ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿಗೆ ಬಾರದ ಪದ್ಯವೂ, ಕೇಳಿಸಿಕೊಳ್ಳದ ಕಿವಿಯೂ...

ಅಕ್ಷರ ಗಾತ್ರ

‘ಅಲ್ಲಾ ನಮ್ಮ ಡಿ.ಸಿ (ಉಪ ಪರಿವೀಕ್ಷಕರು)ಯವರು ಎಷ್ಟೊಂದು ಚುರುಕಾಗಿ ಕೆಲಸ ಮಾಡ್ತಾರಲ್ಲ. ನಮಗಾದ್ರೂ ನಾಲ್ವತ್ತಕ್ಕ ಚಾಳಿಸು ಬಂದಾವು. ಅವ್ರಿಗೆ ಅರವತ್ತರ ಸಮೀಪ ಬಂದ್ರೂ ಚಾಳಿಸ್ ಬಂದಿಲ್ಲ. ಆದ್ರ ಮೆಲ್ಲಗೆ ಮಾತನಾಡಿದ್ರ ಕೇಳಂಗಿಲ್ಲ’  ಎಂದು ಮಾತಿಗೆ ಗೆಳತಿ ಪೀಠಿಕೆ ಹಾಕಿದಳು. ಹೌದಲ್ಲ ಎಂದು ನಾವು ಗುಸು, ಗುಸು ಮಾತನಾಡುತ್ತಿದ್ದಾಗ ಅದ್ಹೇಗೋ ನಮ್ಮ ಮಾತು ಅವರ ಕಿವಿಗೆ ಬಿದ್ದು ‘ಅಲ್ರಿ ಮೇಡಂ ಕಣ್ಣು ಇರಲಾರದವ ಪಾಪಿ ಅಂತ, ಕಿವಿ ಕೇಳಿಸದವ ಪುಣ್ಯಾತ್ಮ ಅಂತ. ನನಗೂ ವಯಸ್ಸಾತಲ್ರಿ’ ಎಂದಾಗ  ನನ್ನ ಬಾಲ್ಯದ ಘಟನೆ ನೆನಪಾಯ್ತು. 

ತುಂಬ ಕೀಟಲೆ ಸ್ವಭಾವದ ನಾನು ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ  ಮಣಭಾರದ ಚೌಕಾಕಾರದ ದೊಡ್ಡ   ಬ್ಯಾಗನ್ನು ಮಲಗಿಸಿ ಇಡದೇ ನೇರವಾಗಿ ಇಡುತ್ತಿದ್ದೆ. ಅವಾಗೆಲ್ಲಾ ನೆಲದ ಮೇಲೆಯೇ ಕೂಡುತ್ತಿದ್ದೆವು. ಇತರರೆಲ್ಲಾ ಅತ್ತ ಇತ್ತ ನಡೆದಾಡುವಾಗ ನಾನು ಹಾಸಿಕೊಂಡು ಕುಳಿತ ಪಟ್ಟಿ, ಪಟ್ಟಿ ಚೌಕವನ್ನು ತುಳಿದರೆ ಅವರ ಜೊತೆ ಜಗಳ ಕಾಯುತ್ತಿದ್ದೆ. ಇಂಗ್ಲಿಷ್‌ ಗುರುಗಳು ಎಂದರೆ ಅಚ್ಚುಮೆಚ್ಚು. ಅವರು ಹೇಳುವ ಹೋಂ ವರ್ಕ್‌ ಎಲ್ಲ ತಪ್ಪದೇ ತೋರಿಸಿ ಶಹಭಾಸಗಿರಿ ಪಡೆಯುತ್ತಿದ್ದರಿಂದ ಅವರೇನೂ ಬೈಯುವುದಿಲ್ಲ ಅಂತ ಜಂಭ ಬೇರೆ.

ಅವರು ಎದುರಿಗೇ ಕುಳಿತಿದ್ದರೂ ಗೆಳತಿಯ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಾ ನಮ್ಮದೇ ಲೋಕದಲ್ಲಿ ಕುಳಿತಿರುವುದನ್ನು ಕಂಡು, ಅವಳನ್ನೊಂದು ದಿಕ್ಕು, ನನ್ನನ್ನೊಂದು ದಿಕ್ಕು ಕೂರಿಸುತ್ತಿದ್ದರು. ಅವರ ಲಕ್ಷ್ಯ ಬೇರೆಡೆಗೆ ಹೋದಾಗ ಮತ್ತೆ ಜೊತೆಯಾಗಿಯೆ ಕೂರುತ್ತಿದ್ದೆವು. ಅವರಿಗೂ ಸಾಕಾಗಿ ‘ಏ ಸ್ವಾಮಿ ನಿನ್ನ ಸಲುವಾಗಿ ಸಾಕಾತಪ. ಈ ಸಲ ಸಾಹೇಬರು ಬಂದಾಗ ಇಂಗ್ಲಿಷ್‌ ಪದ್ಯ ಕಂಠಪಾಠ ಮಾಡಿ ಅವರ ಮುಂದೆ ಒಪ್ಪಿಸಬೇಕು’ ಅಂದಾಗ, ‘ಸರ್ ನಾನೊಲ್ಲೆ ಸರ್. ಬಾಳ ಹೆದರಿಕೆ ತಪ್ಪು ಹೇಳಿದರೆ? ಅವರೇನಾದ್ರೂ ಅಂದ್ರೆ?’ ಏನೂ ಅನ್ನುವದಿಲ್ಲ.

ಒಂದೆರಡು ಸಾಲು ಜೋರಾಗಿ ಹೇಳು ಬರದಿದ್ದನ್ನು ಸುಮ್ಮನೆ ಹೇಳಿದಂತೆ ತುಟಿ ಚಲನೆ ಮಾಡು. ಅವರಿಗೆ ಕಿವಿ ಕೇಳುವದಿಲ್ಲ ಎಂದು ಧೈರ್ಯ ತುಂಬಿದರು. ಸಾಹೇಬರು ಬಂದು ಮಕ್ಕಳೆಲ್ಲಾ ಇಂಗ್ಲಿಷ್ ಓದುತ್ತಾರೇನ್ರಿ ಅಂತ ಕೇಳಿದ್ದೇ ತಡ ತೀರಾ ಹಿಂದೆ ಕೂಡ್ರಿಸಿದ್ದ ನನ್ನನ್ನೇ ಗುರುಗಳು ಎಬ್ಬಿಸಿದರು. ಮೊದಲೇ ಹೆದರಿಕೊಂಡಿದ್ದೆ. ಒಂದೆರಡು ಸಾಲು ಹೇಳುವುದರಲ್ಲಿಯೇ ಮುಂದಿನದು ನೆನಪಾಗಲಿಲ್ಲ. ಸುಮ್ಮನೆ ತುಟಿ ಪಿಟಿ ಪಿಟಿ ಮಾಡುತ್ತಾ ನಿಂತೆ. ‘ಗುಡ್ ಚೆನ್ನಾಗಿ ಹೇಳಿದೆಯಮ್ಮಾ  ಕೂಡಮ್ಮಾ’ ಎಂದರು.

ಆ ಸಾಹೇಬರು ಕೆಲವೇ ವರ್ಷಗಳಲ್ಲಿ ತೀರಿಹೋದರು. ಹೋದವಾರ ಎಸ್.ಎಸ್.ಎಲ್.ಸಿ ಮೌಲ್ಯಮಾಪನಕ್ಕೆ ಹೋಗಿದ್ದೆ. ನಾನು ಆ ತುಂಟತನದ ಘಟನೆ ನೆನಪಿಸಿಕೊಂಡು ಹೇಳಿದಾಗ ಬಿಸಿಲಿನ ಧಗೆ, ಬೇಸರ ಮರೆತು ಮುಕ್ತವಾಗಿ ನಕ್ಕೆವು. ನಮ್ಮ ನಗುವಿಗೆ ನಿಮಿತ್ತರಾದ ಉಪಪರಿವೀಕ್ಷಕ ಆರ್.ಎಸ್. ಚೌಧರಿ ಸಹ ನಮ್ಮ ನಗುವಿನಲ್ಲಿ ಪಾಲ್ಗೊಂಡರು. ಮೌಲ್ಯಮಾಪನ ಕೇಂದ್ರದಲ್ಲಿ ಎಲ್ಲಾ ಗೆಳತಿಯರು ನಾಲ್ಕೈದು ದಿನವಾದರೂ ಭೇಟಿ ಆಗ್ತೀವಿ. ಹರಟೆ, ನಗು, ತಮಾಷೆ ಇದ್ದೇ ಇರುತ್ತದೆ. ಅಂಥ ಬಿಸಿಲು ಇದ್ರೂ, ಮಾರಿ ಮ್ಯಾಲ ದಳ, ದಳ ಅಂತ ನೀರಿಳಿತಿದ್ರೂ ಊಟದ ಸಮಯದಲ್ಲಿ ನಗುವಿಗೇನೂ ಕೊರತೆ ಇರಲ್ಲ.

ಆ ನೆನಪು, ಈ ನೆನಪು ಮಾಡಿಕೊಳ್ಳುತ್ತಲೇ ಮತ್ತೇ ಹುಡುಗಿಯರಾಗ್ತೀವಿ. ಬಾಲ್ಯಕ್ಕೆ ಜಾರತ್ತೇವೆ. ಮನಸ್ಸು ಹಗುರಾಗುತ್ತದೆ. ‘ಹೆಣ್ಣು ಹುಡುಗಿಯಾಗಿ ಹೀಂಗ ಜೋರಾಗಿ ನಗಬಾರದು. ಗಂಡುಬೀರಿಯಂಗ ಹಾರಾಡಬಾರ್ದು’ ಎಂಬ ನಿರ್ಬಂಧಗಳನ್ನು ಕೇಳುತ್ತಲೇ ಬೆಳೆದ ನಾವು ಒತ್ತಡದ ಬದುಕಿನೊಳಗ ಗೊತ್ತಿಲ್ಲದಂತೆ ನಮಗೆ ನಾವೇ, ಪ್ರೌಢ ಬಂಧನದಲ್ಲಿರ್ತೀವಿ. ಅದನ್ನ ಸಡಿಲಿಸಿ ಬದುಕಲಿಕ್ಕೆ ಆಗದಂಗ ಬೆಳದೀವಿ. ಹೀಗೆಲ್ಲಾ ಎಲ್ಲರೂ ಕೂಡಿದಾಗ ಮುಕ್ತವಾಗಿ ಮಾತಾಡ್ತೀವಿ. ನಗುತ್ತ, ನಗಿಸುತ್ತ ಹಗುರಾಗಿ, ನಿರಾಳವಾಗಿ ಚೈತನ್ಯ ಪಡೀತೀವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT