ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಭಯದಿಂದ ದುಡಿಮೆಗೆ ಮೊರೆ!

ಬಾಲಕ ಮರಳಿ ಪೋಷಕರ ಮಡಿಲಿಗೆ
Last Updated 20 ಏಪ್ರಿಲ್ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ಪರೀಕ್ಷಾ ಭಯದಿಂದ ಮನೆ ಬಿಟ್ಟ 12 ವರ್ಷದ ಬಾಲಕ, ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ರೈಲುಗಳಲ್ಲಿ ಚಿಪ್ಸ್‌ ಮಾರುವ ಮೂಲಕ ಮೂರೇ ದಿನಗಳಲ್ಲಿ ₨ 750 ಸಂಪಾದನೆ ಮಾಡಿದ್ದಾನೆ!

ಬಾಸ್ಕೊ ಸಂಸ್ಥೆ ಆ ಬಾಲಕನನ್ನು ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.

ಆಂಧ್ರದ ಪ್ರಕಾಶಂ ಜಿಲ್ಲೆಯ ಬಾಲಕ, ಅಲ್ಲಿನ ಪ್ರತಿಷ್ಠಿತ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ಏ.9ರಂದು ತಂದೆಯ ಜೇಬಿನಿಂದ ₨ 100 ತೆಗೆದುಕೊಂಡು ಅದೇ ದಿನ ರಾತ್ರಿ ರೈಲು ಹತ್ತಿದ್ದ. ಮಗನ ಹುಡುಕಾಟ ಆರಂಭಿಸಿದ ಪೋಷಕರು, ಸಂಘ ಸಂಸ್ಥೆಗಳು ಹಾಗೂ ಮಕ್ಕಳ ಸಹಾಯವಾಣಿಯ ಮೊರೆ ಹೋಗಿದ್ದರು.

ಆ ಬಾಲಕ ಏ.12ರಂದು ನಗರ ರೈಲು ನಿಲ್ದಾಣದಲ್ಲಿ  ಬಾಸ್ಕೊ ಸದಸ್ಯರಿಗೆ ಸಿಕ್ಕಿದ್ದಾನೆ. ಮನೆ ಬಿಟ್ಟು ಬಂದ ನಂತರ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಕಳೆದ ಆ ಮೂರು ದಿನಗಳ ಅನುಭವವನ್ನು ಬಾಸ್ಕೊ ಸಿಬ್ಬಂದಿಗೆ ವಿವರಿಸಿದ್ದಾನೆ.

ಅಪ್ಪನ ಜೇಬಿನಿಂದ ₨ 100 ತೆಗೆದುಕೊಂಡ ಬಾಲಕ, ದೋನ­ಕೊಂಡ ರೈಲು ನಿಲ್ದಾಣದಿಂದ  ಮಚಲಿಪಟ್ಟಣ–ಯಶ­ವಂತಪುರ ಮಾರ್ಗದ ರೈಲನ್ನು ಹತ್ತಿದ್ದಾನೆ. ಆ ರೈಲು ಯಾವ ಮಾರ್ಗಕ್ಕೆ ಹೋಗು­ತ್ತದೆ ಎಂಬ ಅರಿವು ಕೂಡ ಆತನಿಗಿರ­ಲಿಲ್ಲ. ಜತೆಗೆ ಕಡಿಮೆ ಹಣ ಇದ್ದ ಕಾರಣ ಬಾಲಕ ಟಿಕೆಟ್‌ ಸಹ ಪಡೆದಿ­ರಲಿಲ್ಲ. ಮರುದಿನ ಬೆಳಿಗ್ಗೆ ಬಾಲಕ ನಿದ್ರೆಯಿಂದ ಎಚ್ಚರ­ಗೊಂಡಾಗ ರೈಲು ಯಲಹಂಕ ನಿಲ್ದಾಣದಲ್ಲಿತ್ತು.

ರೈಲಿನಿಂದ ಇಳಿದ ಬಾಲಕನಿಗೆ ದಿಕ್ಕು ತೋಚದಂತಾಗಿದೆ. ಆಗ ಆ ಮಾರ್ಗವಾಗಿ ಬಂದ ಆಟೊ­ ತಡೆದು ಹೂಡಿವರೆಗೆ ಡ್ರಾಪ್‌ ಪಡೆದಿದ್ದಾನೆ. ಇದಕ್ಕೆ ಆಟೊ ಚಾಲಕ­ನಿಗೆ ₨25 ಕೊಟ್ಟಿದ್ದಾನೆ. ನಂತರ ಹೂಡಿಯ ಹೋಟೆಲ್‌ವೊಂದರಲ್ಲಿ ₨25 ಕೊಟ್ಟು ತಿಂಡಿ ತಿಂದು, ಕೆ.ಆರ್.ಪುರ ರೈಲು ನಿಲ್ದಾಣಕ್ಕೆ ಬಂದಿದ್ದಾನೆ.

ನಿಲ್ದಾಣದಲ್ಲಿ ಚಿಪ್ಸ್‌ ಮಾರುವ­ವರು ಬಾಲಕನ ಕಣ್ಣಿಗೆ ಬಿದ್ದಿದ್ದಾರೆ. ಅವರು ಎಲ್ಲಿ ಚಿಪ್ಸ್ ಖರೀದಿಸುತ್ತಾರೆ ಮತ್ತು ಎಷ್ಟು ಬೆಲೆಗೆ ಮಾರುತ್ತಿ­ದ್ದಾರೆ ಎಂಬ ಲೆಕ್ಕಾ­ಚಾರ ಹಾಕಿ­ದ್ದಾನೆ. ನಂತರ ತನ್ನ ಬಳಿ ಉಳಿದಿದ್ದ ₨ 50ರಲ್ಲಿ ಎಂಟು  ಪ್ಯಾಕೆಟ್‌ ಚಿಪ್ಸ್‌ ಖರೀದಿಸಿ, ಮಾರಾಟ ಮಾಡಿದ್ದಾನೆ. ಇದರಿಂದ ₨ 30 ಲಾಭವಾಗಿದೆ. ಈ ವ್ಯಾಪಾರದಿಂದ ಸಂತಸಗೊಂಡ ಬಾಲಕ ಚಿಪ್ಸ್‌ ವ್ಯಾಪಾರವನ್ನೇ ಮುಂದುವರಿಸಿದ್ದಾನೆ.

ರಾತ್ರಿ ಕೆ.ಆರ್‌.ಪುರ ರೈಲು ನಿಲ್ದಾಣದಲ್ಲಿ ಮಲಗುತ್ತಿದ್ದ ಆತ, ಬೆಳಿಗ್ಗೆ ಚಿಪ್ಸ್‌ ಮಾರಾಟ ಮಾಡು­ತ್ತಿದ್ದ. ಹೀಗೆ ₨ 50 ಬಂಡವಾಳದಿಂದ ವಹಿವಾಟು ಆರಂಭಿಸಿದ ಬಾಲಕನಿಗೆ ಮೂರೇ ದಿನಗಳಲ್ಲಿ ₨ 750 ಲಾಭವಾಗಿದೆ.

ಭಯದಿಂದ ದುಡಿಮೆಗೆ ಮೊರೆ!
ಇತ್ತ ಮಗನಿಗಾಗಿ ಹುಡುಕಾಟ ನಡೆಸಿ ವಿಫಲರಾದ ಪೋಷಕರು, ಸ್ಥಳೀಯ ಠಾಣೆಯಲ್ಲಿ ದೂರು ದಾಖ­ಲಿಸಿದ್ದರು. ಜತೆಗೆ ಮಗನ ಭಾವಚಿತ್ರ ಹಾಗೂ ವೈಯಕ್ತಿಕ ವಿವರಗಳುಳ್ಳ ಐದು ಸಾವಿರ ಕರಪತ್ರಗಳನ್ನು ಮಾಡಿಸಿ ಬಸ್‌–ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಂಚಿದ್ದಾರೆ. 

ಆಂಧ್ರಪ್ರದೇಶ–ಬೆಂಗಳೂರು ಮಾರ್ಗದ ಎಲ್ಲ ನಿಲ್ದಾಣ­ಗಳಲ್ಲೂ ಕರಪತ್ರಗಳನ್ನು ಅಂಟಿಸಿದ ಪೋಷಕರು, ಅಂತಿಮ­ವಾಗಿ ಬಾಸ್ಕೊ ಸದಸ್ಯ ರವೀಂದ್ರನ್‌ ಅವರನ್ನು ಸಂಪರ್ಕಿಸಿ ನೆರವು ಕೋರಿದ್ದಾರೆ. ಅವರಿಂದ ಬಾಲಕನ ಭಾವಚಿತ್ರ ಪಡೆದು­ಕೊಂಡ ರವೀಂದ್ರನ್‌, ಸಂಸ್ಥೆಯ ಇತರೆ ಸದಸ್ಯ­ರೊಂದಿಗೆ ಬಾಲಕನ ಹುಡುಕಾಟ ಆರಂಭಿಸಿದ್ದಾರೆ. ಏ.12ರ ಮಧ್ಯಾಹ್ನ 1 ಗಂಟೆಗೆ ಕಾಕಿನಾಡದಿಂದ ನಗರ ರೈಲು ನಿಲ್ದಾಣಕ್ಕೆ ಬಂದ ರೈಲಿನಲ್ಲಿ ಬಾಲಕ ಪತ್ತೆಯಾಗಿದ್ದಾನೆ.

‘ಮನೆ ಸಮೀಪದ ಅಂಗಡಿಗೆ ಹೋಗಿದ್ದಾಗ ಐದಾರು ಮಂದಿ ದುಷ್ಕರ್ಮಿಗಳು ತನ್ನನ್ನು ಅಪಹರಿಸಿ ರೈಲಿನಲ್ಲಿ ಚಿಪ್ಸ್‌ ಮಾರಲು ಬಿಟ್ಟಿದ್ದರು ಎಂದು ಬಾಲಕ ಆರಂಭದಲ್ಲಿ ಹೇಳಿದ. ಆದರೆ ಕಚೇರಿಗೆ ಕರೆದೊಯ್ದು ವಿಚಾರಿಸಿದಾಗ ಪರೀಕ್ಷಾ ಭಯದಿಂದಲೇ ಮನೆ ಬಿಟ್ಟು ಬಂದಿದ್ದಾಗಿ ತಿಳಿಸಿದ. ನಂತರ ಪೋಷಕರನ್ನು ಕರೆಸಿ ಬಾಲಕನನ್ನು ಅವರ ವಶಕ್ಕೆ ಒಪ್ಪಿಸಲಾಯಿತು’ ಎಂದು ರವೀಂದ್ರನ್‌ ಹೇಳಿದ್ದಾರೆ.

ವ್ಯಾಪಾರದಲ್ಲಿ ಮುಳುಗಿದ್ದ
ಬಾಲಕ ಮೂರೇ ದಿನಗಳಲ್ಲಿ ನ್ಯಾಯಯುತವಾಗಿ ₨ 750 ದುಡಿದಿರುವುದು ಅಚ್ಚರಿಯ ಸಂಗತಿ. ಆತ ಸಂಪೂರ್ಣ­ವಾಗಿ ದುಡಿಮೆಯಲ್ಲಿ ಮುಳುಗಿ ಹೋಗಿದ್ದ. ಮನೆ–ಪೋಷಕರ ಚಿಂತೆ ಆತನಿಗೆ ಇರಲಿಲ್ಲ. ಪರೀಕ್ಷಾ ಭಯ ಕೂಡ ಮಾಯ­ವಾಗಿತ್ತು. ಗಳಿಸಿದ ಹಣವನ್ನು ದುಂದು ವೆಚ್ಚ ಮಾಡಿರಲಿಲ್ಲ. ಮೂರೂ ದಿನಗಳಿಂದ ಸಮವಸ್ತ್ರ­ದಲ್ಲೇ ವ್ಯಾಪಾರದಲ್ಲಿ ತೊಡಗಿದ್ದ.
ರವೀಂದ್ರನ್‌, ಬಾಸ್ಕೊ ಸದಸ್ಯ

632 ಮಕ್ಕಳು ಪತ್ತೆ
3 ತಿಂಗಳ ಅವಧಿ­ಯಲ್ಲಿ ಮಕ್ಕಳು ಕಾಣೆಯಾಗಿ­ರುವ ಸಂಬಂಧ ಸಂಸ್ಥೆಗೆ 686 ದೂರುಗಳು ಬಂದಿವೆ. ಇದರಲ್ಲಿ 632 ಮಕ್ಕಳನ್ನು ಹುಡುಕಿ, ಪೋಷಕ­ರಿಗೆ ಒಪ್ಪಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇನ್ನೂ 54 ಮಕ್ಕಳು ಪತ್ತೆಯಾಗಬೇಕಿದೆ.
ಪಿ.ಎಸ್.ಜಾರ್ಜ್
ಕಾರ್ಯನಿರ್ವಾಹಕ ನಿರ್ದೇಶಕ, ಬಾಸ್ಕೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT