ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಒಂದೇ, ಕಾರಣ ಹಲವು!

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಹೊಟ್ಟೆನೋವು, ನುಲಿತ ಬಂದೊಡನೆ ಜೀರ್ಣಾಂಗದಲ್ಲಿ ತೊಂದರೆಯಾಗಿದೆ, ಗ್ಯಾಸ್ ಆಗಿದೆ, ಭಟ್ಟಿ ಬಿದ್ದಿದೆ ಎಂದೆಲ್ಲ ತಿಳಿದುಕೊಳ್ಳುವುದು ತಪ್ಪು.

ನಿಜ. ರೂಪ ಒಂದೇ ನಾಮ ಹಲವು ಎಂಬ ಧಾಟಿಯಲ್ಲಿ ಹೊಟ್ಟೆಯ ನೋವು ಒಂದೇ ಆದರೂ ಕಾರಣ ಬಹಳಷ್ಟಿವೆ ಎಂದು ಹೇಳಬಹುದು. ಹೊಟ್ಟೆ ಎಂಬುದೊಂದು ಮಾನವನ ಶರೀರದ ಮಧ್ಯಭಾಗದ ವಿಶಾಲ ಜಾಗ.

ಇದರೊಳಗೋ ಹಲವು ಅವಯವಗಳು. ಆದರೆ ಬಳಲುವವನಿಗೆ ಎಲ್ಲವೂ ಹೊಟ್ಟೆನೋವು! ಹೊಟ್ಟೆನೋವು, ನುಲಿತ ಬಂದೊಡನೆ ಜೀರ್ಣಾಂಗದಲ್ಲಿ ತೊಂದರೆಯಾಗಿದೆ, ಗ್ಯಾಸ್ ಆಗಿದೆ, ಭಟ್ಟಿ ಬಿದ್ದಿದೆ ಎಂದೆಲ್ಲ ತಿಳಿದುಕೊಳ್ಳುವುದು ತಪ್ಪು.

ನಮ್ಮ ದೇಹದ ಎಲ್ಲ ಪ್ರಮುಖ ಅವಯವಗಳಿರುವುದು ನಾವು ‘ಹೊಟ್ಟೆ’ ಎಂದುಕೊಳ್ಳುವ ಭಾಗದಲ್ಲೇ. ಇದನ್ನು ಉದರಭಾಗ (ಅಬ್ಡೋಮೆನ್) ಎನ್ನುತ್ತೇವೆ. ಇದರಲ್ಲಿ ಹೊಟ್ಟೆ, ಸಣ್ಣ ಮತ್ತು ದೊಡ್ಡ ಕರುಳು, ಲಿವರ್, ಪಿತ್ತಕೋಶ, ಸ್ಪ್ಲೀನ್, ಮೂತ್ರಕೋಶ, ಮೂತ್ರಬಸ್ತಿ, ಅಡ್ರಿನಲ್ ಗ್ರಂಥಿ, ಪ್ಯಾಂಕ್ರಿಯಾ ಎಲ್ಲವೂ ಇರುತ್ತವೆ.

ಇವಲ್ಲದೆ ನಮ್ಮ ದೇಹದ ಅತಿ ದೊಡ್ಡ ಧಮನಿಯಾದ ಅಯೋರ್‌್ಟಾದ ಭಾಗವೂ ಉದರ ಭಾಗದಿಂದ ಹಾದು ಹೋಗುತ್ತದೆ. ಈ ಅವಯವಗಳು ಒಂದು ತೆಳುವಾದ ಪೊರೆಯಿಂದ ಆವೃತವಾಗಿರುತ್ತದೆ. ಅದಕ್ಕೆ ‘ಪೆರಿಟೋನಿಯಂ’ ಎನ್ನುತ್ತಾರೆ. ಮೂತ್ರಕೋಶ, ಪ್ಯಾಂಕ್ರಿಯಾ ಮತ್ತು ಕೆಲವು ಭಾಗಗಳು ಇದರ ಹಿಂದಿರುತ್ತವೆ.

ಇವುಗಳಲ್ಲಿ ಎಲ್ಲೇ ತೊಂದರೆಯಾದರೂ ನಮಗೆ ಮೊದಲು ಹೊಟ್ಟೆನೋವು ಕಾಣಿಸಿಕೊಳ್ಳಬಹುದು. ಆದರೆ ಅದೃಷ್ಟವಶಾತ್ ಹೊಟ್ಟೆನೋವು ಸಾಮಾನ್ಯವಿದ್ದರೂ ಅದರ ಗುಣ ಮತ್ತು ಅದರೊಂದಿಗಿರುವ ಲಕ್ಷಣಗಳು ನಮಗೆ ತೊಂದರೆಯ ಮೂಲವನ್ನು ಅರಿಯುವಲ್ಲಿ ಸಹಾಯ ಮಾಡುತ್ತವೆ. ಇವುಗಳ ಬಗ್ಗೆ ಮತ್ತಷ್ಟು ತಿಳಿಯೋಣ.

ಸಾಧಾರಣವಾಗಿ ಹೊಟ್ಟೆನೋವಿನ ಕಾರಣ:
*ಜಠರಸಂಬಂಧಿ ರೋಗಗಳು

*ಕರುಳುಸಂಬಂಧಿ ರೋಗಗಳು

*ಪೆರಿಟೋನಿಯಂ–ಸಂಬಂಧಿ ತೊಂದರೆ

*ಲಿವರ್ ಮತ್ತು ಪಿತ್ತಕೋಶದ ತೊಂದರೆಗಳು

*ಪ್ಯಾಂಕ್ರಿಯಾದ ತೊಂದರೆಗಳು

*ಹರ್ನಿಯಾ, ಕರುಳಿನ ಅವರೋಧ ಮುಂತಾದ ಶಸ್ತ್ರಚಿಕಿತ್ಸೆ ಬೇಕಾಗಿ ಬರುವ ತೊಂದರೆಗಳು.

*ಟೈಫಾಯಿಡ್ ಮುಂತಾದ ಕೆಲವು ಸೋಂಕುಗಳು.

ಸಾಮಾನ್ಯವಾಗಿ 60%ನಲ್ಲಿ ಕಾರಣ ಅಷ್ಟು ಗಂಭೀರದ್ದಿರುವುದಿಲ್ಲ, ಉದಾಹರಣೆಗೆ, ಅತ್ಯಮ್ಲೀಯತೆ, ಕರುಳಿನ ಸೋಂಕು, ಮೂತ್ರಕೋಶದ ಸೋಂಕು, ಮಲಬದ್ಧತೆ, ಮೂತ್ರಕೋಶದಲ್ಲಿ ಕಲ್ಲು ಇತ್ಯಾದಿ. ಆದರೆ ಕೆಲವೊಮ್ಮೆ ಗಂಭೀರ ಕಾರಣಗಳಿದ್ದು ತುರ್ತು ಚಿಕಿತ್ಸೆಯ ಅಗತ್ಯ ಬರಬಹುದು.

ಉದಾ: ಪಿತ್ತನಾಳಗಳಲ್ಲಿ ಅವರೋಧ, ಪ್ಯಾಂಕ್ರಿಯಾದ ತೊಂದರೆ, ಕರುಳಿನಲ್ಲಿ ಅವರೋಧ, ಅಪೆಂಡಿಕ್ಸ್ ಉರಿಯೂತ, ಅಥವಾ ಅರ್ಬುದ. ಅಲ್ಲದೇ ಅಯೋರ್‌್ಟಾ ಧಮನಿಯಲ್ಲಿ ವೈಕಲ್ಯ (ಅನ್ಯುರಿಸಮ್), ರಕ್ತನಾಳಗಳಲ್ಲಿ ರಕ್ತದ ಕೊರತೆ (ಇಸ್ಕೇಮಿಯಾ) – ಇವೆಲ್ಲವೂ ಅತೀವ ನೋವನ್ನುಂಟುಮಾಡುತ್ತವೆ; ಮಾತ್ರವಲ್ಲ, ಶೀಘ್ರ ಚಿಕಿತ್ಸೆಯೂ ಅಗತ್ಯವಾಗಿರುತ್ತದೆ.

ಇವಲ್ಲದೆ ಉದರಭಾಗದ ಮಾಂಸಪೇಶಿ ಮತ್ತು ಸ್ನಾಯುಗಳ ದೌರ್ಬಲ್ಯ, ನರಸಂಬಂಧಿ ತೊಂದರೆಗಳಲ್ಲೂ ಹೊಟ್ಟೆನೋವು ಬರಬಹುದು. ಸಾಧಾರಣವಾಗಿ ಬರುವ ತೊಂದರೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗುವ ಕೆಲವು ಗುಣಲಕ್ಷಣಗಳನ್ನು ತಿಳಿದಿದ್ದಲ್ಲಿ ಗಾಬರಿ ಕಡಿಮೆಯಾಗುತ್ತದೆ. ಅಲ್ಲದೇ ಗಂಭೀರ ಕಾರಣವನ್ನು ಕಡೆಗಣಿಸುವುದೂ ತಪ್ಪುತ್ತದೆ.

ಹೊಟ್ಟೆನೋವಿಗೆ, ಹೆಚ್ಚಾಗಿ ಕಾಣಿಸುವ ತೊಂದರೆಗಳಲ್ಲಿ ಮುಖ್ಯವಾದುವು ಈ ಕೆಳಗಿನಂತಿವೆ:
*ಜಠರದ ಉರಿಯೂತ, ಹುಣ್ಣು. ಅಜೀರ್ಣ

*ಕರುಳಿನ ಸೋಂಕು, ಉರಿಯೂತ

*ದೊಡ್ಡಕರುಳಿನ ಹುಣ್ಣು (ಕೊಲೈಟೀಸ್)

*ಕೆಲವು ಆಹಾರದ ಅಲರ್ಜಿ.

ಉದಾ: ಲ್ಯಾಕ್ಟೋಸ್ ಉಳ್ಳ ಪದಾರ್ಥ

*ಪಿತ್ತಕೋಶದ ಕಲ್ಲು

*ಯಕೃತ್ ಸೋಂಕು, ಉದಾ: ಕಾಮಾಲೆ (ಹೆಪಟೈಟೀಸ್).

*ಪ್ಯಾಂಕ್ರಿಯಾದಲ್ಲಿನ ಉರಿಯೂತ.

*ಮೂತ್ರಕೋಶದಲ್ಲಿ ಕಲ್ಲು, ಸೋಂಕು, ಮೂತ್ರ ಕಟ್ಟಿಕೊಳ್ಳುವುದು.

*ಜನನಾಂಗದ ಸ್ಥಳದಲ್ಲಿ (ಪೆಲ್ವಿಸ್) ಸೋಂಕು, ಉರಿಯೂತ.

*ಮಾಸಿಕ ಋತುಸ್ರಾವದ ಹೊಟ್ಟೆನೋವು

*ಮಲಬದ್ಧತೆ

ಸ್ತ್ರೀ ಅಂಡಕೋಶದಲ್ಲಿ ಗ್ರಂಥಿಯ ತಿರುಚುವಿಕೆ, ಪಿತ್ತನಾಳಗಳಲ್ಲಿ, ಮೂತ್ರವಹ ಸ್ರೋತಸ್ಸಿನಲ್ಲಿ ಕಲ್ಲು ಸಿಕ್ಕಿಕೊಳ್ಳುವುದು, ಅಪೆಂಡಿಸೈಟಿಸ್, ಅರ್ಬುದಗ್ರಂಥಿ ಮುಂತಾದುವುಗಳನ್ನು ಶೀಘ್ರ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದು ಮುಖ್ಯ.

ಈ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುವಂತೆ ಉದರ ಭಾಗವನ್ನು ಒಂಬತ್ತು ಉಪಭಾಗಗಳಾಗಿ ವಿಂಗಡಿಸಿದ್ದಾರೆ. ಇದು ರೋಗಿಯನ್ನು ಮಲಗಿಸಿ ಮಾಡಬೇಕಾದ ಪರೀಕ್ಷೆ. ಈ ಒಂಬತ್ತು  ಭಾಗಗಳಲ್ಲಿ ಎಲ್ಲಿ ನೋವು ಇರುತ್ತದೆಯೋ ಅದರ ಆಧಾರದ ಮೇರೆಗೆ ಮತ್ತು ಸಂಬಂಧಿಸಿದ ಇತರ ಲಕ್ಷಣಗಳ ಜೊತೆಗೆ ರೋಗವನ್ನು ಊಹಿಸಲು ಬಹುಮಟ್ಟಿಗೆ ಸಾಧ್ಯ.

ವಿವಿಧ ರೋಗಗಳಲ್ಲಿ ಹೊಟ್ಟೆನೋವು
*ಜಠರದಲ್ಲಿ ಹುಣ್ಣು ಅಥವಾ ಅತ್ಯಮ್ಲೀಯತೆ: ಇಲ್ಲಿ ನೋವು ಉದರದ ಮೇಲ್ಭಾಗದಲ್ಲಿ, ಪಕ್ಕೆಲುಬುಗಳು ಸೇರುವ ಮಧ್ಯೆ ಭಾಗದಲ್ಲಿರುತ್ತದೆ. ಎದೆಯುರಿ, ಅಜೀರ್ಣ, ಹೊಟ್ಟೆಯ ಉಬ್ಬರ, ತೊಳೆಸುವುದು, ಇರಬಹುದು.

*ಕರುಳಿನ ಸೋಂಕಿನಲ್ಲಿ ನೋವಿನೊಂದಿಗೆ, ವಾಂತಿ, ಭೇದಿ ಇರಬಹುದು. ಇದರ ನೋವು ಉದರದ ಮಧ್ಯಭಾಗದಲ್ಲಿ ನಾಭಿಯ ಸುತ್ತ ಹೆಚ್ಚಿರುತ್ತದೆ. ಹಾಗೂ ಬಿಟ್ಟು ಬಿಟ್ಟು ಬರುತ್ತಿರುತ್ತದೆ.

*ಪಿತ್ತಕೋಶ ಅಥವಾ ಯಕೃತ್ ತೊಂದರೆಯಲ್ಲಿ ನೋವು ಉದರದ ಮೇಲ್ಭಾಗದ, ಬಲಬದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಕಾಮಾಲೆ, ಹೊಟ್ಟೆಯುಬ್ಬರ, ಗುದಭಾಗದಿಂದ ವಾಯು ಹೋಗುವುದು, ತೇಗು ಇರಬಹುದು. ಬೊಜ್ಜು ಕೂಡ ಹೆಚ್ಚಿರಬಹುದು.

*ದೊಡ್ಡ ಕರುಳಿನ ಹುಣ್ಣಿನಲ್ಲಿ ಉದರದ ಮಧ್ಯಭಾಗ ಎಡಬದಿಯಲ್ಲಿ ನೋವು ಹೆಚ್ಚಿರುತ್ತದೆ. ಆಹಾರ ತಿಂದೊಡನೆ ನುಲಿಯುತ್ತದೆ ಮತ್ತು ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಆಹಾರ ಪಚನವಾಗದೇ ದೇಹದ ತೂಕ ಇಳಿಯಬಹುದು. ರೋಗಿಯು ಸುಮಾರು ದಿನದಿಂದ ಬಳಲುತ್ತಿರಬಹುದು.

*ಮೂತ್ರಕೋಶದ ಕಲ್ಲಿನಲ್ಲಿ ಹೆಚ್ಚಾಗಿ ನೋವು ಬೆನ್ನಿಂದ ಶುರುವಾಗಿ ಹೊಟ್ಟೆಯ ಬದಿಯ ಮುಖೇನ ಹರಿದು ತೊಡೆಯವರೆಗೆ ಕಾಣಿಸಿಕೊಳ್ಳುತ್ತದೆ. ನೋವು ಅತೀವ ಪ್ರಮಾಣದ್ದಾಗಿರುತ್ತದೆ. ಜೊತೆಗೆ ಉರಿಮೂತ್ರ, ರಕ್ತಮಿಶ್ರಿತ ಮೂತ್ರ ಕಾಣಿಸಿಕೊಳ್ಳಬಹುದು.

*ಅಪೆಂಡಿಕ್ಸ್ ಉರಿಯೂತದಲ್ಲಿ ನೋವು ಉದರದ ಕೆಳಭಾಗದ ಬಲಕ್ಕೆ ಕಾಣಿಸಿಕೊಳ್ಳುತ್ತದೆ. ನಾಭಿ ಮತ್ತು ಶ್ರೋಣಿಯ ಗಂಟಿನ ಮಧ್ಯೆ ಭಾಗದಲ್ಲಿ ಪರೀಕ್ಷಿಸುವಾಗ, ಅತಿ ಹೆಚ್ಚಿನ ನೋವು ಕಾಣಿಸುತ್ತದೆ. ಜೊತೆಯಲ್ಲಿ ಜ್ವರವಿರಬಹುದು.

*ಜನನಾಂಗದ ಸಮಸ್ಯೆಯಲ್ಲಿ ಉರಿಮೂತ್ರ, ಬಿಳಿಸೆರಗು (ಹೆಂಗಸರಲ್ಲಿ) ಕಾಣಿಸಬಹುದು. ಇದರಲ್ಲಿ ನೋವು ಕೆಳಹೊಟ್ಟೆಯ ಮಧ್ಯಭಾಗದಲ್ಲಿರುತ್ತದೆ. ಗ್ಯಾಸ್ ತುಂಬಿದಂತೆ ಭಾಸವಾಗುತ್ತದೆ. 

*ಅಂಡಕೋಶದಲ್ಲಿನ ಗ್ರಂಥಿಯ ತೊಟ್ಟು ತಿರುಚಿಕೊಂಡಲ್ಲಿ ನೋವು ಬಹಳ ತೀವ್ರತರದ್ದಾಗಿರುತ್ತದೆ. ಒಮ್ಮೆಗೇ ಬಿ.ಪಿ. ಇಳಿದು ಸುಸ್ತಾಗಿ ಕಣ್ಣುಕತ್ತಲು ಕಟ್ಟಬಹುದು. ಇಂತಹ ಸ್ಥಿತಿಯಲ್ಲಿ ತುರ್ತಾದ ಚಿಕಿತ್ಸೆಯ ಅಗತ್ಯವಿದೆ. ಇದೇ ರೀತಿ ಪಿತ್ತಕೋಶದ ಕಲ್ಲು ನಾಳದಲ್ಲಿ ಸಿಲುಕಿಕೊಂಡಾಗಲೂ ಆಗಬಹುದು. ಡಿಂಭ ನಾಳದಲ್ಲಿ ಗರ್ಭ ನಿಂತು ಅದು ಛಿದ್ರಗೊಂಡಾಗಲೂ ಇದೇ ರೀತಿ ನೋವು ಕಾಣಿಸುತ್ತದೆ. 

ಉದರ ಪರೀಕ್ಷೆಯೊಂದಿಗೆ, ಕೆಲವು ರಕ್ತಪರೀಕ್ಷೆ, ಮಲ-ಮೂತ್ರ ಪರೀಕ್ಷೆ, ಸ್ಕ್ಯಾನ್, ಕೊಲೊನೋಸ್ಕೋಪಿ ಮುಂತಾದ ಕೆಲವು ವಿಧಾನಗಳಿಂದ ಹೊಟ್ಟೆನೋವಿನ ಮೂಲ ಕಾರಣವನ್ನು ಖಚಿತವಾಗಿ ತಿಳಿಯಬಹುದು.

ಹೀಗೆ ಎಲ್ಲ ಹೊಟ್ಟೆ ನೋವು ಗ್ಯಾಸ್ ಅಥವಾ ಅಜೀರ್ಣದಿಂದ ಎಂದು ಭಾವಿಸದೇ ಪರೀಕ್ಷಿಸಿಕೊಂಡು, ಮೂಲವರಿತು ಚಿಕಿತ್ಸೆ ತೆಗೆದುಕೊಂಡಲ್ಲಿ ಬೇಗ ಗುಣ ಹೊಂದಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT