ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಗನ್ನಡಿಯಲ್ಲಿ ಜಗದ ಬಿಂಬ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ನನ್ನ ಪಾಲಿಗೆ ಸಮಕಾಲೀನ ನೃತ್ಯವೆಂದರೆ ಮಾತಿಲ್ಲದೇ ಕಥೆ ಹೇಳುವ ವಿಶ್ವಾತ್ಮಕ ಭಾಷೆ’. ನೃತ್ಯದ ಬಗ್ಗೆ ಕೇಳಿದರೆ ದೀಪಕ್‌ ಕೊಂಚವೂ ತಡವರಿಸದೇ ಹೀಗೆ ಉತ್ತರಿಸುತ್ತಾರೆ. ದೀಪಕ್‌, ಚರಣ್‌, ಅಮರೇಶ್ ಈ ಮೂವರು ಗೆಳೆಯರು ಕೂಡಿ ರೂಪಿಸಿದ ‘ಎನ್‌ಎಚ್‌7’ ಎಂಬ ತಂಡದ ಸಮಕಾಲೀನ ನೃತ್ಯವನ್ನು ನೋಡಿದರೆ ಅವರ ಈ ಮಾತು ಇನ್ನಷ್ಟು ಸ್ಪಷ್ಟವಾಗುತ್ತದೆ.

‘ಡೆವಲಪ್‌ಮೆಂಟ್‌’ ಪರಿಕಲ್ಪನೆಯ ಅಡಿಯಲ್ಲಿ ಕತ್ತಲ ಜಗತ್ತಿನ ಸಂಕಟಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ‘ಎನ್‌ಎಚ್‌7’ನಲ್ಲಿದೆ. ಬಾಯ್ತೆರೆದು ನಿಂತ ಅಭಿವೃದ್ಧಿ ಭೂತಕ್ಕೆ ಅನಿವಾರ್ಯವಾಗಿ ಆಹುತಿಯಾಗುತ್ತಿರುವ ರೈತರ ವಲಸೆ ಸಮಸ್ಯೆ, ಕಾರ್ಮಿಕರ ದಾರುಣತೆ, ಮಧ್ಯವರ್ತಿಗಳ ಶೋಷಣೆ, ಬಂಡವಾಳಶಾಹಿಗಳ ಕ್ರೌರ್ಯ ಹೀಗೆ ಅನೇಕ ನೆಲೆಗಳಲ್ಲಿ ‘ಅಭಿವೃದ್ಧಿ’ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಾ ಪರೀಕ್ಷಿಸುತ್ತಾ ಹೋಗುವುದು ಎನ್‌ಎಚ್‌7 ಹೆಚ್ಚುಗಾರಿಕೆ. 

ಈ ಮೂಲಕ ತನ್ನ ಆತ್ಮಚರಿತ್ರೆಯನ್ನು ಅರುಹುತ್ತಿರುವ ಮಹಾನಗರದ ಮುಖವೊಂದರ ವಿರಾಟ್‌ ದರ್ಶನದ ಪರದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ನೃತ್ಯವನ್ನು ರೂಪಿಸಿದ ದೀಪಕ್‌ ಅವರ ಶ್ರಮದ ದಾರಿಯೂ ಅಷ್ಟೇ ಕುತೂಹಲಕಾರಿಯಾದದ್ದು.

ಅಟಕ್ಕಳರಿ ಅಂಗಳದಲ್ಲಿ

ದೀಪಕ್‌ ಬಾಲ್ಯಜೀವನ ರೂಪುಗೊಂಡಿದ್ದು ಬೆಂಗಳೂರಿನ ಶಿವಾಜಿನಗರದಲ್ಲಿ. ಚಿಕ್ಕಂದಿನಿಂದಲೇ ಕರಾಟೆ, ಫುಟ್‌ಬಾಲ್‌, ಕ್ರಿಕೆಟ್‌ ಹೀಗೆ ದೈಹಿಕ ಚಟುವಟಿಕೆಗಳಲ್ಲಿಯೇ ಆಸಕ್ತಿ ಬೆಳೆಸಿಕೊಂಡಿದ್ದ ಅವರ ಒಲವು 12ನೇ ವರ್ಷದಿಂದ ನೃತ್ಯದತ್ತ ಹರಿಯಿತು. ಬಿ.ಕಾಂ ವ್ಯಾಸಂಗ ಮಾಡುತ್ತಲೇ ನೃತ್ಯ ತರಬೇತಿಯಲ್ಲೂ ತೊಡಗಿಕೊಂಡಿದ್ದ ದೀಪಕ್‌ ಆಲೋಚನೆಗಳಿಗೆ ತಿರುವು ಸಿಕ್ಕಿದ್ದು ‘ಅಟಕ್ಕಳರಿ ಸೆಂಟರ್‌ ಫಾರ್‌ ಮೂಮೆಂಟ್‌ ಆರ್ಟ್ಸ್‌’ ಸೇರಿಕೊಂಡಾಗ.

2001ರಲ್ಲಿ ದೀಪಕ್‌ ಅಟಕ್ಕಳರಿಗೆ ನೃತ್ಯಪಟುವಾಗಿ ಸೇರಿಕೊಳ್ಳುವುದರೊಂದಿಗೆ ಸಮಕಾಲೀನ ನೃತ್ಯದತ್ತ ಅವರ ಆಸಕ್ತಿ ಬೆಳೆಯಿತು. ಮುಂದೆ 2007ರವರೆಗೂ ನೃತ್ಯಪಟು/ಕೊರಿಯೊಗ್ರಾಫರ್‌/ನೃತ್ಯ ಶಿಕ್ಷಕ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಾ ಸಂಸ್ಥೆಯ ಜತೆ ಕಳೆದರು. ಈ ಅವಧಿಯಲ್ಲಿಯೇ ದೀಪಕ್‌ ಸಮಕಾಲೀನ ನೃತ್ಯವನ್ನು ತಮ್ಮ ಹುಡುಕಾಟದ ದಾರಿಯನ್ನಾಗಿ ರೂಪಿಸಿಕೊಂಡಿದ್ದು. ಅವರೊಳಗಿನ ನೃತ್ಯದ ಹಸಿವು 2007ರಲ್ಲಿ ಆಸ್ಟ್ರಿಯಾಕ್ಕೆ ತೆರಳುವಂತೆ ಮಾಡಿತು. ಅಲ್ಲಿನ ‘ಸಾಲ್‌ಬರಿ ಎಕ್ಸ್‌ಪೆರಿಮೆಂಟಲ್‌ ಡಾನ್ಸ್‌ ಅಕಾಡೆಮಿ’ಯಲ್ಲಿ ತರಬೇತಿ ಪಡೆದ ದೀಪಕ್‌ 2010ರವರೆಗೂ ಯುರೋಪ್‌ನಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದರು.

ಅಭಿವೃದ್ಧಿ ಪರಿಕಲ್ಪನೆಯ ಪ್ರೇರಣೆಗಳು
2010ಕ್ಕೆ ದೀಪಕ್‌ ಮರಳಿ ಬೆಂಗಳೂರಿಗೆ ಕಾಲಿಟ್ಟಾಗ ನಗರದ ಚಹರೆಯೇ ಬದಲಾಗಿತ್ತು. ‘ನಾನು ಬೆಂಗಳೂರಿಗೆ ಮರಳಿದಾಗ ಎಲ್ಲೆಂದರಲ್ಲಿ ಡೆವಲೆಪ್‌ಮೆಂಟ್‌ ಕಾಮಗಾರಿಗಳು ನಡೆಯುತ್ತಿದ್ದವು. ಆ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಶೇ 90ಕ್ಕಿಂತ ಹೆಚ್ಚು ಕೆಲಸಗಾರರು ಬೆಂಗಳೂರಿನ ಹೊರಗಿನ ಹಳ್ಳಿಯಿಂದ ಬಂದವರು.

ಅವರ ಜೀವನದ ಬಗ್ಗೆ ಸಮಕಾಲೀನ ನೃತ್ಯ ಬಳಸಿಕೊಂಡು ಏನಾದ್ರೂ ಮಾಡಬೇಕು ಎಂದು ನನಗೆ ಬಲವಾಗಿ ಅನ್ನಿಸಿತು. ಈ ಹಂಬಲದ ಫಲವಾಗಿಯೇ ಮುಂದೆ ಎನ್‌ಎಚ್‌7 ರೂಪುಗೊಂಡಿತು’ ಎಂದು ನೃತ್ಯದ ಪರಿಕಲ್ಪನೆಯ ಹಿಂದಿನ ಪ್ರೇರಣೆಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಇರಾದೆಯ ಮೊದಲ ಹೆಜ್ಜೆಯಾಗಿ ದೀಪಕ್‌ ‘ಅಂಡರ್‌ ಕನ್‌ಸ್ಟ್ರಕ್ಷನ್‌’ ಎಂಬ ಹೆಸರಿನಲ್ಲಿ 15 ನಿಮಿಷಗಳ ಸಮಕಾಲೀನ ನೃತ್ಯಸಂಯೋಜನೆಯನ್ನು ಮಾಡಿದರು. ನಾಲ್ಕು ಜನರ ತಂಡ ಮಾಲ್‌, ಐಟಿ ಕೇಂದ್ರ, ಪಾರ್ಕ್‌, ಎಂ.ಜಿ. ರಸ್ತೆ ಹೀಗೆ ನಗರದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಈ ನೃತ್ಯ ಪ್ರದರ್ಶಿಸಿತು.

ಮುಂದಿನ ಹಂತವಾಗಿ ದೀಪಕ್‌ 20 ನಿಮಿಷದ ಡ್ಯುಯೆಟ್‌ ಅನ್ನು ಸಂಯೋಜಿಸಿದರು. ಈಗ ಅವರ ನೃತ್ಯ ಪರಿಕಲ್ಪನೆಗೆ ಹೊಂದಿಬಂದಿದ್ದು ಚರಣ್‌ ಸಿ.ಎಸ್‌. ಮತ್ತು ಅಮರೇಶ್‌ ಕೆಂಪಣ್ಣ.

ಇವರಿಬ್ಬರೂ ಅಟಕ್ಕಳರಿ ಸಂಸ್ಥೆಯಲ್ಲಿ ದೀಪಕ್‌ ಅವರ ವಿದ್ಯಾರ್ಥಿಗಳಾಗಿದ್ದರು. ಹಲವು ವರ್ಷಗಳ ಕಾಲ ಒಟ್ಟಿಗೆ ನೃತ್ಯಮಾಡಿದ ಹೊಂದಾಣಿಕೆಯೂ ಅವರ ನಡುವಿತ್ತು. ಅಲ್ಲದೇ ನೀನಾಸಂನಲ್ಲಿ ಪದವಿ ಪಡೆದಿದ್ದ ಅಮರೇಶ್‌ ಮತ್ತು ಚರಣ್‌ ಅವರ ರಂಗಾನುಭವವೂ ಪೂರಕವಾಗಿತ್ತು.

20 ನಿಮಿಷ ಅವಧಿಯ ಈ ಸಮಕಾಲೀನ ನೃತ್ಯ ಚೆನ್ನೈನಲ್ಲಿ ನಡೆದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ‘ಬೆಸ್ಟ್‌ ಕಂಟೆಪರರಿ ಅವಾರ್ಡ್‌’ ಮುಡಿಗೇರಿಸಿಕೊಂಡಿತು. ‘ಈ ಗೆಲುವಿನಿಂದ ಸಿಕ್ಕ ಹಣದಿಂದ ನಾವು ಎನ್‌ಎಚ್‌ 7 ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಧ್ಯವಾಯ್ತು’ ಎಂದು ದೀಪಕ್‌ ಸ್ಮರಿಸಿಕೊಳ್ಳುತ್ತಾರೆ.

ದೀಪಕ್‌ ನೃತ್ಯಕ್ಕಾಗಿ ನೃತ್ಯ ಎಂಬುದರಲ್ಲಿ ನಂಬಿಕೆಯಿರಿಸಿಕೊಂಡವರಲ್ಲ. ಸಮಾಜಕ್ಕಾಗಿ ನೃತ್ಯ ಎಂಬ ನಿಲುವಿನವರು. ಆದ್ದರಿಂದಲೇ ಇವರು ಸಂಶೋಧನೆಯ ಅಡಿಗಲ್ಲಿನ ಮೇಲೆ ನೃತ್ಯವನ್ನು ಕಟ್ಟಲು ನಿರ್ಧರಿಸಿದರು. ಸ್ಟುಡಿಯೊ ಬದಲಿಗೆ ರಸ್ತೆಗಿಳಿದರು. ಎನ್‌ಎಚ್‌ 7ಗಾಗಿ ದೀಪಕ್‌ ಮತ್ತವರ ಸ್ನೇಹಿತರು ಒಂದು ವರ್ಷ ಸಂಶೋಧನೆ ನಡೆಸಿದ್ದಾರೆ. ಬೆಂಗಳೂರಲ್ಲಿ ನಿರಂತರ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರನ್ನು ಸಂದರ್ಶಿಸಿದ್ದಾರೆ.

ಅಷ್ಟೇ ಅಲ್ಲದೇ ಮೂರು ನಾಲ್ಕು ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ರೈತರಲ್ಲಿ ‘ಡೆವಲೆಪ್‌ಮೆಂಟ್‌’ ಬಗೆಗಿನ ಅಭಿಪ್ರಾಯಗಳನ್ನು ಕಲೆಹಾಕಿದ್ದಾರೆ. ನಂತರ ಈ ವಸ್ತುಸ್ಥಿತಿಯ ಅಂಶಗಳನ್ನು ಸಮಕಾಲೀನ ನೃತ್ಯವಾಗಿ ಹೇಗೆ ರೂಪಾಂತರಿಸಬಹುದು ಎಂಬುದನ್ನು ಆಲೋಚಿಸಿ ಸಂಯೋಜನೆಗಿಳಿದಿದ್ದಾರೆ. ದೀಪಕ್, ಚರಣ್, ಅಮರೇಶ್ ಮೂವರೂ ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ಟುಡಿಯೊದಲ್ಲಿ ಅಭ್ಯಾಸ ಮಾಡಿ ಎನ್‌ಎಚ್‌7 ಎಂಬ ಸಮಕಾಲೀನ ನೃತ್ಯ ರೂಪಕವನ್ನು ಕಟ್ಟಿದ್ದಾರೆ.

‘ಸಾಮಾನ್ಯವಾಗಿ ಎಲ್ಲರೂ ನೇರವಾಗಿ ಸ್ಟುಡಿಯೊ ಹೊಕ್ಕು ನೃತ್ಯಸಂಯೋಜನೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ನಮ್ಮ ಆರಂಭಿಕ ಬಿಂದು ವಾಸ್ತವದ ಶೋಧನೆಯಾಗಿತ್ತು. ಆದ್ದರಿಂದಲೇ ಸಮಕಾಲೀನ ನೃತ್ಯ ಪ್ರಕಾರವನ್ನು ವಿಭಿನ್ನವಾಗಿ ಬಳಸಿಕೊಂಡು ಸಮಾಜದಲ್ಲಿನ ಸಂಗತಿಗಳನ್ನು ಜನರಿಗೆ ತಲುಪುವಂತೆ ಅಭಿವ್ಯಕ್ತಿಗೊಳಿಸಲು ಸಾಧ್ಯವಾಯಿತು’ ಎಂದು ದೀಪಕ್‌ ವಿವರಿಸುತ್ತಾರೆ.

ಭಿನ್ನ ನೋಟ ಸೇರಿ...
ಎನ್‌ಎಚ್‌7 ತಂಡದ ಒಂದು ವಿಶೇಷತೆಯೆಂದರೆ ಈ ತಂಡದ ಮೂವರ ಹಿನ್ನೆಲೆಯೂ ಭಿನ್ನ. ಇದು ಉದ್ದೇಶಿತ ನೃತ್ಯಸಂಯೋಜನೆಗೆ ಪೂರಕವಾಗಿ ಒದಗಿಬಂದ ಸಂಗತಿಯನ್ನು ದೀಪಕ್‌ ವಿವರಿಸುವುದು ಹೀಗೆ. ‘ನಾನು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವನು. ಚರಣ್‌ ಚನ್ನರಾಯಪಟ್ಟಣದವನು. ಅಮರೇಶ್‌ ಮಾಲೂರಿನ ಸಮೀಪದ ಹಳ್ಳಿಯಿಂದ ಬಂದವನು. ಹೀಗೆ ವಿಭಿನ್ನ ಹಿನ್ನೆಲೆಯಿಂದ ಬಂದ ನಾವು ಮೂವರೂ ಬೆಂಗಳೂರನ್ನು ನೋಡುವ ರೀತಿಯೂ ಬೇರೆಯೇ. ಆದ್ದರಿಂದಲೇ ಒಂದೇ ನಗರವನ್ನು ಹಲವು ಹಿನ್ನೆಲೆಗಳ ಜನರು ಹೇಗೆ ನೋಡಬಹುದು ಎಂಬ ಬಹುಮುಖಿ ಆಯಾಮವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವುದು ಸಾಧ್ಯವಾಯ್ತು.’

ಜಗದ ಕನ್ನಡಿಯಾಗುವ ಹಂಬಲ
‘ಸಮಕಾಲೀನ ನೃತ್ಯವನ್ನು ಪ್ರತಿಯೊಬ್ಬರೂ ನೋಡುವ ರೀತಿಯೇ ಬೇರೆ. ಕೆಲವರಿಗೆ ದೇಹಚಲನೆಯೇ ಮುಖ್ಯವಾಗುತ್ತದೆ. ಇನ್ನು ಕೆಲವರಿಗೆ ಸಂಗೀತವೇ ಪ್ರಧಾನವಾಗುತ್ತದೆ. ಇನ್ನೊಬ್ಬರಿಗೆ ವೇದಿಕೆ. ಹಾಗೆಯೇ ನೃತ್ಯ ಸಮಾಜದ ಕನ್ನಡಿಯಾಗಬೇಕು ಎಂಬುದು ನಮ್ಮ ಧ್ಯೇಯ. ಆದ್ದರಿಂದಲೇ ಜನಸಾಮಾನ್ಯರಿಗೆ ಹತ್ತಿರವಾಗುವಂಥದ್ದು ಮಾಡುವುದು ನಮಗೆ ಮುಖ್ಯವಾಗುತ್ತದೆ.’ ಎನ್ನುವ ದೀಪಕ್‌ ‘ಹಾಗೆಂದು ನಾವು ನೃತ್ಯದ ಅಂಶಗಳನ್ನು ನಿರ್ಲಕ್ಷಿಸುವುದಿಲ್ಲ. ನೃತ್ಯ ನಮ್ಮ ಮಾಧ್ಯಮ, ಆದರೆ ಅಂತಿಮ ಉದ್ದೇಶ ಸಮಾಜ’ ಎಂದು ಸ್‍ಪಷ್ಟಗೊಳಿಸುತ್ತಾರೆ.

   ಮೊದಲೇ ನಿರ್ಧರಿಸಿಕೊಂಡು ಅದರಂತೇ ನೃತ್ಯ ಕಟ್ಟುವುದರಲ್ಲಿ ಇವರಿಗೆ ನಂಬಿಕೆಯಿಲ್ಲ. ‘ಮೊದಲೇ ಎಲ್ಲವನ್ನೂ ನಿರ್ಧರಿಸಿಕೊಂಡು ಬಿಟ್ಟರೆ ಬೆಳವಣಿಗೆಗೆ ಅವಕಾಶವೇ ಇರುವುದಿಲ್ಲ. ಯಾವುದೇ ಪೂರ್ವಗ್ರಹವಿಲ್ಲದ ಮನಸ್ಸಿನಲ್ಲಿ ಅಭ್ಯಸನಕ್ಕೆ ತೊಡಗಿಕೊಳ್ಳುತ್ತೇವೆ. ಸಿದ್ಧ ಮಾದರಿಯನ್ನು ಪ್ರಶ್ನಿಸುತ್ತಲೇ ಹೊಸ ದಾರಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇದರಿಂದ ಸೃಜನಾತ್ಮಕ ಮತ್ತು ಕಲಾತ್ಮಕ ಬೆಳವಣಿಗೆಗೂ ಅವಕಾಶ ಇರುತ್ತದೆ. ನಮ್ಮ ಪರ್ಫಾರ್ಮೆನ್ಸ್‌ ರೂಪುಗೊಳ್ಳುವುದು ತಲೆಯಲ್ಲಲ್ಲ, ಅಭ್ಯಸನ ಪ್ರಕ್ರಿಯೆಯಲ್ಲಿ’ ಎನ್ನುತ್ತಾರೆ ದೀಪಕ್‌.

 ಬೆಂಗಳೂರಿನಲ್ಲಷ್ಟೇ ಅಲ್ಲದೇ ಚೆನ್ನೈ, ಹೈದರಾಬಾದ್‌, ಮುಂಬೈ, ದೆಹಲಿ, ಕೋಲ್ಕತ್ತಾ, ಚಂಡೀಗಢಗಳಲ್ಲಿ ‘ಎನ್‌ಎಚ್‌7’ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಕರ್ನಾಟಕದಲ್ಲಿ ಸಾಣೇಹಳ್ಳಿ, ಹೆಗ್ಗೋಡಿನಂತಹ ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ‘ಹುಬ್ಬಳ್ಳಿ–ಧಾರವಾಡದಂತಹ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ನೆರೆಯ ರಾಜ್ಯಗಳ ಹಳ್ಳಿಗಳಲ್ಲಿಯೂ ಈ ನೃತ್ಯವನ್ನು ಪ್ರದರ್ಶಿಸಬೇಕು ಎಂಬ ಉದ್ದೇಶವಿದೆ. ಮುಂದಿನ ವರ್ಷ ಇದೇ ನೃತ್ಯವನ್ನಿಟ್ಟುಕೊಂಡು ಅಂತರರಾಷ್ಟ್ರೀಯ ತಿರುಗಾಟ ಮಾಡಿ ಬೇರೆ ಬೇರೆ ದೇಶಗಳಲ್ಲಿ ಪ್ರದರ್ಶಿಸುವ ಬಗ್ಗೆಯೂ ಸಿದ್ಧತೆ ನಡೆಯುತ್ತಿದೆ’ ಎಂದು ದೀಪಕ್‌ ವಿವರಿಸುತ್ತಾರೆ.

ಹೊರಳು ದಾರಿಯಲ್ಲಿ...
ಇದುವರೆಗೆ ಬಂಡವಾಳಶಾಹಿಯ ಕರಾಳ ಪರಿಣಾಮಗಳ ಅಭಿವ್ಯಕ್ತಿಯನ್ನೇ ತಮ್ಮ ನೃತ್ಯಾಭಿವ್ಯಕ್ತಿಯ ಕೇಂದ್ರವನ್ನಾಗಿಸಿಕೊಂಡಿದ್ದ ದೀಪಕ್‌ ಆದ್ಯತೆಯೀಗ ಮಾನವ ಸಂಘರ್ಷದ ದಾರಿಯತ್ತ ಹೊರಳಿದೆ. ಸದಾಕಾಲ ಸಂಘರ್ಷದಿಂದ ಜರ್ಜರಿತವಾಗಿರುವ ಪ್ರದೇಶಗಳಲ್ಲಿನ ಜನಜೀವನದ ಸಂಕಷ್ಟಗಳನ್ನು ಸಮಕಾಲೀನ ನೃತ್ಯದಲ್ಲಿ ಅಳವಡಿಸಲು ಸಾಧ್ಯವೇ ಎಂಬ ಸಾಧ್ಯತೆಯ ಶೋಧನೆಯಲ್ಲಿದ್ದಾರೆ.

ಇದೇ ದಾರಿಯಲ್ಲಿ ಅವರು ಈಗ ಕೆಲವು ತಿಂಗಳುಗಳ ಹಿಂದೆ ಕಾಶ್ಮೀರಕ್ಕೆ ಹೋಗಿ ಒಂದೂವರೆ ತಿಂಗಳು ಅಲ್ಲಿನ ಪರಿಸ್ಥಿತಿಯ ಅಧ್ಯಯನ ಮಾಡಿ ಬಂದಿದ್ದರು. ಅಲ್ಲಿನ ಸ್ಥಳೀಯರನ್ನೇ ತೆಗೆದುಕೊಂಡು ಸಂಘರ್ಷದ ವಸ್ತುವನ್ನು ಆಧರಿಸಿ ನೃತ್ಯಸಂಯೋಜಿಸುವುದು ಅವರ ಉದ್ದೇಶ. ಜನವರಿ 14ರಂದು ಈ ನೃತ್ಯಪ್ರದರ್ಶನ ನಡೆಯಲಿದ್ದು, ಸದ್ಯಕ್ಕೆ ದೀಪಕ್‌ ಅದರ ಸಿದ್ಧತೆಯಲ್ಲಿಯೇ ತೊಡಗಿಕೊಂಡಿದ್ದಾರೆ.

ಇಂದಿಗಿದೇ ಸುಖ
ನಿಮ್ಮ ಕನಸಿನ ಯೋಜನೆ ಏನು ಎಂದು ಕೇಳಿದರೆ ನಕ್ಕುಬಿಡುತ್ತಾರೆ ದೀಪಕ್. ‘ಸಮಕಾಲೀನ ನೃತ್ಯವೆಂದರೆ ಹೆಸರೇ ಹೇಳುವಂತೆ ಇಂದಿನ ಕಾಲಕ್ಕೆ ತಕ್ಕಂತೇ ಮಾಡಿಕೊಂಡು ಹೋಗುವುದು. ಇದಕ್ಕೆ ಸಿದ್ಧ ಸೂತ್ರಗಳಿಲ್ಲ. ನಾನೂ ಅಷ್ಟೇ ತುಂಬ ದೂರ ಯೋಚನೆ ಮಾಡಲು ಹೋಗುವುದಿಲ್ಲ. ಈಗ ಕಾಶ್ಮೀರಕ್ಕೆ ಬಂದು ನೃತ್ಯಸಂಯೋಜನೆಯಲ್ಲಿ ಮುಳುಗಿದ್ದೇನೆ. ಸದ್ಯಕ್ಕೆ ಇದೇ ನನ್ನ ಕನಸಿನ ಪ್ರಾಜೆಕ್ಟ್‌. ಇದಾದಮೇಲೆ ಮುಂದಿನದು’ ಎನ್ನುವುದು ದೀಪಕ್‌ ಉವಾಚ.

ಸಮಕಾಲೀನ ನೃತ್ಯವನ್ನು ಸದ್ಯದ ಕಥೆಯನೊರೆಯುವ ಹೊಸ ಭಾಷೆಯನ್ನಾಗಿ ರೂಪಿಸುವುದು ದೀಪಕ್‌ ಅವರ ಆತ್ಯಂತಿಕ ಗುರಿ. ಇದು ಅವರ ಆಂತರಿಕ ತುರ್ತು ಕೂಡ ಹೌದು. ಆದ್ದರಿಂದಲೇ ದೀಪಕ್‌ ಸವೆಸಿದ ಹಾದಿಯಷ್ಟೇ ಸಾಗಲಿರುವ ದಾರಿಯ ಬಗೆಗೂ  ಕುತೂಹಲ ತಾಳುವಂತಾಗಿದೆ. 

ಹೊಸತು ಹುಡುಕುವ ಹಂಬಲ

ನಾವು ಮೂವರು ಭೇಟಿಯಾದಾಗಲೆಲ್ಲ ಈಗ ಇರುವುದಕ್ಕಿಂತ ಬೇರೆಯದೇ ಆದ ಏನಾದ್ರೂ ಮಾಡಬೇಕು ಎಂದು ಮಾತಾಡಿಕೊಳ್ತಿದ್ವಿ. ಸಮಕಾಲೀನ ನೃತ್ಯವೆಂದರೆ ಯಾರಿಗೂ ಅರ್ಥವಾಗದ್ದು ಎಂಬ ಅಭಿಪ್ರಾಯವನ್ನು ಮುರಿಯಬೇಕು. ಸಮಕಾಲೀನ ನೃತ್ಯದಲ್ಲಿಯೇ ಎಲ್ಲರಿಗೂ ಅರ್ಥವಾಗುವ ಭಾಷೆಯೊಂದನ್ನು ಹುಡುಕಬೇಕು ಎಂಬ ಹಂಬಲ ನಮ್ಮೆಲ್ಲರಿಗೂ ಇತ್ತು. ಇದರ ಬಗ್ಗೆಯೇ ಚರ್ಚೆ ಮಾಡ್ತಿದ್ವಿ.

ನಾವು ಮೂವರೂ ವಿಭಿನ್ನ ಹಿನ್ನೆಲೆಯಿಂದ ಬಂದವರು. ನಾನು ಮತ್ತು ಅಮರೇಶ್‌ ಬೇರೆ ಊರಿನಿಂದ ಬೆಂಗಳೂರಿಗೆ ಬಂದವರು. ಹೀಗೆ ಬೇರೆ ಊರುಗಳಿಂದ ಬೆಂಗಳೂರಿಗೆ ಜನ ಯಾಕೆ ಬರುತ್ತಾರೆ? ಅವರ ಸಂದಿಗ್ಧ–ಸಂಕಟಗಳೇನು ಎಂಬುದರ ಕುರಿತೇ ನಮ್ಮ ಆಸಕ್ತಿಯನ್ನು ಕೇಂದ್ರೀಕರಿಸಿಕೊಂಡೆವು. ಇದೇ ಮುಂದೆ ‘ಎನ್‌ಎಚ್‌7’ ರೂಪುಗೊಳ್ಳಲು ಕಾರಣವಾಯ್ತು.

ಆ ಕೃತಿಗಿಂತ ಅದು ರೂಪುಗೊಂಡ ಪ್ರಕ್ರಿಯೆಯೇ ನನಗೆ ಹೆಚ್ಚು ಖುಷಿಕೊಟ್ಟಿದ್ದು.
ನಮ್ಮ ಭೇಟಿಯ ನಡುವಣ ಸಮಯದಲ್ಲಿ ನಮ್ಮ ವಿಚಾರಗಳು ಇನ್ನಷ್ಟು ಬದಲಾಗಿರುತ್ತಿದ್ದವು. ಮತ್ತೆ ಅವುಗಳ ಬಗ್ಗೆ ಚರ್ಚಿಸಿ ಯಾವ ವಿಷಯವನ್ನು ಕೇಂದ್ರೀಕರಿಸಿ ನೃತ್ಯ ರೂಪಿಸಬೇಕು ಎಂದು ನಿರ್ಧರಿಸುತ್ತಿದ್ದೆವು. ಹೀಗೆ ಮತ್ತೆ ಮತ್ತೆ ತಿದ್ದುತ್ತಲೇ ಎನ್‌ಎಚ್‌ 7 ರೂಪುಗೊಂಡಿತು.

ನಮ್ಮ ಮೂವರ ದೃಷ್ಟಿಕೋನವೂ ಭಿನ್ನವಾಗಿತ್ತು. ಈ ಭಿನ್ನತೆಯನ್ನೇ ನಾವು ನೃತ್ಯದಲ್ಲಿ ಬಳಸಿಕೊಂಡೆವು. ಇದರಿಂದ ನೃತ್ಯ ಒಂದೇ ಚಲನೆಯಲ್ಲಿ ಹಲವು ಅರ್ಥಸಾಧ್ಯತೆಗಳನ್ನು ಹೊಮ್ಮಿಸುವ ಶಕ್ತಿ ಪಡೆದುಕೊಂಡಿತು. ಈ ಹಂತದಲ್ಲಿ ನಾವು ಹೇಳುವುದು ಸಾಧ್ಯವಾದಷ್ಟು ಸರಳವಾಗಿರಬೇಕು ಎಂಬ ಎಚ್ಚರ ವಹಿಸಿದ್ದೆವು.
- ಚರಣ್‌ ಸಿ.ಎಸ್‌.

ಹೆದ್ದಾರಿಯೆಂಬ ಸಂಕೇತ

ಎನ್‌ಎಚ್‌7 ಮಾಡುವಾಗ ಮೊದಲು ನಾವು ಮೂರು ಪಾತ್ರಗಳನ್ನು ಸೃಷ್ಟಿಸಿಕೊಂಡೆವು. ನಂತರ ಅದನ್ನು ನಮ್ಮ ನಮ್ಮ ದೃಷ್ಟಿಕೋನದಲ್ಲಿ ಅಭಿವೃದ್ಧಿಪಡಿಸುತ್ತಾ ಮೂವರೂ ಸೇರಿ ಸಂಯೋಜಿಸುತ್ತಿದ್ದೆವು.

ಹಳ್ಳಿಯ ಜೀವನ, ಹೊಲ, ಬಿತ್ತನೆ ಬೆಳೆ ಇಂತಹ ವ್ಯವಸಾಯದ ಚಿತ್ರಣಗಳ ಮೂಲಕ ಆರಂಭಿಸಿದೆವು. ನಂತರ ಅದನ್ನು ಬಂಡವಾಳಶಾಹಿಗಳ ಶೋಷಣೆ, ನಗರೀಕರಣ, ವಲಸೆ ಸಮಸ್ಯೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಬೆಳೆಸಿಕೊಂಡು ಹೋದೆವು. ಇದರಿಂದ ಜನರು ತಮ್ಮನ್ನು ತಾವು ಈ ನೃತ್ಯದೊಂದಿಗೆ ಜೋಡಿಸಿಕೊಳ್ಳಲು ಸಾಧ್ಯವಾಯಿತು.

ಇವೆಲ್ಲ ಒಂದೆರಡು ದಿನಗಳಲ್ಲಿ ಆದ ಸಂಗತಿಯಲ್ಲ. ಇದಕ್ಕಾಗಿ ಅನೇಕ ದಿನ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರೊಂದಿಗೆ ಕೆಲಸ ಮಾಡಿದ್ದೇವೆ. ಹಾಗೆಯೇ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರೊಂದಿಗೂ ಕೆಲಸ ಮಾಡಿದ್ದೇವೆ. ಅವರ ಬದುಕು–ನಡವಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದೇವೆ. ಇದರಿಂದಾಗಿಯೇ ನಮಗೆ ಈ ವಿಷಯವನ್ನು ಮಾಡಿ ಅದಕ್ಕೆ ನ್ಯಾಯ ಒದಗಿಸಬಲ್ಲೆವು ಎಂದು ಅನ್ನಿಸಿದ್ದು.

ನಾನೂ ಹಳ್ಳಿಯಿಂದಲೇ ಬೆಂಗಳೂರಿಗೆ ಬಂದಿದ್ದು. ಆದ್ದರಿಂದ ‘ಎನ್‌ಎಚ್‌7’ ವೈಯಕ್ತಿಕವಾಗಿ ನನಗೆ ನನ್ನ ಬದುಕನ್ನೇ ನೋಡಿಕೊಳ್ಳುವ ಕನ್ನಡಿಯೂ ಆಗಿತ್ತು.

‘ಎನ್‌ಎಚ್‌7’ ಹೆದ್ದಾರಿಯನ್ನು ಸೂಚಿಸುವ ಸಾಂಕೇತಿಕ ರೂಪ. ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದವರ ಸಂಕಟ ಸಂದಿಗ್ಧಗಳ ರೂಪಕವೂ ಹೌದು. ಆದ್ದರಿಂದಲೇ ಸಮಕಾಲೀನ ನೃತ್ಯರೂಪಕ್ಕೆ ‘ಎನ್‌ಎಚ್‌7’ ಎಂದು ಹೆಸರಿಟ್ಟೆವು.
ಇಂಥದ್ದೊಂದು ಆಳ ಹರವಿನ ವಿಷಯವನ್ನಿಟ್ಟುಕೊಂಡು ಸಮಕಾಲೀನ ನೃತ್ಯವನ್ನು ಕಟ್ಟಿದ್ದಕ್ಕೆ ನಮಗೆ ತುಂಬ ಖುಷಿಯಿದೆ.
- ಅಮರೇಶ ಕೆಂಪಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT