ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾರಿಯಾಗಿದ್ದ ಸವಾರನ ಬಂಧನ

ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಅವಘಡ: ಮಹಿಳೆ ಸಾವು
Last Updated 27 ಅಕ್ಟೋಬರ್ 2015, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಬಸ್‌ ನಿಲ್ದಾಣದ ಬಳಿ ಸಂಭವಿಸಿದ್ದ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದ ಮಹಿಳೆಯ ಗುರುತು 16 ದಿನದ ಬಳಿಕ ಪತ್ತೆಯಾಗಿದ್ದು, ಘಟನೆ  ನಂತರ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿರಸ್ತೆಯ ಚೋಳೂರು ಪಾಳ್ಯದ ಮಂಜುಳಾ ಬಾಯಿ (31) ಮೃತಪಟ್ಟವರಾಗಿದ್ದು, ಪಕ್ಕದ ಮನೆಯ  ಬಿ.ಎಂ. ರೋಹಿತ್‌ (21) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.

ಅಕ್ಟೋಬರ್ 11ರಂದು ಪಾಂಡವಪುರ ಬಳಿಯ ಉಕ್ಕಡದಮ್ಮ ದೇವಸ್ಥಾನಕ್ಕೆ  ರಾತ್ರಿ ಹೊರಟಿದ್ದ ಮಂಜುಳಾ ಅವರು, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ ನಿಲ್ದಾಣಕ್ಕೆ ಡ್ರಾಪ್‌ ನೀಡುವಂತೆ ಪಕ್ಕದ ಮನೆಯ ರೋಹಿತ್‌ಗೆ ಕೇಳಿದ್ದರು.

ಅಂತೆಯೇ ಆತ ಅವರನ್ನು ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ. ಆದರೆ, ಅಲ್ಲಿ ಪಾಂಡವಪುರ ಕಡೆಗೆ ಬಸ್‌ಗಳು ಇರಲಿಲ್ಲ. ಆಗ ಮಂಜುಳಾ ಅವರು ಕೆಂಗೇರಿ ಬಸ್‌ ನಿಲ್ದಾಣಕ್ಕೆ ಬಿಡುವಂತೆ ಕೋರಿದ್ದರು. ಅಷ್ಟೊತ್ತಿಗಾಗಲೇ ಮಳೆ ಸುರಿಯುತ್ತಿತ್ತು. ಮಳೆಯಲ್ಲೇ ಅವರನ್ನು ಕರೆದುಕೊಂಡು ಹೋಗಿದ್ದ ಆರೋಪಿ, ಎದುರಿಗೆ ರಸ್ತೆ ಉಬ್ಬು ಸಿಕ್ಕಾಗ ಒಮ್ಮೆಲೆ ಬ್ರೇಕ್ ಹಾಕಿದ್ದ. ಆಗ ಒಂದೇ ಕಡೆ ಕುಳಿತಿದ್ದ ಮಂಜುಳಾ ಅವರು ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಿದ್ದಿದ್ದರು.

ಪ್ರಜ್ಞೆ ಕಳೆದುಕೊಂಡಿದ್ದ ಮಂಜುಳಾ ಅವರು ಮೃತಪಟ್ಟಿರಬಹುದು ಎಂದು ಭಾವಿಸಿದ್ದ ಆರೋಪಿ, ಭಯದಿಂದ ಬೈಕ್‌ ನಿಲ್ಲಿಸದೆ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಿಲ್ದಾಣದ ಬಳಿ ಇದ್ದ ಕೆಲ ಪ್ರಯಾಣಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಂಜುಳಾ ಅವರ ತಲೆಗೆ ಬಲವಾದ ಪೆಟ್ಟು  ಬಿದ್ದಿದ್ದರಿಂದ, ವೈದ್ಯರ ಸಲಹೆ ಮೇರೆಗೆ ಅವರನ್ನು ರಾತ್ರಿ ನಿಮ್ಹಾನ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಾರನೆಯ ದಿನ ಬೆಳಗ್ಗಿನ ಜಾವ ಮೃತಪಟ್ಟಿದ್ದರು.

ಘಟನೆ ದಿನ ಮಂಜುಳಾ ಅವರ ಗುರುತು ಪತ್ತೆಯಾಗಿರಲಿಲ್ಲ. ಹಾಗಾಗಿ, ಅವರ ಕಡೆಯವರು ಬರಬಹುದು ಎಂದು ಒಂದು ವಾರ ಮೃತದೇಹವನ್ನು  ನಿಮ್ಹಾನ್ಸ್‌ನ ಶವಾಗಾರದಲ್ಲಿ  ಇಟ್ಟಿದ್ದೆವು.

ಆದರೆ, ಯಾರೂ ಬಾರದಿದ್ದರಿಂದ ನಾವೇ ವಿಲ್ಸನ್‌ ಗಾರ್ಡನ್‌ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿದ್ದೆವು ಎಂದು ಪೊಲೀಸರು ತಿಳಿಸಿದರು.

ಗೊತ್ತಾಗಿದ್ದು ಹೇಗೆ?: ಮಂಜುಳಾ ಅವರ ಪತಿ ಶ್ರೀನಿವಾಸ್ ಅವರು ಪತ್ನಿ ಕಾಣೆಯಾಗಿದ್ದಾರೆ ಎಂದು ಅ. 15ರಂದು ಮಾಗಡಿ ರಸ್ತೆಯಲ್ಲಿ ದೂರು ಕೊಟ್ಟಿದ್ದರು.

ಈ ಕುರಿತು ಠಾಣೆಗೆ ಬಂದ ಮಾಹಿತಿಯನ್ನು ಪರಿಶೀಲಿಸಿದಾಗ, ಅ. 12ರಂದು ನಮ್ಮ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ ಮಂಜುಳಾ ಅವರೇ ಎಂಬುದು ಗೊತ್ತಾಯಿತು.

ಅಲ್ಲದೆ, ಮಂಜುಳಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದ ಪ್ರಯಾಣಿಕರು, ಘಟನೆ ನಂತರ ನಿಲ್ಲಿಸದೆ ಪರಾರಿಯಾಗಿದ್ದ ಬೈಕ್‌ ಕಪ್ಪು ಬಣ್ಣದ 200 ಸಿಸಿ ಪಲ್ಸರ್‌ ಎಂದು ಸುಳಿವು ನೀಡಿದ್ದರು.

ಜತೆಗೆ, ಮಂಜುಳಾ ಅವರ ಮೊಬೈಲ್‌ ಕರೆಯ ವಿವರಗಳನ್ನು ಕಲೆ ಹಾಕಿದಾಗ, ಅವರ ಸಂಖ್ಯೆಯಿಂದ ಕೊನೆಯ ಬಾರಿಗೆ ಇಬ್ಬರಿಗೆ ಕರೆ ಹೋಗಿತ್ತು. ಆ ಪೈಕಿ ರೋಹಿತ್‌ ಸಂಖ್ಯೆ ಕೂಡ ಇತ್ತು. ಅಲ್ಲದೆ, ಆತನ ಬಳಿ ಇದ್ದ ಬೈಕ್‌ ಕೂಡ ಕಪ್ಪು ಬಣ್ಣದ ಪಲ್ಸರ್ ಆಗಿತ್ತು.

ಅನುಮಾನದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟ. ಬೈಕ್‌ ನಿಲ್ಲಿಸಿದ್ದರೆ, ಅವರ ಸಾವಿಗೆ ನಾನೇ ಕಾರಣನೆಂದು ಗೊತ್ತಾಗುತ್ತದೆ ಎಂದು ಹೆದರಿ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT