ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಜಾತ್ಯತೀತ ರಾಷ್ಟ್ರ ಭರವಸೆಯ ಹೊಸ ಅಧ್ಯಾಯ

Last Updated 20 ಸೆಪ್ಟೆಂಬರ್ 2015, 19:45 IST
ಅಕ್ಷರ ಗಾತ್ರ

ನೇಪಾಳದಲ್ಲಿ ಹೊಸ ಸಂವಿಧಾನ ಭಾನುವಾರದಿಂದ (ಸೆ.20) ಅಸ್ತಿತ್ವಕ್ಕೆ ಬಂದಿದೆ. ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಎನಿಸಿದ್ದ ನೇಪಾಳ ಇನ್ನು ಮುಂದೆ ಜಾತ್ಯತೀತ ಗಣರಾಜ್ಯ ರಾಷ್ಟ್ರವಾಗಿ ಮುಂದುವರಿಯಲಿದೆ. ಹೊಸ ಸಂವಿಧಾನದಲ್ಲಿ ‘ಜಾತ್ಯತೀತ’ ಪದವನ್ನು ಕಿತ್ತುಹಾಕಿ ಈ ಹಿಂದೆ ಇದ್ದಂತಹ ‘ಹಿಂದೂ ರಾಷ್ಟ್ರ’ ಎಂಬ ಸ್ಥಾನಮಾನವನ್ನೇ ಉಳಿಸಿಕೊಳ್ಳಬೇಕು ಎಂಬಂತಹ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಹೆಚ್ಚಿನ ಜನರು ಜಾತ್ಯತೀತ ರಾಷ್ಟ್ರದ ಸ್ವರೂಪಕ್ಕೇ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದು ಮಹತ್ವದ ಸಂಗತಿ.

ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವ ಪ್ರಸ್ತಾವನೆಗೆ 601 ಸಂಸತ್ ಸದಸ್ಯರ ಪೈಕಿ  21 ಮಂದಿಯ ಬೆಂಬಲ ಮಾತ್ರ ಸಿಕ್ಕಿತ್ತು. 2.8 ಕೋಟಿಯಷ್ಟಿರುವ ನೇಪಾಳದ ಜನಸಂಖ್ಯೆಯಲ್ಲಿ ಶೇ 80ರಷ್ಟು ಮಂದಿ ಹಿಂದೂಗಳೇ ಇರುವುದರಿಂದ ನೇಪಾಳವನ್ನು ಹಿಂದೂ ರಾಷ್ಟ್ರವಾಗಿ  ಘೋಷಿಸಬೇಕೆಂಬ ಬೇಡಿಕೆ ತರ್ಕಬದ್ಧವಾದುದು ಎಂಬುದು ಹಿಂದೂ ಪರ ಸಂಘಟನೆಗಳ ನಿಲುವು. 

ಬಹುಸಂಖ್ಯಾತರ ಅಸ್ಮಿತೆಯನ್ನು ರಾಷ್ಟ್ರ ಪ್ರತಿಬಿಂಬಿಸುವಂತಿರಬೇಕು ಎಂಬುದು ಅವರ ವಾದ. ಆದರೆ ನೇಪಾಳದಲ್ಲಿ ಬೌದ್ಧ, ಇಸ್ಲಾಂ, ಕ್ರೈಸ್ತ ಸೇರಿದಂತೆ ಅನೇಕ ಆದಿವಾಸಿ ಧರ್ಮಗಳೂ ಅಸ್ತಿತ್ವದಲ್ಲಿವೆ. ಹೀಗಿರುವಾಗ ಹಿಂದೂ ರಾಷ್ಟ್ರ ಎಂಬಂತಹ ಘೋಷಣೆ ಈ ಸಮುದಾಯಗಳಲ್ಲಿ ಅಭದ್ರತೆ ಮೂಡಿಸುವಂತಹದ್ದಾಗಬಹುದು. ನೇಪಾಳ, ಈ ಹಿಂದೆ ಹಿಂದೂ ರಾಷ್ಟ್ರವಾಗಿದ್ದ ಸಂದರ್ಭದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ತಾರತಮ್ಯವನ್ನು ಅನುಭವಿಸಿದ್ದಲ್ಲದೆ ದಮನಕ್ಕೂ ಒಳಗಾದದ್ದಿದೆ.

ರಾಷ್ಟ್ರದಲ್ಲಿ ಅನೇಕ ಸಂಘರ್ಷಗಳಿಗೂ ಇದು ಕಾರಣವಾಗಿದೆ.  ಹೀಗಾಗಿ, ಬಹುಸಂಖ್ಯಾತರ ಪ್ರಜಾಪ್ರಭುತ್ವ ಎನ್ನುವುದಕ್ಕಿಂತ ‘ಎಲ್ಲರನ್ನೂ ಒಳಗೊಳ್ಳುವ’ ಪ್ರಜಾಪ್ರಭುತ್ವ ನಿಜಕ್ಕೂ ಪ್ರಗತಿಯತ್ತ  ಇರಿಸಿದ ಹೆಜ್ಜೆಯಾಗುತ್ತದೆ. ಧರ್ಮಗಳನ್ನು ಮೀರಿ ಎಲ್ಲಾ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡುವ ಜಾತ್ಯತೀತ ಸಂವಿಧಾನ ಬಲಿಷ್ಠವಾದ ಅಸ್ತಿಭಾರವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

2006ರಲ್ಲಿ ಅಂತರ್ಯುದ್ಧ ಅಂತ್ಯಗೊಂಡ ನಂತರ ಹೊಸ ಸಂವಿಧಾನ ರಚನೆಗೆ ನೇಪಾಳ ಮುಂದಾಗಿತ್ತು. ಆದರೆ ಹೊಸ ಗಣರಾಜ್ಯದ  ಸ್ವರೂಪದ ಬಗೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಸಂವಿಧಾನ ರಚನಾ ಪ್ರಕ್ರಿಯೆ ವಿಳಂಬವಾಗುತ್ತಲೇ ಸಾಗಿತ್ತು. ಅಂತೂ, ಸಂವಿಧಾನ ರಚನೆ ಪ್ರಕ್ರಿಯೆ ಆರಂಭವಾದ ಎಂಟು ವರ್ಷಗಳ ನಂತರ ಈಗ ಹೊಸ ಸಂವಿಧಾನ ಜಾರಿಯಾಗುತ್ತಿರುವುದು ಸ್ವಾಗತಾರ್ಹ. ಆದರೆ ಮುಂದಿನ ದಿನಗಳೇನೂ ಸುಗಮವಾಗಿಲ್ಲ.

ಮುಂದೆ ಕ್ರಮಿಸಬೇಕಿರುವ ಈ ಹಾದಿಯಲ್ಲಿ ಸಾಕಷ್ಟು ಸವಾಲುಗಳಿವೆ. ಹೊಸ ಸಂವಿಧಾನದಲ್ಲಿ ಜಾತ್ಯತೀತ ತತ್ವ ಅಳವಡಿಕೆ ವಿರೋಧಿಸಿ ಕೆಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ.  ಹಾಗೆಯೇ, ಹೊಸ ಸಂವಿಧಾನ ಜಾರಿಯನ್ನು ವಿರೋಧಿಸಿ ನೇಪಾಳದ ತೆರಾಯ್ ವಲಯದಲ್ಲಿ ಮಾಧೇಸಿ ಹಾಗೂ ಥಾರು ಸಮುದಾಯದ ಜನರು ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ. ಹೊಸ ಸಂವಿಧಾನದ ಅನ್ವಯ, ಜಾತ್ಯತೀತ ಒಕ್ಕೂಟ ವ್ಯವಸ್ಥೆಯಲ್ಲಿ ಏಳು ರಾಜ್ಯಗಳು ಸೃಷ್ಟಿಯಾಗಲಿವೆ. 

ಈ ವಿಚಾರ ಕುರಿತಂತೆ ಪ್ರತಿಭಟನಾಕಾರರು ತೀವ್ರ  ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ. ಹಾಗೆಯೇ ‘ಜಾತ್ಯತೀತ ರಾಷ್ಟ್ರ’ ಎನ್ನುವ ಬದಲಿಗೆ ‘ಧಾರ್ಮಿಕ ಸ್ವಾತಂತ್ರ್ಯ’ ಎಂಬ ನುಡಿಗಟ್ಟು ಬಳಸಬೇಕೆಂಬ ಸಲಹೆಯನ್ನು ನೇಪಾಳಿ ಕಾಂಗ್ರೆಸ್ ಹಾಗೂ ನೇಪಾಳದ ಕಮ್ಯುನಿಸ್ಟ್ ಪಕ್ಷ (ಸಂಯುಕ್ತ ಮಾರ್ಕ್ಸಿಸ್ಟ್ ಲೆನಿನಿಸ್ಟ್‌) ಸಲಹೆ ನೀಡಿತ್ತು. ಆದರೆ ಈ ವಿಚಾರಧಾರೆಗೆ ಹೆಚ್ಚು ಮನ್ನಣೆ ಸಿಗಲಿಲ್ಲ. ರಾಜವಂಶದ ಆಳ್ವಿಕೆ ಇದ್ದಾಗ ನೇಪಾಳ ಹಿಂದೂ ರಾಷ್ಟ್ರವಾಗಿತ್ತು.

ಈಗ ರಾಜವಂಶದ ಆಳ್ವಿಕೆ ಅಂತ್ಯವಾಗಿರುವುದರಿಂದ ಹಿಂದೂ ರಾಷ್ಟ್ರದ ಪರಿಕಲ್ಪನೆ ಅಪ್ರಸ್ತುತ ಎಂಬಂಥ ವಾದ ಬಲ ಪಡೆದುಕೊಂಡಿದೆ. 2007ರ ಮಧ್ಯಂತರ ಸಂವಿಧಾನದಲ್ಲೂ ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದೇ ಘೋಷಿಸಲಾಗಿತ್ತು.  ಈಗ, ಬರಲಿರುವ ಮುಂದಿನ ಸರ್ಕಾರಗಳು ಜಾತ್ಯತೀತ ತತ್ವವನ್ನು ಎತ್ತಿ ಹಿಡಿಯುವ ಬದ್ಧತೆ ಪ್ರದರ್ಶಿಸುವುದು ಮುಖ್ಯ.

ಸಂವಿಧಾನದಲ್ಲಿ ಜಾತ್ಯತೀತ ತತ್ವ ಅಳವಡಿಸಿರುವುದು ಆಧುನಿಕ ರಾಷ್ಟ್ರ ನಿರ್ಮಾಣದತ್ತ ಇರಿಸಿದ ಮೊದಲ ಹೆಜ್ಜೆ. ಆದರೆ ಆಚರಣೆಯಲ್ಲೂ ಈ ತತ್ವಕ್ಕೆ ನಿಷ್ಠರಾಗಿ ಉಳಿದುಕೊಳ್ಳುವುದೇ ಮುಂದಿರುವ ಸವಾಲು. ಹೊಸ ಸಂವಿಧಾನದ ಜಾರಿಯಿಂದ ಆಧುನಿಕ ರಾಷ್ಟ್ರವಾಗಿ ಹೊಸ ಹೆಜ್ಜೆಗಳನ್ನಿರಿಸಲಿರುವ ನೆರೆಯ ಮಿತ್ರ ರಾಷ್ಟ್ರ ನೇಪಾಳಕ್ಕೆ  ಭಾರತದ ಸಹಕಾರ ಎಂದಿನಂತೆ ಗಟ್ಟಿಯಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT