ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಪೊಲೀಸ್‌ಗಿರಿ ಕೊನೆಗಾಣಿಸಿ

Last Updated 31 ಜನವರಿ 2013, 19:59 IST
ಅಕ್ಷರ ಗಾತ್ರ

ಮಂಗಳೂರಿನಲ್ಲಿ ಯುವಕ ಯುವತಿಯರನ್ನು ನಿಯಂತ್ರಿಸುವ ನೈತಿಕ ಪೊಲೀಸ್‌ಗಿರಿ ಮತ್ತೆ ಮರುಕಳಿಸಿದೆ. ಈ ಬಾರಿ ಈ ಕಾರ್ಯಕ್ಕಿಳಿದಿರುವುದು ಬಜರಂಗದಳ ಹಾಗೂ ಅದರ ಮಹಿಳಾ ಘಟಕ ದುರ್ಗಾವಾಹಿನಿ. ಮಂಗಳೂರಿನ ಐಸ್‌ಕ್ರೀಂ ಪಾರ್ಲರ್ ಒಂದರಲ್ಲಿ ಅನೈತಿಕ, ಅಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬಂತಹ ಮಾಹಿತಿ ನೀಡಿದ ಬಜರಂಗದಳ ಹಾಗೂ ದುರ್ಗಾವಾಹಿನಿ ಕಾರ್ಯಕರ್ತರ ಜೊತೆಗೇ ಐಸ್‌ಕ್ರೀಂ ಪಾರ್ಲರ್‌ಗೆ ತೆರಳಿ ಅಲ್ಲಿದ್ದ ಮೂವರು ಯುವಕರು ಹಾಗೂ ನಾಲ್ವರು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.

`ಯುವಕರ ಜೊತೆ ಸಿಗರೇಟ್ ಸೇದುತ್ತಿದ್ದ ನಾಲ್ವರು ಯುವತಿಯರ ಬಗೆಗಿನ ಮಾಹಿತಿಯನ್ನಾಧರಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವತಿಯರ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ತಪ್ಪಿಸಲು ಯುವತಿಯರನ್ನು ಠಾಣೆಗೆ ಕರೆ ತಂದೆವು' ಎಂದು ಹೇಳಿಕೊಂಡ ಪೊಲೀಸರ ಮಾತುಗಳಂತೂ ಅವಮಾನಕರ.

ವಾಸ್ತವವಾಗಿ, ಹಲ್ಲೆ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕಾದುದು ನ್ಯಾಯವಾದದ್ದು. ಆದರೆ ಹಲ್ಲೆಗೊಳಗಾಗಬಹುದಾದ ಸಾಧ್ಯತೆ ಇರುವವರನ್ನು ರಕ್ಷಿಸಿದ್ದೇವೆ ಎಂಬ ನೆಪ ಒಡ್ಡಿ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆ ತಂದು ಮಾನಸಿಕ ಕ್ಷೋಭೆಗೆ ಒಳಪಡಿಸಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ.

ಹುಡುಗ ಹುಡುಗಿಯರು ಜೊತೆಗೂಡಿ ಇರುವುದೇ ಅಪರಾಧ ಎಂಬಂತಹ ತಾಲಿಬಾನ್ ಮನೋಭಾವ ಮಂಗಳೂರಿನಲ್ಲಿ ಪ್ರದರ್ಶಿತವಾಗುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ `ಪಬ್ ಸಂಸ್ಕೃತಿ' ವಿರೋಧಿಸಲು ಮಂಗಳೂರಿನ ಪಬ್ ಒಂದರ ಮೇಲೆ ದಾಳಿ ನಡೆಸಿ ಹೆಣ್ಣುಮಕ್ಕಳ ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ನಡೆಸಿದ್ದ ದೈಹಿಕ ಹಲ್ಲೆ ಇಡಿ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಹಾಗೆಯೇ, ಕಳೆದ ವರ್ಷ ಜುಲೈ 29ರಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಡೆಸಿದಂತಹ `ಹೋಮ್ ಸ್ಟೇ'ದಾಳಿ ಪ್ರಕರಣದ್ಲ್ಲಲಿ, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅತ್ಯಂತ ಹೇಯ ರೀತಿಯಲ್ಲಿ ದೈಹಿಕ ಹಲ್ಲೆಗಳನ್ನು ನಡೆಸಲಾಗಿತ್ತು.

ಸ್ವಯಂ ಘೋಷಿತ ನೈತಿಕ ಪೊಲೀಸರಿಂದ ಇಂತಹ ದಾಳಿಗಳು ಅಲ್ಲಲ್ಲಿ ನಿರಂತರವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ ಎಂಬುದನ್ನು ಸಂಘಸಂಸ್ಥೆಗಳು ದಾಖಲಿಸುತ್ತಲೇ ಬಂದಿವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ತೋರುತ್ತಲೇ ಬಂದಿರುವ ನಿಷ್ಕ್ರಿಯತೆ ಈ ನೈತಿಕ ಪೊಲೀಸ್ ಶಕ್ತಿಗಳನ್ನು ದಿಟ್ಟವಾಗಿಸಿವೆ. `ಹೋಂಸ್ಟೇ' ದಾಳಿ ಪ್ರಕರಣದ್ಲ್ಲಲಂತೂ ಪ್ರಮುಖ ಸಾಕ್ಷಿಯಾದ ಪತ್ರಕರ್ತನನ್ನೇ ಆರೋಪಿಯನ್ನಾಗಿಸಲಾಯಿತು.

ತಮ್ಮದೇ ದೃಷ್ಟಿಕೋನದ ನೈತಿಕತೆಯನ್ನು ಸಾರ್ವಜನಿಕರ ಮೇಲೆ ಹೇರಲು ನಡೆಸುವ ಇಂತಹ ದುಷ್ಕೃತ್ಯಗಳು ಸಂವಿಧಾನ ದತ್ತ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿವೆ. ಕಾನೂನು ಅವಕಾಶ ನೀಡಿರುವ ನೈತಿಕತೆಯ ಚೌಕಟ್ಟಿನಲ್ಲಿಯೇ ಇರುವ ವ್ಯಕ್ತಿಗಳ ಖಾಸಗಿತನವನ್ನು ಅತಿಕ್ರಮಿಸುವಂತಹ ಇಂತಹ ಘಟನೆಗಳು ಪ್ರಜಾಸತ್ತೆಯನ್ನು ಅಣಕಿಸುವಂತಹವು. ಯಾರನ್ನು ಬೇಕಾದರೂ ಪೊಲೀಸ್ ಠಾಣೆಗೆ ಎಳೆದೊಯ್ಯಬಹುದೆಂಬ ಸಂದೇಶ ನೀಡುವ ಈ ಕೃತ್ಯ ಖಂಡನಾರ್ಹ.

ಸಹಪಾಠಿಗಳೊಂದಿಗೆ ಹೆಣ್ಣುಮಕ್ಕಳು ಬೆರೆಯುವುದೂ ಅಪರಾಧವಾಗಿ ಪರಿಣಮಿಸುತ್ತಿರುವುದು ನಾಗರಿಕ ಸಮಾಜಕ್ಕೆ ತಕ್ಕದ್ದಲ್ಲ. ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪೊಲೀಸರ ನಿಯಂತ್ರಣದಲ್ಲಿದೆಯೆ ಅಥವಾ ರಾಜಕೀಯ ಹೋರಾಟದ ರೂಪುರೇಷೆಯ ಭಾಗವಾಗಿಯೇ ನೈತಿಕ ಗೂಂಡಾಗಿರಿ ನಡೆಸುತ್ತಿರುವ ಬಜರಂಗದಳಕ್ಕೆ ಸೇರಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟ ಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT