ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ದೋಣಿಯಲ್ಲಿ ಸಿದ್ದರಾಮಯ್ಯ...

ಪ್ರಜಾವಾಣಿ ಸಂದರ್ಶನ
Last Updated 13 ಮೇ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ರಾಜಪ್ಪ ಎನ್ನುವ ಮೇಸ್ಟ್ರು ನನ್ನನ್ನು ಒತ್ತಾಯಪೂರ್ವಕವಾಗಿ ಶಾಲೆಗೆ ಕಳುಹಿಸದೇ ಇದ್ದರೆ ನಾನು ಎಲ್‌ಎಲ್‌ಬಿ ಓದುತ್ತಲೂ ಇರಲಿಲ್ಲ. ಇವತ್ತು ರಾಜ್ಯದ ಮುಖ್ಯಮಂತ್ರಿ ಆಗುತ್ತಲೂ ಇರಲಿಲ್ಲ.'
ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂತಸದಲ್ಲಿ ನೆನಪಿಸಿಕೊಳ್ಳುವ ಹೆಸರು ಮೇಸ್ಟ್ರು ರಾಜಪ್ಪ ಅವರು.

`ಸಿ.ರಾಜಪ್ಪ ಅವರು ನಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಅವರು ಒಂದು ದಿನ ನನನ್ನು ಕರೆದು ನಿನಗೆ ಪಾಠ ಓದಲು ಬರುತ್ತದೆ. ನೇರವಾಗಿ 5ನೇ ತರಗತಿಗೆ ಸೇರಿಕೋ ಎಂದು ಶಾಲೆಗೆ ಕಳುಹಿಸಿದರು. ನೇರವಾಗಿ 5ನೇ ತರಗತಿಗೆ ಸೇರಿಸಿಕೊಳ್ಳಲು ವಿಶೇಷ ಅನುಮತಿಯನ್ನೂ ಅವರು ಕಷ್ಟಪಟ್ಟು ಪಡೆದುಕೊಂಡಿದ್ದರು.

ಹಾಗೆ ಅವರು ಶಾಲೆಗೆ ಕಳುಹಿಸಿದ್ದರಿಂದ ನಾನು ವಿದ್ಯಾವಂತನಾದೆ' ಎಂದು ಅವರು ತಮ್ಮ ಬಾಲ್ಯದ ದಿನಗಳನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ `ಪ್ರಜಾವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೀಗೆಯೇ ತಮ್ಮ ಹಳೆಯ ದಿನಗಳನ್ನು ಬಿಚ್ಚಿಟ್ಟರು.

ಇಡೀ ದಿನ ಹಾರ ತುರಾಯಿ, ಅಭಿನಂದನೆ ಸ್ವೀಕರಿಸಿ, ಅಧಿಕಾರಿಗಳ ಸಭೆ ನಡೆಸಿ, ವಿವಿಧ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿ ಸುಸ್ತಾಗಿದ್ದ ಅವರು ತಮ್ಮ ಬಾಲ್ಯ, ಗುರುಗಳು, ರಾಜಕೀಯ ಪ್ರೇರಕರನ್ನು ನೆನಪಿಸಿಕೊಂಡು ಉತ್ಸಾಹದ ಬುಗ್ಗೆಯಾದರು.

`ನಾನು ಕಾನೂನು ಕಲಿಯಲು ಆರಂಭಿಸುವ ದಿನಗಳವರೆಗೂ ನನಗೆ ರಾಜಕೀಯಕ್ಕೆ ಬರಬೇಕು ಎನ್ನುವ ಬಯಕೆ ಇರಲಿಲ್ಲ. ಶಾಸಕ, ಮಂತ್ರಿ, ಮುಖ್ಯಮಂತ್ರಿ ಮುಂತಾದ ಯಾವುದೇ ಕನಸುಗಳು ಇರಲಿಲ್ಲ. ಕಾನೂನು ಕಾಲೇಜಿನಲ್ಲಿ ಇದ್ದಾಗ ಪ್ರೊ.ನಂಜುಂಡಸ್ವಾಮಿ ಅವರ ಪರಿಚಯವಾಯಿತು. ಅವರು ನನಗೆ ಚಳವಳಿ ಬಗೆಯನ್ನು ಹೇಳಿಕೊಟ್ಟರು. ಹೋರಾಟದ ಮಜಲುಗಳನ್ನು ತೋರಿಸಿದರು.

ಅದೇ ಸಮಯದಲ್ಲಿ ತುರ್ತು ಪರಿಸ್ಥಿತಿ ಬಂತು. ಅದರ ವಿರುದ್ಧ ಹೋರಾಟಕ್ಕೆ ಧುಮುಕಿದೆ. ಬಂಧನಕ್ಕೂ ಒಳಗಾದೆ. ಆ ಮೂಲಕ ಸಮಾಜವಾದದ ಸೆಳತಕ್ಕೂ ಒಳಗಾದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜೊತೆ ಸಮಾಜವಾದಿ ಯುವಜನ ಸಭಾಕ್ಕೂ ಸೇರಿಕೊಂಡೆ. ಅಲ್ಲಿಂದಲೇ ನನ್ನ ಸಾರ್ವಜನಿಕ ಬದುಕು ಆರಂಭವಾಯಿತು' ಎಂದು ಅವರು ಲಹರಿಗೆ ಬಂದರು.

`ಲಂಕೇಶ್, ತೇಜಸ್ವಿ, ಪ್ರೊ.ಕೆ. ರಾಮದಾಸ್ ಮುಂತಾದವರ ಸ್ನೇಹದಿಂದ ಸಮಾಜವಾದದ ಬೆಳಕು ನನ್ನ ಮೇಲೆ ಬಿತ್ತು. ಜೊತೆಗೆ ಸಾಹಿತ್ಯದ ಕಂಪೂ ತಾಗಿತು. ನಾನು ಬಾಲ್ಯದಲ್ಲಿ ಸಿದ್ದರಾಮನಹುಂಡಿಯಲ್ಲಿ ವೀರ ಮಕ್ಕಳ ಕುಣಿತ ಅಭ್ಯಾಸ ಮಾಡುತ್ತಿದ್ದೆ. ಹಾಗಾಗಿ ನನಗೆ ಜನಪದ ನೃತ್ಯದಲ್ಲಿ ಆಸಕ್ತಿ ಇತ್ತು. ಸಾಹಿತಿಗಳ ಸಂಗದಿಂದ ಸಾಹಿತ್ಯದ ಆಸಕ್ತಿಯೂ ಮೂಡಿತು. ನಾನು ಸಾಹಿತ್ಯವನ್ನು ಓದಿದ್ದು ಕಡಿಮೆ. ಆದರೆ ಸಾಹಿತಿಗಳ ಸಹವಾಸವೇ ನನಗೆ ಆಪ್ಯಾಯಮಾನವಾಗಿತ್ತು' ಎಂದು ತಮ್ಮ ಹಳೆಯ ದಿನಗಳ ಖುಷಿಯನ್ನು ಮತ್ತೊಮ್ಮೆ ಅನುಭವಿಸಿದರು.

*ಪ್ರ: ಸಾಹಿತ್ಯ ಓದಿಲ್ಲ ಎನ್ನುತ್ತೀರಿ. ಆದರೆ ನಿಮಗೆ ಸಾಕಷ್ಟು ಮಂದಿ ಸಾಹಿತಿಗಳು ಈ ಚುನಾವಣೆಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದು ಹೇಗೆ?

ನಾನು ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದ ಕಾಲದಿಂದಲೂ ನನಗೆ ಸಾಹಿತಿಗಳ ಒಡನಾಟ ಇತ್ತು. ಅಲ್ಲದೆ ಗೋಕಾಕ್ ಚಳವಳಿ ಮತ್ತು ರೈತ ಚಳವಳಿಗಳಲ್ಲಿ ನಾನು ಸಕ್ರಿಯವಾಗಿ ಭಾಗಿಯಾಗಿದ್ದೆ. ಇದರಿಂದ ಸಾಹಿತಿಗಳ ಸಂಪರ್ಕ ನನಗೆ ನಿರಂತರವಾಗಿತ್ತು.

*ಪ್ರ: ನಿಮ್ಮ ರಾಜಕೀಯ ಗುರುಗಳು ಯಾರು?
ನಾನು ವಕೀಲ ವೃತ್ತಿ ಆರಂಭಿಸಿದಾಗ ಪಿ.ಎಂ.ಚಿಕ್ಕಬೋರಯ್ಯ ಅವರು ನನಗೆ ಸೀನಿಯರ್ ಆಗಿದ್ದರು. ಅವರ ಬಳಿ 7-8 ವರ್ಷ ಇದ್ದೆ. ವಕೀಲಿ ವೃತ್ತಿಯನ್ನು ನನಗೆ ಹೇಳಿಕೊಟ್ಟಿದ್ದೇ ಅಲ್ಲದೆ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾನು ಪಾಠ ಮಾಡುವಂತೆ ಪ್ರೋತ್ಸಾಹಿಸಿದವರೂ ಅವರು. ರಾಜಕೀಯದಲ್ಲಿ ನನ್ನ ಆಸಕ್ತಿಯನ್ನು ಅವರು ಬೆಂಬಲಿಸಿದರು. ಅಲ್ಲದೆ ಮೈಸೂರು ಜಿಲ್ಲೆಯಲ್ಲಿ ನಜೀರ್ ಸಾಬ್, ರಾಚಯ್ಯ ಅವರು ನನಗೆ ಬೆಂಬಲ ನೀಡಿದರು. ನಾನು ಏನನ್ನು ಕೇಳದಿದ್ದರೂ ರಾಮಕೃಷ್ಣ ಹೆಗಡೆ ಅವರು ನನ್ನನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದರು. ನಂತರ ಸಚಿವನನ್ನಾಗಿಯೂ ಮಾಡಿದರು. ಇವರೆಲ್ಲಾ ನನಗೆ ರಾಜಕೀಯ ಗುರುಗಳು.

*ಪ್ರ: ನಿಮ್ಮ ಇಷ್ಟು ದಿನದ ರಾಜಕೀಯ ಜೀವನದಲ್ಲಿ ನೆನಪಿಡುವ ಘಟನೆ ಯಾವುದು?
ನಾನು ಹಣಕಾಸು ಸಚಿವನಾದಾಗ ಕೆಲವರು ಕುರಿ ಮೇಯಿಸುವ ವ್ಯಕ್ತಿಗೆ ಆರ್ಥಿಕ ಖಾತೆ ಕೊಡಲಾಗಿದೆ. ಅವನೇನು ಮಾಡಿಯಾನು ಎಂದು ಟೀಕಿಸಿದ್ದರು. ಆದರೆ ನಾನು ಮೊದಲ ಬಾರಿಗೆ ಬಜೆಟ್ ಮಂಡಿಸಿದಾಗ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನನ್ನಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿತು. ಅದೇ ನನ್ನ ರಾಜಕೀಯ ಬದುಕಿನ ಮರೆಯಲಾಗದ ಘಟನೆ.

*ಪ್ರ: ನಿಜವಾಗಿಯೂ ನೀವು ಕುರಿ ಮೇಯಿಸಿದ್ದೀರಾ. ಅದರ ಅನುಭವ ನಿಮಗೆ ಇದೆಯಾ?
ಇಲ್ಲ. ಕುರಿ ಮೇಯಿಸಿದ ಅನುಭವ ನನಗೆ ಇಲ್ಲ. ನಮ್ಮ ಮನೆಯಲ್ಲಿ ಕುರಿಗಳೇ ಇರಲಿಲ್ಲ. ನಮಗೆ 30-*0 ಎಕರೆ ಜಮೀನು ಇತ್ತು. ನಾವು ಕೃಷಿ ಮಾಡಿಕೊಂಡಿದ್ದೆವು. ನನ್ನ ಬಾಲ್ಯದಲ್ಲಿ ಹೊಟ್ಟೆ ಬಟ್ಟೆಗೆ ಕಷ್ಟ ಏನೂ ಇರಲಿಲ್ಲ. ಆಗೆಲ್ಲಾ ಮಳೆ ಚೆನ್ನಾಗಿ ಆಗುತ್ತಿತ್ತು. ನಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿದ್ದಿದ್ದರಿಂದಲೇ ನಮ್ಮಪ್ಪ ನಮ್ಮನ್ನು ಶಾಲೆಗೆ ಕಳುಹಿಸಿದ. 
   
*ಪ್ರ: ಎರಡು ಬಾರಿ ಮುಖ್ಯಮಂತ್ರಿ ಹುದ್ದೆ ನಿಮಗೆ ತಪ್ಪಿ ಹೋಗಿತ್ತು. ಹೀಗೆ ಹುದ್ದೆ ತಪ್ಪಲು ಕಾರಣರಾದವರ ಬಗ್ಗೆ ನಿಮಗೆ ಬೇಸರವಾಗಲಿಲ್ವಾ?

ಬೇಸರ ಆಗಿತ್ತು. ಆದರೆ ಈಗ ಅವರ ಬಗ್ಗೆ ಅಂತಹ ಭಾವನೆ ಇಲ್ಲ. ಹಗೆತನ ಸಾಧಿಸುವುದಿಲ್ಲ.

*ಪ್ರ: ದೇವೇಗೌಡರ ಕುಟುಂಬದ ಬಗ್ಗೆ ಕೂಡ ಇದೇ ಭಾವನೆ ಇದೆಯೇ?
ಹೌದು. ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT