ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳನ್ನು ಕುರಿತು

ಕವಿತೆ
Last Updated 28 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

1
ಹೀಗೆಯೇ ಪ್ರಪಂಚ ಮರೆತುಬಿಡುತ್ತದೆ
ನಿಧಾನವಾಗಿ ಎಲ್ಲವನ್ನೂ, ಪರಿಸ್ಥಿತಿ ಹೀಗಿ–
ರುವಾಗ ನೆನ್ನೆದಿನ ನಾನು ಹೇಳಿದ್ದು ನಿನಗೆ
ನೆನಪಿದೆಯೇ ಎಂದು ಕೇಳುವೆಯಲ್ಲ! ಗಿಡಕ್ಕೆ
ನೆನಪಿದೆಯೇ ಮೊನ್ನೆ ದಿನ ಅದು ತೊಟ್ಟ ಹೂವು–
ಗಳ ಸಂಖ್ಯೆ ಎಷ್ಟೆಂದು? ಹಕ್ಕಿಗೆ ನೆನಪಿದೆಯೇ
ತಾನು ಈವರೆಗೆ ಹಾಡಿರುವ ಹಾಡುಗಳ ಲೆಕ್ಕ
ಎಷ್ಟೆಂದು? ಕಡಲಿಗೆ ನೆನಪಿದೆಯೇ ಈವರೆಗೆ
ತನ್ನೊಳಗೆ ಹರಿದು ಕರಗಿರುವ ಹೊಳೆಗ–
ಳೆಷ್ಟೆಂದು? ಆಕಾಶಕ್ಕೆ ಗೊತ್ತಿದೆಯೆ ತನ್ನಂ–
ತರಂಗದಲ್ಲರಳಿ ಮರೆಯಾದ ಮತ್ತೆ
ಮಿರುಗುತ್ತಿರುವ ತಾರಕೆಗಳೆಷ್ಟೆಂದು?

2
ನಮ್ಮ ಅಸ್ತಿತ್ವವಿರುವುದೇ ನಮಗಿರುವ
ನೆನಪುಗಳಲ್ಲಿ, ನನ್ನೊಳಗೆ ನಿನ್ನ, ನಿನ್ನೊಳಗೆ
ನನ್ನ ನೆನಪಿರುವ ತನಕ, ನಾನೂ ನೀನೂ
ಅದೂ ಇದೂ ಎಲ್ಲ. ಆಮೇಲೆ ನಾನು ಇಲ್ಲ
ನೀನೂ ಇಲ್ಲ. ಪ್ರತಿಯೊಬ್ಬರಿಗೂ ಅವರವರ
ನೆನಪಿನೊಳಗವರವರ ಪ್ರಪಂಚ. ಏನಾ–
ದರೂ ಮಾಡಿ ಸಿಕ್ಕಷ್ಟು ನೆನಪುಗಳನ್ನು
ಹಿಡಿದು ಚೌಕಟ್ಟು ಹಾಕುವ ಚಪಲ ನಮ್ಮೆ–
ಲ್ಲರಿಗೂ, ಇದೇ ಕಲೆ–ಸಾಹಿತ್ಯ–ಶಿಲ್ಪಗಳಲ್ಲಿ
ಬೆರಗು; ಹಿಡಿದರೂ ಹಿಡಿತಕ್ಕೆ ಸಿಕ್ಕದ ಕೊರಗು

3
ನೆನಪುಗಳನ್ನು ತೆರೆಯುವುದಕ್ಕೆ ಅಥವಾ
ಮರೆಯುವುದಕ್ಕೆ ಹೊರದಾರಿಯಿರದಿದ್ದ–
ರೇನಾಗಬಹುದಿತ್ತು ನಮ್ಮ ಗತಿ? ಎಲ್ಲಿ
ಯಾವ್ಯಾವ ಭವಗಳಲ್ಲಿ ನಾವೇನಾಗಿದ್ದೆ–
ವೆಂಬುದೇನಾದರೂ ನಮಗೆ ನೆನಪಿದ್ದರೆ
ಹಳೆಯ ಬೇಟೆ ನಾಯಿಗಳ ಬೊಗಳು ಇರು–
ಳುದ್ದಕ್ಕೂ! ಸದ್ಯ, ಮರೆವೊಂದು ದೊಡ್ಡ ವರ
ಎಲ್ಲದಕ್ಕೂ ಪ್ರಳಯ, ಆನಂತರವೇ ಹೊಸಹುಟ್ಟು,
ಪ್ರತಿಯೊಂದು ಮಗುವೂ ಹೊಸದಾಗಿ ಶಾಲೆಗೆ
ಸೇರಿ ತಿದ್ದಲೇ ಬೇಕು ಅಕ್ಷರಮಾಲೆ ಮೊದಲಿಗೆ

4
ನೆನಪುಗಳ ಮೇಲೆ ನೆನಪುಗಳು ಒಂದೇ ಸಮನೆ
ಜಮಾಯಿಸುತ್ತಾ, ಒಳಮನೆಯ ಉಗ್ರಾಣ ಅಸ್ತ–
ವ್ಯಸ್ತ. ಹಂತಹಂತಗಳಲ್ಲಿ ಕಂತೆಕಂತೆಯ
ಸರಕು. ಹಗುರವಾಗಬೇಕು ಎಲ್ಲವನ್ನೂ ತೊರೆದು;
ತನ್ನಹಂಕಾರವನ್ನು, ಪದವಿ ಪ್ರತಿಷ್ಠೆಗಳನ್ನು,
ಗೆದ್ದ ಗೆಲುವುಗಳನ್ನು, ಸೋತ ಸೋಲುಗಳನ್ನು
ನಿರಾಳವಾಗಿ ನಿಲ್ಲಬೇಕು, ಶಿಶಿರದಲ್ಲಿ ಮರ
ಕಳಚಿಕೊಳ್ಳುವ ಹಾಗೆ ತನ್ನೆಲ್ಲ ಎಲೆಗಳನ್ನು
ನೆನೆಯಬೇಕು ಬೆಳಗೊಳದ ಬೆಟ್ಟದ ಮೇಲೆ
ನಿಂತ ಆ ಗೊಮ್ಮಟನ ಮುಗುಳುನಗೆಯನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT