ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಸಂಕುಲದ ಮೃತ್ಯುಕೂಪ ಕುಕ್ಕರಹಳ್ಳಿ ಕೆರೆ!

ಹರಡುತ್ತಿದೆ ದುರ್ಗಂಧ; ಕೇಳುತ್ತಿದೆ ಮಾಲಿನ್ಯದ ಕರೆಘಂಟೆ...
Last Updated 24 ಮೇ 2013, 7:09 IST
ಅಕ್ಷರ ಗಾತ್ರ

ಮೈಸೂರು: ನಾಡಿನ ಮಹಾಕವಿಗಳ ಅಚ್ಚುಮೆಚ್ಚಿನ ಕುಕ್ಕರಹಳ್ಳಿ ಕೆರೆ ಈಗ ಪಕ್ಷಿಸಂಕುಲದ ಪಾಲಿಗೆ ಮೃತ್ಯುಕೂಪವಾಗುತ್ತಿದೆ!
ಪಕ್ಷಿಸಂಕುಲದ ಕಲರವದಿಂದ ಆಪ್ಯಾಯಮಾನವಾಗಿದ್ದ ಈ ಕೆರೆಯ ಕೊಳೆತ ನೀರಿನಲ್ಲಿ ಬುಧವಾರ ಎರಡು ಬಾತುಕೋಳಿ ಮತ್ತು ಪೆಲಿಕನ್ ಹಕ್ಕಿ ಸಾವಿಗೀಡಾಗಿವೆ. ಈ ಕೆರೆಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಅಪಾಯದ ಕರೆಗಂಟೆ ಇದು.

ಕುಡಿಯುವ ನೀರಿಗಾಗಿ ಅಯೋಗ್ಯ ಎಂಬ ಹಣೆಪಟ್ಟಿಯನ್ನು ದಶಕದ ಹಿಂದೆಯೇ ಕಟ್ಟಿಕೊಂಡಿರುವ ಕುಕ್ಕರಹಳ್ಳಿ ಕೆರೆಯ ನೀರು ಈಗ ಜೀವಜಂತುಗಳಿಗೂ ವಿಷ ಉಣ್ಣಿಸುವಷ್ಟರ ಮಟ್ಟಿಗೆ ಕೊಳಕಾಗಿದೆ. ಸುತ್ತಮುತ್ತಲಿನ ಪಡುವಾರಹಳ್ಳಿ, ವಿನಾಯಕನಗರ ಮತ್ತಿತರ ಪ್ರದೇಶಗಳಿಂದ ಹರಿದು ಬಂದು ಸೇರುತ್ತಿರುವ ಒಳಚರಂಡಿ ನೀರಿನಿಂದಾಗಿ ಇಲ್ಲಿ ಅಸಹನೀಯ ವಾತಾವರಣ ಸೃಷ್ಟಿಯಾಗಿದೆ. ಹುಣಸೂರು ರಸ್ತೆಯ ಮೇಲೆ ಸಾಗುವವರೆಲ್ಲರ ಮೂಗಿಗೆ ಈ ಕೆರೆಯ ದುರ್ಗಂಧ ಅಡರುತ್ತದೆ. ರಂಗಾಯಣದ ವನರಂಗದಲ್ಲಿ ಕುಳಿತು ನಾಟಕದ ಮಜಾ ಸವಿಯುವವರೂ ಈ ದುರ್ವಾಸನೆಯನ್ನು ತಾಳಿಕೊಳ್ಳುವ ಅನಿವಾರ್ಯತೆ ಇದೆ.

1881ರಲ್ಲಿ ಅಂದಿನ ಮಹಾರಾಜರು 102 ಎಕರೆ ಜಾಗೆಯಲ್ಲಿ ಈ ಕೆರೆಯನ್ನು ಕಟ್ಟಿಸಿದರು. ವಿಶ್ವಪ್ರಸಿದ್ಧ ಮೈಸೂರು ಸುಗಂಧದೆಣ್ಣೆ ಕಾರ್ಖಾನೆಗೆ ಇಲ್ಲಿಯೇ ನೀರು ಸರಬರಾಜು ಆಗುತ್ತಿತ್ತು. ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಜನ, ಜಾನುವಾರುಗಳಿಗೂ ಇದು ಜೀವದಾಯಿನಿಯಾಗಿತ್ತು ಹಾಗೂ ಅಂತರ್ಜಲದ ಶಕ್ತಿಯನ್ನೂ ಹೆಚ್ಚಿಸಿತ್ತು. ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ ಊರು ಬೆಳೆಯಿತು, ಕೆರೆ ಕೊಳೆಯಿತು. ಇದರಿಂದಾಗಿ ಮೀನುಗಳ ಸಂತತಿ ನಶಿಸಿತು. ದೂರ ದೇಶಗಳಿಂದ ಬರುತ್ತಿದ್ದ ನೂರಾರು ಜಾತಿಯ ವಲಸೆ ಹಕ್ಕಿಗಳೂ ದಿಕ್ಕು ಬದಲಿಸಿದವು. ಸ್ಥಳೀಯ ಹಕ್ಕಿಗಳೂ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ.

`1994ರ ಸಮಯದಲ್ಲಿ ಸುಮಾರು 210 ಪ್ರಭೇದಗಳ ಪಕ್ಷಿಗಳು ಇಲ್ಲಿಗೆ ಬರುತ್ತಿದ್ದವು. ಆದರೆ ಈಗ 102ಕ್ಕಿಂತ ಹೆಚ್ಚಿಲ್ಲ. ಅದರಲ್ಲೂ ವಿದೇಶಗಳಿಂದ ವಲಸೆ ಹಕ್ಕಿಗಳು ಬರುತ್ತಿಲ್ಲ. ಸ್ಥಳೀಯ ಪಕ್ಷಿಗಳಾದ ನೀರು ಕಾಗೆ, ಹಾವಕ್ಕಿ, ನಾಮದ ಕೋಳಿ (ಕೂಟ್), ಬಣ್ಣದ ಕೊಕ್ಕರೆಗಳು ಮಾತ್ರ ಇಲ್ಲಿಯ ದ್ವೀಪದಲ್ಲಿ ಕುಳಿತು ಸಂತಾನೋತ್ಪತ್ತಿ ಮಾಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಲಿನ ಕೆರೆಯಲ್ಲಿ ಬೆಳೆದಿರುವ ಪಾಚಿಯಿಂದಾಗಿ ನೀರಿನಲ್ಲಿ ಮೀನು ಪತ್ತೆ ಹಚ್ಚುವುದು ಈ ಪಕ್ಷಿಗಳಿಗೆ ಕಷ್ಟವಾಗುತ್ತಿದೆ. ಅಲ್ಲದೇ ಸ್ಥಳೀಯ ಜಾತಿಯ ಮೀನುಗಳೂ ವಿನಾಶವಾಗಿರುವುದರಿಂದ ಈ ಹಕ್ಕಿಗಳು ಆಹಾರದ ಕೊರತೆಯಿಂದ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುತ್ತಿಲ್ಲ. ಕೆರೆಗೆ ಬರುತ್ತಿದ್ದ ಮಳೆನೀರಿನ ಒಳಹರಿವು ಕೂಡ ಕಳೆದ ಐದಾರು ವರ್ಷಗಳಿಂದ ಕಾಣುತ್ತಿಲ್ಲ. ಸುತ್ತಲೂ ಬೆಳೆದಿರುವ ಕಾಂಕ್ರಿಟ್ ಕಾಡು ಇದಕ್ಕೆ ಕಾರಣ' ಎಂದು ಪಕ್ಷಿ ತಜ್ಞ ರಾಜಕುಮಾರ್ ಅಭಿಪ್ರಾಯಪಡುತ್ತಾರೆ.

ಮಳೆ ನೀರು ಹರಿದು ಬರದಿದ್ದರೂ, ಸುತ್ತಮುತ್ತಲಿನ ಒಳಚರಂಡಿಯ ನೀರು ಸರಾಗವಾಗಿ ಬಂದು ಸೇರುತ್ತಿದೆ. ಇದನ್ನು ತಡೆಯಬೇಕು ಎಂದು ಕೆರೆ ಸಂರಕ್ಷಣೆ ಸಮಿತಿಯು ಹಲವು ವರ್ಷಗಳಿಂದ ಹೋರಾಟ ನಡೆಸಿದೆ. ಮಹಾನಗರ ಪಾಲಿಕೆ ಟೆಂಡರ್ ಕರೆಯುವುದರಲ್ಲಿಯೇ ನಿರತವಾಗಿದೆ. ಆದರೆ ಕೆಲಸ ಮಾತ್ರ ಇನ್ನೂ ಆಗಿಲ್ಲ.

`ನಿನ್ನೆ ಪಕ್ಷಿಗಳು ಸತ್ತಿರುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೊಳಕು ನೀರಿನಲ್ಲಿ ಪ್ಲ್ಯಾಸ್ಟೆನಿಯಂ ಬ್ಯಾಕ್ಟಿರಿಯಾ ಬೆಳೆದಿರುವ ಅಪಾಯವೂ ಇದೆ. ಆಹಾರದ ಕೊರತೆ ಅನುಭವಿಸಿದ ಪಕ್ಷಿಗಳು ಈ ಬ್ಯಾಕ್ಟಿರಿಯಾ ದಾಳಿಗೆ ಸುಲಭವಾಗಿ ಒಳಗಾಗಿರಬಹುದು. ನಾವು ಕಳೆದ ಹಲವು ದಶಕಗಳಿಂದ ಹೋರಾಟ ನಡೆಸಿದ್ದೇವೆ. ಪಟ್ಟಭದ್ರ ಹಿತಾಸಕ್ತಿಗಳು ಕೆರೆಯ ಜಾಗವನ್ನು ಕಬಳಿಸುವ ಹುನ್ನಾರವನ್ನು ಕಷ್ಟಪಟ್ಟು ತಡೆದಿದ್ದೇವೆ.

ಆದರೆ, ಒಳಚರಂಡಿ ನೀರು ಬಂದು ಸೇರುವುದನ್ನು ತಡೆಯಲೇಬೇಕು. 2004ರಿಂದ ವಾಣಿವಿಲಾಸ ನೀರು ಸರಬರಾಜು ಘಟಕದಲ್ಲಿ ಪ್ರತಿದಿನವೂ ಹೊರಬಿಡುವ ಬ್ಯಾಕ್‌ವಾಷ್ ನೀರು ಕೆರೆಗೆ ಬಂದು ಸೇರುವ ವ್ಯವಸ್ಥೆ ಮಾಡಿರುವುದು ಕೆರೆ ಉಳಿಯಲು ಕಾರಣವಾಗಿದೆ. ಒಳಚರಂಡಿಯ ಕೊಳೆತ ನೀರಿನ ದಿಕ್ಕು ಬದಲಿಸಿ, ಸಂಸ್ಕರಣ ಘಟಕ (ಇಟಿಪಿ) ವ್ಯವಸ್ಥೆ ಮಾಡಲೇಬೇಕು. ಚುನಾವಣೆ ಕಾರಣ ಟೆಂಡರ್‌ನಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಮುಂದಿನ ಕ್ರಮವನ್ನು ಆದಷ್ಟು ಬೇಗ ಮಾಡಬೇಕು' ಎಂದು ಕುಕ್ಕರಹಳ್ಳಿ ಕೆರೆ ಸಮಿತಿಯ ಸಂಚಾಲಕ ಡಾ. ಜಯರಾಮಯ್ಯ ಆಗ್ರಹಿಸುತ್ತಾರೆ.

ಕೆಲವು ವರ್ಷಗಳ ಹಿಂದೊಮ್ಮೆ ಮೀನುಗಳು ಸತ್ತು ಸುದ್ದಿಯಾಗಿದ್ದ ಕುಕ್ಕರಹಳ್ಳಿ ಕೆರೆ ಈಗ ಪಕ್ಷಿಗಳ ಸಾವಿನಿಂದ ಮತ್ತೊಮ್ಮೆ ಗಮನ ಸೆಳೆದಿದೆ. ಆದರೆ, ಹಲವಾರು ವರ್ಷಗಳಿಂದ ಬರುತ್ತಿದ್ದ ವಲಸೆ ಹಕ್ಕಿಗಳು ಬರದೇ ಕೆರೆಯ ಪರಿಸರ ಬರಡಾಗಿರುವುದು ಮಾತ್ರ ತುಂಬಲಾಗದ ನಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT