ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳು

ದೀಪಾವಳಿ ಕಥಾಸ್ಪರ್ಧೆ 2015 -ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 5 ಡಿಸೆಂಬರ್ 2015, 19:46 IST
ಅಕ್ಷರ ಗಾತ್ರ

ಸಾಲಗುಂದಾ ಅಂಬಾಮಠದ ಜಾತ್ರೆಗೆ ಹೊಂಟಿದ್ದ ಸಾಧುವೊಬ್ಬ, ಮನೆ ಮುಂದಲ ಕಟ್ಟೆ ಮೇಲೆ ಕುಂತು ತಲೆಗೆ ಎಣ್ಣೆ ಹಚ್ಚಿಕೊಳ್ಳುತ್ತಿದ್ದ ಹುಡುಗಿಗೆ ‘ಭಿಕ್ಷಾಂದೇಹಿ’ ಅಂದನಂತೆ. ಅವನ ರೂಪಕ್ಕೆ ಅಸಹ್ಯಿಸಿಕೊಂಡ ಅವಳು ಮೂಗು ಮುರಿದು ಒಳಗೆ ಹೋದಳಂತೆ. ನಕ್ಕ ಸಾಧು ಅವಳ ಎಣ್ಣೆಬಟ್ಟಲಿನಲ್ಲಿ ತನ್ನ ತೋರುಬೆರಳ ತುದಿಯನ್ನು ಅದ್ದೀ ಅದ್ದದಂತೆ ಎದ್ದುಹೋದನಂತೆ.

ಅವನು ಹೋದ ಮೇಲೆ ಮತ್ತೆ ಬಂದು ಎಣ್ಣೆ ಹಚ್ಚಿಕೊಳ್ಳುತ್ತಿದ್ದಂತೆ ಆ ಹುಡುಗಿ ಉಟ್ಟ ಬಟ್ಟೆಯಲ್ಲೇ ಗಾಳಿಸೆಳೆತಕ್ಕೆ ಸಿಕ್ಕವಳಂತೆ ಅವನು ಹೋದ ಹಾದಿಯಲ್ಲಿ ಹೋಗೇಬಿಟ್ಟಳಂತೆ. ಹಿಂದಿನಿಂದ ಕರೆಯುತ್ತಿದ್ದ ಅವರಮ್ಮನ ಕೂಗು ಆ ಹುಡುಗಿಗೆ ಕೇಳಿಸಲೇ ಇಲ್ಲವಂತೆ. ಅನುಮಾನಗೊಂಡ ಆಕೆ ಬಟ್ಟಲಿನಲ್ಲಿದ್ದ ಎಣ್ಣೆಯನ್ನು ಅಂಗಳದಲ್ಲಿ ನಿಂತಿದ್ದ ಎತ್ತಿನಬಂಡಿಗೆ ಸುರಿದದ್ದೇ ತಡ, ಬಂಡಿ ಕೂಡ ಸಾಧು ನಡೆದ ದಿಕ್ಕಿಗೆ ತನ್ನಂತಾನೇ ಚಲಿಸುತ್ತ ಹೊಂಟೇಬಿಟ್ಟಿತಂತೆ. ಅದ್ಯಾವ ಮಾಯಕದಲ್ಲೋ ಅದರಲ್ಲಿ ಆ ಹುಡುಗಿಯೂ ಏರಿ ಕುಂತು, ನಿಧಾನವಾಗಿ ಕತ್ತಲಲ್ಲಿ ಕರಗಿಹೋಯಿತಂತೆ. ಹುಡುಕಿ ನೋಡಿದರೆ ಊರಿನ ನಾಲ್ಕೂ ದಿಕ್ಕಿನಲ್ಲಿ ಎಲ್ಲೂ ಬಂಡಿಗಾಲಿಯ ಹೆಜ್ಜೆಗುರುತುಗಳೇ ಇರಲಿಲ್ಲವಂತೆ.

ಇಚ್ಛಾಮರಣಿ ಖ್ಯಾತಿಯ ಈರಮ್ಮವ್ವ ತನ್ನ ಅನುಯಾಯಿಗಳಾದ ಮೂರ್ನಾಲ್ಕು ಜನ ಮುಟ್ಟು ನಿಂತ ಹೆಣ್ಮಕ್ಕಳಿಗೆ, ‘ಸಾಲಗುಂದಾ ಜಾತ್ರೆ ಸಾಧುಗಳು ಬಂದಾಗ ಹೆಣ್ಣುಮಕ್ಕಳು ಯಾಕೆ ಹುಷಾರಾಗಿರಬೇಕು’ ಎಂಬುದನ್ನು ಮನದಟ್ಟು ಮಾಡಿಸಲು ಪ್ರತಿವರ್ಷವೂ ಈ ಕಥೆಯನ್ನು ಹೊಸದಾಗಿ ಹೇಳುತ್ತಿದ್ದಳು.

ಈ ಸಲ ಜಾತ್ರೆಗಿನ್ನೂ ಮೂರು ದಿನವಿರುವಾಗ ಸ್ವಾಮೇರ ಮಗಳು ಶಾರದಾ ಕಾಣೆಯಾದ ಸುದ್ದಿ ಊರ ತುಂಬ ಹರಿದಾಡತೊಡಗಿತು. ಯಾರಾದರೂ ಓಡಿಸಿಕೊಂಡು ಹೋದರೊ? ಅವಳಾಗೇ ಓಡಿ ಹೋದಳೊ? ಅಪಹರಣವಾದಳೊ? ಯಾರಿಗೂ ಗೊತ್ತಿಲ್ಲ. ಏಕಾಂಗಿ ಕೋಳಿಪಿಳ್ಳೆ ಮೇಲೆರಗುವ ಹದ್ದು ಸುತ್ತೀ ಬಳಸಿ ಮತ್ತೆ ಮತ್ತೆ ಅಲ್ಲೇ ಸುತ್ತುವಂತೆ– ಎಲ್ಲ ಮಾತುಕತೆಗಳೂ ಕಡೆಗೆ ಈ ಬೇಪತ್ತೆ ಪ್ರಕರಣದ ವಿಷಯಕ್ಕೇ ತಲುಪಿ ಅದರ ಸುತ್ತ ಗಿರಕಿ ಹೊಡೆಯತೊಡಗಿದವು. ಕೊನೆಗೆ ಏನಾಯಿತೆಂದೇ ಗೊತ್ತಿಲ್ಲದ ಶಾರದಾಳ ಪ್ರಕರಣಕ್ಕೆ ಸಾಧುವಿನ ಕಥೆ ಸಕಾಲಿಕವಾಗಿ ಲಗತ್ತಾಗಿ ಬಾಯಿಂದ ಬಾಯಿಗೆ ಹರಡಿ ಒಂದಕ್ಕೆ ಎರಡಾಗಿ, ಎರಡು ಹನ್ನೆರಡಾಗಿ ಘಟನೆಯ ನಿಗೂಢತೆಗೆ ಭಯಾನಕತೆಯೂ ಬೆರೆತುಬಿಟ್ಟಿತು.

ಈ ಊರ ಜನರೇ ಹಾಗೆ. ತಾವು ಕಾಣದ ಕಥೆಗಳಿಗೆ, ಯಾರೂ ಕಂಡಿರದ ಬಣ್ಣಗಳನ್ನು ಬೆರೆಸಿ, ಕಣ್ಣಾರೆ ಕಂಡಿದ್ದಕ್ಕಿಂತ ಹೆಚ್ಚು ಸತ್ಯವಾಗಿಸಿ ಮೂಳೆ ಮಾಂಸ ತುಂಬಿ ಹಾರಿಬಿಡುವರು. ಹಾಗಾಗಿ ಇಲ್ಲಿ ಒಬ್ಬ ನಾಲ್ಕು ದಿನ ಕಾಣದಿದ್ದರೆ ಸಾಲಗಾರರ ಕಾಟ ತಾಳದೆ ಓಡಿಹೋದನೆಂದೂ; ಎಂಟು ದಿನ ಕಾಣದಿದ್ದರೆ ಸತ್ತೇಹೋದನೆಂದೂ ಸುದ್ದಿಗಳು ಹರಡುತ್ತವೆ. ಪ್ರತಿಯೊಬ್ಬನೂ ತನ್ನ ಕಲ್ಪನಾವಿಲಾಸದಲ್ಲಿ ಇಂಥ ಸಾಲ ಮತ್ತು ಸಾವುಗಳಿಗೆ ಬಗೆಬಗೆಯ ರೆಕ್ಕೆಪುಕ್ಕಗಳನ್ನು ಹೆಣೆಯುವವನೇ. ಮೂರು ದಿನ ಕಾರ್ಯನಿಮಿತ್ತ ಊರಿಗೆ ಹೊರಟವರು ತಾವು ಹೀಗೆ ಅನಾಯಾಸವಾಗಿ ಸಾಯುವುದು, ಸಾಲಗಾರರಾಗುವುದು ಯಾಕೆಂಬ ಮುಂಜಾಗ್ರತೆಯಲ್ಲಿ ಆರು ದಿನ ಮುಂಚಿನಿಂದಲೇ ತಮ್ಮ ಪ್ರವಾಸದ ಕಾರಣ, ವಿವರ ಮತ್ತು ಪರಿಣಾಮಗಳ ಬಗ್ಗೆ ತಾವೇ ಊರಿಗೆಲ್ಲ ಬಿತ್ತಿಕೊಂಡು ಬರುವುದು ಒಂದು ರೂಢಿಯಂತೆ ಇಲ್ಲಿ ಚಾಲ್ತಿಗೆ ಬಂದುಬಿಟ್ಟಿದೆ.

ಹಳ್ಳಿಯೆಂದರೆ ಹಳ್ಳಿಯಲ್ಲದ, ಪಟ್ಟಣವೆಂದರೆ ಪಟ್ಟಣವೂ ಅಲ್ಲದ ಈ ಊರಿನಲ್ಲಿ ಎಲ್ಲರಿಗೂ ಎಲ್ಲರ ಎಲ್ಲವೂ ಗೊತ್ತು. ಆದರೆ ಯಾರಿಗೂ ಯಾವುದೂ ನಿಖರ ಗೊತ್ತಿಲ್ಲ. ಇಲ್ಲಿನ ಪ್ರತಿಯೊಂದರ ಬಗ್ಗೆ, ಪ್ರತಿಯೊಬ್ಬರ ಬಗ್ಗೆ ಅತಿರಂಜಿತವೆನಿಸುವಂಥ ಕಪೋಲಕಲ್ಪಿತ ಕಥೆಗಳಿದ್ದು ಒಂದು ನಿಗೂಢಮಾಯದ ಮುಸುಕುತೆರೆ ಈ ಊರನ್ನು ಮಳೆಗಾಲದ ಮಂಜಿನ ಹಾಗೆ ಸದಾ ಆವರಿಸಿಕೊಂಡಿರುತ್ತದೆ.

ನಾನು ಈ ಊರಿನ ಕಾಲೇಜಿಗೆ ವರ್ಗವಾಗಿ ಬಂದಾಗ ಇಲ್ಲಿಯ ಭೌಗೋಳಿಕ ಪರಿಸರಕ್ಕೆ ಮಾರುಹೋಗಿಬಿಟ್ಟಿದ್ದೆ. ಊರ ನಡುವೆ ಇರುವ ಪರಮಾನಂದನ ಗುಡ್ಡ, ಊರಿನ ನಾಲ್ಕು ದಿಕ್ಕಿನಲ್ಲೂ ಹರಿಯುವ ತುಂಗಭದ್ರಾ ನಾಲೆ, ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಹಸಿರುಗದ್ದೆಯ ಹಾಸು. ಅವುಗಳ ನಡುವೆ ನಮ್ಮ ಕಾಲೇಜು. ಸುಡುವ ಬಿಸಿಲು. ವಿಶಾಲ ಬಯಲು. ಒರಟೊರಟು ಭಾಷೆ. ಮುಗ್ಧ ಮನಸುಗಳು.

ನಮ್ಮ ಕಾಲೇಜಿನ ಒಬ್ಬ ಹುಡುಗಿ ಈ ಶಾರದಾ. ನನ್ನ ಕಣ್ಣುಗಳಲ್ಲಿ ಮನೆ ಮಾಡಿಕೊಂಡ ಮೊತ್ತಮೊದಲ ಸುಂದರಿ.

2
ವರ್ತಕರ ಕುಟುಂಬದ ರಂಗನಾಥನೂ ನಮ್ಮ ಕಾಲೇಜಿನವನೇ.
ಮೂರನೇ ತಲೆಮಾರು ತಿಂದರೂ ಸವೆಯದಷ್ಟು ಆಸ್ತಿಯಿರುವ ಇವನು ಓದು ಬರೆಹದಲ್ಲಿ ಅಂಥಾ ಶ್ಯಾಣ್ಯಾ ಏನಲ್ಲವಾದರೂ ಬಟ್ಟೆ ಬರೆಯಲ್ಲಿ ಮಾತ್ರ ಬಲು ಶೋಕಿದಾರ. ಕಾಲೇಜಿನಲ್ಲಿ ಸದಾ ಕಳಕಳೆಯಾಗಿ ಓಡಾಡುತ್ತಿದ್ದ ರಂಗನಾಥ ಅಮಾವಾಸ್ಯೆಯ ಆಚೀಚಿನ ದಿನಗಳಲ್ಲಿ ಮಾತ್ರ ವಿಪರೀತ ಮಂಕಾಗಿಬಿಡುತ್ತಿದ್ದ.

ಒಮ್ಮೆ ಹೀಗೇ ಕೇಳಿದ್ದೆ– ‘ಯಾಕೋ ಏನಾಯ್ತು? ಮಬ್ಬಿದ್ಯಲ್ಲ?’

‘ನಾಳೆ ಅಮಾಸೆ ಐತೆ ಸರ್’ ಅಂದ.

‘ಅದಿಕೆ?’ ಅಂದೆ ಗೊಂದಲಕ್ಕೊಳಗಾಗಿ.

ಸಣ್ಣಗೆ ಬೆವರುತ್ತ, ಭಯವನ್ನು ಮೀರಲೆತ್ನಿಸುತ್ತ ಪಿಸುದನಿಯಲ್ಲಿ ನನ್ನ ಕಿವಿಯ ಹತ್ತಿರ ಬಂದು ಮೆಲ್ಲನುಸುರಿದ- ‘ಯೋಳೆಡೆ ಸರ್ಪ ಬರುತ್ರೀ ಸರ್’.

ನನ್ನ ಎದೆ ಧಸಕ್ಕಂತು. ಉಗುಳು ನುಂಗಿ ‘ಏನಂದಿ’ ಎಂಬಂತೆ ಮುಖ ಮಾಡಿದೆ.

‘ಇವತ್ತು ರಾತ್ರಿ, ನಾಳೆ ಮತ್ತೆ ನಾಡದ ಯೋಳೆಡೆ ಸರ್ಪ ಬಂದು ನಮ್ಮಮ್ಮನ ಮೈ ಮ್ಯಾಲೆ ಆಡಿ ಹೋಗುತ್ರೀ ಸರ್’ ಅಂದು ನನ್ನನ್ನು ದಿಟ್ಟಿಸಿ ನೋಡಿದ. ಆ ನೋಟ ನನ್ನಲ್ಲಿ ಮತ್ತಷ್ಟು ಭಯ ಹುಟ್ಟಿಸಿತು. ತೋರಗೊಡದೆ-

‘ನೀನು ನೋಡಿದ್ದ್ಯಾ?’ ಎಂದೆ.

‘ನೋಡಿದ ದಿವಸ ನನ್ನ ಜೀವನೇ ಹೋಗಿಬುಡುತ್ರೀ ಸರ್’.

‘ಯಾರು ಹೇಳಿದ್ರು ಹಂಗಂತ?’

‘ಅದೇ ಹೇಳ್ಯಾದ’.

ಸಣ್ಣಗೆ ಬೆವರಿ ಉಗುಳು ನುಂಗಿದೆ.

‘ಸಣ್ಣೋನಿದ್ದಾಗ ಹೊಲಕ್ಕ ಹೋದಾಗೊಮ್ಮೆ ಆ ಹಾವು ದಾರಿಗಡ್ಡ ನಿಂತು ಬುಸುಗುಡುತಿತ್ತು. ನಾನು ಮೂರ್ನಾಲ್ಕು ಸಲ ಗದ ಗದ ನಡಿಗಿ ಉಚ್ಚೆ ಹೊಯ್ಕೊಂಡೆ. ಆಮ್ಯಾಲೆ ಅದೇ ಹಿಂಗಿಂಗಂತ ಹೇಳಿತ್ರಿ ಸರ್’ ಅಂದ.

‘ಅಲ್ಲೋ ಮನ್ಯಾಗ ನಿಮ್ಮಪ್ಪ ಇರ್ತಾನಲ್ಲ?’

‘ಇಲ್ಲ ಸರ್. ಪ್ರತಿ ಅಮಾಸಿ ಹಿಂದಿನ ದಿವಸ ಅತ ದೇವಸೂಗೂರಿಗೆ ನಡಕಂಡು ಹೋಗ್ತಾನ. ಅಮಾಸೆ ಮರುದಿನ ಬರ್ತಾನ’.
ಈ ಸಂಭಾಷಣೆಯ ದಿಕ್ಕನ್ನು ಬದಲಿಸಿದ ನಾನು–

‘ಆಯ್ತು. ಆ ಶಾರದಾ ಸಿಕ್ರೆ ನೋಟ್ಸ್ ತಗದಿಟ್ಟೀನಿ. ಸಂಜಿಕಿ ರೂಮಿಗಿ ಬಂದು ಒಯ್ಯಿ ಅಂತ ಹೇಳು’ ಅಂದೆ.

ಕ್ಷಣ ಹೊತ್ತು ಸುಮ್ಮನೆ ನಿಂತು ನೋಡಿದ ಅವನು. ಅವನ ಕಣ್ಣುಗಳು ಏನೋ ಅಂದಂತಾಯಿತು. ಶಾರದಾಳ ಬಗ್ಗೆ ಇವನಿಗೆ ಹೇಳಬಾರದಿತ್ತೆನಿಸಿತು. ಅಷ್ಟು ಹೊತ್ತಿಗೆ ಹೊತ್ತು ಮುಳುಗಿಯಾಗಿತ್ತು.

ಅದಾಗಿ ಎಷ್ಟೋ ದಿನಗಳ ನಂತರ ಒಂದು ಬೆಳಿಗ್ಗೆ ಗಂಗಪ್ಪನ ಹೋಟಲಿನಲ್ಲಿ ನಾಷ್ಟಾ ಮಾಡುತ್ತಿರುವಾಗ ಅಡುಗೆಮನೆಯಲ್ಲಿ ಹಾವು ಬಂತೆಂದು ಹಾಹಾಕಾರ ಎದ್ದಿತು. ಇದ್ದಕ್ಕಿದ್ದಂತೆ ರಂಗನಾಥನ ಕಥೆ ನೆನಪಾಗಿ ಬಗಲಾಗೇ ಕುಂತಿದ್ದ ನಮ್ಮ ಕಾಲೇಜಿನ ಪೀವನ್ ಸ್ಟೈಲ್ ಕಿಂಗ್ ಕರಿಯಪ್ಪನನ್ನು ಕೇಳಿದೆ. ಅವನಿಗೆ ಈ ಊರಲ್ಲಿ ಯಾರ್ಯಾರು ಯಾರ್ಯಾರ ಜತಿಗಿ ಎಷ್ಟೆಷ್ಟು ಸಲ, ಎಲ್ಲೆಲ್ಲಿ, ಏನೇನು ಮಾಡ್ಯಾರ, ಮಾತಾಡ್ಯಾರ ಅನ್ನೋದೆಲ್ಲ ಗೊತ್ತು. ಕಂಪೆನ್ಸೇಷನ್ ಗ್ರೌಂಡಿನ ಅವನಿಗೆ ಮಲಗುವಾಗೂ ಇನ್‌ಸರ್ಟ್ ಮಾಡಿಕೊಳ್ಳೋ ಖಯಾಲಿ. ಇಪ್ಪತ್ನಾಲ್ಕು ತಾಸು ಟಿಪ್‌ಟಾಪ್ ಡ್ರೆಸ್ಸಿಂಗ್. ಕಾಲೇಜಿನೊಳಗೆ ಅದು ಇದು ನೆವನ ಮಾಡಿ ಹುಡುಗೇರ ಸುತ್ತನೇ ಓಡ್ಯಾಡಿಕೊಂಡಿರೋನು. ಅವನು ನನ್ನ ಪ್ರಶ್ನೆಗೆ ಉಲ್ಲಸಿತನಾಗಿ ಕಿವಿಯ ಹತ್ತಿರ ಬಂದು ಪಿಸುದನಿಯಲ್ಲಿ ಎಲ್ಲ ಹೇಳಿದ.

‘ಮತ್ತೆ ಅವ್ನು ರಂಗ ಯಾಕೋ ಒಂದು ವಾರಾಯ್ತು ಕಾಲೇಜಿಗೇ ಬಂದಿಲ್ಲ. ಅವನದೇನು ಸುದ್ದಿ?’ ಕೆದಕಿದೆ.

ರಂಗನಾಥನ ಕಣ್ಮರೆಯ ಬಗ್ಗೆಯೂ ಊರ ತುಂಬ ನೂರಾರು ಊಹಾಪೋಹಗಳೆದ್ದಿದ್ದವು. ಜಿದ್ದಿಗೆ ಬಿದ್ದು ಅಮಾಸೆ ರಾತ್ರಿ ಹಾವು ನೋಡಿದ್ದಕ್ಕೆ ಅದು ಅವನನ್ನು ರಾತ್ರಿ ಬೆಳಗಾನ ಬೆನ್ನಟ್ಟಿ ಓಡಿಸಿಕೊಂಡು ಹೋಗಿ ಸೀಮಾಂತರ ದಾಟಿಸಿ ಬಂದಿದೆ ಅಂತ ಕೆಲವರು. ಅಪ್ಪ ಅಮ್ಮನ ದಂಧೆಗೆ ವಿರೋಧಿಸಿದ್ದಕ್ಕೆ ಸೋದರಮಾವನ ಊರಿಗೆ ಕಳಿಸಿದ್ದಾರಂತೆ ಅಂತ ಇನ್ನೂ ಕೆಲವರು. ಚಾಗಭಾವಿ ಹುಡುಗಿಗೆ ಲವ್‌ಲೆಟರ್ ಕೊಟ್ಟಿದ್ದು ಗೊತ್ತಾಗಿ ಆ ಊರಿನ ಹುಡುಗರು ಮೆತ್ತಗ ನಾದಿ ಮನಿಗೆ ಬುಟ್ಟುಬಂದಿದ್ದು, ‘ಯಾವ ಮುಖ ಇಟಕಂಡು ಹೊರಗ ಬರ್ಲಿ’ ಅಂತ ಮನ್ಯಾಗೇ ಮುಸುಗು ಹಾಕ್ಕೆಂಡು ಮಕ್ಕಂಡಾನಂತೆ ಅಂತ ಮತ್ತೂ ಕೆಲವರು. ಯಾವುದು ಸತ್ಯ ಯಾವುದು ಸುಳ್ಳು ಯಾರಿಗೂ ನಿಚ್ಚಳಿಲ್ಲ. ಅರ್ಧಪಾಲು ಅನಿಶ್ಚಯತೆ ಹೊತ್ತೇ ತಿರುಗುವ ಈ ಊರಿನ ಗಾಳಿ ಕೂಡ ಯಾವಾಗ ಕಟ್ಟಾಗುವುದೋ ಯಾವನಿಗೂ ಗೊತ್ತಿಲ್ಲ.

ಆ ಕಡೆ ಈ ಕಡೆ ಕಳ್ಳನೋಟ ಬೀರಿ, ಸುಳ್ಳು ಮೆಲುದನಿ ಮಾಡಿ ಕರಿಯಪ್ಪ ಹೇಳಿದ-

‘ಅವುನ್ದು ಭಾಳ ದೊಡ್ಡ ಕಥೆ ಆದ ಬುಡ್ರಿ ಸಾರ್. ಅದು ಬ್ಯಾರೆನೇ ಐತೆ. ಆಮ್ಯಾಲೆ ಹೇಳ್ತಿನಿ’ ಅಂದು ಪ್ಲೇಟಿನಲ್ಲಿ ಕೈತೊಳೆದುಕೊಂಡ. ಒಟ್ಟಿಗೆ ಬಿಚ್ಚಿಕೊಂಡರೆ ಅದು ಗುಟ್ಟೇ ಅಲ್ಲ ಅನ್ನುವುದು ಅವನ ಪಾಲಿಸಿ.

ನಾವು ಮೌನವಾಗಿ ಕಾಲೇಜಿನ ಕಡೆ ಹೆಜ್ಜೆ ಹಾಕುತ್ತಿರುವಾಗ ದಾರಿಯ ಆಚೀಚೆಯಿದ್ದ ಬೃಹತ್ ಬೇವಿನಮರಗಳು ಮತ್ತು ಹುಣಸೇಗಿಡಗಳು ಗಹನವಾಗಿ ಆಲೋಚಿಸುತ್ತಿರುವಂತೆ ಎಲೆಯಲುಗಿಸದೆ ನಿಂತುಕೊಂಡಿದ್ದವು. ಇದ್ದಕ್ಕಿದ್ದಂತೆ ಸಣ್ಣಗೆ ನೆಲ ಮಟ್ಟದಲ್ಲಿ ಸುಳಿದಿರುಗುತ್ತ ಸುರುವಾದ ಸುಂಟರಗಾಳಿ ನಾಲ್ಕಂತಸ್ತಿನೆತ್ತರಕ್ಕೆ ಬೆಳೆದು ಸುತ್ತಲಿನ ಧೂಳು, ಕಸ, ಕಾಗದ, ಪ್ಲಾಸ್ಟಿಕ್ ಚೀಲಗಳನ್ನೆಲ್ಲ ತನ್ನ ಮಾಯಾಜೋಗುಳದಲ್ಲಿ ಕೂರಿಸಿಕೊಂಡು ಗಿರಗಿರಗಿರಗಿರ ಅಂತ ಬುಗುರಿಯಂತೆ ತಿರುಗತೊಡಗಿತು. ನೆರೆದವರೆಲ್ಲರ ಕಣ್ಣುಗಳಿಗೆ ಮಣ್ಣು ಬಿದ್ದು ಎಲ್ಲ ಕಣ್ಣುಜ್ಜಿಕೊಳ್ಳತೊಡಗಿದರು. ಈ ಗಾಳಿಯ ಏಟಿಗೆ ಮರಗಳು ವಿಕಾರವಾಗಿ ತಲೆಕೆದರಿಕೊಂಡು ಭಯಾನಕ ದೆವ್ವಗಳಂತೆ ತೂಗತೊಡಗಿದವು.

3
ಇದೆಲ್ಲ ಆಗಿ ಒಂದೆರಡು ದಿನವಾಗಿರಬೇಕಷ್ಟೆ.

ಅನಾದಿ ಕಾಲದಿಂದ ಖಾಲಿ ಬಿದ್ದಿದ್ದ ನನ್ನ ರೂಮಿನ ಪಕ್ಕದ ರೂಮಿಗೆ ಒಬ್ಬ ತಮಿಳರಸನ್ ಬಂದು ಸೇರಿಕೊಂಡ. ಓನಾಮಶೆಟ್ಟಿ ಮಾಸ್ಟರು ಖಿನ್ನತೆಗೊಳಗಾಗಿ ಸುಟಕೊಂಡು ಸತ್ತಾಗಿನಿಂದ ಆ ರೂಮು ಖಾಲಿ ಬಿದ್ದಿತ್ತು. ಅಷ್ಟಲ್ಲದೆ ನನ್ನ ರೂಮಿನೆದುರಿಗೆ, ಹಾರಿ ಸಾಯುವವರಿಗಾಗಿಯೇ ಬಾಯಿ ತೆರೆದುಕೊಂಡು ನಿಂತಿದ್ದ ಕುಖ್ಯಾತ ಉಪ್ಪುನೀರಿನ ಗಿರಕಿಬಾವಿಯಿತ್ತು. ಅದನ್ನು ತೋಡಿಸಿದಾಗಿನಿಂದ ಈವರೆಗೆ ಮೂವತ್ತಾರು ಮಂದಿ ಹೆಂಗಸರು ಬಿದ್ದು ಸತ್ತಿದ್ದು, ನಡುರಾತ್ರಿ ಆ ಹೆಣ್ಣುದೆವ್ವಗಳೆಲ್ಲ ಒಟ್ಟಾಗಿ ಕುಳಿತು ಟೆಂಗಿನ ಗರಟದಲ್ಲಿ ಸೆಗಣಿ ನೀರಿನ ಚಾ ಕುಡಿಯುತ್ತ, ಗಹಗಹಿಸಿ ನಗುತ್ತ, ಚೌಕಾಬಾರ ಆಡುತ್ತಿರುತ್ತವೆಂದೂ, ತಮ್ಮ ಗಂಡ ಮಕ್ಕಳನ್ನು ನೆನೆದು ರಾಗವಾಗಿ ಅಳುತ್ತಿರುತ್ತವೆಂದೂ ಪ್ರತೀತಿ ಇತ್ತು. ಹಾಗಾಗಿ ಯಾರೂ ಈ ಎರಡು ರೂಮುಗಳ ತಂಟೆಗೆ ಬರುತ್ತಿರಲಿಲ್ಲ. ಬಾಡಿಗೆ ಕಮ್ಮಿ ಎಂಬ ಆಸೆಗೆ ನಾನಲ್ಲಿ ಸೇರಿಕೊಂಡಾಗ ನನ್ನನ್ನು ಬಿಡಿಸಲು ನೋಡಿದವರೇ ಹೆಚ್ಚು. ಸಾಳೇರ ಬಸ್ಸಪ್ಪ ತಾತನೂ ಅಂಥವರ ಪೈಕಿ ಒಬ್ಬ.

ಆತ ಒಮ್ಮೆ ರೂಮಿಗೆ ಬಂದು– ‘ಒಮ್ಮೆ ತನಗೆ ಈ ಹೆಣ್ಣು ದೆವ್ವಗಳು ಬೀಡಿ ಹಚ್ಚಿಕೊಳ್ಳಲು ಬೆಂಕಿಕಡ್ಡಿ ಕೇಳಿದ್ದವೆಂದೂ, ತಾನು ಎಡಗಾಲು ಚಪ್ಪಲಿ ತೆಗೆದ ಮೇಲೆ ಹೆದರಿ ಓಡಿಹೋಗಿದ್ದವೆಂದೂ, ಹೋಗುವಾಗ ತನ್ನ ಮುಖದ ಮೇಲೆ ಮಾಡಿದ್ದ ಉಗುರಿನ ಗೀರುಗಾಯಗಳು ಇನ್ನೂ ಹಾಗೇ ಇವೆ’ಯೆಂದೂ ಮುಖದ ಸಾಲುಗೆರೆಗಳನ್ನು ಸಾಕ್ಷಿಯಾಗಿ ತೋರಿಸಿದ್ದ. ಈಗ ಪಕ್ಕದ ರೂಮಿಗೂ ಒಬ್ಬ ನನ್ನಂಥವ ಬಂದಿದ್ದನ್ನು ನೋಡಿ ಅಂತೂ ಅದೆಲ್ಲ ನೆನಪಾಗಿ ನಿಟ್ಟುಸಿರು ಬಿಟ್ಟೆ. ಆದರೆ ಅವನು ನನ್ನ ಖಾಸಗೀತನಕ್ಕೆ ಅಡ್ಡಿಯಾಗಬಹುದೆಂಬ ಅಳುಕೂ ಒಳಗೊಳಗೆ ಮಿಡಿಯತೊಡಗಿತು. ಬಾಡಿಗೆ ಕಮ್ಮಿ ಎಂಬುದು ಈ ರೂಮನ್ನು ಸೇರಿಕೊಳ್ಳುವಾಗ ನನಗಿದ್ದ ಸಕಾರಣವಾಗಿತ್ತಾದರೂ ಈಗ ಅದನ್ನು ಎಷ್ಟು ಹೆಚ್ಚಿಸಿದರೂ ಬಿಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಸೃಷ್ಟಿಕ್ರಿಯೆಗೆ ಹೇಳಿ ಮಾಡಿಸಿದಂಥ ನಿರ್ಮಾನುಷ ಏಕಾಂತದ ಖಾಸಗೀತನವು ಎಷ್ಟು ದುಡ್ಡು ಕೊಟ್ಟರೆ ತಾನೆ ಇಷ್ಟು ದಂಡಿಯಾಗಿ ಸಿಗಲು ಸಾಧ್ಯ?

ಈಗೀಗ ಒಂದು ವಾರದಿಂದ ರೂಮು ಭಣಭಣ ಅನ್ನಿಸತೊಡಗಿತ್ತು. ತಮಿಳರಸನ್ ಆಗಮನ ಹೊಸ ಉತ್ಸಾಹ ತಂದಿತು. ಯಾರೋ ಅವನ ಹೆಸರು ಮೂಕ್‌ಭಾರತ್ ಎಂದರು. ಮುಬಾರಕ್ ಇರಬಹುದೆಂದುಕೊಂಡೆ. ತುಂಬಾ ಲವಲವಿಕೆಯ ಆಸಾಮಿ. ಎದುರು ಬಂದಾಗೊಮ್ಮೆ ‘ವಣಕ್ಕಂ ಸಾರ್’ ಅನ್ನೋನು. ರಾತ್ರಿ ‘ಸಾಪಡಾಯಿಚಾ?’ ಅಂತ ಪರಿಚಯದ ಸಲುಗೆಯಲ್ಲಿ ಸೌಜನ್ಯ ಬೆರೆಸಿ ಕೇಳೋನು. ಅಷ್ಟು ಬಿಟ್ಟರೆ ಹೆಚ್ಚಿಗೆ ಮಾತಿನವನಲ್ಲ. ಮನೆಯಲ್ಲಿ ರಾತ್ರಿಯೆಲ್ಲ ದೀಪ ಉರಿತಿರೋದು. ತಲೆ ಮೇಲೊಂದು ಅಗಲದ ಹರಿವಾಣದಲ್ಲಿ ಗಿಳಿ, ಬೆಕ್ಕು, ಇಲಿ, ನಾಯಿ ಮುಂತಾದ ಪ್ರಾಣಿಗಳ ಮಣ್ಣಿನ ಬಣ್ಣದ ಬೊಂಬೆಗಳನ್ನಿಟ್ಟುಕೊಂಡು ದಿನವೆಲ್ಲ ಓಣಿ ಓಣಿ ತಿರುಗಿ ಮಾರೋನು.

ಹೀಗೇ ಒಮ್ಮೆ ನಾನು ಕಾಲೇಜಿಗೆ ಹೊರಟಿದ್ದಾಗ ಫಟಿಂಗ ಹುಡುಗರ ಗುಂಪೊಂದು ದೂರದಲ್ಲಿ ನಿಂತು ಯಾರನ್ನೋ ಸುತ್ತುವರೆದಿತ್ತು. ಯಾರೆಂದು ಕುತೂಹಲದಿಂದ ಹಣಿಕಿದೆ. ಮೂಕ್‌ಭಾರತ್ ಮತ್ತೊಬ್ಬ ಮುದುಕನೊಂದಿಗೆ ಏನೋ ಮಾತಾಡುತ್ತಿದ್ದ. ಆ ಮುದುಕನೇನು ಗೊಂಬೆ ಖರೀದಿಸುವ ಗಿರಾಕಿಯಂತೆ ಎಳ್ಳಷ್ಟಕ್ಕೂ ಅನಿಸಲಿಲ್ಲ. ನಾನು ಮೂಕ್‌ಭಾರತ್‌ನನ್ನು ಮಾತಾಡಿಸಿದೆ. ಕೈಸನ್ನೆ–ಬಾಯಿಸನ್ನೆಗಳ ನೆರವಿನಿಂದ ಒಂದೆರಡು ಕುಶಲೋಪರಿ ಮಾತು ಪೂರೈಸುವಷ್ಟಕ್ಕೆ ನಮ್ಮ ಸಂಭಾಷಣೆ ಮುಕ್ತಾಯ ಕಂಡಿತು. ಹೊಸ ಮುದುಕನತ್ತ ನೋಡಿದೆ. ಆತ ವಿಚಿತ್ರವಾಗಿದ್ದು ನನ್ನನ್ನು ಸೂಜಿಗಲ್ಲಿನಂತೆ ಸೆಳೆದ. ಹ್ಯೂಯೆನ್ ತ್ಸಾಂಗ್‌ನಂತೆ ಬಿದಿರಿನ ಛತ್ರಿ ಹಿಡಿದು, ಹೆಗಲಿಗೆ ಬಿದಿರಿನ ಬುಟ್ಟಿ ಹಾಕಿಕೊಂಡಿದ್ದ. ಕೈಯಲ್ಲಿ ಕಂದೀಲು ಬೇರೆ. ಭುಜದ ಮೇಲೆ ಕೂತು ಹೇನು ಹೆಕ್ಕುತ್ತಿರುವ ಒಂದು ಚೂಟಿ ಕೋತಿಮರಿ. ಒಂದೇ ಕಣ್ಣಿನ ಗುಂಡು ಕನ್ನಡಕಕ್ಕೆ ಕರಿದಾರ ಕಟ್ಟಿ ಕಿವಿಗೆ ಸಿಕ್ಕಿಸಿದ್ದ ಆತ ಕಪ್ಪಗೆ ಲಕ್ಷಣವಾಗಿದ್ದ. ಮೂಕ್‌ಭಾರತ್ ನನ್ನತ್ತ ಕೈ ತೋರಿಸಿ ‘ಸಾರು ಲೆಚ್ಚರಾರು’ ಎಂದ.

‘ಐ ಯಾಮ್ ಹರ್ನಾಂಡೋ ಶಾಂತರಾಜ್. ನೈಸ್ ಮೀಟಿಂಗ್ ಯು’ ಎಂದ ಮುದುಕ ಅಪ್ಪಟ ಅಮೆರಿಕನ್ ಎಕ್ಸೆಂಟಿನಲ್ಲಿ. ದಂಗು ಹೊಡೆದ ನಾನು–

‘ಎಲ್ಲಿರ್ತೀರಿ?’ ಎಂದು ಒಂದು ಸಪ್ಪೆ ಪ್ರಶ್ನೆ ಕೇಳಿದೆ. ಪರಮಾನಂದನ ಗುಡ್ಡದ ಕಡೆ ಕೈ ಮಾಡಿ ಗವಿಯೊಂದನ್ನು ತೋರಿಸಿದ. ಅಲ್ಲಿ ಐದಾರು ಕೋತಿಗಳು ಟಣ್ಣ ಟಣ್ಣ ಎಂದು ಎಗರಾಡುತ್ತಿದ್ದವು.

‘ಬೈ ಸೀಯು ಎಗೇಯ್ನ್’ ಎಂದು ಹರ್ನಾಂಡೋ ಹೊರಡುತ್ತಿದ್ದಂತೆ ಹುಡುಗರು ಅವನ ಹಿಂದೆ ‘ಹಳ್ಳುಂಡೆ/  ಗುಪ್ಪುಂಡೆ/ ತಿರೀಗಿ ಬಂದವರಿಗೆ/ ಹೇಲುಂಡೆ’ ಅಂತ ಕಿಚಾಯಿಸುತ್ತ ಹಿಂಬಾಲಿಸತೊಡಗಿದರು. ಅವನು ಸಿಟ್ಟಿಗೆದ್ದು ಹುಡುಗರತ್ತ ಕಲ್ಲು ತೂರುವುದು. ಹುಡುಗರು ತಪ್ಪಿಸಿಕೊಂಡು ಮತ್ತೆ ಅದೇ ಹಾಡು ಹಾಡಿ ಕಿಚಾಯಿಸುವುದನ್ನು ನಾನು ನಿಂತು ನೋಡಿದೆ. ಮೂಕ್‌ಭಾರತ್ ಆತನ ಜೊತೆ ಅದೇನು ಮಾತಾಡುತ್ತಿದ್ದ, ಅದ್ಯಾಕೆ ಅವನು ಅರ್ಧಕ್ಕೆ ಬಿಟ್ಟು ಹೋದ, ತಮಿಳು ಬಿಟ್ಟು ಮತ್ತೊಂದು ಗೊತ್ತಿರದ ಇವನು ಅವನೊಂದಿಗೆ ಅದ್ಹೇಗೆ ಮಾತಾಡುತ್ತಿದ್ದ ಎಂದು ಯೋಚಿಸಿದೆ. ಮೈ ಜುಮ್ ಎಂದಿತು.

ಕಾಲೇಜಿನಲ್ಲಿ ಕರಿಯಪ್ಪನ ಮುಂದೆ ಈ ವಿಷಯ ಪ್ರಸ್ತಾಪಿಸಿದೆ.

‘ಏ ಸುಮ್ನಿರ್ರಿ ಸರ್. ಹರ್ನಾಂಡ್ ಇಲ್ಲ, ಬದ್ನೆಕಾಯಿ ಇಲ್ಲ. ಅವನು ಅಳ್ಳೆಪ್ಪ. ಹುಚ್ಚದು ಅದು. ಸುತ್ತ ಹತ್ತಳ್ಳ್ಯಾಗ ಮಿಕ್ಕಿದ ಹುಚ್ಚರು ಇರ್ತಾರಲ್ಲ ಅಂಥವುಟ್ರುನ್ನ ನಮ್ಮೂರಿಗೆ ತಂದು ಬುಡ್ತಾರ. ಸೆಟ್ ಆಗ್ಲಿ ಅಂತ. ಊರ ತುಂಬ ಓಸು ಅವೇ ತುಂಬ್ಯಾವ ನೋಡ್ರಿ. ‘ಅಂಥವ್ರು ಇಂಥವ್ರು ಕೂಡಿ ಸಂತಿಗೆ ಹೋದ್ರೆ, ಸಂತ್ಯಾಗುನೂ ಅಂಥವ್ರೇ ಭೆಟ್ಟ್ಯಾಗಿದ್ರಂತ’ ಹಂಗ ಇಂಥವೇಸು ಹುಚ್ಚುವು ಬಂದಾವ ಅವೆಲ್ಲ ಇಲ್ಲಿ ಹೊಂದಿಕೆಂಡಿದ್ದು ಇರ್ತಿರ್ತ ಆರಾಮಾಗಿ ಓಗ್ಯಾವ. ಅದೇ ಈ ಊರಿನ ವಿಶೇಷ. ಈ ಮುದೆದು ಬಂದು ಇನ್ನ ಮೂರು ದಿವಸ ಆಗಿಲ್ಲ’ ಅಂದು ಕಿಸಕ್ಕನೆ ನಕ್ಕ.

ಲ್ಯಾಬ್ ಅಟೆಂಡರ್ ಹುಸೇನಪ್ಪ ತಾನೇನು ಕಡಿಮೆ ಎಂಬಂತೆ–

‘ಏ ಅದ್ಯಾವ ದೊಡ್ಡ ಸುದ್ದಿ. ಈಗ ನಮ್ಮೂರಿಗೆ ಗುಗ್ಗರಿತಾತ ಅಂತ ಇನ್ನೊಂದು ಆಂಟಿಕ್ ಪೀಸ್ ಬಂದಾದ. ಸಂಜೀತನಕ
ಊರಾಗೆಲ್ಲೂಕಾಣಸಾದಿಲ್ಲ. ಸಂಜಿಕೆ ಹೆಂಡದಂಗಡ್ಯಾಗ ಗುಗ್ಗರಿ ಮಾರಾಕ ಬಂದಾಗೇ ಅತನ ದರ್ಶನ. ಈಗ ಎರಡು ಮೂರು ದಿವಸಲಿಂದ ಬರಾಕತ್ಯಾನ. ಅಬಾಬಬಬಾ ಏನು ಗುಗ್ಗರೀರಿ ಅವು. ಕಡ್ಲೆಗುಗ್ಗರಿ, ಹುಣಸೇಪಕ್ಕ, ಚಳ್ಳಂಬ್ರಿ ಗುಗ್ಗರಿ, ಅಲಸಂದಿ ಗುಗ್ಗರಿ ಹಂಗೇ ತುಟೀಲೇ ಕಡಿಬೇಕು ಹಂಗಿರ್ತಾವ. ಗಡಂಗು ಅಂಬ ಗಡಂಗು ಘಮ್‌ಘಮ್ ಘಮಾಸ್ತಿರ್ತಾದ ನೋಡ್ರಿ ಗುಗ್ಗರಿ ವಾಸನೆಗೆ. ಚಾಕಣ ಮಾರವ್ರುನ್ನ ಈಗ ಮೂಸಿ ನೋಡವ್ರಿಲ್ಲ ಅಂದ್ರೆ ನೀವೇ ತಿಳಕಳ್ರಿ’ ಅಂದ.

‘ಮದ್ಯಾಣ ನಾಕು ಗಂಟೆಲಿಂದ ನಮ್ಮ ಓಣ್ಯಾಗುನೂ ಬರ್ತಾನ. ನಮ್ ಗಿಳಿ ತಾತನ ದೋಸ್ತ್ ಅತ ಅಂದೆ’ ನಾನು. ಮುಂದೆ ಬಂದ ಕರಿಯಪ್ಪ ಗುಟ್ಟು ಹೇಳುವವನಂತೆ ಮೆಲುದನಿಯಲ್ಲಿ–

‘ಗುಗ್ಗರಿ ತಾತ ನಕ್ಸಲೈಟ್ ಇರಬೌದು ಅಂತನೂ ಪುಕಾರಾದ. ಅತನ ಮನೆ ಎಲ್ಲ್ಯಾದ ಒಬ್ರನ್ನ ನೋಡ್ಯಾರ? ಅಷ್ಟು ಗುಗ್ಗರಿ ಅಷ್ಟು ರುಚಿರುಚಿಲೆ ದಿನಾಲಿ ಯಾರು ಕುದಿಸಿಕೊಡ್ತಾರತಗ? ಅಂಗೆ ತೆಲುಗು, ಹಿಂದಿ ಎಲ್ಲ ಮಾತಾಡ್ತಾನ ಸಾರ್ ಅತ. ಪರಮಾನಂದನ ಗುಡ್ಡದಾಗ ರಾಜಾರಾಮನ ಗುಂಡಿನ ಬುಡುಕ ಗವಿ ಐತೆಲ್ಲ, ಅಲ್ಲಿ ಇವರು ಪಿಸ್ತೂಲು, ಫೋನು ಎಲ್ಲ ಇಟ್ಟಾರಂತ. ಉಗುರುಸಿದ್ಧನ್ನ ಹುಚ್ಚ ಅಂತಿದ್ವಲ್ಲ, ಅವನೇ ಇವರ ಬಾಸ್ ಅಂತ’ ಎಂದ.

ಹುಸೇನಪ್ಪನಿಗೆ ಕರಿಯಪ್ಪನ ಮಾತು ಸಹನ ಆಗಲಿಲ್ಲ.

4
‘ಸಾರ್..’ ಎನ್ನುತ್ತ ಬಾಗಿಲು ಕಟಕಟಾಸಿದ ಹುಸೇನಪ್ಪ.

ಅವತ್ತು ಅಯಿತವಾರ ಅಮಾವಾಸ್ಯೆ. ಮಟಮಟ ಮಧ್ಯಾಹ್ನ. ನಮ್ಮ ರೂಮಿನೆದಿರಿನ ಉಪ್ಪುನೀರ ಭಾವಿ ರಾವು ರಾವು ಹೊಡೆಯುತ್ತಿತ್ತು. ಮೂರು ದಾರಿಗಳು ಕೂಡುವ ಆ ಕತ್ರಿಯಲ್ಲಿ ಅವತ್ತು ಎಲ್ಲೆಂದರಲ್ಲಿ ದೃಷ್ಟಿ ತೆಗೆದು ಬಿಸಾಡಿದ ತತ್ತಿ, ಡಬ್ಬಣ ಚುಚ್ಚಿಸಿಕೊಂಡಿರುವ ಕುಂಕುಮ ತುಂಬಿದ ನಿಂಬೆಹಣ್ಣು, ಕೇರು, ಮೆಣಸಿನಕಾಯಿ, ಮಣ್ಣಿನಪರಾತ ಅರಿಶಿನ ಕುಂಕುಮ ಕಲಸಿಟ್ಟ ಅನ್ನ, ಡಬ್ಬು ಬಿದ್ದ ಗಡಿಗಿ, ಕಪ್ಪು ಬಣ್ಣದ ಬಟ್ಟೆಗೊಂಬೆಗಳು ಬಿದ್ದಿದ್ದವು. ರೂಮಲ್ಲಿ ಅಡ್ಡಾಗಿದ್ದವನಿಗೆ ಕಣ್ಣುಗಳು ಹಗ್ಗ ಕಟ್ಟಿ ಎಳೆದಂತೆ ಎಳೆಯತೊಡಗಿದ್ದವು. ಒಂಥರಾ ವಾತಾವರಣವೇ ಸುಂದು ಬಡಿದಂತಿತ್ತು.

‘ಬಾ ಹುಸೇನಪ್ಪ. ಏನು ಸುದ್ದಿ?’ ಅನ್ನುತ್ತ ಎದ್ದು ಕೂತೆ.

‘ಹೆಹೆ ಏನಿಲ್ಲ ಸಾರ್. ಊಟ ಆಯ್ತು ಅಂಗೇ ಮಾತಾಡ್ಸಿಕೆಂಡು ಓಗಾಮು ಅಂತ ಬಂದೆ. ಸಂಡೆ ಬಂದ್ರ ಬೋರು ಸಾರ್. ಹೊತ್ತೇ ಓಗದಿಲ್ಲ’ ಅನ್ನುತ್ತ ಹಾಸಿಗೆಯಿಂದಾಚೆ ನೆಲದ ಮೇಲೆ ಕುಳಿತುಕೊಂಡ.

‘ಹೌದೋ ಹುಸೇನಪ್ಪ. ನಮ್ಮ ಗಿಳಿ ತಾತ ಮುಬಾರಕ್ ಗೂಡ ಇಲ್ಲ. ನಿನ್ನೆಲಿಂದ ಬೀಗ ಹಾಕ್ಯಾದ ರೂಮು. ಇಲ್ಲಂದ್ರೆ ಅದು ಇದು ಮಾತಾಡಿಕೆಂತ ಹೊತ್ತು ಹೋಗಿದ್ದೇ ಗೊತ್ತಾಗ್ತಿದ್ದಿಲ್ಲ’ ಅಂದೆ.

‘ಓ ದೇವ. ಅತ ಪರಾರಿ ಆಗಿದ್ದು ಹಳೆ ಸುದ್ದಿ ಆಯ್ತು. ಊರಾಗ ಈಗ ಹಳ್ಳೆಪ್ಪ ತಾತ ಮಾಯ ಆಗಿರ ಸುದ್ದಿ ನಡ್ಯಾಕತ್ಯಾದ. ಗವ್ಯಾಗ ಕೋತಿಮರಿ, ಕಂದೀಲು ಕಟ್ಟಿ ಹಾಕಿ ನಸಿಗ್ಗೆ ತೆಂತೆಂಡಿಗೆ ಅಂತ ಹೋದಾತ ಇನ್ನ ಬಂದಿಲ್ಲಂತ’ ಎಂದ.

ಗಿಳಿ ಮುಬಾರಕ್ ಒಂದು ಮಾತೂ ಹೇಳದೆ ಹೋದುದು ಆಶ್ಚರ್ಯವುಂಟು ಮಾಡಿತು. ಹರ್ನಾಂಡೋ ಮಾಯವಾದದ್ದಕ್ಕೂ ಇದಕ್ಕೂ ಏನಾದರೂ ಸಂಬಂಧವಿರಬಹುದೇ ಅಂತ ಆಲೋಚನೆಗಿಳಿದೆ. ಸ್ವಲ್ಪ ಹೊತ್ತಿನ ನಂತರ ಕಣ್ಣು ಸಣ್ಣಾಗಿಸಿಕೊಂಡು-
‘ನಡಿ ಹುಸೇನಪ್ಪ ಪರಮಾನಂದನ ಗುಡ್ಡಕ್ಕ ಹೋಗಮು. ರಾಜಾರಾಮನ ಗುಂಡಿನ ಬುಡುಕ ಉಗುರುಸಿದ್ಧ ಅದಾನೇನು ನೋಡಿ ಬರಮು’ ಅಂದೆ.

‘ಏ ಬುಡ್ರಿ ಸಾರ್ ಈ ಬೆಟ್ಟನ ಬಿಸಿಲಿನ್ಯಾಗ ನೀವೇನ್ ಹಚ್ಚೀರಿ? ಅಲ್ಲಿ ಫೋನು ಪಿಸ್ತೂಲು ಐದಾವ ಅಂತ ಆ ವಾಸಿನಿ ತಪ್ಪಿದೋನು ಕರ್‍ಯಾ ಹೇಳಿದ್ದು ಖರೇವು ಅಂತ ನಂಬಿರೇನು ನೀವು? ಅಲ್ಲಿ ದಿನಾಲಿ ನಾವೇ ಪ್ಯಾಕಾಟ ಆಡ್ತೀವಿ. ಹುಡುಗ್ರು ಇಸ್ಪೀಟ್ ಪ್ಯಾಕು ಎಗರುಸ್ತಾರಂತೇಳಿ ಅಲ್ಲಿ ಉಗುರುಸಿದ್ಧ ಮಕ್ಕಂಡಿರ್ತಾನ ಅಂತ ಪುಕಾರೆಬ್ಬಿಸಿದವ್ರೇ ನಾವು’ ಅಂದ.

ನಾನು ಗೊಂದಲಕ್ಕೆ ಬಿದ್ದೆ. ಆದರೂ ನನಗೆ ಹುಸೇನಪ್ಪನ ಈ ಮಾತು ಅಷ್ಟು ಒಪ್ಪಿಗೆಯಾಗಲಿಲ್ಲ. ಒಂದು ಸಲ ಹೋಗಿ ನೋಡುವುದೇ ಸರಿ ಅಂತ ಮನಸ್ಸು ಬಲವಾಗಿ ಹಾತೊರೆಯತೊಡಗಿತು. ಎರಡ್ಮೂರು ವಿಧದಲ್ಲಿ ಮನವೊಲಿಸಲು ನೋಡಿದೆ. ಅದ್ಯಾಕೋ ಜಪ್ಪಯ್ಯ ಅಂದರೂ ಹುಸೇನಪ್ಪ ತನ್ನ ಪಟ್ಟು ಬಿಡಲಿಲ್ಲ. ಒಬ್ಬನೇ ಹೋಗಿ ಬಂದರೆ ಹೇಗೆಂಬ ಆಲೋಚನೆ ಸುಳಿಯಿತಾದರೂ ಅನ್ಯಾಯವಾಗಿ ನನ್ನದಲ್ಲದೂರಿನಲ್ಲಿ ಅನಾಥಶವವಾಗುವಂತಾದರೆ ಏನು ಛಂದ, ಪ್ರೊಬೇಷನರಿ ಪೀರಿಯಡ್ ಬೇರೆ ಡಿಕ್ಲೇರ್ ಆಗಿಲ್ಲ ಅಂತ ಒಳಗೊಳಗೆ ಪುಕುಪುಕು ಅನುಭವಿಸಿ ಸುಮ್ಮನಾದೆ.

‘ಅಲ್ಲ ಹುಸೇನಪ್ಪ, ಅವೆರಡು ಹುಡುಗ್ರುದು ಏನಾದ್ರೂ ಸುದ್ದಿ ಗೊತ್ತಾಯ್ತಾ? ಸನೆಸನೆಕ ಒಂದು ವಾರ ಆಗಾಕ ಬಂತಲ್ಲ?’ ಅಂದು ರಂಗನಾಥ ಮತ್ತು ಶಾರದೆಯರ ಟಾಪಿಕ್ ಎತ್ತಿದೆ.

‘ಮಾನೆಗಿಡಕ್ಕ ಮಾನಿಗೇಡಿ, ಬೇನೆಗಿಡಕ್ಕ ಬ್ಯಾನಿಗೇಡಿ ತೆಕ್ಕೆ ಬಿದ್ದು ಓ ಅಂತ ಅತ್ತಿದ್ದಷ್ಟೇ ಸಾರ್. ಅವನೇನು ಇವತ್ತಿಲ್ಲ ನಾಳೆ ಬಂದಾನು. ಆ ಕಂದಮ್ಮಂದು ಮಾತ್ರ ಅನ್ಯಾಯ ಆಯ್ತು’ ಅಂದು ನಿಟ್ಟುಸಿರುಗರೆದ.

ಅನ್ನುವುದೋ ಬೇಡವೋ ಎಂಬ ಅನುಮಾನದಲ್ಲಿ– ‘ಅಂದ್ರೆ ಆ ಹುಡುಗಿ ಶಾರದಾ ಏನನ್ನ ಅನಾಹುತ ಮಾಡಿಕೆಂಡಿರಬಹುದಂತಿಯಾ?’ ಎಂದೆ.

‘ಎಂಗಂತೀರಿ ಸಾರ್? ಆ ಹುಡುಗಿನ ತಿಪ್ಪಲ ಭಗವಂತಗೇ ಗೊತ್ತು’ ಅಂದ. ತುಂಬಾ ಹೊತ್ತು ಅಳೆದೂ ಸುರಿದೂ ಹತ್ತಿಕ್ಕಿಕೊಳ್ಳಲಾಗದೆ–
‘ಯಾರಿಗನ್ನ ಕದ್ದು ಬಸುರಾಗಿದ್ದು ಹೊಟ್ಟೆ ತೆಗಿಸಿಕಂಡು ಬರಾಕೇನಾರ ಹೋಗಿರಬೌದ?’ ಎಂದೆ.

ಹುಸೇನಪ್ಪ ಮೊತ್ತಮೊದಲ ಬಾರಿಗೆ ನನ್ನ ಕಣ್ಣ ಬಾವಿಯಲ್ಲಿ ಅಂತರಗಂಗಿ ಇಳಿಬಿಟ್ಟವನಂತೆ ದಿಟ್ಟಿಸಿ ನೋಡಿದ. ನಾನು ಸಟಕ್ಕನೆ ಹಿಂದಕ್ಕೆ ತಿರುಗಿ ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿಯುತ್ತ ನಿಂತೆ.

5
ಹುಸೇನಪ್ಪ ಹೇಳಿದಂತೆ ವಾರೊಪ್ಪತ್ತಿನಲ್ಲಿ ರಂಗನಾಥ ಮರಳಿ ಬಂದ. ಶವದಂತೆ ಕಾಲೇಜಿಗೆ ಬಂದು ಹೋಗುತ್ತಿರುವ ಅವನು ಮಾತ್ರ ಇಲ್ಲಿಯವನೆಂದರೆ ಇಲ್ಲಿಯವನಲ್ಲ; ಅಲ್ಲಿಯವನೆಂದರೆ ಅಲ್ಲಿಯವನಲ್ಲ ಎಂಬಂತಾಗಿದ್ದ. ಅವನನ್ನು ವಿಧವಿಧವಾಗಿ ಮಾತಾಡಿಸಲು ಪ್ರಯತ್ನಿಸಿದೆ. ಅಳುವುದು ಮತ್ತು ನನ್ನನ್ನು ತಿನ್ನುವಂತೆ ದಿಟ್ಟಿಸಿ ನೋಡುವುದು ಬಿಟ್ಟರೆ ಅವನಿಂದ ಬೇರ್‍ಯಾವ ಪ್ರತಿಕ್ರಿಯೆಯೂ ಸಿಗಲಿಲ್ಲ.

ಅಯ್ಯನವರ ಮನೆಯಂತೂ ಸರ್ಕಾರಿ ಆಸ್ಪತ್ರೆಯ ಶವಾಗಾರದಂತೆ ಹಗಲೆಲ್ಲ ನಿಶ್ಶಬ್ದವಾಗಿ ಬಿಕ್ಕುತ್ತಿತ್ತು. ರಾತ್ರಿಯೆಲ್ಲ ಬಾಯಿಗೆ ಬಟ್ಟೆ ತುರುಕಿಕೊಂಡು ದುಃಖಿಸಿ ದುಃಖಿಸಿ ಅಳುತ್ತಿತ್ತು. ಎಲ್ಲ ಗೊತ್ತಿರುವ ಊರು ಏನೂ ಗೊತ್ತಿಲ್ಲದಂತೆ ತುಟಿ ಹೊಲಿದುಕೊಂಡು ಕೂತಿತ್ತು.
ಇದೆಲ್ಲ ಆಗಿ ಎರಡನೇ ದಿನ ಕಾಲೇಜಿನ ಕ್ಯಾಂಪಸ್ಸಿನಲ್ಲಿನ ಕಸ ತೆಗೆಸುತ್ತಿದ್ದೆ ಹುಡುಗರಿಂದ. ನಮ್ಮ ಪೀವನ್ ಕರಿಯಪ್ಪ ರಾಜಕಾರಣಿಯಂಥ ಬೆಳ್ಳಗಿನ ಬಟ್ಟೆಯಲ್ಲಿ, ಎಂದಿನ ತನ್ನ ಸೊಗಸುಗಾರನ ಠೀವಿಯಲ್ಲಿ ಹುಡುಗಿಯರ ಪಕ್ಕ ನಿಂತಿದ್ದವನು–
‘ಸರ್ ಹತ್ತು ಗಂಟೆಗೆ ಇವತ್ತು ಎಲ್ಲಿಗೂ ಹೋಗ್ಬಾಡ್ರಿ. ನಿಮಗೊಂದು ಮಜಾ ಐತೆ’ ಅಂದ.

‘ಏನೋ ಹುಸೇನಪ್ಪ ಎಲ್ಲಿದ್ದಿಯೋ? ಬಾ ಇಲ್ಲಿ. ಕರಿಯಪ್ಪ ಹತ್ತು ಗಂಟೆಗೆ ಏನೋ ಮಜಾ ತೋರಸ್ತಾನಂತ. ಗುಗ್ಗರಿ ತಾತನ್ನ ಕರೆಸಿ ಎಲ್ಲ ಟೈಪ್ ಗುಗ್ಗರಿ ಕೊಡಸಿ ಪಾರ್ಟಿ ಮಾಡಿಸ್ತಾನ ಏನ?’ ಎಂದು ಚ್ಯಾಷ್ಟಿ ಮಾಡಿದೆ.

ಮೊತ್ತಮೊದಲ ಬಾರಿಗೆ ಹುಸೇನಪ್ಪ ಮತ್ತು ಕರಿಯಪ್ಪ ಒಂದೇ ಮಾತನ್ನು, ಒಂದೇ ದನಿಯಲ್ಲಿ ಕೂಡಿ ಹೇಳಿದರು–
‘ಎಲ್ಲ್ಯಾನ ಸರ್ ಗುಗ್ಗರಿತಾತ? ಗಿಳಿ ತಾತ ಹೋಗಿ ಎರಡು ದಿವಸಕ್ಕೆ ಪರಾರಿ’. ನನಗಿದು ಗೊತ್ತೇ ಇರಲಿಲ್ಲ. ಯಾಕಿವರು ದಿವಸೆರಡು ದಿವಸಗಳ ಅಂತರದಲ್ಲಿ ಮೂವರೂ ಊರು ಬಿಟ್ಟರು ಅಂತ ನನಗೆ ಮತ್ತೆ ಆಲೋಚನೆಗಿಟ್ಟುಕೊಂಡಿತು. ಸಿಗರೇಟ್ ಸೇದಬೇಕೆನಿಸಿತು. ಇರಲಿಬಿಡು ಎಂದುಕೊಂಡೆ. ಗ್ರೌಂಡೆಲ್ಲ ಓಡಾಡಿದೆ. ಸುಮ್ಮಸುಮ್ಮನೆ ದಣಿದ ಭಾವ ಆವರಿಸಿಕೊಂಡಿತು. ಏನೋ ಜಡತೆ. ಏಕೆಂದು ಗೊತ್ತಿಲ್ಲ. ನನ್ನ ಪ್ರೀತಿಯ ಅತ್ತಿಹಣ್ಣಿನ ಗಿಡದ ಬುಡಕ್ಕೆ ಬಂದೆ. ಒಳ್ಳೊಳ್ಳೆ ಹಣ್ಣುಗಳು ಉದುರುಬಿದ್ದಿದ್ದವು. ಒಳ್ಳೆಯದೊಂದನ್ನು ಎತ್ತಿಕೊಂಡು ಹಿಚುಕಿ ಎರಡು ಭಾಗ ಮಾಡಿದೆ. ಪುತುಪುತು ಹುಳ ಎದ್ದವು. ಜಾಡಿಸಿದೆ. ಯಾಕೋ ಗೊತ್ತಿಲ್ಲ ಮೊದಲ ಬಾರಿಗೆ ಇವತ್ತು ಹೇಸಿಗೆಯೆನಿಸಿತು.

ಸರಿಯಾಗಿ ಹತ್ತು ಗಂಟೆ. ಕಾಲೇಜಿನೊಳಗೆ ಪೋಲಿಸ್ ಜೀಪ್ ಬಂತು. ನೋಡಿದವನೇ ನಿಧಾನವಾಗಿ ತೋಟದ ಕಡೆ ಉಚ್ಚೆ ಹೊಯ್ಯಲು ಹೋಗುವವನಂತೆ ಹೋಗಿ, ಅಲ್ಲಿಂದ ಜಾಲಿಕಂಟಿ ದಾಟಿಕೊಂಡು ರೂಮಿನತ್ತ ಕಾಲು ಬೆಳೆಸಿದೆ. ಮಾರ್ಚ್ ತಿಂಗಳ ಬಿಸಿಲು ಬೇಲಿ ಮೇಲೆ ಒಣಹಾಕಿದ ಬಿಳಿಧೋತರದಂತೆ ಊರ ನೆತ್ತಿಯ ಮೇಲೆ ಹರಡಿಕೊಂಡು ಹೊಳೆಯುತ್ತ ಚುರ್‌ಗುಟ್ಟಿಸುತ್ತಿತ್ತು. ಹಿಂದಿನಿಂದ ‘ಏ ನಿಂದ್ರಲೇ ಎಲ್ಲಿಗೋಡ್ತಿ? ನಿಂದೆಲ್ಲ ಗೊತ್ತಾಗ್ಯಾದ’ ಅಂತ ಕೂಗುವುದು ಕೇಳಿಸಿತು. ಜೀವ ಝಲ್ ಅಂತು. ನಡಿಗೆಯ ವೇಗವನ್ನು ಇಷ್ಟಿಷ್ಟೇ ಹೆಚ್ಚಿಸಿಕೊಳ್ಳುತ್ತ ಓಡಿದಂತೆ ನಡೆಯುತ್ತ, ಓಡುತ್ತ, ಬೆವರೊರೆಸಿಕೊಳ್ಳುತ್ತ, ತುಟಿ ಸವರಿಕೊಳ್ಳುತ್ತ ರೂಮಿಗೆ ತಲುಪಿದವನೇ ಮೊದಲು ಒಳಗಿನ ಅಗುಳಿಯನ್ನು ಭದ್ರಪಡಿಸಿದೆ.

6
ಯಾರೋ ನನ್ನ ಎದೆಯ ಮೇಲೆ ಕೂತು ತಮ್ಮ ಮೊಣಕಾಲುಗಳಿಂದ ನನ್ನ ಪಕ್ಕೆಗಳನ್ನು ಬಿಗಿಯಾಗಿ ಮಿಸುಕಾಡಲಾಗದಂತೆ ಅದುಮಿಟ್ಟು ಎರಡೂ ಕೈಗಳಿಂದ ಕುತ್ತಿಗೆ ಹಿಸುಕುತ್ತಿದ್ದಾರೆ. ಕತ್ತು ಕುಯ್ದೆಸೆದ ಕೋಳಿಯಂತೆ ನನ್ನ ಕಾಲುಗಳು ಎಗರೆಗರಿ ಬೀಳುತ್ತ ಪ್ರಾಣಕ್ಕಾಗಿ ಹಾತೊರೆಯುತ್ತಿವೆ. ಉಸಿರು ಬಿಗಿಯಾಗಿ ಕಣ್ಣೊಳಗೆ ನೀರ ಪಸೆ ಕೂಡಿಕೊಂಡು ಮೇಲೆ ಕುಳಿತವನ ಚಿತ್ರ ನಿಧಾನಕ್ಕೆ ಮಸುಕಾಗುತ್ತಿದೆ.
ಜೋರಾಗಿ ಕೂಗಿಕೊಳ್ಳಬೇಕು.

ಯಾರಾದರೂ ಬಂದು ನನ್ನ ಉಳಿಸಿಕೊಳ್ಳಬಹುದು. ಗಿಳಿ ಮಾಡುವ ತಮಿಳರಸನ್, ಹುಸೇನಪ್ಪ, ಕರಿಯಪ್ಪ, ಅಯ್ಯನವರು, ನಾಚುವ ಶಾರದೆ, ಹರ್ನಾಂಡೋ, ಗುಗ್ಗರಿತಾತ.. ಯಾರಾದರೂ. ಅಥವಾ ಬೇವಿನಮರ, ಹುಣಸೇಮರ, ಉಪ್ಪು ನೀರಿನ ಭಾವಿ. ಇದೇನಿದು ಕುತ್ತಿಗೆ ಹಿಚುಕುತ್ತಿರುವುದು ಮುಖವಿಲ್ಲದ ಯಾವನೋ ಒಬ್ಬನ ಕೈಯೋ ಅಥವಾ ಏಳು ಹೆಡೆಯ ಸರ್ಪದ ಮೈಯೋ? ‘ಲೇ ರಂಗಾ ನಿಮ್ಮಮ್ಮನ ಮ್ಯಾಲೆ ಹಾವು ಆಡುತ್ತೇನೋ..? ಅಕಿನ್ನ ಮಂದಿಗೆ ಅಡ್ಡಾಕಿ ನಿಮ್ಮಪ್ಪ ಒಂದಕ್ಕೆರಡು ಮಾಡ ದಂಧೆಗೆ ಹೋಗಿಬರದು ನನಗ ಗೊತ್ತಿಲ್ಲೇನಲೆ? ಪುಟ್ಟ್ಯಾಗ ಪುಗ್ಗಿ, ಮಂಡಾಳುಂಡೆ ಹೊತಗಂಡು ಮನೆಮನೆ ತಿರುಗಿ ಮಾರಿದವ್ರು ಇವತ್ತು ತೆಲಿಗೊಂದು ಕಾರು! ಆ ಕಿರಾಣಿ ಅಂಗಡ್ಯಾಗ ನೀವು ಗಳಸ್ತೀರೆಷ್ಟು, ಉಳಸ್ತೀರೆಷ್ಟು?’.

ನನಗ್ಯಾಕೆ ಕೂಗಲಾಗುತ್ತಿಲ್ಲ. ಇಲ್ಲ ನನ್ನ ಅಷ್ಟೂ ತ್ರಾಣವನ್ನು ಒಗ್ಗೂಡಿಸಿ ನಾನು ಕೂಗುತ್ತಿದ್ದೇನೆ. ಮತ್ಯಾಕೆ ಸದ್ದೇ ಬರ್ತಿಲ್ಲ? ಅಯ್ಯೋ ಯಾರಾದರೂ ಬರ್ರೆಪ್ಪೊ? ಕುತ್ತಿಗೆಗೆ ಬಿಗಿದಿರುವುದನ್ನು ಮತ್ತಷ್ಟು ಬಿಗಿಯಾದರೂ ಮಾಡ್ರೊ? ಇದು ಇಲ್ಲಿಗೆ ಮುಗಿದಾದರೂ ಹೋಗುತ್ತೆ. ಸಾಯಿಸಲೆಂದೇ ಬಂದವರಿಗೆ ಯಾಕೀ ಚೆಲ್ಲಾಟ? ಅಥವಾ ನಿಧಾನವಾಗಿ ಹಿಡಿತವನ್ನಾದರೂ ಸಡಿಲಿಸಬಾರದೆ? ಬಡಜೀವ ಬದುಕಾದರೂ ಬದುಕಿಕೊಳ್ತೀನಿ. ಯಾಕೆ ಬಿಡುತ್ತಿಲ್ಲ? ಯಾಕೆ ಸಾಯಿಸುತ್ತಿಲ್ಲ...

ಹೌದು ಅವನೇ. ಸಾಲಗುಂದಾ ಜಾತ್ರೆಗೆ ಹೊರಟ ಸಾಧು. ನನ್ನೆಡೆಗೇ ಬರುತ್ತಿದ್ದಾನೆ. ನನ್ನ ಪ್ರಾಣಪಾತ್ರೆಯಲಿ ಅವನು ಆ ಪುಡಿ ಹಾಕಬಹುದು. ಬಾರೋ ಜಲ್ದಿ. ಬಾರೋ. ಬಾರೋ ಏ ಬಾರಲೇ ನಿನ್... ಹೆಣಾ ಎತ್ತಲಿ

ದಢಾರನೆ ಬಾಗಿಲು ತೆಗೆದುಕೊಂಡಿತು. ಹುಸೇನಪ್ಪ ತೇಕುತ್ತ ‘ಸಾರ್ ಪೋಲಿಸೋರು ಕರಿಯಪ್ಪನ್ನ ಹಿಡ್ಕಂಡು ಹೋದ್ರು’ ಅಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT