ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಸಮಸ್ಯೆಗಳನ್ನು ತೆರೆದಿಟ್ಟ ಜನತೆ

Last Updated 2 ಸೆಪ್ಟೆಂಬರ್ 2014, 6:31 IST
ಅಕ್ಷರ ಗಾತ್ರ

ರಾಯಚೂರು: ಸಮಸ್ಯೆ, ಸಂಕಟ, ಯೋಜನೆಗಳಿಂದ ವಂಚಿತ, ದೌರ್ಜನ್ಯ, ಅಧಿಕಾರಿಗಳ ಅಸಡ್ಡೆ, ದಲಿತರ ಹೆಸರಲ್ಲಿ ಭೂ ಕಬಳಿಕೆ, ಗಂಗಾ ಕಲ್ಯಾಣ ಯೋಜನೆಯಲ್ಲಿ ತರಹೇವಾರಿ ಗೋಲ್‌ಮಾಲ್, ವಿದ್ಯಾರ್ಥಿ ವಸತಿ ನಿಲಯಗಳ ಸಮಸ್ಯೆ, ಶೌಚಾಲ­ಯ ಕೊರತೆ ಹೀಗೆ ಹತ್ತಾರು ಬಗೆಯ ಸಮಸ್ಯೆಗಳ ಮೂಟೆಯನ್ನೇ ಹೊತ್ತು ತಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದ ಜನತೆ ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬಿಚ್ಚಿಟ್ಟರು.

ಇದು ನಗರದ ಜಿಲ್ಲಾ ಪಂಚಾಯಿತಿ ಸಭಾ ಭವ­ನ­ದಲ್ಲಿ ಸೋಮವಾರ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಆಯೋಜಿಸಿದ್ದ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು ಸಮಾಜದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ಕುಂದುಕೊರತೆ ಆಲಿಸುವ ಸಭೆಯಲ್ಲಿ ಕಂಡು ಬಂದ ನೋಟ.

ಬೆಳಿಗ್ಗೆ 10.30ಕ್ಕೆ ಆರಂಭಗೊಳ್ಳಬೇಕಾದ ಸಭೆ ಒಂದೂವರೆ ತಾಸು ತಡವಾಗಿ ಆರಂಭಗೊಂಡಿತು. ಇದಕ್ಕೆ ಸಂಘಸಂಸ್ಥೆ ಪದಾಧಿಕಾರಿಗಳು ಸಿಡಿಮಿಡಿ­ಕೊಂಡರು. ಸಭೆಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನೂ ಕರೆಸಬೇಕು ಎಂದು ಒತ್ತಾ­ಯಿ­ಸಿ­ದರು. ಆಯೋಗದ ಅಧ್ಯಕ್ಷ ಇ.ಅಶ್ವತ್ಥ­ನಾರಾಯಣ ಅವರು ವಿದ್ಯಾರ್ಥಿ ವಸತಿ ನಿಲಯಕ್ಕೆ ಹೋಗಿದ್ದರಿಂದ ತಡವಾಯಿತು ಎಂದು ಸಮಯಜಾಯಿಷಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಪಕ್ಕ ಅಂಬೇಡ್ಕರ್ ಸಭಾ­ಭವನ ನಿರ್ಮಾಣಕ್ಕೆ ನಿವೇಶನ ಅತಿಕ್ರಮಣ­ವಾಗು­ತ್ತಿದೆ. 2005ರಿಂದ ಭವನ ನಿರ್ಮಾಣ ಆಗಿಲ್ಲ.  ಕೆಲಸ ಒಂದು ಕಡೆ ಬಿಲ್ ಪಾವತಿ ಮತ್ತೊಂದು ಕಡೆ, ರಾಯಚೂರು ನಗರಸಭೆ 22.75 ಯೋಜನೆಯಡಿ ಅನುದಾನ ದೊರಕಿದರೂ ಸಮು­ದಾಯದವರಿಗೆ ಪ್ರಯೋಜನವಾಗಿಲ್ಲ. ನೆರವು ದೊರಕಿಸಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ದೊರಕಿಲ್ಲ, ಭೂ ಒಡೆತನ ಯೋಜನೆಯಡಿ ವ್ಯಾಪಕ ಅಕ್ರಮ ನಡೆಯುತ್ತಿದೆ. ₨ 50 ಸಾವಿರಕ್ಕೆ ಎಕರೆ ಖರೀದಿಸಿ 5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಜವಳು ಭೂಮಿ ಖರೀದಿಸಿ ಒಳ್ಳೆಯ ಭೂಮಿ ಎಂದು ದಾಖಲೆ ಸೃಷ್ಟಿಯಾಗು­ತ್ತಿದ್ದು, ಈ ಅಕ್ರಮ ತಡೆಯಬೇಕು. ಗಂಗಾ ಕಲ್ಯಾಣ ಯೋಜನೆ ಸ್ಪೃಶ್ಯರಿಗಿಂತ ಅಸ್ಪೃಶ್ಯರಿಗೆ ಹೆಚ್ಚು ದೊರಕುತ್ತಿದೆ. ಚಲವಾದಿ ಮತ್ತು ಮಾದಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಹವಾಲು ಹೇಳಿಕೊಂಡರು.

ನೇರ ಸಾಲ ಯೋಜನೆ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ವಾಸ್ತವದಲ್ಲಿ ಸಾಲ ದೊರಕುತ್ತಿಲ್ಲ. ಸಾಲ ಮರುಪಾವತಿ ಇಲ್ಲ ಎಂಬ ಉತ್ತರ ಬ್ಯಾಂಕ್‌ಗಳು ನೀಡುತ್ತವೆ. ಸಫಾಯಿ ಕರ್ಮಚಾರಿಗಳಿಗೆ ದೊರಕಿದ 1.2 ಎಕರೆ ಭೂಮಿ ಅತಿಕ್ರಮಣ ಆಗುತ್ತಿದೆ. ಒಳಚರಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕ ಸತ್ತು ಎರಡು ವರ್ಷವಾದರೂ ಪರಿಹಾರ ದೊರಕಿಲ್ಲ. ಕುಟುಂಬಕ್ಕೆ ಅನುಕಂಪ ಆಧಾರದ ಮೇಲೆ ಕೆಲಸ ಕೊಟ್ಟಿಲ್ಲ. ಕನಿಷ್ಠ ವೇತನವೂ ದೊರಕುತ್ತಿಲ್ಲ. ರಾಯಚೂರಿನ ಇಂದಿರಾ ನಗರದಲ್ಲಿನ ಸಮುದಾಯ ಭವನ ಮುಂದೆಯೇ ಶೌಚಾಲಯ ನಿರ್ಮಾಣ ಮಾಡಿದ್ದು, ನಮ್ಮ ಸಮಸ್ಯೆ ಕೇಳುವವರಿಲ್ಲವಾಗಿದೆ. ಅದನ್ನು ತೆರವು­ಗೊಳಿಸಬೇಕು. ದಲಿತರ ಮೇಲೆ ನಿರಂತ ದೌರ್ಜನ್ಯ ನಡೆಯುತ್ತಿದೆ. ಆರೋಪಿತರ ಬಂಧನ, ಪ್ರಕರಣ ದಾಖಲು ಆಗುತ್ತಿಲ್ಲ. ದೇವಸ್ಥಾನ ಪ್ರವೇಶ ಪ್ರಕರಣದಲ್ಲಿ ಕೊಲೆಗಳು ನಡೆದಿವೆ. ನಮ್ಮ ಸಮುದಾಯಕ್ಕೆ ಶೇಕಡಾವಾರು ದೊರಕಬೇಕಾದ ಪಾಲು ದೊರಕುತ್ತಿಲ್ಲ. ಪಡಿತರ ನ್ಯಾಯಬೆಲೆ ಅಂಗಡಿ ಹಂಚಿಕೆಯೇ ಇದಕ್ಕೆ ನಿದರ್ಶನವಾಗಿದೆ ಎಂದು ವಿವರಣೆ ನೀಡಿದರು.

ರಾಯಚೂರು ನಗರದ 5ನೇ ವಾರ್ಡ್, ಹರಿಜನವಾಡದ ಜನತೆ ಸಮಸ್ಯೆ ದಶಕಗಳ ಕಾಲದ್ದು. ಯಾರೂ ಕಣ್ತೆರೆದು ನೋಡಿಲ್ಲ. ಹರಿಜನವಾಡದಲ್ಲಿ ಶೌಚಾಲಯಕ್ಕೂ ಸಮಸ್ಯೆ ಇದೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಧರಣಿ ನಡೆಸಿದರೆ ಹಕ್ಕು ಚ್ಯುತಿ ಎಂದು ಜಿಲ್ಲೆಯ ದಲಿತ ಶಾಸಕರೇ ಸಭಾಪತಿಗೆ ದೂರು ಸಲ್ಲಿಸುತ್ತಾರೆ. ಇಂಥ ಅನೇಕ ಸಮಸ್ಯೆಗಳಿವೆ ಎಂದು ಗಮನ ಸೆಳೆದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿಗಮದ ಯೋಜನೆ ಹಳ್ಳ ಹಿಡಿದಿವೆ.  ಭೂ ಒಡೆತನ ಯೋಜನೆಯಡಿ ಖರೀದಿಸಿದ ಭೂಮಿ 5 ಕಿ.ಮೀ ಒಳಗಡೆ ಇರುವವರಿಗೆ ಕೊಡಬೇಕು. ಬೇರೆಯವರಿಗೆ ಕೊಡಲಾಗಿದೆ. ಇಂಥ ಪ್ರಕರಣ ದೇವದುರ್ಗ ತಾಲ್ಲೂಕಿನ ಗಣೇಕಲ್ ಗ್ರಾಮದಲ್ಲಿ ನಡೆದಿದೆ. ಹಿಂದಿನ ಶಾಸಕರೇ ಇದಕ್ಕೆ ಕುಮ್ಮಕ್ಕು ನೀಡಿದ್ದರು. ಪಂಚಾಯಿತಿ ಅಧ್ಯಕ್ಷರು ಆಕ್ಷೇಪ ಎತ್ತಿದಾಗ ತಡೆ ಹಿಡಿಯಲಾಗಿದೆ. ಹೀಗೆ ಅನೇಕ ಅಕ್ರಮಗಳು ನಡೆದಿವೆ. ಪರಿಶಿಷ್ಟ ಜಾತಿ ವ್ಯಾಪ್ತಿಯ  ಒಂದೇ ಸಮುದಾಯದವರಿಗೆ ಬಹುಪಾಲು ಯೋಜನೆ ಫಲ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಪರಿಶಿಷ್ಟ ಪಂಗಡದವರಿಗೆ ನಿರಂತರ ಅನ್ಯಾಯ ಆಗುತ್ತಿದೆ. ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಾರ ದೊರಕಿದ್ದರೂ ಅವಿಶ್ವಾಸ ಮಂಡನೆ ಹಿನ್ನೆಯಲ್ಲಿ ಅಧಿಕಾರ ಕಳೆದುಕೊಳ್ಳ­ಲಾಗಿದೆ. ಜಿಲ್ಲೆಯ ನಾಲ್ವರು ಶಾಸಕರು, ಸಂಸದರು ಇದೇ ಸಮುದಾಯದವರಿದ್ದರೂ ಅನ್ಯಾಯ ಆಗುತ್ತಿದೆ. 3721(ಜೆ) ಕಲಂ ಪ್ರಕಾರ ಹುದ್ದೆ ನೇಮಕಾತಿಯಲ್ಲಿ ರೋಸ್ಟರ್ ಪಾಲನೆ ಮಾಡ­ಬೇಕು. ಅದನ್ನು ಅನುಸರಿಸುತ್ತಿಲ್ಲ. ಗೊಂಡ ಮತ್ತು ರಾಜಗೊಂಡ ಎಂಬ ವರ್ಗ ಮಡಿಕೇರಿ, ಮೈಸೂರು, ಚಾಮರಾಜನರ ಮತ್ತು ಬೀದರ್ ಜಿಲ್ಲೆಯ ಕೆಲ ಕಡೆ ಮಾತ್ರ ಇದ್ದಾರೆ. ಆದರೆ, ಆಗಸ್ಟ್ 25ರಂದು ಮುಖ್ಯಮಂತ್ರಿಗಳು ಯಾದಗಿರಿ, ಗುಲ್ಬರ್ಗ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಗೊಂಡ, ರಾಜಗೊಂಡದವರಿಗೆ ಪರಿಶಿಷ್ಟ ಪ್ರಮಾಣ ಪತ್ರವನ್ನು ಈ ಜಿಲ್ಲೆಗಳಲ್ಲೂ ನೀಡಬೇಕು ಎಂದು ಒತ್ತಾಯ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳು ದುಸ್ಥಿತಿಯಲ್ಲಿವೆ. ಮೂಲಸೌಕರ್ಯ ಇಲ್ಲದ ಕಟ್ಟಡ­ಗಳನ್ನು ಬಾಡಿಗೆಗೆ ಪಡೆದು ನಡೆಸಲಾಗುತ್ತಿದೆ ಎಂಬುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಯೋಗದ ಅಧ್ಯಕ್ಷರ ಗಮನ ಸೆಳೆದರು.

ಎಸ್.ರಾಜು, ಕೆ.ಇ.ಕುಮಾರ, ಜೆ.ಬಿ ರಾಜು, ಅಂಬಣ್ಣ ಅರೋಲಿ, ಆದೆಪ್ಪ ಕಾಡ್ಲೂರು, ಭಾಸ್ಕರ­ಬಾಬು, ಹನುಮಂತ ನಾಯಕ, ರವೀಂದ್ರ ಪಟ್ಟಿ, ಅಶೋಕ, ಗಂಗಣ್ಣ, ಪರಶುರಾಮ ಅರೋಲಿ, ವಾಲ್ಮೀಕಿ ಗೆಳೆಯರ ಬಳಗ, ಆಂಜನೇಯ ನಾಯಕ, ಕೆ.ಪಿ.ಅನಿಲಕುಮಾರ ಸೇರಿದಂತೆ ಅನೇಕರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT