆ. ಕ್ರೀಡಾ­ಪಟುಗಳಿಗೆ ಮೂಲ­ಸೌಕರ್ಯ­ಗಳನ್ನು ಕಲ್ಪಿಸದಿದ್ದರೆ ಪ್ರತಿನಿತ್ಯ ಅಭ್ಯಾಸ ಮಾಡು­ವುದು ಹೇಗೆ ಎಂದು ಸ್ಥಳೀ ಯರು ಪ್ರಶ್ನಿಸುತ್ತಾರೆ.

ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ವಿಶ್ವವಿದ್ಯಾ­ಲ­ಯದ ಅಂತರ ವಿಶ್ವವಿದ್ಯಾನಿಲಯ ಕ್ರೀಡೆ­ಗಳು ವಾರ್ಷಿಕ ನಿರಂತರ ವಾಗಿ­ರುತ್ತವೆ. ಜತೆಗೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ‘ಪೈಕಾ’ ಹಾಗೂ ದಸರಾ ಕ್ರೀಡಾಕೂಟ ಎಲ್ಲಾ ವಯೋಮಾ ನದಲ್ಲಿ ನಡೆಸ­ಲಾಗು­ತ್ತಿದೆ. ಪ್ರಮುಖವಾಗಿ ಸಾರ್ವ­ಜನಿಕ ಶಿಕ್ಷಣ ಇಲಾಖೆ ನಡೆಸುವ ವಾರ್ಷಿಕ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡೆ ಗಳಿಗಾಗಿ ಶಾಲೆಗಳಲ್ಲಿ ಪೂರ್ವ ತರಬೇತಿ ನಡೆಸಲಾಗುತ್ತಿದೆ.

ಪ್ರಸಕ್ತ ಸಾಲಿನ ಜುಲೈ ಕೊನೆಯ ವಾರ­ದಲ್ಲಿ ಹೋಬಳಿ ಮಟ್ಟದ ಕ್ರೀಡೆಗಳು ಆರಂಭ­ಗೊಳ್ಳಲಿವೆ. ಆದರೆ, ಸಾರ್ವ­ಜನಿಕರ ಬಳಕೆಗೆ ಲಕ್ಷಾಂ ತರ ರೂಪಾಯಿ ವೆಚ್ಚ ಮಾಡಿ ನಿರ್ಮಿ­ಸಿದ ಕ್ರೀಡಾಂಗಣ ಸಕಾಲದಲ್ಲಿ ಕ್ರೀಡಾ ಚಟುವಟಿಕೆಗೆ ಬಳಕೆಯಾಗ­ದಿದ್ದರೆ ಇದನ್ನು ನಿರ್ಮಿ­ಸಿಯೂ ಪ್ರಯೋ­ಜನ­ವಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT