ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶಾಚರಿಯ ಹೊಸ ವರ್ಷ

Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಕೈಜಾರುತ್ತಿರುವ ವರ್ಷದ ಪುಕ್ಕಗಳೆಲ್ಲಾ ಉದುರಿ ಹೊಸ ವರ್ಷದ ಗರಿ ಮೂಡುತ್ತಿರುವ ಕ್ಷಣಗಳಿವು. ಕಾಲ ಒಂದು ಸುತ್ತು ಬಂದು 2015 ಉರುಳಿ, 2016 ಮೇಲೇಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಈ ವರ್ಷದಲ್ಲಿ ಆದದ್ದನ್ನೆಲ್ಲಾ ಮೆಲುಕು ಹಾಕಿ ಮುಂದೆ ಆಗಬೇಕಾದುದ್ದನ್ನೆಲ್ಲಾ ಕನಸು ಕಾಣುವ ಅಮೂಲ್ಯ ಗಳಿಗೆಗಳಿವು. ಒಂದೆಡೆ ಪಂಚಾಂಗದ ಹೊಸ ಯುಗವನ್ನೂ ಮತ್ತೊಂದೆಡೆ ಕ್ಯಾಲೆಂಡರ್‌ನ ಹೊಸ ವರ್ಷವನ್ನೂ ಸಮಚಿತ್ತದಿಂದ ಬರಮಾಡಿಕೊಳ್ಳುವುದಕ್ಕೆ ಸರಿಸುಮಾರು ನಾವೆಲ್ಲರೂ ಒಗ್ಗಿಹೋಗಿದ್ದೇವೆ.

ಕಳೆದು ಹೋಗುತ್ತಿರುವ ವರ್ಷದ ಕೊನೆಗಳಿಗೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಂತೋಷ ಪಟ್ಟು, ಅಷ್ಟೇ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಆ ಕ್ಷಣಗಳನ್ನು ಕುಣಿದು ಕುಪ್ಪಳಿಸಿ ಕೇಕೆ ಹಾಕಿ ಸಂಭ್ರಮಿಸುವುದು ಎಲ್ಲರಿಗೂ ಸಾಧ್ಯವಿಲ್ಲವೇನೊ...

ಶಾಂಪೇನ್ ಚಿಮ್ಮಿಸಿ, ರಸ್ತೆಯಲ್ಲಿ ಕೇಕೆ ಹಾಕುತ್ತಾ ಬೈಕ್‌ನಲ್ಲಿ ಜಾಲಿರೈಡ್‌ ಮಾಡುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಕೆಲವರಿಗಷ್ಟೇ ಸಾಧ್ಯ. ಕೇಕ್‌ ಕತ್ತರಿಸಿ, ಅಕ್ಕಪಕ್ಕ ಇದ್ದವರ ಮುಖಕ್ಕೆಲ್ಲಾ ಬಳಿಯುವುದು ಸಹ ಇನ್ನೊಂದಿಷ್ಟು ಮಂದಿಗೆ ಸಾಧ್ಯ.

ಆದರೆ ತಡರಾತ್ರಿ ದುಡಿಯುವವರಿಗೆ ಇದೆಲ್ಲವೂ ಒಂದು ಶುಭಾಶಯಕ್ಕಷ್ಟೇ ಸೀಮಿತವಾಗಿರುತ್ತದೆ. ಹೆಚ್ಚೆಂದರೆ ಅವರೂ ಒಂದು ಕೇಕ್ ಕತ್ತರಿಸಬಹುದಷ್ಟೆ. ಆದರೆ ಒಂದು ದಿನದ ಜಾಗರಣೆಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವವರಿಗಿಂತ ವಿಭಿನ್ನ ಅನುಭವ ನಿಶಾಚರಿಗಳದ್ದು.

ವಿದ್ಯಾರ್ಥಿ ದಿನಗಳಲ್ಲಿ ಕೈಲಿ ಹಿಡಿದ ಕಥೆ ಕಾದಂಬರಿಗಳ ಕೊನೆಯ ಪುಟ ಮುಗಿಯುವವರೆಗೂ ಮನೆಯ ದೀಪ ಉರಿಯಲೇಬೇಕು. ಕಗ್ಗತ್ತಲಲ್ಲಿ ಕುಳಿತು ತಮ್ಮ ನೆಚ್ಚಿನ ಬರಹಗಾರರ ಕಥಾ ಪ್ರಪಂಚದಲ್ಲಿ ಮುಳುಗುವುದರ ಸವಿ ಸವಿದವರಿಗೇ ಗೊತ್ತು. ಇದೂ ಒಂದು ರೀತಿಯ ನಿಶಾಚರಿತ್ವವೇ. ಹೊಸ ವರ್ಷ ಘಟಿಸುವ ಸಂಕ್ರಮಣ ಕಾಲದಲ್ಲೂ ವಿದ್ಯಾರ್ಥಿ ನಿಶಾಚರಿಗಳ ಸಂಭ್ರಮಕ್ಕೆ ಪುಸ್ತಕಗಳೇ ಸಾಕ್ಷಿಯಾಗಬೇಕು.

ಆದರೂ ಆ ಕ್ಷಣದಲ್ಲೇನೋ ಕಳವಳ. ಮನೆಯ ಗಡಿಯಾರ ಸರಿಯಾಗಿ ಓಡುತ್ತಿದೆಯೇ ಅಥವಾ ಬ್ಯಾಟರಿ ಮುಗಿದು ನಿಂತೇ ಬಿಟ್ಟಿದೆಯೇ ಅಥವಾ ಬೆಳಿಗ್ಗೆ ಬೇಗ ಏಳಬೇಕು ಎಂದು ಗಡಿಯಾರವನ್ನು ಫಾಸ್ಟ್‌ ಮಾಡಿದ್ದರೆಯೇ ಮೊದಲಾದ ಆತಂಕಗಳೆಲ್ಲಾ ಒದ್ದುಕೊಂಡು ಬರುತ್ತವೆ. ಮತ್ತೆ ಮತ್ತೆ ಗಡಿಯಾರವನ್ನು ತಿರುಗಿ ನೋಡುವುದರಿಂದ ದೃಷ್ಟಿ ಹಾಯಿಸಿದೆಡೆಯೆಲ್ಲಾ ಗಡಿಯಾರವೇ ಕಣ್ಣಿಗೆ ಬೀಳುತ್ತದೆ.

ಅದು ಗೋಡೆ ಇರಬಹುದು, ತೊಡೆ ಮೇಲೆ ಕುಳಿತ ಪುಸ್ತಕದ ಪುಟದಲ್ಲೂ ಗಡಿಯಾರದ ಮಿಡಿಯುತ್ತಿರುವ ಮುಳ್ಳುಗಳೇ ಕಾಣುತ್ತವೆ. ಅಂತೂ ಆ ಕ್ಷಣ ಬಂದೇ ಬಿಡುತ್ತದೆ. ಮೊಬೈಲ್‌ಗಳಲ್ಲಿನ ಡಿಜಿಟಲ್ ಗಡಿಯಾರಗಳ ವೇಗಕ್ಕೂ ಗೋಡೆ ಮೇಲಿನ ಮೆಕ್ಯಾನಿಕಲ್ ಗಡಿಯಾರದ ವೇಗಕ್ಕೂ ಒಂದೆರಡು ಕ್ಷಣಗಳ ವ್ಯತ್ಯಾಸವಿದ್ದರೂ ಹೊಸ ವರ್ಷಕ್ಕೆ ಕಾಯುತ್ತಿರುವವರು ಆ ಅಂತರದ ನಡುವೆ ನಿಟ್ಟುಸಿರು ಬಿಟ್ಟಾಗಿರುತ್ತದೆ. ಕೇಕೆ ಹಾಕುವಂತಿಲ್ಲ. ಮಲಗಿದವರೆಲ್ಲಾ ಎದ್ದು ಹೊಸ ವರ್ಷದಂದೇ ಉಗಿದರೆ. ಕೇಕೆ ಹಾಕಬೇಕೆಂಬ ಅದಮ್ಯ ಬಯಕೆಯನ್ನು ಅದುಮಿಟ್ಟುಕೊಂಡೇ ಪುಸ್ತಕವನ್ನು ಹಾಸಿಗೆಯ ವಶಕ್ಕೆ ನೀಡಿ, ಎದ್ದು, ಮೈ ಕೈ ಸಡಿಲಿಸಿ, ಇರುವ ನಾಲ್ಕಡಿ ಜಾಗದಲ್ಲೇ ಒಂದೆರಡು ಸುತ್ತು ಹಾಕುವುದು.

ಇನ್ನು ನಗರ- ಪಟ್ಟಣ ಪ್ರದೇಶಗಳಲ್ಲಿ ಇದ್ದರಂತೂ, ನಮ್ಮ ಚಡಪಡಿಕೆಗೆ ಹಿನ್ನೆಲೆ ಸಂಗೀತವಾಗಿ ಪಟಾಕಿಗಳು ಸಿಡಿಯುವ ಸದ್ದು ಕೇಳುತ್ತದೆ. ಅಲ್ಲಿಗೆ ಹೊಸ ವರ್ಷ ಬಂದಾಯ್ತು ಎಂದು ಖಾತರಿಯಾಗುತ್ತದೆ. ಅದರ ಹಿಂದೆಯೇ ಅಕ್ಕಪಕ್ಕದ ಮನೆಯ, ಎದುರು ಬೀದಿಯ ಯಾರೋ ನಾಲ್ಕಾರು ಜನ ರಸ್ತೆಗಿಳಿದು ಕೂಗು ಹಾಕುತ್ತಾರೆ. ಮತ್ತೊಂದೆಡೆ ಬೈಕುಗಳು ಅರಚುತ್ತಿರುವ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಅದು ಮನೆಯನ್ನು ಸಮೀಪಿಸಿ ದೂರ ಹೋದುದರ ಹಿಂದೆಯೇ ಅವನ್ನು ಅರಚಿಸುತ್ತಿರುವವರ ಅರಚುವಿಕೆಯೂ ಕೇಳುತ್ತದೆ.

ಇದಾದ ಕೆಲವೇ ಕ್ಷಣಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಕೈಗೆತ್ತಿಕೊಂಡು ಆಪ್ತರಿಗೆ ಹೊಸ ವರ್ಷದ ಶುಭಾಶಯ ಕಳುಹಿಸುವುದು. ಅದರ ಜತೆಯಲ್ಲೇ ಯಾರ‍್ಯಾರ ಮೆಸೇಜುಗಳು ಬಂದಿವೆ ಎಂದು ತಡಕಾಡುವುದು. ಬೇಕಿದ್ದವರ ಮೆಸೇಜುಗಳಿಗಿಂತ ಇತರರ ಮೆಸೇಜುಗಳೇ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್ ಇನ್‌ಬಾಕ್ಸ್‌ಗಳಲ್ಲಿ ತುಂಬಿ ಹೋಗಿರುತ್ತವೆ. ಬೇಕಿದ್ದವರ ಮೆಸೇಜ್ ಬಂದ ನಂತರವೇ ಮನಸ್ಸಿಗೆ ಸಮಾಧಾನ.

ಇದೂ ಮುಗಿದ ಮೇಲೆ ನಮಗೆ ಮೊದಲ ಶುಭಾಶಯ ತಿಳಿಸಿದವರು ಯಾರು ಎಂದು ಲೆಕ್ಕ ಹಾಕುವುದು, ನಮ್ಮ ಆಪ್ತರಿಗೆ ನಮ್ಮದೇ ಮೊದಲ ಸಂದೇಶವಿರಬೇಕೆಂದು ಊಹೆ ಮಾಡುವುದು ನಡೆದಿರುತ್ತದೆ. ಇಷ್ಟೆಲ್ಲಾ ಆಗುವಾಗ ಅಪ್ಪನೋ ಅಮ್ಮನೋ ನಿದ್ದೆಯಲ್ಲೇ ಕೆಮ್ಮಿ ಗಂಟಲು ಸರಿ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ಬೆಳಗು ಸಮೀಪವಿದೆ ಎಂದು ಅರ್ಥ. ಎಲ್ಲವನ್ನೂ ಒಪ್ಪವಾಗಿ ಎತ್ತಿಟ್ಟು, ದೀಪ ಆರಿಸಿ ಮಲಗುವ ಸಮಯ ಬಂದಿರುತ್ತದೆ. ಬೆಡ್‌ಶೀಟ್‌ ಹೊದ್ದಾಗಲೂ ಇನ್ಯಾರದ್ದಾದರೂ ಮೆಸೇಜ್ ಬಂದಿದೆಯೇ ಎಂದು ನೋಡುವುದೂ ನಡೆಯುತ್ತದೆ.

ವರ್ಷಗಳ ಹಿಂದೆ ಹೊಸ ವರ್ಷದ ಮೆಸೇಜುಗಳ ಕಥೆ ಬೇರೆಯೇ ಇತ್ತು. ಹಬ್ಬ ಹರಿದಿನಗಳಲ್ಲಿ ಉಚಿತ ಮೆಸೇಜ್ ಸೌಲಭ್ಯಕ್ಕೆ ಕಡಿವಾಣ. ಪ್ರತೀ ಮೆಸೇಜಿಗೂ ಒಂದೊಂದು ರೂಪಾಯಿ ತೆರಬೇಕು. ಹೀಗಾಗಿ ಹೊಸ ವರ್ಷಕ್ಕಿಂತ ಒಂದೆರಡು ದಿನ ಮೊದಲೇ ‘ಹ್ಯಾಪಿ ನ್ಯೂ ಇಯರ್ ವಿಶಸ್ ಇನ್ ಅಡ್ವಾನ್ಸ್’ ಎಂದು ಗೆಳೆಯರು ದಿನಕ್ಕೆ ಇಪ್ಪತ್ತು ಮೆಸೇಜು ಕಳಿಸುವುದು ನಡೆಯುತ್ತಿತ್ತು. ಹೊಸ ವರ್ಷ ಬರುವ ಕೆಲವು ಕ್ಷಣಗಳವರೆಗೂ ಇನ್‌ಬಾಕ್ಸ್‌ಗೆ ಇಂತಹ ಮೆಸೇಜುಗಳೇ ಬಂದು ಬೀಳುತ್ತಿದ್ದವು.

ಆದರೆ ಹೊಸ ವರ್ಷಕ್ಕೆ ಕಾಲಿಟ್ಟ ತಕ್ಷಣ ಮೆಸೇಜುಗಳು ಬಂದ್. ಅಪ್ಪಿತಪ್ಪಿಯೂ ಒಂದು ಮೆಸೇಜ್ ಬರುವುದಿಲ್ಲ. ಹೇಗಾದರೂ ಮಾಡಿ ಮೆಸೇಜ್ ಕಳಿಸಬೇಕಲ್ಲ. ತಿಂಗಳ ಪಾಕೆಟ್‌ ಮನಿಯಲ್ಲಿ ಉಳಿಸಿದ್ದ ಹಣದಲ್ಲೇ 30 ರೂಪಾಯಿಯ ರೀಚಾರ್ಜ್ ಮಾಡಿಸಿ ಆಪ್ತರಿಗೆ ಹೊಸವರ್ಷದಂದೂ ಮೆಸೇಜು ಕಳುಹಿಸುವ ಸಂಭ್ರಮವೇ ಬೇರೆಯಾಗಿತ್ತು. ಅದನ್ನು ಈಗ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳು ಕಸಿದುಕೊಂಡಿವೆ.

ಇರಲಿ, ಇವು ವಿದ್ಯಾರ್ಥಿಗಳ ಕಥೆಯಾಯಿತು. ಇನ್ನು ತಡರಾತ್ರಿಯೆಲ್ಲಾ ದುಡಿಯುವವರದ್ದು ಬೇರೆ ಕಥೆ. ಹೊರಗಡೆ ಮಂದಿ ಹೇಗೆಲ್ಲಾ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡುವ ತವಕ ಅವರದ್ದು. ಹೆಗಲ ಮೇಲಿನ ಕೆಲಸದ ಒತ್ತಡವನ್ನು ಒಂದೆರಡು ನಿಮಿಷ ಕೆಳಗಿಳಿಸಿ, ರಸ್ತೆಯೆಡೆಗೆ ಇಣುಕು ಹಾಕುವುದು ನಡೆದೇ ಇರುತ್ತದೆ. ಇತರರ ಸಂಭ್ರಮವನ್ನೇ ಸಂಭ್ರಮಿಸುತ್ತಾ ಅಥವಾ ಕರುಬುತ್ತ ಮರಳಿ ತಮ್ಮ ಕುರ್ಚಿಗಳಲ್ಲಿ ಕುಳಿತು ಕೆಲಸವನ್ನು ಹೆಗಲ ಮೇಲೆ ಹೊತ್ತುಕೊಳ್ಳಬೇಕು. ಇದೂ ಮುಗಿದ ಮೇಲೆ ಮನೆ ಮುಟ್ಟುವ ತವಕ.

ಕುಡಿದು ರಸ್ತೆಯಲ್ಲೆಲ್ಲಾ ಸರ್ಕಸ್ ಮಾಡುತ್ತಿರುವವರಿಗೆ ಗುದಿಯದಂತೆ, ಬೀದಿಯನ್ನೇ ರೇಸ್‌ ಟ್ರಾಕ್ ಮಾಡಿಕೊಂಡಿರುವ ಡ್ರಾಗ್‌ ರೇಸರ್‌ಗಳಿಂದ ಗುದಿಸಿಕೊಳ್ಳದಂತೆ ಬೈಕ್ ಓಡಿಸಿಕೊಂಡು ಮನೆ ತಲುಪುವಷ್ಟರಲ್ಲಿ ಸಾಕಾಗಿರುತ್ತದೆ. ಮನೆಯಲ್ಲಿ ಯಾರೂ ಎದ್ದಿರದಿದ್ದನ್ನು ನೋಡಿ ಅಥವಾ ಅವರು ಉಳಿಸಿ ಬಿಟ್ಟಿರುವ ಕೇಕನ್ನು ತಿಂದು ಮಲಗುವಲ್ಲಿಗೆ ನಿಶಾಚರಿಗಳ ಹೊಸ ವರ್ಷಾಚರಣೆ ಮುಗಿದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT