ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಗೆ ‘ನಾಳೆ ಬರೆದ ಕಥೆಗಳು’

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ತೆರಿಗೆ ಮುಖ್ಯ ಆಯುಕ್ತರ ಹುದ್ದೆಯಿಂದ ಬುಧವಾರ ನಿವೃತ್ತವಾಗಲಿರುವ ಕಥೆಗಾರ ಕೆ. ಸತ್ಯನಾರಾಯಣ, ಕಥೆ ಹಾಗೂ ಪ್ರಬಂಧ ಒಳಗೊಂಡ ಎರಡು ಹೊಸ     ಕೃತಿಗಳನ್ನು ಮಂಗಳವಾರ ಓದುಗರಿಗೆ ನೀಡುವ ಮೂಲಕ ನಿವೃತ್ತ ಜೀವನಕ್ಕೆ ವಿಭಿನ್ನ ಮುನ್ನುಡಿ ಬರೆದರು.

ಆದಾಯ ತೆರಿಗೆ ಕ್ರೀಡಾ ಮತ್ತು ಮನರಂಜನಾ ಕೂಟ ಹಾಗೂ ಅಭಿನವ ಪ್ರಕಾಶನ ಜತೆಯಾಗಿ ಸತ್ಯನಾರಾಯಣ ಅವರ ‘ನಾಳೆ ಬರೆದ ಕಥೆಗಳು’ ಮತ್ತು ‘ನಮ್ಮ ಮಕ್ಕಳೇ ಚರಿತ್ರೆ ಬರೆದರೆ’ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಡಿಸಿದ್ದವು. ಜತೆಗೆ ಅವರಿಗೊಂದು ಆತ್ಮೀಯ ಸನ್ಮಾನವೂ ಇತ್ತು.
ಬೆಂಗಳೂರು ವೃತ್ತದ ಮತ್ತೊಬ್ಬ ಆದಾಯ ತೆರಿಗೆ ಮುಖ್ಯ ಆಯುಕ್ತರಾದ ನೂತನ್‌ ಒಡೆಯರ್‌ ಕೃತಿಗಳನ್ನು ಬಿಡುಗಡೆ ಮಾಡಿದರು.
 

ಬಿಡುಗಡೆಯಾದ ಕೃತಿಗಳು
ನಾಳೆ ಬರೆದ ಕಥೆಗಳು (ಆಯ್ದ ಕಥೆಗಳು)
ಬೆಲೆ: ₨ 150, ಪುಟಗಳು: 168
ನಮ್ಮ ಮಕ್ಕಳೇ ಚರಿತ್ರೆ ಬರೆದರೆ... (ಆಯ್ದ ಪ್ರಬಂಧಗಳು)
ಬೆಲೆ: ₨ 75, ಪುಟಗಳು: 128
ಲೇಖಕರು: ಕೆ.ಸತ್ಯನಾರಾಯಣ
ಪ್ರಕಾಶಕರು: ಅಭಿನವ ಪ್ರಕಾಶನ

‘ಸರ್ಕಾರದ ಸೇವೆಯಲ್ಲಿ ಇರುವಾಗ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯವೇ ಇರುವುದಿಲ್ಲ. ಬಹುತೇಕ ಅಧಿಕಾರಿಗಳು ದಿನಚರಿಯಲ್ಲೇ ಸುಸ್ತು ಹೊಡೆಯುತ್ತಾರೆ. ಸತ್ಯನಾರಾಯಣ ಅವರಿಗೆ ಇಷ್ಟೆಲ್ಲ ಬರೆಯಲು ಹೇಗೆ ಸಾಧ್ಯವಾಯಿತು’ ಎಂದು ಅವರು ಬೆರಗುಪಟ್ಟರು.

‘ನಾವು ಚಿಕ್ಕವರಿದ್ದಾಗ ಪೋಸ್ಟ್‌ಮ್ಯಾನ್‌ಗೆ ಕಾಯುತ್ತಿದ್ದೆವು. ಈಗ ಪತ್ರ ಬರೆಯುವ ಅಭ್ಯಾಸವೇ ಇಲ್ಲ. ಹಿಂದೆ ಟ್ಯೂಷನ್‌ಗೆ ಹೋಗುವವರು ದಡ್ಡರು ಎನ್ನುತ್ತಿದ್ದರು. ಈಗ ಟ್ಯೂಷನ್‌ಗೆ ಹೋಗದ ವಿದ್ಯಾರ್ಥಿಗಳು ಸಿಗುವುದೇ ಅಪರೂಪ. ನಮ್ಮನ್ನು ಕಾಡುವ ಇಂತಹ ಸಂಗತಿಗಳು ಅವರನ್ನೂ ಕಾಡಿದ್ದು, ಅವರ ಕಥೆಗಳಲ್ಲಿ ಅದು ವ್ಯಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕೃತಿಗಳನ್ನು ಪರಿಚಯಿಸಿದ ಕಿರುತೆರೆ ನಿರ್ದೇಶಕಿ ಪಲ್ಲವಿ ಕಾರಂತ್‌, ‘ಸಾಮಾಜಿಕ ಮನ್ವಂತರಗಳೇ ಸತ್ಯನಾರಾಯಣ ಅವರ ಕಥಾವಸ್ತುವಾಗಿದ್ದು, ಈ ಕಥೆಗಾರನಲ್ಲೊಬ್ಬ ಸಮಾಜಶಾಸ್ತ್ರಜ್ಞ ಇದ್ದಾನೆ’ ಎಂದು ಹೇಳಿದರು.

ಮತ್ತೊಬ್ಬ ಅತಿಥಿಯಾಗಿ ಪಾಲ್ಗೊಂಡಿದ್ದ ದೇವಿಕಾರಾಣಿ ರೋರಿಕ್‌ ಎಸ್ಟೇಟ್‌ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮನು ಬಳಿಗಾರ, ‘ಗ್ರಾಮೀಣ ಸಂವೇದನೆ ಹೊಂದಿದ ಸತ್ಯನಾರಾಯಣ ಮಾನವೀಯ ಮಿಡಿತದ ಬರಹಗಾರ’ ಎಂದು ಕೊಂಡಾಡಿದರು. ‘ನಿವೃತ್ತಿ ಬಳಿಕ ಅವರ ಸಾಹಿತ್ಯ ಕೃಷಿ ಮತ್ತಷ್ಟು ಹೆಚ್ಚಲಿದೆ’ ಎಂದು ಆಶಿಸಿದರು. ಅಭಿನವ ಪ್ರಕಾಶನದ ರವಿಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT