ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾವತಿ ನದಿ ತಿರುವಿನಿಂದ ಸರ್ವನಾಶ–ಶ್ರೀಶಕುಮಾರ್‌

Last Updated 20 ಫೆಬ್ರುವರಿ 2014, 6:04 IST
ಅಕ್ಷರ ಗಾತ್ರ

ಪುತ್ತೂರು: ನೇತ್ರಾವತಿಯ ಮಡಿಲಿನಲ್ಲಿ ಸಾವಿರಾರು ಜೀವ­ಚರ­ಗಳು ಬದುಕುತ್ತಿದ್ದು,  ನದಿಯ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದಲ್ಲಿ ಅವುಗಳು ಸೇರಿದಂತೆ ನಾವ್ಯಾರೂ ಬದುಕಿ ಉಳಿಯಲು ಸಾಧ್ಯವಿಲ್ಲ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ, ಪರಿಸರವಾದಿ ಡಾ.ಶ್ರೀಶಕುಮಾರ್ ಎಂ.ಕೆ. ಅವರು ಅಭಿಪ್ರಾಯಪಟ್ಟರು.

ಪುತ್ತೂರಿನ ಅನುರಾಗ ವಠಾರದಲ್ಲಿ ಕರ್ನಾಟಕ ಸಂಘ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ಫೆ.23ರ ತನಕ ನಡೆಯಲಿರುವ `ಸಾಹಿತ್ಯ ಕಲಾಕುಶಲೋಪರಿ- 11’ ಕಾರ್ಯಕ್ರಮದಲ್ಲಿ ಬುಧವಾರ ನಡೆದ  `ನೇತ್ರಾವತಿ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದರೆ’ ಎಂಬ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು. ನೇತ್ರಾವತಿ ಯೋಜನೆಯು ಯಾರ ವೈಯಕ್ತಿಕ ಸಮಸ್ಯೆಯಾಗಿರದೆ  ಜಿಲ್ಲೆಯ ಎಲ್ಲ ಜೀವವಿರುವ ವ್ಯಕ್ತಿಗಳ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ನೇತ್ರಾವತಿ ನದಿ ತಿರುವು ಯೋಜನೆಗೆ ಎತ್ತಿನ ಹಳ್ಳ ಯೋಜನೆ ಎಂಬ ಹೆಸರಿನಲ್ಲಿ ನಮ್ಮ ಜಿಲ್ಲೆಯವರೇ ಆಗಿರುವ ಡಿ.ವಿ. ಸದಾನಂದ ಗೌಡರು ಅನುಮತಿ ನೀಡಿದ್ದು,  ಇದಕ್ಕಾಗಿ ₨ 850 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರು. ಈ ಮೂಲಕ ಅವರು ಯೋಜನೆಯನ್ನು `ಅಳಿಯ ಅಲ್ಲ ಮಗಳ ಗಂಡ’ ಎಂದು ಜಿಲ್ಲೆಯ ಜನರಿಗೆ ಬಿಂಬಿಸುವ ಕೆಲಸ ಮಾಡಿದ್ದರು.

ಬಳಿಕ ಅಧಿಕಾರಕ್ಕೆ ಬಂದ ರಮಾನಾಥ ರೈ, ಯು.ಟಿ.ಖಾದರ್, ಶಾಸಕಿ ಶಕುಂತಳಾ ಶೆಟ್ಟಿ ಅವರೆಲ್ಲಾ ಅದು ಹಿಂದಿನ ಸರ್ಕಾರ ಮಾಡಿರುವುದು ಎಂದು ಕೈಚೆಲ್ಲಿದ್ದಾರೆ. ಹಿಂದಿನ ಸರ್ಕಾರ ಮಾಡಿರುವ ಗೋಹತ್ಯೆ ನಿಷೇಧ ಕಾಯಿದೆಯನ್ನು ಸರ್ಕಾರಕ್ಕೆ ಹಿಂದೆಗೆಯಲು ಸಾಧ್ಯವಾಗಿದ್ದರೆ ಎತ್ತಿನ ಹಳ್ಳ ಯೋಜನೆಯನ್ನು ಯಾಕೆ ಹಿಂದೆಗೆಯಲು ಸಾಧ್ಯವಾಗುತ್ತಿಲ್ಲ ಎಂದು  ಅವರು ಪ್ರಶ್ನಿಸಿದರು.

ನದಿ ತಿರುವಿನಿಂದ ಇಲ್ಲಿನ ಧರ್ಮಸ್ಥಳ, ಸುಬ್ರಹ್ಮಣ್ಯ, ಉಪ್ಪಿನಂಗಡಿ ಮಖೆ ಸೇರಿದಂತೆ ಎಲ್ಲ  ಪುಣ್ಯ ಸ್ಥಳಗಳು, ಇಲ್ಲಿನ ಐತಿಹಾಸಿಕ ಪರಂಪರೆಗಳು, ಸಾವಿರಾರು ಜೀವಚರಗಳು, ಮೀನುಗಳು, ಮೀನುಗಾರರು ಸೇರಿದಂತೆ ನಾವೆಲ್ಲರೂ ನಾಶವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ಎಚ್. ಸುಂದರರಾವ್ ಜೋಡುಮಾರ್ಗ ಅಧ್ಯಕ್ಷತೆ ವಹಿಸಿದ್ದರು. ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕಗಳ ಕುರಿತು ಸಂವಾದ ನಡೆಯಿತು.

ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT