ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಠೇವಣಿ ಮಾಡಲು ಇದು ಸುಸಮಯ

ಜಲ ಸ್ವಾವಲಂಬನೆಗೆ ಮಳೆ ನೀರು ಸಂಗ್ರಹ
Last Updated 24 ಜೂನ್ 2016, 20:31 IST
ಅಕ್ಷರ ಗಾತ್ರ

ಅಂತರ್ಜಲ ಮರುಪೂರಣ
ಮಳೆ ನೀರಿನ ಸದ್ಬಳಕೆಯ ಮತ್ತೊಂದು ವಿಧಾನ ಅಂತರ್ಜಲ ಮರುಪೂರಣ. ಗ್ರಾಮೀಣ ಪ್ರದೇಶಗಳಲ್ಲಾದರೆ ಇಂಗುಗುಂಡಿಗಳನ್ನು ತೋಡಿ ಮಳೆ ನೀರು ಅಂತರ್ಜಲ ಸೇರುವಂತೆ ಮಾಡಬಹುದು. ಜತೆಗೆ ಬತ್ತಿದ ತೆರೆದ ಬಾವಿ ಮತ್ತು ಕೊಳವೆ ಬಾವಿಗಳಿದ್ದರೆ ಅವುಗಳಿಗೆ ಮಳೆ ನೀರನ್ನು ಹರಿಸಿ ಅಂತರ್ಜಲ ಮರುಪೂರಣ ಮಾಡಬಹುದು. ಹಾಗೆಯೇ ನಗರದ ಪ್ರದೇಶದಲ್ಲೂ ಅಂತರ್ಜಲ ಮರುಪೂರಣ ಮಾಡಲು ಹೊಸ ವಿಧಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ನೆಲಮಟ್ಟದಿಂದ ಒಂದೆರಡು ಅಡಿ ಕೆಳಗಿರುವಂತೆ ಬ್ಯಾರೆಲ್‌ಗಳನ್ನು ಅಳವಡಿಸಿ ನೀರನ್ನು ಅಂತರ್ಜಲಕ್ಕೆ ಕಳಿಸುವ ವಿಧಾನ ಇದು. ಚಾವಣಿಮತ್ತು ನೆಲದ ಮೇಲೆ ಬಿದ್ದ ನೀರನ್ನೂ ಈ ಬ್ಯಾರೆಲ್‌ಗಳಿಗೆ ಹರಿಸಬಹುದು. ಮೊದಲು ಮೂರು ಬ್ಯಾರೆಲ್‌ಗಳನ್ನು ತೆಗೆದುಕೊಂಡು ಅವುಗಳ ಮೇಲ್ಭಾಗವನ್ನು ಸಂಪೂರ್ಣವಾಗಿ ಕತ್ತರಿಸಬೇಕು. ಪ್ರತೀ ಬ್ಯಾರೆಲ್‌ ತಳಭಾಗದ ಎರಡು ಪಾರ್ಶ್ವಗಳಲ್ಲಿ (ಬ್ಯಾರೆಲ್‌ ಅನ್ನು ನಿಲ್ಲಿಸಿದರೆ ಅದರ ಎಡ ಮತ್ತು ಬಲಭಾಗದಲ್ಲಿ) ರಂಧ್ರಗಳನ್ನು ಕೊರೆಯಬೇಕು. ಮಳೆ ನೀರು ಒಳಬರಲು ಮತ್ತು ಹೊರ ಹೋಗಲು ಅಗತ್ಯವಿರುವ ಕೊಳವೆ ಅಳವಡಿಸಲು ಈ ರಂಧ್ರಗಳು ಉಪಯೋಗವಾಗುತ್ತವೆ.

ನಂತರ ನೆಲದಾಳದಲ್ಲಿ ಕೊರೆದ ತೊಟ್ಟಿಯಲ್ಲಿ ಈ ಬ್ಯಾರೆಲ್‌ಗಳನ್ನು ತಲೆಕೆಳಗಾಗಿ ಇರಿಸಬೇಕು. ಅಂದರೆ ಕತ್ತರಿಸಿರುವ ಭಾಗ ನೆಲಕ್ಕೂ, ರಂಧ್ರವಿರುವ ಭಾಗ ಮೇಲ್ಮುಖವಾಗೂ ಇರಬೇಕು. ಪ್ರತೀ ಕೊಳವೆಯ ನಡುವೆ ಅಂತರವಿರಬೇಕು. ರಂಧ್ರಗಳ ಮೂಲಕ ಒಂದು ಬ್ಯಾರೆಲ್‌ನಿಂದ ಮತ್ತೊಂದು ಬ್ಯಾರೆಲ್‌ಗೆ ಕೊಳವೆ ಅಳವಡಿಸಿ ನೀರು ಹರಿಯುವಂತೆ ಮಾಡಬೇಕು.

ಛಾವಣಿಯಲ್ಲಿ ಬಿದ್ದ ಮಳೆ ನೀರು ಕೊಳವೆ ಮೂಲಕ ಮೊದಲ ಬ್ಯಾರೆಲ್‌ಗೆ ಬರುತ್ತದೆ. ಅದು ತುಂಬಿದ ನಂತರ ಮೇಲ್ಭಾಗದಲ್ಲಿರುವ ಕೊಳವೆಯಿಂದ ಮುಂದಿನ ಬ್ಯಾರೆಲ್‌ಗೆ ನೀರು ಹರಿಯುತ್ತದೆ. ಹೀಗೆ ಮೂರೂ ಬ್ಯಾರೆಲ್‌ಗೂ ನೀರು ತುಂಬಿಕೊಳ್ಳುತ್ತದೆ. ಬ್ಯಾರೆಲ್‌ಗಳ ತಳಭಾಗ ತೆರೆದಿರುವುದರಿಂದ ನೆಲದಾಳಕ್ಕೆ ಮಳೆ ನೀರು ನಿಧಾನವಾಗಿ ಇಂಗುತ್ತದೆ. ರಸ್ತೆ ಬದಿ ಸಿಗುವ ಪ್ಲಾಸ್ಟಿಕ್ ಬ್ಯಾರೆಲ್‌ಗಳನ್ನು ಬಳಸುವುದು ಉತ್ತಮ. ಚಾವಣಿಮತ್ತು ನೆಲದಲ್ಲಿ ಬೀಳುವ ನೀರಿನ ಪ್ರಮಾಣವನ್ನು ಅಧರಿಸಿ ಬ್ಯಾರೆಲ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕೈತೋಟದಲ್ಲಿ, ಕಾರಿಡಾರ್‌ನಲ್ಲಿ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಇಂತಹ ಅಂತರ್ಜಲ ಮರುಪೂರಣ ತೊಟ್ಟಿಗಳನ್ನು ನಿರ್ಮಿಸಬಹುದು.
*
ಚಾವಣಿ ಮಳೆ ನೀರು ಸಂಗ್ರಹಣೆ
ಮಳೆ ನೀರಿನ ಸಂಗ್ರಹದ ಅತ್ಯಂತ ಸುಲಭದ ವಿಧಾನಗಳಲ್ಲಿ ಇದು ಮೊದಲನೆಯದ್ದು. ಕಟ್ಟಡದ ಚಾವಣಿ ಮೇಲೆ ಬೀಳುವ ಮಳೆ ನೀರನ್ನು ಸೋಸಿ ಒಂದೆಡೆ ಸಂಗ್ರಹಿಸುವ ಸರಳ ಪ್ರಕ್ರಿಯೆ ಇದು.

ಮೊದಲು ಕಟ್ಟಡದ ಚಾವಣಿಯ ಅಳತೆಯನ್ನು ಲೆಕ್ಕ ಹಾಕಬೇಕು. ಅದಕ್ಕೆ ಅನುಗುಣವಾಗಿ ಸಿಮೆಂಟ್‌ ತೊಟ್ಟಿ ಅಥವಾ ಪ್ಲಾಸ್ಟಿಕ್‌ ಟ್ಯಾಂಕ್‌ಗಳನ್ನು ನೀರಿನ ಸಂಗ್ರಹಣೆಗೆ ಬಳಸಿಕೊಳ್ಳಬಹುದು. ತೊಟ್ಟಿ ಅಥವಾ ಟ್ಯಾಂಕ್‌ಗಳನ್ನು ನೆಲಮಟ್ಟದಲ್ಲಿ ಅಥವಾ ನೆಲಮಟ್ಟದಿಂದ ಕೆಳಗೂ ಅಳವಡಿಸಿಕೊಳ್ಳಬಹುದು. ಮೊದಲು ಚಾವಣಿಯನ್ನು ಸ್ವಲ್ಪ ಒಂದು ದಿಕ್ಕಿಗೆ ಇಳಿಜಾರಾಗಿ ಇರುವಂತೆ ವ್ಯವಸ್ಥೆ ಮಾಡಬೇಕು. ಹಳೆಯ ಕಟ್ಟಡವಾಗಿದ್ದರೆ ಕಾಂಕ್ರೀಟ್‌ ಪ್ಲಾಸ್ಟ್ರಿಂಗ್ ಬಳಸಿ ಒಂದೆಡೆಯ ವಾಟಾ ಹೆಚ್ಚಿಸಬಹುದು. ಹೀಗಿದ್ದಾಗ ಚಾವಣಿ ಮೇಲೆ ಬಿದ್ದ ಮಳೆ ನೀರು ಒಂದೆಡೆಗೆ ಸರಾಗವಾಗಿ ಹರಿದು ಬರುತ್ತದೆ. ನಂತರ ಪಿವಿಸಿ ಅಥವಾ ಸಿಮೆಂಟ್‌ ಪೈಪ್‌ಗಳನ್ನು ಬಳಸಿ ಆ ನೀರು ಫಿಲ್ಟರ್‌ ತಲುಪುವಂತೆ ಮಾಡಬೇಕು.

ಚಾವಣಿಯ ಮೇಲೆ ಬೀಳುವ ಮಳೆ ನೀರು ಶುದ್ಧವಾಗೇ ಇರುತ್ತದೆ. ಆದರೆ ಛಾವಣಿಯ ಮೇಲೆ ಇರಬಹುದಾದ ದೂಳಿನ ಕಣಗಳು, ಒಣೆಲೆಗಳು ಮತ್ತು ಹಕ್ಕಿಗಳ ಹಿಕ್ಕೆಗಳು ಆ ನೀರಿನೊಂದಿಗೆ ಬೆರೆತಿರುತ್ತವೆ. ಹೀಗಾಗಿ ಮಳೆ ನೀರನ್ನು ಸೋಸುವುದು ಅತ್ಯಗತ್ಯ. ಫಿಲ್ಟರ್ ಸಹ ಛಾವಣಿಯ ವಿಸ್ತೀರ್ಣಕ್ಕೆ ಅನುಗುಣವಾಗಿರಬೇಕು. ಸಣ್ಣ ತೊಟ್ಟಿಯನ್ನು ನಿರ್ಮಿಸಿಕೊಂಡು ಅದರಲ್ಲಿ ತಳಹಂತದಲ್ಲಿ ಬೆಣಚುಕಲ್ಲು, ಅದರ ಮೇಲೆ ಜಲ್ಲಿಕಲ್ಲು ಹಾಗೂ ಅದರ ಮೇಲೆ ಮರಳು ಸುರಿಯಬೇಕು. ಇವುಗಳ ತಳಮಟ್ಟ ಮತ್ತು ಮೇಲ್ಭಾಗ ಸಮತಟ್ಟಾಗಿರಬೇಕು. ಕೊಳವೆಯಿಂದ ಬಂದ ನೀರು ಮರಳು, ಜಲ್ಲಿಕಲ್ಲು ಮತ್ತು ಬೆಣಚುಕಲ್ಲನ್ನು ಹಾದು ಸೋಸಿ ಬರುತ್ತದೆ. ನಂತರ ಫಿಲ್ಟರ್‌ ತೊಟ್ಟಿಯ ತಳಭಾಗದಲ್ಲಿ ಇರುವ ಕೊಳವೆಯ ಮೂಲಕ ಹೊರಗೆ ಬರುತ್ತದೆ. ಆ ನೀರನ್ನು ಸಂಗ್ರಹ ತೊಟ್ಟಿ ಅಥವಾ ಟ್ಯಾಂಕ್‌ಗೆ ಹರಿಸಬೇಕು. ನೀರನ್ನು ಸೋಸಿರುವುದರಿಂದ ಹಲವು ತಿಂಗಳ ಕಾಲ ಅದು ಸಂಗ್ರಹಯೋಗ್ಯವಾಗಿರುತ್ತದೆ.
*
ಕೊಳವೆಬಾವಿ ಮರುಪೂರಣ
ಕೊಳವೆಬಾವಿಗಳಿಗೆ ನೇರ ಹಾಗೂ ಪರೋಕ್ಷವಾಗಿ ಮಳೆನೀರಿನ ಮರುಪೂರಣ ಮಾಡಬಹುದು. ಬತ್ತಿ ಹೋಗಿರುವ ಕೊಳವೆಬಾವಿಗಳಿಗೆ ಮಳೆನೀರನ್ನು ತುಂಬಿಸುವ ಮೂಲಕ ಬತ್ತಿದ ಬಾವಿಯಲ್ಲೂ ನೀರಿನ ಚಿಲುಮೆ ಉಕ್ಕಿಸಲು ಸಾಧ್ಯವಿದೆ.

ಕೊಳವೆಬಾವಿಯಿಂದ ಕನಿಷ್ಠ ಮೂರು ಅಡಿ ದೂರದಲ್ಲಿ ಮರುಪೂರಣದ ಗುಂಡಿ ನಿರ್ಮಿಸಿ. ಈ ಗುಂಡಿಯ ತಳಭಾಗಕ್ಕೆ ಜಲ್ಲಿಕಲ್ಲು ಮತ್ತು ಅದರ ಮೇಲೆ ಮರಳು ಹಾಕಿ. ಮಳೆ ನೀರು ಹರಿದು ಈ ಗುಂಡಿ ಸೇರುವಂತೆ ಮಾಡಿ. ಈ ಗುಂಡಿಯಲ್ಲಿ ಇಂಗಿದ ನೀರು ಕೊಳವೆಬಾವಿಗೆ ಮರುಪೂರಣವಾಗುತ್ತದೆ.
ಮಳೆಗಾಲದಲ್ಲಿ ಇಂಗುಗುಂಡಿಯಲ್ಲಿ ಇಂಗಿದ ನೀರು ಮುಂದೆ ಕೊಳವೆಬಾವಿಯ ನೀರು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ‘ಕೊಳವೆಬಾವಿಯಲ್ಲಿ ನೀರಿದೆಯಲ್ಲ, ಇನ್ನೇಕೆ ಮಳೆನೀರಿನ ಚಿಂತೆ’ ಎಂದು ಮಳೆನೀರನ್ನು ನಿರ್ಲಕ್ಷಿಸುವುದು ಸರಿಯಲ್ಲ.

ಬತ್ತಿದ ಕೊಳವೆಬಾವಿಯ ಕೇಸಿಂಗ್‌ ಪೈಪ್‌ನ ಬುಡದಲ್ಲಿ ಐದಾರು ಅಡಿ ಆಳದ ಗುಂಡಿ ತೋಡಿ, ಕೇಸಿಂಗ್‌ ಪೈಪ್‌ನ ಎರಡು ಮೂರು ಕಡೆ ಸುಮಾರು ಎರಡು ಇಂಚು ಅಗಲದ ರಂಧ್ರ ಮಾಡಿ. ಮಳೆ ನೀರಿನ ಜತೆಗೆ ಮಣ್ಣು, ಕಲ್ಲು ಕೇಸಿಂಗ್‌ ಪೈಪ್‌ ಒಳಕ್ಕೆ ಹೋಗದಂತೆ ಈ ರಂಧ್ರಗಳಿಗೆ ಎರಡು ಮೂರು ಹೊದಿಕೆಯ ಜಾಲರಿ (ಮೆಸ್‌) ಅಳವಡಿಸಿ. ಇದರಿಂದ ಮಳೆನೀರು ಸೋಸಿ ನೇರವಾಗಿ ಕೇಸಿಂಗ್‌ ಪೈಪ್‌ ಮೂಲಕ ಕೊಳವೆಬಾವಿ ಸೇರುತ್ತದೆ.

ಇದಲ್ಲದೆ ದೊಡ್ಡ ಪ್ಲಾಸ್ಟಿಕ್‌ ಡ್ರಮ್‌ಗಳಿಗೆ ರಂಧ್ರ ಮಾಡಿ, ಅವುಗಳ ಕೆಳಭಾಗದಲ್ಲಿ ಪೈಪ್‌ ಅಳವಡಿಸಿ, ಗುಂಡಿಗೆ ಬಿದ್ದ ನೀರು ಸೋಸಿ ಡ್ರಮ್‌ಗೆ ತುಂಬಿ, ಸೋಸಿದ ನೀರು ಕೇಸಿಂಗ್‌ ಪೈಪ್‌ ಮೂಲಕ ಕೊಳವೆಬಾವಿ ಸೇರುವಂತೆಯೂ ಮಾಡಬಹುದು. ಮರುಪೂರಣದ ಗುಂಡಿಗಳಿಗೆ ಸಿಮೆಂಟ್‌ನ ರಿಂಗ್‌ ಅಥವಾ ವೃತ್ತಾಕಾರದಲ್ಲಿ ಕಲ್ಲಿನ ಕಟ್ಟಡ ಕಟ್ಟಬಹುದು.
*
ನೀರಿನ ಸದ್ಬಳಕೆಯ ಮಾರ್ಗಗಳು
ನೀರಿನ ಕೊರತೆ ನೀಗಿಸಲು ಇರುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದರ ಜತೆಗೆ ಅದರ ಸದ್ಭಳಕೆಯ ಅಗತ್ಯವೂ ಅಷ್ಟೇ ಇದೆ

ಪ್ರತಿ ನಿತ್ಯ ನೀರನ್ನು ಬಳಸುವಾಗ ಬಹಳಷ್ಟು ವ್ಯರ್ಥಮಾಡುತ್ತೇವೆ. ಸ್ವಲ್ಪ ಎಚ್ಚರ ವಹಿಸಿ ಮಿತ ಬಳಕೆ ಮತ್ತು ಮರುಬಳಕೆ ಮಾಡಿದರೆ ನೀರಿನ ಕೊರತೆಯನ್ನು ತುಸುವಾದರೂ ತಗ್ಗಿಸಬಹುದು
ನೀರಿನ ಮಿತ ಬಳಕೆಯ ಈ ಕೆಳಗಿನ  ವಿಧಾನಗಳ ಅಚ್ಚರಿ ಎನಿಸಿದರೂ ವಾಸ್ತವ
* ಹಲ್ಲುಜ್ಜುವಾಗ ನಲ್ಲಿಯನ್ನು ನಿಲ್ಲಿಸುವುದು. ಇದರಿಂದ ಏನಿಲ್ಲವೆಂದರೂ ಪ್ರತಿ ತಿಂಗಳು ಕನಿಷ್ಠ 160 ಗ್ಯಾಲನ್‌ಗಳಷ್ಟು (1 ಗ್ಯಾಲನ್‌ = 3.8 ಲೀಟರ್‌) ನೀರು ಉಳಿಸಬಹುದು. ಇದು, ಶೇವ್‌ ಮಾಡುವಾಗಲೂ ಅನ್ವಯಿಸುತ್ತದೆ
*   ಸಿಗರೇಟ್ ತುಂಡು, ಟಿಶ್ಯು ಹೀಗೆ ಇನ್ನಿತರೆ ಯಾವುದೇ ಬೇಡದ ವಸ್ತುಗಳನ್ನು ಟಾಯ್ಲೆಟ್‌ಗೆ ಹಾಕುವುದನ್ನು ನಿಲ್ಲಿಸಿ. ಹೀಗೆ ಮಾಡುವುದರಿಂದ ಕನಿಷ್ಠ 5  ರಿಂದ 6 ಗ್ಯಾಲನ್‌ ನೀರು ಉಳಿತಾಯವಾಗುತ್ತದೆ
*   ಟಾಯ್ಲೆಟ್‌ಗೆ 18 ಲೀಟರಿನ ಫ್ಲಷ್‌ಗೆ ಬದಲಾಗಿ 6 ಲೀಟರಿನ ಅಲ್ಟ್ರಾ ಲೋ ವಾಲ್ಯುಂ (ಯುಎಲ್‌ವಿ) ಬಳಸುವುದು ಹೆಚ್ಚು ಸೂಕ್ತ. ಇದರಿಂದ ಶೇ 70ರಷ್ಟು ನೀರು ಉಳಿಸಬಹುದು
* ಸಂಪು ಮತ್ತು ಪೈಪ್‌ಗಳಿಂದ ನೀರಿನ ವ್ಯರ್ಥವಾಗುತ್ತಿದೆಯೇ ಎಂಬದುನ್ನು ಗಮನಿಸಬೇಕು
* ನಿಧಾನವಾಗಿ ನೀರು ಬೀಳುವ ಶವರ್‌ ಬಳಕೆ. ಮನೆಗೆ ‘ಸ್ಪಿಂಕ್‌ಲಿಂಗ್‌ ನಲ್ಲಿ’ ಬಳಸುವುದರಿಂದಲೂ ನೀರು ಉಳಿಸಬಹುದು
* ವಾಷಿಂಗ್‌ ಮಷಿನ್‌ನಿಂದ ಹೊರಹೋಗುವ ನೀರನ್ನು ಟಾಯ್ಲೆಟ್‌ಗೆ ಸಂಪರ್ಕಿಸಿ. ಬಟ್ಟೆ ತೊಳೆಯಲು ಪೌಡರ್‌ ಬಳಸಿರುವುದರಿಂದ ಟಾಯ್ಲೆಟ್‌ ಸ್ವಚ್ಛಗೊಳಿಸಲು ಹೆಚ್ಚು ನೀರು ಬಳಸುವ ಅಗತ್ಯ ಬೀಳುವುದಿಲ್ಲ
* ಹೆಚ್ಚಿನ ಇಂಧನ ದಕ್ಷತೆ ಇರುವ ವಾಷಿಂಗ್‌ ಮಷಿನ್‌ ಬಳಸುವುದರಿಂದ  ಪ್ರತಿ ಬಾರಿಯೂ18 ಗ್ಯಾಲನ್‌ ವಾಟರ್‌ ಉಳಿಸಬಹುದು
* ಪಾತ್ರೆ ತೊಳೆಯುವಾಗ ನಲ್ಲಿಯನ್ನು ಆನ್‌ ಮಾಡಿಡಬೇಡಿ. ಇದರಿಂದ ಹೆಚ್ಚು ನೀರು ಪೋಲಾಗುತ್ತದೆ. ಪಾತ್ರೆ ತೊಳೆದ ನೀರನ್ನು ಸಂಗ್ರಹಿಸಿ ಅದನ್ನು ಗಾರ್ಡನ್‌ಗೆ ಬಳಸಬಹುದು. ಅಥವಾ ಸಿಂಕ್‌ ನೀರು ನೇರವಾಗಿ ಗಾರ್ಡನ್‌ಗೆ  ಹೋಗುವಂತೆ ವ್ಯವಸ್ಥೆ ಮಾಡಬಹುದು.
* ಪರಿಸರ ಸ್ನೇಹಿ ಪೌಡರ್‌ಅನ್ನು ಬಟ್ಟೆ ಮತ್ತು ಪಾತ್ರೆ ತೊಳೆಯಲು ಬಳಸುವುದು
* ವಾಟರ್‌ ಮೀಟರ್‌ ಬಳಕೆ. ನೀರನ್ನು ಬಳಸುತ್ತಿದ್ದಾಗ ಮತ್ತು ಬಳಸದೇ ಇದ್ದಾಗ ಮೀಟರ್‌ ಪರಿಶೀಲಿಸಿಬೇಕು. ಇದರಿಂದ  ನೀರು ಸೋರಿಕೆ ಆಗುತ್ತಿದೆಯೇ ಎನ್ನುವುದನ್ನು ಕಂಡುಕೊಳ್ಳಬಹುದು.
*
ನೀರಿನ ಜರಡಿ ಬದಲಿಸಿದ್ದೀರಾ?

ಬರ ಬಿದ್ದಾಗೆಲ್ಲ ನೆನಪಾಗುವ ನೀರಿನ ಕಿಮ್ಮತ್ತನ್ನು ಮಳೆಗಾಲದಲ್ಲಿ ಮರೆಯುವವರೇ ಹೆಚ್ಚು. ಕಾಳಜಿ  ಇದ್ದವರು ‘ಮಳೆ ನೀರು ಸಂಗ್ರಹ’ ವ್ಯವಸ್ಥೆಯನ್ನು ಅಳವಡಿಸಿರುತ್ತಾರೆ.
ಆದರೆ, ಕೆಲ ವರ್ಷಗಳ ಒಲವಿನ ಬಳಿಕ  ನಿಧಾನವಾಗಿ ನಿರ್ಲಕ್ಷಿಸುವುದು ಸಹಜ. ಮಳೆ ನೀರು ಸಂಗ್ರಹ ವ್ಯವಸ್ಥೆ ಎಂಬುದು ಅಳವಡಿಸಿ, ಮರೆತು ಬಿಡುವ ತಂತ್ರಜ್ಞಾನ, ಸಾಧನ ಇಲ್ಲವೆ ಪರಿಹಾರ ಅಲ್ಲ. ನಿಯಮಿತ ನಿರ್ವಹಣೆಯೂ ತುಂಬಾ ಮುಖ್ಯ.
ಅದಕ್ಕೆ ಒಂದಿಷ್ಟು ಪೂರಕ ಸಲಹೆಗಳು ಇಲ್ಲಿವೆ.
* ಮಳೆ ನೀರು ಹರಿದು ಬರುವ ಸಂದು, ತೆರೆದ ಪೈಪು ಇತ್ಯಾದಿಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಬೇಕು. ಇದರಿಂದ ಸ್ವಚ್ಛವಾದ ನೀರು, ಸರಾಗವಾಗಿ ಟ್ಯಾಂಕ್‌ ಸೇರುತ್ತದೆ.
* ಒಂದು ದೊಡ್ಡ ಮಳೆ ಬಂದು ಹೋದ ಮೇಲೆ, ನೀರು  ಸಂಗ್ರಹ ವ್ಯವಸ್ಥೆಯ  ಘಟಕಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಆಗಾಗ ಪರಿಶೀಲಿಸಬೇಕು
* ಯು.ವಿ ಲ್ಯಾಂಪ್‌ಗಳನ್ನು, ನೀರು ಸೋಸುವ ಜರಡಿಗಳನ್ನು ನಿಯಮಿತವಾಗಿ ಬದಲಿಸಬೇಕು
* ನಿರಂತರ ಪರಿಶೀಲನೆ ಹಾಗೂ ಸಂಗ್ರಾಹಕಗಳ, ನೀರು ಜರಡಿಗಳ  ಶುದ್ಧೀಕರಣ ಮಾಡಬೇಕು. ಇದರಿಂದ ನೀರು ಕಲುಷಿತ ಆಗುವುದನ್ನು ತಪ್ಪಿಸಬಹುದು
* ನೀರು ಸಂಗ್ರಹಣೆ ಜತೆಗೆ ಗುಣಮಟ್ಟದ ನೀರು ಶೇಖರಣೆ ತುಂಬ ಮುಖ್ಯ. ಬೇರೆ ಕಡೆಯ ನೀರಿನ ಮೂಲಗಳನ್ನು ಮಳೆ ನೀರು ಸಂಗ್ರಹಕ್ಕೆ ಸೇರ್ಪಡೆ ಮಾಡಬಾರದು
* ಹೆಚ್ಚಾಗಿ ತಾರಸಿ ಮೂಲಕವೇ ಮಳೆ ನೀರು ಸಂಗ್ರಹಣೆ ಆಗುತ್ತದೆ. ಮಳೆಗಾಲದಲ್ಲಿ ಗಾಳಿ ಬೀಸಿದಾಗ ತರಗೆಲೆ, ಕಸ, ಕಡ್ಡಿ ತಾರಸಿ ಆವರಿಸುವುದು ಸಾಮಾನ್ಯ. ಆದ್ದರಿಂದ ತಾರಸಿ ಸ್ವಚ್ಛತೆ ತುಂಬಾನೇ ಮುಖ್ಯ.
* ಎರಡು ಮೂರು ದಿನಗಳ ಬಳಿಕ ಮಳೆ ಬಂದಲ್ಲಿ, ಮೊದಲಿಗೆ ಒಂದೈದು ನಿಮಿಷಗಳ ಕಾಲ ಹರಿಯುವ ನೀರನ್ನು ಟ್ಯಾಂಕ್‌ಗೆ ಸೇರಿಸದೇ ಇರುವುದು ಒಳಿತು.
* ಮಳೆ ನೀರು ಸಂಗ್ರಹಣೆಯ ಜೊತೆಗೆ ಅದನ್ನು ಬಳಸುವುದು ಕೂಡ ಮುಖ್ಯ.  ಅದಕ್ಕೂ ಮೊದಲು ನೀರನ್ನು  ಸಂಸ್ಕರಿಸಬೇಕು. ಅದಕ್ಕೆ ಹಲವು ಮಾರ್ಗಗಳಿವೆ. ನೀರನ್ನು ಕುದಿಸುವುದು, ಸೋಸುವುದು, ಕ್ಲೋರಿನೀಕರಣ ಮಾಡುವುದು ಬಿಸಿಲು ಅಥವಾ ನೇರಳಾತೀತ ಕಿರಣಕ್ಕೆ ತೆರೆದಿಡುವುದು ಸುಲಭದ ಮಾರ್ಗಗಳು

ಮಾಹಿತಿ: ದಯಾನಂದ, ವಿಶ್ವನಾಥ ಶರ್ಮಾ, ಬಷೀರ್ ಅಹ್ಮದ್ ನಗಾರಿ, ಜಯಸಿಂಹ ಆರ್.  /  ಪ್ರ.ವಾ ಗ್ರಾಫಿಕ್ಸ್: ಕಣಕಾಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT