ರಾಜ್ಯ ಸರ್ಕಾರದ ಸಚಿವಾಲಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಕಂಡು ಜನ ದಂಗಾಗಿದ್ದಾರೆ. ವಾರಕ್ಕೆ ಒಂದೇ ಕಡತವನ್ನು ವಿಲೇವಾರಿ ಮಾಡುವ ಭೂಪರೂ ಅಲ್ಲಿ ತುಂಬಿಕೊಂಡಿದ್ದಾರಂತೆ. ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವ ಅಭ್ಯಾಸವೂ ಅನೇಕರಿಗೆ ಇಲ್ಲವಂತೆ!

ಆಡಳಿತ ಸುಧಾರಣೆ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಸಮಿತಿಯ ಪರಿಶೀಲನೆ ವೇಳೆ ಇಂತಹ ಅಚ್ಚರಿಯ ಅಂಶಗಳು ಪತ್ತೆಯಾಗಿವೆ. ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸಚಿವಾಲಯವು ಸರ್ಕಾರದ ‘ಹೃದಯ’ ಇದ್ದಂತೆ.

ಅದರ ಬಡಿತವೇ ಕ್ಷೀಣಗೊಂಡರೆ ಇಡೀ ಆಡಳಿತ ಯಂತ್ರವೇ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತದೆ. ಸರ್ಕಾರಿ ನೌಕರರಲ್ಲಿ ತಾವು ಜನತೆಯ ಸೇವಕರು ಎಂಬ ಭಾವನೆ ಉಳಿದಿಲ್ಲ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಜನ ನೀಡುವ ತೆರಿಗೆಯ ಬಹುಪಾಲು ಸರ್ಕಾರಿ ನೌಕರರ ಸಂಬಳ, ಸವಲತ್ತಿಗೆ ವ್ಯಯವಾಗುತ್ತಿದೆ.

ತಮಗೆ ಬೇಕಾದ ಸೇವೆಯನ್ನು ಸರ್ಕಾರದಿಂದ ಪಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅದನ್ನು ಮೊಟಕುಗೊಳಿಸುವುದು ಅಕ್ಷಮ್ಯ. ನೌಕರ ವರ್ಗದಲ್ಲಿನ ಆಲಸ್ಯ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ವಿಳಂಬ ನೀತಿಯೇ ಲಂಚಗುಳಿತನದ ತಾಯಿಬೇರು. ಬೇಕಾದ ಸೇವೆ ಸಕಾಲದಲ್ಲಿ ದೊರೆಯದೇ ಇದ್ದಾಗ ಜನ ಒತ್ತಡಕ್ಕೆ ಒಳಗಾಗುತ್ತಾರೆ.

ಅವರ ಅಸಹಾಯಕತೆಯನ್ನು ನೌಕರರು ಲಂಚಕ್ಕೆ ಬಳಸಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ವಿಳಂಬ ನೀತಿಗೆ ಮದ್ದು ಅರೆಯುವ ಪ್ರಯತ್ನವಾಗಿ ‘ಕಡತ ಯಜ್ಞ’ದಿಂದ ‘ಸಕಾಲ’ ಸೇವೆವರೆಗೂ ಏನೆಲ್ಲ ಪ್ರಯತ್ನ ಮಾಡಿದರೂ ಅದನ್ನು ಮೂಲೋತ್ಪಾಟನೆ ಮಾಡಲು ಇಲ್ಲಿಯವರೆಗೂ ಆಗಿಲ್ಲ ಎಂಬುದು ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.

ನಮ್ಮ ಸರ್ಕಾರಿ ಇಲಾಖೆಗಳು ಬಹುಮಟ್ಟಿಗೆ ಭ್ರಷ್ಟಕೂಪಗಳಾಗಿವೆ. ಸಂವಿಧಾನದ ಬಹುಮುಖ್ಯ ಅಂಗವಾದ ಕಾರ್ಯಾಂಗದ ಮೇಲೆ ಅಂಕುಶ ಇಡಬೇಕಾದ ಶಾಸಕಾಂಗ ಕೂಡ ಭ್ರಷ್ಟ ವ್ಯವಸ್ಥೆ ಜೊತೆ ಷಾಮೀಲಾಗಿರುವುದರಿಂದ ಜನಸಾಮಾನ್ಯರು ಅಸಹಾಯಕರಾಗಿದ್ದಾರೆ. ಸಣ್ಣ–ಪುಟ್ಟ ಕೆಲಸಕ್ಕೂ ಲಂಚ ನೀಡುವುದು ಅನಿವಾರ್ಯ ಎಂಬ ಸ್ಥಿತಿ ಒದಗಿದೆ. ಜನಪರವಾಗಿ ಕೆಲಸ ಮಾಡುವುದು ಮತ್ತು ಪ್ರಾಮಾಣಿಕರಾಗಿರುವುದೇ ಅಪರಾಧ ಎಂಬ ಸ್ಥಿತಿ ಉಂಟಾಗಿದೆ.

ಸರ್ಕಾರಿ ನೌಕರರು ರಾಜಕೀಯ ಪಕ್ಷಗಳಿಗೆ, ಜಾತಿ ಸಮುದಾಯಗಳಿಗೆ ನಿಷ್ಠೆ ವ್ಯಕ್ತಪಡಿಸುವುದು; ರಾಜಕೀಯ ಮುಖಂಡರು ಜನರ ಹಿತಕ್ಕಿಂತ ನೌಕರರ ಹಿತ ಕಾಯುವ ಮಾತಾಡುವುದು ಸಹ ಅನಿಷ್ಟ ಸಂಪ್ರದಾಯ.

ಹೀನಾತಿಹೀನವಾದ ಈ ಮೈತ್ರಿ ಕೂಡ ಆಡಳಿತ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದು ಆರು ತಿಂಗಳು ಕಳೆದಿದೆ. ಈಗಲಾದರೂ ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವುದು ಸ್ವಾಗತಾರ್ಹ. ಅದಕ್ಷತೆ ಮತ್ತು ಅಶಿಸ್ತು ತೋರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಇದು ಬರೀ ಘೋಷಣೆಯಾಗಿ ಉಳಿಯಬಾರದು. ಸಚಿವರು ವಿಧಾನಸೌಧದಲ್ಲಿ ಕುಳಿತು ಬಿಗಿಯಾಗಿ ಕೆಲಸ ಮಾಡುವ ಮೂಲಕ ನೌಕರರಿಗೆ ಮಾದರಿಯಾಗಬೇಕು. ಆಡಳಿತವನ್ನು ಚುರುಕುಗೊಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.