ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳುಗಳ ಬೆನ್ನು ಹತ್ತಿ

Last Updated 23 ಮಾರ್ಚ್ 2013, 19:59 IST
ಅಕ್ಷರ ಗಾತ್ರ

1. ಚಿಲಕುಂದ
ನನ್ನ ಊರು ಚಿಲಕುಂದ; ಆದರೆ ನಾನು ಹುಟ್ಟಿದುದು (ಮೊದಲನೆಯ ಮಗನಾದುದರಿಂದ) ನನ್ನ ತಾಯಿಯ ಊರಾದ, ಸಾಲಿಗ್ರಾಮ-ರಾಮನಾಥಪುರ ಇವುಗಳ ನಡುವೆ ಬರುವ, ಕಾವೇರಿ ದಂಡೆಯಲ್ಲಿರುವ ಕೇರಳಾಪುರದಲ್ಲಿ. ಅದೂ ಸರಿಯಲ್ಲ; ನಾನು ಅನಂತರ  ಕೇಳಿದಂತೆ, ನಾನು ಹುಟ್ಟಿದುದು ನನ್ನ ಹಿರಿಯ ಸೊದರಮಾವನಿಗೆ ಸೇರಿದ ಎಲೆತೋಟದಲ್ಲಿ. ಆಗ, ಊರಿಗೆ ಪ್ಲೇಗ್ ಬಂದಿದ್ದರಿಂದ ಎಲ್ಲರೂ ಊರು ಬಿಟ್ಟು ತೋಟ-ಹೊಲಗಳಲ್ಲಿ ಎರಡು-ಮೂರು ತಿಂಗಳುಗಳ ಕಾಲ ವಾಸಿಸುತ್ತಿದ್ದರಂತೆ; ಅಂತಹ ಸುಸನ್ನಿವೇಶದಲ್ಲಿ, ಪ್ಲೇಗ್ ಸಂದರ್ಭದಲ್ಲಿ ನಾನು ಜನಿಸಿದೆನಂತೆ- to plague others?? ಇರಲಿ, ನಮ್ಮಲ್ಲಿನ ಪದ್ಧತಿಯಂತೆ ಅಜ್ಜನ ಎಂದರೆ ತಾಯಿಯ ತಂದೆಯ ಹೆಸರನ್ನೇ ನನಗೂ ಇಟ್ಟರು `ರಾಮಚಂದ್ರ'. ಪ್ರಾಯಃ, ನನ್ನ ಇಡೀ ಬದುಕಿನ ಸಾರಾಂಶವನ್ನು ಒಂದು ವಾಕ್ಯದಲ್ಲಿ ಹೇಳಬೇಕಾದರೆ `ರಾಮಚಂದ್ರ ಶಾಸ್ತ್ರಿ ಆಗಬೇಕಾದವನು ರಾಮಚಂದ್ರನ್ ಆದೆ' ಎಂದು ಹೇಳಬಹುದು. 

ನನ್ನ ಊರು ಚಿಲಕುಂದ. ಮೈಸೂರು-ಮಡಿಕೇರಿ ಮಾರ್ಗದಲ್ಲಿ ಹುಣಸೂರು- ಪಿರಿಯಾಪಟ್ಟಣ ಇವುಗಳ ನಡುವೆ ಬರುವ ಚಿಲಕುಂದ ಎಂಬುದು ಕಳೆದ ಶತಮಾನದ 2-3ನೆಯ ದಶಕಗಳಲ್ಲಿ ಸುಮಾರು 300 ಜನಸಂಖ್ಯೆಯಿದ್ದ ಗ್ರಾಮ. `ಚಿಲಕುಂದ' ಎಂಬ ಹೆಸರಿಗೆ ಏನಾದರೂ ಅರ್ಥವಿದೆಯೆ? ಊರಿನ ಹಿರಿಯರ ಪ್ರಕಾರ, ಇದು ಮೊದಲಿಗೆ `ಈಚಲಕುಂದ'; ಅದಕ್ಕೆ ಕಾರಣ ಊರಿನ ಸುತ್ತಲೂ ಇದ್ದ ಈಚಲು ಮರಗಳ ತೋಪುಗಳು; ಹೆಸರಿನ `ಈ' ಕಾಲಾಂತರದಲ್ಲಿ ಬಿಟ್ಟುಹೋಗಿ, ಅದು ಈಗ ಬರೀ ಚಿಲಕುಂದವಾಗಿದೆ. ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ಈ ಗ್ರಾಮದ ನಕ್ಷೆ ವರ್ಣವ್ಯವಸ್ಥೆಯ ಅದ್ಭುತ ರೂಪಕವಾಗಿತ್ತು: ಊರನ್ನು ಪ್ರವೇಶಿಸುತ್ತಿದ್ದಂತೆಯೇ ಮೊದಲಿಗೆ ಬ್ರಾಹ್ಮಣರ ಬೀದಿ, ಅದರ ಹಿಂದೆ, ಸಮಾನಾಂತರವಾಗಿ ಒಕ್ಕಲಿಗರ ಬೀದಿ; ಅದರ ಹಿಂದೆ ಕುಂಬಾರರು, ಕುರುಬರು, ಅಗಸರು, ಇತ್ಯಾದಿ ಜಾತಿಗಳಿಗೆ ಸೇರಿದವರ ಬೀದಿ; ಎಲ್ಲದಕ್ಕಿಂತ ಹಿಂದೆ, ದೂರದಲ್ಲಿ ದಲಿತರ ಬೀದಿ. (ಅದು ಹೇಗಿತ್ತು ಎಂಬುದು ಒಮ್ಮೆಯೂ ಅಲ್ಲಿಗೆ ಹೋಗದ ನನಗೆ ಗೊತ್ತಿಲ್ಲ).

ಬ್ರಾಹ್ಮಣರ ಬೀದಿಯ ಮಧ್ಯದಲ್ಲಿ ರಾಮಮಂದಿರವಿದ್ದರೆ, ಒಕ್ಕಲಿಗರ- ಇತರ ಸಮುದಾಯಗಳ ಬೀದಿಗಳ ನಡುವೆ ಮಾರಿಗುಡಿ. ಒಂದು ಪಕ್ಕದಲ್ಲಿ ಮುಸ್ಲಿಮರ ಓಣಿಗಳು. ರಸ್ತೆಯ ಪಕ್ಕದಲ್ಲಿ, ಸಾಲಾಗಿ ಪ್ರೈಮರಿ ಶಾಲೆ, ಆಸ್ಪತ್ರೆ, ಇತ್ಯಾದಿ; ಸ್ವಲ್ಪ ದೂರದಲ್ಲಿ ಗ್ರಾಮದೇವತೆ ವಾಣಿಯಮ್ಮನ ಗುಡಿ. ಊರಿನಿಂದ ಸುಮಾರು ಒಂದು ಮೈಲಿ ದೂರದಲ್ಲಿ ಬ್ರಾಹ್ಮಣರ ಎಲೆ-ತೆಂಗಿನ ತೋಟಗಳಿದ್ದರೆ ಊರಿನ ಎದುರಿಗೆ, ಸುತ್ತಲೂ ಒಕ್ಕಲಿಗರಿಗೆ ಸೇರಿದ ರಾಗಿ-ಎಳ್ಳು ಬೆಳೆಯುವ ಹೊಲಗಳು. ಊರಿನ ಮಧ್ಯ ಭಾಗದಲ್ಲಿ `ಬಸ್ತಿ' ಎಂದು ಊರಿನವರು ಕರೆಯುತ್ತಿದ್ದ ಒಂದು ಸಣ್ಣ ದಿಬ್ಬವಿತ್ತು; ಅದು ಪಾಳೆಯಗಾರರು ಹಿಂದೆ ಕಟ್ಟಿಸಿದ ಬತೇರಿಯೇ ಇರಬಹುದೆಂದು ತಿಳಿದಿದ್ದೆ. ಆದರೆ ನಮ್ಮ ಊರಿನಲ್ಲಿ ಯಾರೂ ಪಾಳೆಯಗಾರರು ಇದ್ದ ಸುಳಿಹಿಲ್ಲ.

ಬಹಳ ಕಾಲದ ಮೇಲೆ ಅದು ಪ್ರಾಯಃ `ಬಸತಿ' ಎಂದರೆ ಜೈನರ `ಬಸದಿ'ಯಾಗಿದ್ದಿರಬಹುದು ಎಂದು ಹೊಳೆಯಿತು. ಪಿ.ಕೆ.ರಾಜಶೇಖರ ಅವರು ಸಂಪಾದಿಸಿರುವ ಪ್ರಸಿದ್ಧ ಮೌಖಿಕ ಕಥನ `ಪೆರಿಯಾಪಟ್ಟಣದ ಕಾಳಗ' ವರ್ಣಿಸುವಂತೆ, 17ನೆಯ ಶತಮಾನದಲ್ಲಿ ಮೈಸೂರಿನ ರಾಜರು ಪೆರಿಯಾಪಟ್ಟಣದ ವೀರರಾಜನ ಮೇಲೆ ಕಾಳಗಕ್ಕೆ ಬಂದಾಗ, ಪೆರಿಯಾಪಟ್ಟಣಕ್ಕೆ ಆರು ಮೈಲಿ ದೂರದಲ್ಲಿರುವ ಚಿಲಕುಂದದಲ್ಲಿ ಬೀಡು ಬಿಟ್ಟಿದ್ದರಂತೆ. ಆ ಯುದ್ಧದಲ್ಲಿ ರಾಜರು ಗೆದ್ದು ಪೆರಿಯಾಪಟ್ಟಣ ಮೈಸೂರಿಗೆ ಸೇರಿತು ಎಂಬುದು ಇತಿಹಾಸ. ಆಧುನಿಕ ಕಾಲಕ್ಕೆ ಬಂದರೆ, ಪ್ರಸಿದ್ಧ ಸಾಹಿತಿ ಚದುರಂಗ (ಸುಬ್ರಹ್ಮಣ್ಯರಾಜೆ ಅರಸ್) ಮತ್ತು ದೇವರಾಜೆ ಅರಸ್ ಅವರುಗಳ ಕಲ್ಲಹಳ್ಳಿ ಚಿಲಕುಂದಕ್ಕೆ ಎರಡು ಮೈಲಿ ದೂರದಲ್ಲಿದೆ.

ಹೋ! ನಾನು ಹೇಳುವುದನ್ನು ಮರೆತೆ. ನಮ್ಮದು `ಸಂಕೇತಿ' ಎಂಬ ಹೆಸರಿನ ಸ್ಮಾರ್ತ ಬ್ರಾಹ್ಮಣ ಸಮುದಾಯ. ಈ `ಸಂಕೇತಿ' ಪದ ಎಲ್ಲಿಂದ, ಹೇಗೆ ಬಂದಿತು' ಇಂದು ಹೆಚ್ಚಿನವರು ನಂಬುವಂತೆ, ನಮ್ಮ ಪೂರ್ವೀಕರು ಬಹು ಹಿಂದೆ (12ನೇ ಶತಮಾನ?) ತಮಿಳುನಾಡು-ಕೇರಳ ಗಡಿಭಾಗದಲ್ಲಿರುವ `ಶೆಂಕೋಟೈ' ಎಂಬ ಊರಿನಿಂದ ಕರ್ನಾಟಕಕ್ಕೆ ವಲಸೆ ಬಂದುದರಿಂದ ಅವರು `ಸಂಕೇತಿ' ಎಂದು ಕರೆಸಿಕೊಂಡರು. ಒಂದು ಒಂದೂವರೆ ಶತಮಾನದ ಅವಧಿಯಲ್ಲಿ ನಡೆದಿರಬಹುದಾದ ಈ ವಲಸೆಯ ಪ್ರಕ್ರಿಯೆಯಲ್ಲಿ, ಮೊದಲಿಗೆ ಬಂದು ಹಾಸನದ ಬಳಿ ಇರುವ ಕೌಶಿಕ ಎಂಬ ಗ್ರಾಮದಲ್ಲಿ ನೆಲಸಿದವರು `ಕೌಶಿಕ ಸಂಕೇತಿ'ಗಳಾದರು; ಅನಂತರ, ಪ್ರಾಯಃ ಎರಡು-ಮೂರು ದಶಕಗಳ ನಂತರ ಬಂದು ಮೈಸೂರು ಜಿಲ್ಲೆಯ ಬೆಟ್ಟದಪುರ ಎಂಬ ಗ್ರಾಮದಲ್ಲಿ ನೆಲೆಸಿದವರು `ಬೆಟ್ಟದಪುರ ಸಂಕೇತಿ'ಗಳಾದರು. ಈ ಕಥೆಯು 1904ರ ಮೈಸೂರು ಗಜೆಟಿಯರ್ ನಲ್ಲಿ ಹೀಗೆ ದಾಖಲಾಗಿದೆ:         

The Sanketis (2,522) are Smartas from Madura, and speak a corrupt mixture of Tamil and Kannada. There are two branches, the Kaus'ika     and the Bettadpur, so named from the places in which they first settled,     which are in the Hassan and Mysore Districts. They eat together, but     do not intermarry as a rule. The Kaus'ika, however, who were the first     comers, are said occasionally to get wives from the Bettadpur, but in     such cases the girl's connection with the latter altogether ceases. The     Sanketis  reverence a prophetess named Nacharamma or Nangiramma,     who seems to have been instrumental in causing their migration from     their original seats. The story about her is given in the first edition.

>ಇಲ್ಲಿ ಉಲ್ಲೇಖವಾಗಿರುವ ನಾಚಾರಮ್ಮನ ಕಥೆ ಅಥವಾ ಐತಿಹ್ಯ ತುಂಬಾ ರೋಚಕವಾಗಿದೆ. ದಟ್ಟ ದರಿದ್ರರಾಗಿದ್ದರೂ ನಾಚಾರಮ್ಮ ತುಂಬಾ ವಿದ್ವಾಂಸಳಾಗಿದ್ದು, ಅವಳೊಡನೆ ಶಾಸ್ತ್ರಾರ್ಥ ವಾದ ಮಾಡಿ ಯಾರೂ ಗೆಲ್ಲಲು ಸಾಧ್ಯವಾಗಿರಲಿಲ್ಲವಂತೆ; ಆದುದರಿಂದ, ಅವಳಿಗೆ ಅವಮಾನ ಮಾಡಲು, ಒಮ್ಮೆ ಅವಳಿಗೆ ಒಂದು (ಬಳಪದ ಕಲ್ಲಿನಪುಡಿಯನ್ನು ಲೇಪಿಸಿದ್ದ) ಸೀರೆಯನ್ನು ಕೊಟ್ಟು, ಮರುದಿನದ ವಿದ್ವದ್ಸಭೆಗೆ ವಾಕ್ಯಾರ್ಥಕ್ಕಾಗಿ ಅದನ್ನು ಉಟ್ಟುಕೊಂಡು ಬರಬೇಕೆಂದು ಆ ಊರಿನ ಕೆಲವು ಅಸೂಯಾಪರರು ಕೇಳಿಕೊಂಡರಂತೆ. ಅದರಂತೆ ಅವಳು ಸಭೆಗೆ ಬಂದಾಗ ಆ ಸೀರೆ ಮೈಯಿಂದ ಜಾರಿತೆಂದು, ಅದರಿಂದ ರೋಷಗೊಂಡ ಅವಳು ಆ ಇಡೀ ಊರನ್ನೇ ಶಪಿಸಿ (ಮುಂದೆ ಅದು `ಶಾಪತ್ತೂರು' ಎಂದೇ ಕುಖ್ಯಾತವಾಯಿತು), ಅವಳೊಡನೆ ಬರಲು ಸಿದ್ಧವಿದ್ದ ಕೆಲವು ಕುಟುಂಬಗಳನ್ನು ತನ್ನೊಡನೆ ಕರೆದುಕೊಂಡು ಆ ಊರನ್ನೇ ಬಿಟ್ಟು, ಕಾವೇರಿ ನದಿಯ ಪಾತ್ರವನ್ನೇ ಅನುಸರಿಸಿ ಕರ್ನಾಟಕದ ಹಾಸನ ಜಿಲ್ಲೆಯ ಕೌಶಿಕ ಗ್ರಾಮಕ್ಕೆ ಬಂದು ನೆಲಸಿದಳೆಂಬುದು ಆ ಐತಿಹ್ಯ.

ಒಬ್ಬಳು ಸ್ತ್ರೀಗಾದ ಅವಮಾನದಿಂದಾಗಿ ಅವಳೊಡನೆ ಇಡೀ ಒಂದು ಸಮುದಾಯವೇ ತಮ್ಮ ಪರಂಪರಾಗತ ನೆಲೆಯನ್ನು ತ್ಯಜಿಸಿ, ಸುಮಾರು 700 ಕಿ.ಮೀ. ದೂರವನ್ನು ಕ್ರಮಿಸಿ, ಮತ್ತೊಂದು ನೆಲೆಯನ್ನು ಕಂಡುಕೊಂಡಿತು ಎಂಬುದು ನಿಜವಾಗಿಯೂ ರೋಚಕವೆ, ಚರಿತ್ರಾರ್ಹ ಘಟನೆ- ನಿಜವಾಗಿದ್ದರೆ. ಆದರೆ, ಪ್ರಾಯಃ, ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬರಲು ಕಾರಣ ಅದೊಂದೇ ಅಲ್ಲದೆ, ಆ ಕಾಲಘಟ್ಟದಲ್ಲಿ ಆರ್ಥಿಕ-ಧಾರ್ಮಿಕ ಕಾರಣಗಳಿಂದಾಗಿ ಅವರಿದ್ದ ತಾಣದಲ್ಲಿ ಬದುಕಲು ಅಸಾಧ್ಯವಾಗಿ, ನಾಚಾರಮ್ಮನಿಗಾದ ಅವಮಾನ ಒಂದು ಸ್ಫೋಟಕ ಕಾರಣವಾಯಿತೆಂದು ಹೇಳಬಹುದು. ಸದಾ ಕ್ಷೋಭೆಯಿಂದ ತುಂಬಿರುತ್ತಿದ್ದ ಮಧ್ಯಯುಗೀನ ದಕ್ಷಿಣ ಭಾರತದಲ್ಲಿ ಧಾರ್ಮಿಕ ಶೋಷಣೆಯ ಕಾರಣದಿಂದ ಅನೇಕ ಸಮುದಾಯಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಆಗ (12ನೆಯ ಶತಮಾನ?) ದಕ್ಷಿಣ ತಮಿಳುನಾಡಿನಲ್ಲಿ ಉಗ್ರ ಶಿವ ಭಕ್ತನಾದ ರಾಜ ರಾಜಚೋಳ ರಾಜ್ಯಭಾರ ಮಾಡುತ್ತಿದ್ದನು. ಆ ಕಾರಣದಿಂದಲೇ  ರಾಮಾನುಜಾಚಾರ್ಯರು ಕರ್ನಾಟಕಕ್ಕೆ ವಲಸೆ ಬರಬೇಕಾಯಿತು. ಕಾರಣವೇನೇ ಇರಲಿ, ಅನೇಕ ಶತಮಾನಗಳ ಹಿಂದೆ ತಮಿಳು ಮಾತನಾಡುತ್ತಿದ್ದ ಸ್ಮಾರ್ತ ಬ್ರಾಹ್ಮಣ ಸಮುದಾಯಗಳು ಕರ್ನಾಟಕಕ್ಕೆ ಬಂದು, ಮೊದಲು ಹಾಸನ ಜಿಲ್ಲೆಯ ಕೌಶಿಕದಲ್ಲಿ ನೆಲೆಸಿ, ಅನಂತರ, ಕಾಲಕ್ರಮದಲ್ಲಿ ಕಾವೇರಿ ನದೀ ತೀರದ ಊರುಗಳಲ್ಲಿ, ಮತ್ತು ಮೈಸೂರು ಜಿಲ್ಲೆಯಲ್ಲಿ ನೆಲೆಸಿ, `ಸಂಕೇತಿ'ಗಳೆಂದು ಗುರುತಿಸಲ್ಪಟ್ಟಿರುವುದು ಸತ್ಯ. 

ಈ ಜನಾಂಗದ ಬಗ್ಗೆ ತುಂಬಾ ಸಂಶೋಧನಾ ಕಾರ್ಯವನ್ನು ಮಾಡಿರುವ ಡಾ. ಪ್ರಣತಾರ್ತಿಹರನ್ ಈ ಜನಾಂಗದ `ಪಂಚ ಲಕ್ಷಣಗಳನ್ನು' ಹೀಗೆ ಗುರುತಿಸುತ್ತಾರೆ: ವೇದಾಭ್ಯಾಸ, ಸಂಗೀತ, ತೋಟಗಾರಿಕೆ, ಛಲ, ಮತ್ತು ಇಸ್ಪೀಟ್ ಆಟ. ಛಲವನ್ನು ಹೊರತುಪಡಿಸಿದರೆ, ಉಳಿದ ನಾಲ್ಕು ಲಕ್ಷಣಗಳು ಸಂಕೇತಿಗಳಿಗೆ ವಿಶಿಷ್ಟವಾದವುಗಳು.    

ಕೃಷಿಯನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿ ಕೈಗೊಂಡ ಕೆಲವೇ ಕೆಲವು ಬ್ರಾಹ್ಮಣ ಸಮುದಾಯಗಳಲ್ಲಿ ಸಂಕೇತಿಗಳದ್ದು ಒಂದು ಎಂದು ತೋರುತ್ತದೆ. ಕಲ್ಲು ಮುಳ್ಳುಗಳಿಂದ ಕೂಡಿರುವ ಪಾಳು ಭೂಮಿಯನ್ನು ಸ್ವತಃ ಅಗತೆ ಮಾಡಿ, ಅಡಿಕೆ-ತೆಂಗು-ಬಾಳೆ ಮರಗಳನ್ನು ನೆಟ್ಟು, ಅವರೇ ತೋಡಿದ ಬಾವಿಗಳಿಂದ ಗಿಡಗಳಿಗೆ ನೀರು ಹಾಯಿಸುತ್ತಾ, ಹತ್ತು ಹನ್ನೆರಡು ವರ್ಷಗಳ ಕಾಲ ಒಂದೇ ಬಗೆಯ ತಾಳ್ಮೆಯಿಂದ ತೋಟವನ್ನು ಬೆಳೆಸುವ ಛಲ ಈ ಸಮುದಾಯದ ರಕ್ತದಲ್ಲಿಯೇ ಇದೆ ಎಂದು ಕಾಣುತ್ತದೆ. `ಸಂಕೇತಿಯೊಬ್ಬನು ಅಡಿಕೆ ಸಸಿಯನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟುತ್ತಾನೆ' ಎಂಬುದು ಇತರ ಬ್ರಾಹ್ಮಣ ಸಮುದಾಯಗಳಲ್ಲಿ ಪ್ರಚಲಿತವಾಗಿರುವ ನಾಣ್ನುಡಿ. `ನೋಡಿ, ಚಿಲ್ಕುಂದದ ಬ್ರಾಹ್ಮಣರು ಕಚ್ಚೆ ಹಾಕಿ ತೋಟದಲ್ಲಿ ಸ್ವತಃ ದುಡೀತಾರೆ, ಎಂದು ಆಗಾಗ್ಗೆ ದೇವರಾಜ ಅರಸು ಅವರು ಹೇಳುತ್ತಿದ್ದುದನ್ನು ಅನೇಕರು ದಾಖಲಿಸಿದ್ದಾರೆ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಅನೇಕ ಬಗೆಯ ಅವಕಾಶಗಳನ್ನು ತೆರೆದ ಸಮಾಜದಲ್ಲಿ, ಸಂಕೇತಿಗಳು ತಮ್ಮ ಪಾರಂಪರಿಕ ಕೃಷಿ ಹಾಗೂ ವೇದಾಧ್ಯಯನ ಇವುಗಳಿಗಿಂತ ಭಿನ್ನವಾದ ಮೆಡಿಕಲ್, ಎಂಜಿನಿಯರಿಂಗ್, ನ್ಯಾಯಶಾಸ್ತ್ರ, ಅಧ್ಯಾಪನ, ಇತ್ಯಾದಿ ವೃತ್ತಿಗಳನ್ನು ಆಶ್ರಯಿಸಿದ್ದಾರೆ. ಬಹಳ ಅಪರೂಪವಾಗಿ ಒಂದಿಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸಿದವರೂ ಇದ್ದಾರೆ.

ಸಂಗೀತದ ಪರಂಪರೆ ಈ ಸಮುದಾಯದಲ್ಲಿ ಹೇಗೆ ಬೆಳೆಯಿತೋ ಗೊತ್ತಿಲ್ಲ; ಇತ್ತೀಚಿನವರೆಗೆ, ಪ್ರಸಿದ್ಧ ಸಂಕೇತಿಗಳೆಂದರೆ ಪ್ರಸಿದ್ಧ ಸಂಗೀತಗಾರರು ಇಲ್ಲಾ ವೇದಾಧ್ಯಯನ ಮಾಡಿದವರು. ಸ್ವಲ್ಪವಾದರೂ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದ ಸಂಕೇತಿಗಳೇ ಇಲ್ಲ ಎನ್ನುವಂತಹ ಕಾಲ ಒಂದಿತ್ತು. ಸುಪ್ರಸಿದ್ಧ ವಿದ್ವಾಂಸರಾದ ಆರ್.ಆರ್. ಕೇಶವಮೂರ್ತಿ, ಆರ್.ಕೆ. ಶ್ರಿಕಂಠನ್, ಆರ್.ಕೆ. ಪದ್ಮನಾಭ ಹಾಗೂ ಪ್ರಸಿದ್ಧ ವಿದುಷಿಯರಾದ ವಸಂತಮಾಧವಿ, ಡಾ. ಸುಕನ್ಯಾ ಪ್ರಭಾಕರ್ ಮುಂತಾದವರು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಒಂದು ಕಾಲದಲ್ಲಿ, ಇಸ್ಪೀಟಾಟವಾಡದ, ಅದರಲ್ಲೂ 28 ಅಥವಾ ಜಾಕಿ ಆಟವಾಡದ, ಸಂಕೇತಿಗಳೇ ಇರಲಿಲ್ಲ; ಅನಂತರ ಹಣವಿಟ್ಟು ರಮ್ಮಿ ಅಥವಾ ಪರೇಲ್ (`ಮೂರೆಲೆ ಆಟ') ಆಡುವುದು ಸಾಮಾನ್ಯವಾಯಿತು. ಸಾಧಾರಣವಾಗಿ, ಸಂಕೇತಿಗಳಿದ್ದ ಪ್ರತಿಯೊಂದು ಗ್ರಾಮದಲ್ಲಿಯೂ `ಮೂರೆಲೆ' ಆಡಿ, ತಮ್ಮ ಆಸ್ತಿ-ಪಾಸ್ತಿಯನ್ನೆಲ್ಲಾ ಕಳೆದುಕೊಂಡ ಒಂದು ಕುಟುಂಬವಾದರೂ ಇರುತ್ತಿತ್ತು.  ಕಳೆದೆರಡು-ಮೂರು ದಶಕಗಳಲ್ಲಿ ಈ ಇಸ್ಪೀಟಾಟದ ಹುಚ್ಚು ಕಮ್ಮಿಯಾಗಿರುವಂತೆ ತೋರುತ್ತದೆ.      
     
ವಲಸೆಬಂದ ಸಮುದಾಯಗಳಿಗೆ ತಮ್ಮ ಮೂಲದ ಕೆಲವಾದರೂ ನೆನಪುಗಳನ್ನು ಅಥವಾ ಗುರುತುಗಳನ್ನು ಉಳಿಸಿಕೊಳ್ಳುವ ಅಗಾಧ ಸಾಂಸ್ಕೃತಿಕ ಒತ್ತಡವಿರುವಂತೆ ಕಾಣುತ್ತದೆ. ಸಂಕೇತಿ ಸಮುದಾಯದ ಭಾಷೆ-ಆಚರಣೆಗಳಲ್ಲಿಯೂ ಸುಮಾರು 800-900 ವರ್ಷಗಳ ಹಿಂದಿನ ಸ್ಮೃತಿಚಿಹ್ನೆಗಳು ಅಲ್ಲಲ್ಲಿ ಉಳಿದುಕೊಂಡಿವೆ.

ಸಂಕೇತಿಗಳು ಮಾತನಾಡುವ (ಲಿಪಿಯಿಲ್ಲದ) ಭಾಷೆಯಲ್ಲಿ ತಮಿಳು, ಕನ್ನಡ, ಮಲಯಾಳಂ, ತುಳು ಇತ್ಯಾದಿ ಅನೇಕ ದ್ರಾವಿಡ ಭಾಷೆಗಳ ಸಂಗಮವಿದೆ. ಉಡುಪಿಯ ಡಾ. ಉಪಾಧ್ಯಾಯ ದಂಪತಿಗಳು ಸಂಪಾದಿಸಿರುವ ತುಳು ಪದಕೋಶವನ್ನು ಮೊದಲು ನಾನು ನೋಡಿದಾಗ ಆಶ್ಚರ್ಯವಾದುದು `ಕರಿ' ಎನ್ನುವ ಪದದ ಅರ್ಥ; ಅದು ತುಳುವಿನಲ್ಲಿ ಕೊಡುವ ಅರ್ಥವನ್ನೇ -ಹಸಿರು ತರಕಾರಿ- ಸಂಕೇತಿ ಭಾಷೆಯಲ್ಲಿಯೂ ಕೊಡುತ್ತದೆ; ಹಿಂದಿನ ಕಾಲದಲ್ಲಿ, ಊರಲ್ಲಿ ಯಾರ ಮದುವೆಯಾದರೂ ಅದರಲ್ಲಿ ಎಲ್ಲರೂ ಭಾಗವಹಿಸುತ್ತಿದ್ದುದರಿಂದ, ಮದುವೆಯ ಹಿಂದಿನ ದಿನ `ನಾಳೇಕ್ ಎಲ್ಲಾರೂ ಕರಿ ತಿರ್ತಕ್ಕ್ ವರಣು' (ನಾಳೆ ತರಕಾರಿ ಹೆಚ್ಚುವುದಕ್ಕೆ ಎಲ್ಲರೂ ಬರಬೇಕು) ಎಂದು ಪ್ರತಿ ಮನೆಗೂ ಆಹ್ವಾನ ಹೋಗುತ್ತಿತ್ತು.

ಸುಮಾರು 50 ವರ್ಷಗಳ ಹಿಂದಿನವರೆಗೂ `ನಿಷೇಕ ಪ್ರಸ್ತ'ದ ದಿವಸ, ಮದುಮಗಳು `ಗಂಡೀ ಚೀರೆ'ಯನ್ನುಟ್ಟು (ಎಂದರೆ, ನಾಚಾರಮ್ಮ ಜಾರಿಗೆ ತಂದರು ಎಂದು ಹೇಳಲಾಗುವ, ಎರಡು ಮೂರು ಸುತ್ತು ಬಂದು ಕಚ್ಚೆಯಂತೆ ಉಡುವ ಸೀರೆ; ಇಂದು ಪ್ರಾಯಃ ಹಳ್ಳಿಗಳಲ್ಲಿ ವಯಸ್ಸಾದ ಸ್ತ್ರೀಯರಿಗೆ ಮಾತ್ರ ಆ ಬಗೆಯ ಸೀರೆ ಉಡಲು ಬರುತ್ತದೆ), ಊಟದ ಸಮಯದಲ್ಲಿ `ಅಭಿಘಾರ' (ತುಪ್ಪ ಹಾಕುವುದು) ಮಾಡಲು ಬರುವುದು ಸಂಪ್ರದಾಯವಾಗಿತ್ತು. ಈಗಲೂ, ಪ್ರಾಯಃ, ತಮ್ಮ ಮೂಲವನ್ನು ಮರೆಯಬಾರದೆಂದು, ಶ್ರಾದ್ಧಗಳಲ್ಲಿ ಆಹ್ವಾನಿತ ಬ್ರಾಹ್ಮಣರಿಗೆ ಎಲ್ಲವನ್ನೂ ಬಡಿಸಿಯಾದ ನಂತರ ತಮಿಳಿನ ಒಂದು ವಾಕ್ಯ ಕಡ್ಡಾಯವಾಗಿ ಹೇಳಲ್ಪಡುತ್ತದೆ: `ಅದದ್ ಅಪ್ಪಪ್ಡಿ ರಾಂದೋ! ಕ್ಷೀರಾನ್ನತ್ಯಾನೂ ಭುಂಜಿಚ್ಚ್ ಶ್ರಾದ್ಧರಕ್ಷಣ್ಯಮ್ ಪಣ್ಣವೇಣು' (`ಯಾವುದು ಹೇಗಿದೆಯೋ ಗೊತ್ತಿಲ್ಲ; ಸ್ವಲ್ಪ ಹಾಲು-ಅನ್ನವನ್ನಾದರೂ ಸ್ವೀಕರಿಸಿ ಶ್ರಾದ್ಧವನ್ನು ರಕ್ಷಿಸಬೇಕು').  ಉಳಿದ ಕಾರ್ಯಕಲಾಪಗಳೆಲ್ಲವೂ ಸಂಸ್ಕೃತದಲ್ಲಿ ನಡೆಯುತ್ತದೆ. 

(ಅಂತಹುದೇ ಮತ್ತೊಂದು ಸಾಂಸ್ಕೃತಿಕ ಪಳೆಯುಳಿಕೆಯೆಂದರೆ ನಮ್ಮಲ್ಲಿ ಇದ್ದ `ಪಡಿ ಬೇಡುವುದು' ಎಂಬ ಆಚರಣೆ. ಎಂದರೆ, ಶ್ರಾವಣ ಮಾಸದಲ್ಲಿ, ಪ್ರತಿ ಶನಿವಾರ ಬೆಳಿಗ್ಗೆ ಹುಡುಗರು- ಕೆಲ ಸಂದರ್ಭಗಳಲ್ಲಿ ವಯಸ್ಸಾದವರೂ ಕೂಡ- ಹಣೆಗೆ ನಾಮವನ್ನು ಹಾಕಿಕೊಂಡು, ಇತರರ ಮನೆಗಳಿಗೆ ಹೊಗಿ `ಲಕ್ಷ್ಮೀಕೇಶವಾಯ ಮಂಗಳಮ್'- ಅಥವಾ, ಅವರವರ ಮನೆ ದೇವರ ಹೆಸರನ್ನು ಹೇಳಿ- ಕೈಯಲ್ಲಿರುವ ಪಾತ್ರೆಯನ್ನು ಮುಂದೂಡುವುದು; ಆ ಮನೆಯವರು ಬಂದು ಸ್ವಲ್ಪ ಅಕ್ಕಿ ಅದರಲ್ಲಿ ಹಾಕುತ್ತಿದ್ದರು. ಕನಿಷ್ಠ ಪಕ್ಷ ಐದು ಮನೆಗಳಲ್ಲಾದರೂ ನಾವು ಪಡಿ ಬೇಡಬೇಕಿತ್ತು. ನಾಮವನ್ನು ಧರಿಸುವವರು ಶ್ರಿವೈಷ್ಣವರು; ಸಂಕೇತಿಗಳು ವಿಭೂತಿ ಧರಿಸಿ ವಿಷ್ಣು-ಶಿವ ಇಬ್ಬರನ್ನೂ ಪೂಜಿಸುವವರು. ಮತ್ತೆ ಈ ಪದ್ಧತಿ ಎಲ್ಲಿಂದ ಬಂದಿತೋ ಗೊತ್ತಿಲ್ಲ.

ಶ್ರಾದ್ಧದ ಬಗ್ಗೆ ಮಾತು ಬಂದಾಗ ನನ್ನ ತಂದೆಯವರು ಹೇಳುತ್ತಿದ್ದ ಒಂದು ಕಥೆ (ನಿಜ ಘಟನೆ?) ನೆನಪಿಗೆ ಬರುತ್ತದೆ. ಸಾಕಷ್ಟು ಬ್ರಾಹ್ಮಣರು (ಕಳೆದ ಶತಮಾನದ ಪ್ರಾರಂಭದಲ್ಲಿ) ಮೈಸೂರು ಅರಮನೆಯಲ್ಲಿ ದೊಡ್ಡ ಸ್ಥಾನಗಳಲ್ಲಿ ಇರುತ್ತಿದ್ದರು. ಅವರಲ್ಲಿ ಒಬ್ಬರು ತುಂಬಾ ಕರ್ಮಶ್ರದ್ಧೆಯುಳ್ಳವರು; ಸಾಂಪ್ರದಾಯಿಕ ಆಚಾರ-ವಿಚಾರಗಳ ಬಗ್ಗೆ ಅಗಾಧ ಭೀತಿ-ಆದರಗಳುಳ್ಳವರು. ಅವರು ಶ್ರಾದ್ಧ ಮಾಡುವಾಗ ಆಹ್ವಾನಿತ ಬ್ರಾಹ್ಮಣರು ಚೆನ್ನಾಗಿ ಊಟಮಾಡಿ ಇನ್ನೇನು ಮುಗಿಯಿತು ಎನ್ನುವಾಗ ಸ್ವತಃ ಅವರೇ ಸಿಹಿ ಪದಾರ್ಥಗಳನ್ನು ತಂದು ಬಡಿಸುತ್ತಿದ್ದರು. ಅವನ್ನೂ ಕಷ್ಟಪಟ್ಟು ಮುಗಿಸಿದನಂತರ, ಮತ್ತೆ ಅವರು ವಿಶೇಷ ಖಾದ್ಯಗಳನ್ನು ತೆಗೆದುಕೊಂಡು ಬಂದು, `ಇನ್ನೊಂದು ಸ್ವಲ್ಪ ನೀವು ತಿನ್ನಲೇ ಬೇಕು' ಎಂದು ಒಂಟಿಗಾಲಿನಲ್ಲಿ ನಿಂತು ಬಿಡುತ್ತಿದ್ದರಂತೆ; ಬ್ರಾಹ್ಮಣರು ಇನ್ನು ಒಂದು ತೊಟ್ಟು ನೀರೂ ಕುಡಿಯಲು ಸಾಧ್ಯವಿಲ್ಲ ಎಂದರೂ ಬಿಡದೆ ಮತ್ತೆ ಅವರಿಗೆ ಬಡಿಸುವ ತನಕ ಒಂಟಿಗಾಲಿನಲ್ಲಿ ನಿಂತೇ ಇರುತ್ತಿದ್ದರಂತೆ. ಅಗ್ರಪಂಕ್ತಿಗೆ ಬಂದ ಬ್ರಾಹ್ಮಣರು ಏನನ್ನೂ ಎಲೆಯಲ್ಲಿ ತಿನ್ನದೆ ಬಿಡಬಾರದು ಅನ್ನುವ ಒಂದು ನಂಬಿಕೆಯಿದೆ. ಆದುದರಿಂದ ಇವರ ಈ ಅತ್ಯಾದರ ಸಹಿಸಲಾರದ ಶಿಕ್ಷೆಯಾಗುತ್ತಿದ್ದು, ಇವರ ಮನೆಗೆ ಬ್ರಾಹ್ಮಣಾರ್ಥಕ್ಕೆ ಬರಲೇ ಹೆಚ್ಚಿನವರು ಒಪ್ಪುತ್ತಿರಲಿಲ್ಲವಂತೆ.

ಈ ಅಭ್ಯಾಸವನ್ನು ಹೇಗಾದರೂ ಬಿಡಿಸಬೇಕೆಂದು ಆಗ ಭಕ್ಷಿಗಳಾಗಿದ್ದ ತಿಪ್ಪಯ್ಯನವರು (?) ಯೋಚಿಸುತ್ತಿದ್ದಾಗ ಒಂದು ಸಂದರ್ಭದಲ್ಲಿ ತುಂಬಾ ಸಾತ್ವಿಕರೂ ವೇದಸಂಪನ್ನರೂ ಆದ ಸಂಕೇತಿ ದೀಕ್ಷಿತರೊಬ್ಬರು ಅವರ ಮನೆಗೆ ಬಂದರಂತೆ. ಆಗಲೇ ತಿಪ್ಪಯ್ಯನವರ ಮನೆಗೆ ಶ್ರಾದ್ಧಕ್ಕೆ ಆಹ್ವಾನ ನೀಡಲು ಬಂದಿದ್ದ ಆ ಕರ್ಮನಿಷ್ಠ ಅಧಿಕಾರಿಗೆ ತಿಪ್ಪಯ್ಯನವರು ತಮ್ಮ ಮನೆಗೆ ಬಂದಿದ್ದ ಅಭ್ಯಾಗತರನ್ನು ಅಗ್ರಪಂಕ್ತಿಗೆ ಆಹ್ವಾನಿಸುವಂತೆ ಹೇಳಿ, ಅವರನ್ನೂ ಒಪ್ಪಿಸಿದರಂತೆ. ಮಾರನೆಯ ದಿನ, ಶ್ರಾದ್ಧಕ್ಕೆ ಹೋಗುವ ಮೊದಲು ತಿಪ್ಪಯ್ಯನವರು ದೀಕ್ಷಿತರಿಗೆ `ಹೀಗೆ ಹೀಗೆ' ಎಂದು ಆ ಕರ್ಮನಿಷ್ಠ ಅಧಿಕಾರಿಯ ಬಗ್ಗೆ ಹೇಳಿ, ಏನಾದರೂ ಮಾಡಿ ಅವರಿಗೆ ತಮ್ಮ ತಪ್ಪನ್ನು ತಿಳಿಸಿಕೊಡಬೇಕೆಂದು ಕೇಳಿಕೊಂಡರಂತೆ.

`ನೋಡೋಣ; ಲಕ್ಷ್ಮೀಕೇಶವನಿದ್ದಾನೆ' ಎಂದು ಹೇಳಿದ ದೀಕ್ಷಿತರು, ಅಧಿಕಾರಿಯ ಮನೆಗೆ ಹೋದರು. ಅಲ್ಲಿ ಎಲ್ಲವೂ ಸಾಂಗವಾಗಿ ನಡೆದು ಊಟ ಪ್ರಾರಂಭವಾಯಿತು. ದೀಕ್ಷಿತರು ಹೇಗೆ ತಮ್ಮ ಶ್ರಾದ್ಧ ಭೋಜನವನ್ನು ಮಾಡಿದರೆಂದರೆ, ಅನ್ನ ಬಡಿಸಿ ಸಾರು ತರುವ ಹೊತ್ತಿಗೆ ಅನ್ನವನ್ನು ಇವರು ತಿಂದು ಮುಗಿಸಿರುತ್ತಿದ್ದರು; ವಡೆ ತಂದು ಚಟ್ನಿ ತರುವುದರೊಳಗೆ ವಡೆ ಮುಗಿದಾಗಿರುತ್ತಿತ್ತು; ಒಳಗಿನಿಂದ ಆ ಕರ್ತೃವಿನ ಶ್ರಿಮತಿಯವರು ತಂದು ಬಡಿಸುತ್ತಲೇ ಇದ್ದರು, ಇವರು ಎಲ್ಲವನ್ನೂ ಸ್ವಾಹಾ ಮಾಡುತ್ತಲೇ ಇದ್ದರು. ಅರ್ಧ ಗಂಟೆಯ ನಂತರ ಒಳಗಿನಿಂದ ಏನೂ ಬರಲಿಲ್ಲವಾದುದರಿಂದ ನೋಡಲು ಹೋದ ಆ ಯಜಮಾನರಿಗೆ ಕಂಡದ್ದು ಖಾಲಿ ಪಾತ್ರೆಗಳು ಮತ್ತು ತಲೆಯ ಮೇಲೆ ಕೈಯಿಟ್ಟುಕೊಂಡು ಕುಳಿತಿದ್ದ ಧರ್ಮಪತ್ನಿ. ಅವರು ಏನೂ ತೋಚದೆ, ಗರ ಬಡಿದವರಂತೆ ಹೊರಗೆ ಬಂದು ಇವರ ಮುಂದೆ ಕೈಜೋಡಿಸಿ ಮೂಕವಾಗಿ ನಿಂತರಂತೆ; ಹರಿಯುತ್ತಿದ್ದ ಕಣ್ಣೀರು. ಆಗ ಅತಿಥಿಯಾಗಿ ಬಂದ ದೀಕ್ಷಿತರು ಅವರ ಶ್ರಾದ್ಧ ಸಾಂಗವಾಗಿದೆಯೆಂದು, ಆದರೆ ಇನ್ನು ಮುಂದೆ ಮೊದಲಿನಂತೆ ಹೆಚ್ಚು ಊಟಮಾಡಲು ಯಾರಿಗೂ ಬಲವಂತ ಮಾಡಬಾರದೆಂದು ಹೇಳಿ, ಆಪೋಶನ ತೆಗೆದುಕೊಂಡು ಎದ್ದರಂತೆ. ಸಂಕೇತಿಗಳ ನೇಮ, ಕರ್ಮನಿಷ್ಠೆ, ಹಟ, ಇತ್ಯಾದಿಗಳ ಬಗ್ಗೆ ಇಂತಹ ಅನೇಕ ಕಥೆಗಳು ಜನಪ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT