ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಅಕ್ರಮ ತಡೆಗೆ ಹೈಟೆಕ್‌ ಪರಿಹಾರ!

ಶಿಕ್ಷಣ ದಿಕ್ಕು
Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಸಾಮೂಹಿಕ ನಕಲು ಗಳಂತಹ ಪಿಡುಗನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಪರೀಕ್ಷಾ ವ್ಯವಸ್ಥೆಯೊಂದನ್ನು ನಗರದ ಮೂಲದ  ಮೆರಿಟ್‌ ಟ್ರ್ಯಾಕ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನ ಬಳಸಿ ಶಾಲಾ– ಕಾಲೇಜುಗಳ ಪರೀಕ್ಷಾ ಮಂಡಳಿ, ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿರುವ ಲೋಪ–ದೋಷಗಳನ್ನು ಸರಿಪಡಿಸಿ, ಸರಳ, ಪಾರದರ್ಶಕ ಮತ್ತು ಸುರಕ್ಷಿತ ಎನಿಸುವ ಪರೀಕ್ಷೆಯನ್ನು ನಡೆಸಬಹುದು ಎಂದು ಮೆರಿಟ್‌ ಟ್ರ್ಯಾಕ್‌  ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ನಾಗೇಂದ್ರನ್‌ ಸುಂದರರಾಜನ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ ಎನ್ನುವ ಬಗ್ಗೆ ಅವರು ನೀಡಿದ ಮಾಹಿತಿ ಹೀಗಿದೆ. ಮೆರಿಟ್‌ ಟ್ರ್ಯಾಕ್‌  ಸಂಸ್ಥೆಯು ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸುವುದರಿಂದ  ಹಿಡಿದು, ಮೌಲ್ಯಮಾಪನದವರೆಗೂ ಎಲ್ಲ ಹಂತಗಳಲ್ಲೂ ಅತ್ಯಂತ ಸುರಕ್ಷಿತ ಎನಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಹೀಗಾಗಿ ಪರೀಕ್ಷಾ ದಿನವೇ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ನೇರವಾಗಿ ತಲುಪುವುದರಿಂದ ಸೋರಿಕೆ  ಪ್ರಶ್ನೆಯೇ ಉದ್ಭವಿಸದು.

ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲು ವಿಷಯ ತಜ್ಞರನ್ನು ಕೋರಲಾಗುತ್ತದೆ. ಎಂಟರಿಂದ ಹತ್ತು ಮಂದಿ ವಿಷಯ ತಜ್ಞರು ಕಂಪ್ಯೂಟರ್‌ನಲ್ಲಿ ಪ್ರಶ್ನೆಗಳನ್ನು ತಯಾರಿಸುತ್ತಾರೆ.  ಆ ಬಳಿಕ ಅವು ಪ್ರಶ್ನೆಪತ್ರಿಕೆ ಬ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಪ್ರಶ್ನೆ ಪತ್ರಿಕೆ  ಬ್ಯಾಂಕ್‌ ಸರ್ವರ್‌ನಲ್ಲಿ ಸುರಕ್ಷಿತವಾಗಿರುತ್ತದೆ.

ವಿಷಯ ತಜ್ಞರು ಸಿದ್ಧಪಡಿಸಿದ ಪ್ರಶ್ನೆಗಳನ್ನು ಆಧರಿಸಿ ಪ್ರಶ್ನೆ ಪತ್ರಿಕೆಗಳ ಅನೇಕ ಸೆಟ್‌ಗಳನ್ನು ತಯಾರಿಸಲಾಗುತ್ತದೆ. ಪರೀಕ್ಷೆಗೆ ಕೆಲವು ಗಂಟೆಗಳಿಗೆ ಮುಂಚೆ ಪರೀಕ್ಷಾ ನಿಯಂತ್ರಕರು ಅಂತಿಮ ಪ್ರಶ್ನೆ ಪತ್ರಿಕೆಯನ್ನು ಆಯ್ಕೆ ಮಾಡುತ್ತಾರೆ. ಇದನ್ನು ಗೂಢ ಲಿಪೀಕರಣಕ್ಕೆ(ಎನ್‌ಸ್ಕ್ರಿಪ್ಟ್‌) ರೂಪಾಂತರಿಸಲಾಗುತ್ತದೆ.

ಅಂತಿಮವಾಗಿ ಆಯ್ಕೆ ಮಾಡಿದ ಪ್ರಶ್ನೆ ಪತ್ರಿಕೆಗಳ ಸೆಟ್‌ಗಳ ಎನ್‌ಸ್ಕ್ರಿಪ್ಟ್‌ ಪರೀಕ್ಷಾ ಕೇಂದ್ರಗಳಲ್ಲಿ  ಕಂಪ್ಯೂಟರ್‌ ಮೂಲಕ ಪೂರ್ವ ಹಂಚಿಕೆ ಮಾಡಲಾಗುತ್ತದೆ. 

ಪರೀಕ್ಷಾ ನಿಯಂತ್ರಕರು ಪರೀಕ್ಷೆಯ ಆರಂಭದ ಮೊದಲ ಒಂದು ಗಂಟೆಯಲ್ಲಿ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿರುವ  ಪೂರ್ವ ನೋಂದಣಿ ಮಾಡಿಕೊಂಡ ಅಧಿಕೃತ ಮುಖ್ಯಸ್ಥರಿಗೆ  ಮೊಬೈಲ್‌ ಪಾಸ್‌ ವರ್ಡ್‌ಗಳನ್ನು  ರವಾನಿಸುತ್ತಾರೆ.

ಅಧಿಕೃತ ಮುಖ್ಯಸ್ಥರು ಪಾಸ್‌ವರ್ಡ್‌  ಆಧಾರದ ಮೇಲೆ ಪ್ರಶ್ನೆ ಪತ್ರಿಕೆಯ ಪ್ಯಾಕ್‌ ತೆರೆಯುತ್ತಾರೆ. ಬಳಿಕ ಪರೀಕ್ಷಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಶ್ನೆ ಪತ್ರಿಕೆ ಮುದ್ರಿಸಿ ಹಂಚಲಾಗುತ್ತದೆ.

ಅಲ್ಲದೆ, ಮೌಲ್ಯಮಾಪನ ಪ್ರಕ್ರಿಯೆಯ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವು  ದಕ್ಷತೆ, ನಿಖರತೆ, ವೇಗ ಮತ್ತು ಭದ್ರತೆಯನ್ನು ಆಧರಿಸಿದೆ. ಸಂಪೂರ್ಣ ಮೌಲ್ಯ ಮಾಪನ ಪ್ರಕ್ರಿಯೆಯ ಗುಣವನ್ನು ಹೆಚ್ಚಿಸುತ್ತದೆ. ಇದಕ್ಕೆ ‘ಆನ್‌–ಸ್ಕ್ರೀನ್‌ ಮಾರ್ಕಿಂಗ್‌’ ವ್ಯವಸ್ಥೆ ಎನ್ನಲಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT