ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಸಮಿತಿ ಪುನರ್‌ರಚನೆಗೆ ಒತ್ತಾಯ

ವೃತ್ತಿ ಕುಶಲಕರ್ಮಿಗಳಿಗೆ ಸ್ಥಾನ ಕೊಡಿ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಂಗಕರ್ಮಿ ಪ್ರಸನ್ನ ಅವರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ ತಜ್ಞ ನೇಕಾರರ ಸಮಿತಿಯನ್ನು ಪುನರ್‌ರಚಿಸುವಂತೆ ಮುಖ್ಯಮಂತ್ರಿ­ಗಳಿಗೆ ಮನವಿ ಸಲ್ಲಿಸ­ಲಾಗು­ವುದು ಎಂದು ನೇಕಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ್‌ ಹೇಳಿದರು.

ಶುಕ್ರವಾರ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ಸಭೆ­ಯಲ್ಲಿ ನೇಕಾರರ ಅಹವಾಲು­ಗಳನ್ನು ಸ್ವೀಕರಿಸಿ ಮಾತನಾಡಿದರು.
ನವೆಂಬರ್‌ 3ರಂದು ತಜ್ಞರ ಸಮಿತಿ ರಚಿಸಲಾಗಿದೆ. ಆದರೆ ಆ ಸಮಿತಿಯಲ್ಲಿ ನುರಿತ, ಮೂಲ ನೇಕಾರರು ಯಾರೂ ಇಲ್ಲ. ಹಾಗಾಗಿ ಸಮಿತಿಯನ್ನು ಪುನರ್‌ ರಚಿಸಿ ನೈಜ ನೇಕಾರರಿಗೆ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದರು.
ನೇಕಾರ ಸಮುದಾಯದ ಸ್ವಾಮಿ ಬಸವರಾಜ ಪಟ್ಟದಾರ್ಯ ಮಾತ­ನಾಡಿ, ‘ನೇಕಾರರ ಒಕ್ಕೂಟವನ್ನು ತಿರಸ್ಕರಿಸಿ  ತನ್ನದೇ ಹಾದಿ ಹಿಡಿದಿರುವ ಪ್ರಸನ್ನ­ರಂಥವರನ್ನು ಎದುರಿಸಲು ನೇಕಾರರರೆಲ್ಲ ಒಂದಾಗಬೇಕು. ಇಲ್ಲದಿ­ದ್ದರೆ ಅಪರಿಚಿತರು ನಮ್ಮ ಮನೆ ನಡೆಸುವಂತಾಗುತ್ತದೆ’ ಎಂದರು.

ಪ್ರಸನ್ನ ವಿರುದ್ಧ ಆರೋಪ
‘ಪ್ರಸನ್ನ ಅವರು ಯಾಂತ್ರೀಕೃತ ಕೈಮಗ್ಗಗಳಿಗೆ ಸಬ್ಸಿಡಿ ನೀಡಬಾರದು ಎನ್ನುತ್ತಿದ್ದಾರೆ. ಆದರೆ, ನಾವೆಲ್ಲ ಕೈ ಮಗ್ಗಗಳಲ್ಲಿ ಕೆಲಸ ಮಾಡಿ ಯಾಂತ್ರೀಕೃತ ಮಗ್ಗಗಳಿಗೆ ಬದಲಾಗಿ­ದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ಅದು ಅನಿವಾರ್ಯ. ಎಲ್ಲರೂ ಬದಲಾಗಿ­ದ್ದಾರೆ. ನೇಕಾರರು ಮಾತ್ರ ಹಾಗೇ ಇರಬೇಕು ಎಂಬ ಧೋರಣೆ ಸರಿಯಲ್ಲ. ಆದರೂ ಶೇ  75ರಷ್ಟು ಕೆಲಸ ಕೈಯಿಂದಲೇ ನಡೆಯುತ್ತಿದೆ. ಆದರೆ ಯಾಂತ್ರೀಕೃತ ಮಗ್ಗಗಳಿಗೆ ಸಬ್ಸಿಡಿ ನೀಡಬಾರದು ಎಂದು ಹೇಳಿ ನೇಕಾರ­ರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಗಜೇಂದ್ರಗಡ ನೇಕಾರರ ಸಹಕಾರ ಸಂಘದ ಅಧ್ಯಕ್ಷ ಅಶೋಕ್‌ ಹನು­ಮಂತಪ್ಪ ಆರೋಪಿಸಿದರು.

ಮೈಸೂರು ನೇಕಾರರ ಸಹಕಾರಿ ಸಂಘದ ಅಧ್ಯಕ್ಷ ಬನಶಂಕರ್‌ ಮಾತ­ನಾಡಿ, ಕೈಮಗ್ಗದಲ್ಲಿ ನಾಲ್ಕು ಜನ ಎರಡು ದಿನ ದುಡಿದರೆ ಒಂದು ಸೀರೆ ಸಿದ್ಧವಾಗುತ್ತದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ ಯಾಂತ್ರೀಕೃತ ಮಗ್ಗಳಿಗೆ  ಪ್ರೋತ್ಸಾಹ ನೀಡಬೇಕಾಗಿದೆ. ಪ್ರಸನ್ನ ಅವರು ವಾಸ್ತವದ ಅರಿವಿಲ್ಲದೆ ಹೋರಾಟ ಮಾಡುತ್ತಿದ್ದಾರೆ ಎಂದರು. ಲಾಳರಹಿತ ಮತ್ತು ಲಾಳಸಹಿತ ಮಗ್ಗಗಳಿಗೆ ಶೇ 3 ಬಡ್ಡಿ ದರದಲ್ಲಿ ಸಾಲ ನೀಡಬೇಕು. ಸರ್ಕಾರ ಸಬ್ಸಿಡಿ ದರದಲ್ಲಿ ರೇಷ್ಮೆ ಪೂರೈಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರಸನ್ನ ನೇಕಾರರೇ ಅಲ್ಲ
ಪ್ರಸನ್ನ ಅವರು ನೇಕಾರರೇ ಅಲ್ಲ. ನೇಕಾರ ಸಮುದಾಯದವರೂ ಅಲ್ಲ. ಆದರೆ, ನೇಕಾರರ ಪರ ಹೋರಾಟ ಮಾಡುವುದಾಗಿ ಮಾಧ್ಯಮಗಳಲ್ಲಿ ಬಿಂಬಿಸಿಕೊಂಡು ನೇಕಾರರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿ­ದ್ದಾರೆ. ಅವರಿಗೆ ಬೆಂಬಲ ನೀಡುತ್ತಿ­ರುವ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ನೇಕಾರರ ಸಮಸ್ಯೆಗಳ ಅರಿವಿಲ್ಲ.
- –ಅಶೋಕ್‌ ಹನುಮಂತಪ್ಪ, ಗಜೇಂದ್ರ­ಗಡ ನೇಕಾರರ ಸಹಕಾರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT