ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ತಕ್ಕಶಾಸ್ತಿ

Last Updated 8 ಅಕ್ಟೋಬರ್ 2014, 20:05 IST
ಅಕ್ಷರ ಗಾತ್ರ

ಜಮ್ಮು/ನವದೆಹಲಿ (ಪಿಟಿಐ): ಪಾಕಿಸ್ತಾನವು ಅಪ್ರಚೋದಿತ ದಾಳಿ ನಿಲ್ಲಿಸದ ಹೊರತು ಗಡಿಯಲ್ಲಿ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಶಾಂತಿ­ಸಭೆ (ಧ್ವಜ ಸಭೆ) ನಡೆಯುವ ಸಾಧ್ಯತೆಗಳೇ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ‘ದಬ್ಬಾಳಿಕೆಯ ರಾಜ­ತಾಂತ್ರಿಕತೆ’ಗೆ ಮಣಿಯದೇ ಪ್ರತ್ಯುತ್ತರ ನೀಡಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್‌ಗೆ ತಕ್ಕ ಪಾಠ ಕಲಿಸುವಂತೆ ಸರ್ಕಾರವು ಸೇನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.  ಪಾಕ್‌್ ಸೇನಾ ಪಡೆಗಳು ದಾಳಿ ನಿಲ್ಲಿಸದ ಹೊರತು ತಾನು ಪ್ರತಿದಾಳಿ ನಿಲ್ಲಿಸು­ವುದಿಲ್ಲ ಎಂದೂ ಭಾರತ ಸ್ಪಷ್ಟವಾಗಿ ಹೇಳಿದೆ.

ಕೇಂದ್ರ ಸರ್ಕಾರದಿಂದ ಸೂಕ್ತ ನಿರ್ದೇಶನ ಪಡೆದಿ­ರುವ ಭಾರತೀಯ ಸೇನೆಯು ಗಡಿಯಾಚೆಯಿಂದ ನಡೆ­­ಯುತ್ತಿರುವ ಗುಂಡಿನ ಮೊರೆತ ಅಡಗಿ­ಸಲು ವ್ಯಾಪಕ ಪ್ರಮಾಣದಲ್ಲಿ ಪ್ರತಿ ದಾಳಿ ನಡೆಸುತ್ತಿದೆ. 

ಮತ್ತಿಬ್ಬರ ಸಾವು: ಈ ನಡುವೆ, ಅಂತರರಾಷ್ಟ್ರೀಯ  ಗಡಿಯಲ್ಲಿ ಪಾಕಿಸ್ತಾನ ಪಡೆಯ ದಾಳಿಗೆ  ಬುಧವಾರ  ಭಾರತದ ಮತ್ತಿಬ್ಬರು ಬಲಿಯಾಗಿದ್ದಾರೆ. ವಾರ­ದಿಂದಲೂ ಕದನ ವಿರಾಮ ಉಲ್ಲಂಘಿ­ಸುತ್ತಾ ಬಂದಿ­ರುವ ಪಾಕ್‌  ಪಡೆಯ ಗುಂಡೇಟಿಗೆ ಈವರೆಗೆ ಒಟ್ಟು ಎಂಟು ಭಾರತೀಯರು ಪ್ರಾಣ ಕಳೆದು­ಕೊಂಡಿದ್ದಾರೆ.

ಅತ್ತೆ – ಸೊಸೆ ಬಲಿ: ‘ಸಾಂಬಾ ಜಿಲ್ಲೆಯ ಅಂತರ­ರಾಷ್ಟ್ರೀಯ ಗಡಿಯ ಚಿಲ್ಲರಿ ಗ್ರಾಮ­ವನ್ನು ಗುರಿಯಾಗಿ­ಟ್ಟುಕೊಂಡು ಪಾಕ್‌್ ಯೋಧರು ಬುಧವಾರ ಬೆಳಿಗ್ಗೆ ೭.೩೦ರ ಸುಮಾರಿಗೆ ಷೆಲ್‌ ದಾಳಿ ನಡೆಸಿದಾಗ  ಶಕುಂತಲಾ ದೇವಿ ಹಾಗೂ ಆಕೆಯ ಸೊಸೆ ಪಾಲಿ­ದೇವಿ ಎಂಬುವವರು ಸಾವಿಗೀಡಾದರು. ಶಕುಂತಲಾ ಅವರ ಪತಿ, ಮಗ ಹಾಗೂ ಇಬ್ಬರು ಮೊಮ್ಮಕ್ಕಳು ಗಾಯಗೊಂಡಿ­ದ್ದಾರೆ’ ಎಂದು ಹಿರಿಯ ಪೊಲೀಸ್‌್ ವರಿಷ್ಠಾ­ಧಿಕಾರಿ ಅನಿಲ್‌್ ಮಂಗೋತ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜನರ ಸ್ಥಳಾಂತರ: ಪಾಕ್‌ ಸೇನೆ ಷೆಲ್‌ ದಾಳಿ ನಡೆಸುತ್ತಿರುವುದರಿಂದ ಜಮ್ಮು ವಲಯ­ದಲ್ಲಿ ಅಂತರ­ರಾಷ್ಟ್ರೀಯ ಗಡಿಯಲ್ಲಿ­ರುವ ೩೦ ಗ್ರಾಮ­ಗಳ ೨೦ ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಒಂದೆಡೆ ಗಡಿಯಲ್ಲಿ ಭಾರತ–ಪಾಕ್‌್ ಯೋಧರು ಗುಂಡಿನ ದಾಳಿಯಲ್ಲಿ ತೊಡ­ಗಿದ್ದರೆ ಇನ್ನೊಂದೆಡೆ ವಿಶ್ವಸಂಸ್ಥೆ­ಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

‘ಭಾರತದ ಕಡೆಯಿಂದಲೇ ಕದನ ವಿರಾಮ ಉಲ್ಲಂಘನೆ­ಯಾಗಿದೆ’ ಎಂದು ಪಾಕಿಸ್ತಾನವು ವಿಶ್ವ­ಸಂಸ್ಥೆ ಸೇನಾ ವೀಕ್ಷಕರ ತಂಡದ ಮುಂದೆ ದೂರು ಹೇಳಿ­ಕೊಂಡಿತ್ತು.  ‘ಪಾಕ್‌್ ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ಸೇನೆ ಸಂಪೂರ್ಣ ಸಿದ್ಧವಾಗಿದೆ’ ಎಂದು ಭಾರತ ವಿಶ್ವಸಂಸ್ಥೆಗೆ ಬುಧವಾರ ಸ್ಪಷ್ಟವಾಗಿ ತಿಳಿಸಿದೆ.

‘ಕಾಶ್ಮೀರ ಗಡಿಯಲ್ಲಿ ಪರಿಸ್ಥಿತಿ ಬಿಗಡಾ­ಯಿಸಿರುವುದು ಗಂಭೀರ ವಿಷಯ. ಪಾಕ್‌ ಕಡೆಯಿಂದ ಆಗುತ್ತಿ­ರುವ ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತವು ಆದಷ್ಟು ಬೇಗ ಪರಿ­ಹಾರ ಕಂಡುಕೊಳ್ಳಲು ಬಯಸಿದೆ’ ಎಂದು ವಾಯುಪಡೆ ಮುಖ್ಯಸ್ಥ ಅರೂಪ್‌ ರಾಹಾ ಗಾಜಿಯಾ­ಬಾದ್‌ನಲ್ಲಿ  ಹೇಳಿದ್ದಾರೆ.

ಗುಂಡಿನ ಮೊರೆತ: ಗಡಿಗೆ ಹೊಂದಿಕೊಂಡ ೧೯೨ ಕಿ.ಮೀ ವ್ಯಾಪ್ತಿ­ಯಲ್ಲಿ ಬರುವ ೩೫ ಗ್ರಾಮಗಳು ಹಾಗೂ ೫೦ ಗಡಿ ಠಾಣೆಗಳ (ಬಿಒಪಿಎಸ್‌) ಮೇಲೆ ಪಾಕಿಸ್ತಾನಿ ರೇಂಜರ್‌ಗಳು ಮಂಗಳ­ವಾರ ರಾತ್ರಿ ಇಡೀ ಹಾಗೂ ಬುಧವಾರ ಹಗಲಿನಲ್ಲಿ ಗುಂಡಿನ ದಾಳಿ ನಡೆಸಿದ್ದು, ಭಯಭೀತರಾದ ಸಾವಿರಾರು ಮಂದಿ  ತಮ್ಮ ಗ್ರಾಮ ತೊರೆದು ಸುರಕ್ಷಿತ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಪಾಕ್‌್ ಪಡೆಯ ಗುಂಡೇಟಿಗೆ ಈವರೆಗೆ ೭೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಬರುವ ಮೇಂಧರ್‌್ ಹಾಗೂ ಪೂಂಚ್‌್ ವಲಯ­ಗಳಲ್ಲಿ ಭಾರತೀಯ ಪಡೆಯು ಪ್ರತಿದಾಳಿ ನಡೆಸಿದ ನಂತರ ಪಾಕ್‌ ಯೋಧರು ಗುಂಡಿನ ಕಾಳಗ ನಿಲ್ಲಿಸಿದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರದ ಕಾಳಗದಲ್ಲಿ ಗಾಯ­ಗೊಂಡ ೧೫ ಮಂದಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್‌) ಮೂವರು ಯೋಧರು ಕೂಡ ಇದ್ದಾರೆ. ಗಾಯಾಳು­ಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅನಿಲ್‌್ ಮಂಗೋತ್ರಾ ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ೯ರ ಹೊತ್ತಿಗೆ   ಜೋರಾ ಫಾರ್ಮ್‌ ಗಡಿ ಗ್ರಾಮದ ಮೇಲೆ ಪಾಕ್‌್ ಪಡೆ ನಡೆಸಿದ ಷೆಲ್‌ ದಾಳಿಗೆ ಗುಜ್ಜರ್‌ ಸಮುದಾಯದ ಆರು ಮಂದಿ ಗಾಯಗೊಂಡರು. ಇವರೆಲ್ಲಾ ಕೂದಲೆಳೆಯ ಅಂತರದಲ್ಲಿ ಪ್ರಾಣಾ­ಪಾಯದಿಂದ ಪಾರಾದರು.
‘ಸಾಂಬಾ, ಕಥುವಾ ಜಿಲ್ಲೆಯ ಹೀರಾನಗರ್‌ ವಲಯದಲ್ಲಿರುವ ಬಿಎಸ್‌­ಎಫ್‌ನ ಬಹುತೇಕ ಗಡಿ ಠಾಣೆಗಳ ಮೇಲೆ ಪಾಕ್‌ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಪಡೆ ಕೂಡ ದಾಳಿ ನಡೆಸಿತು’ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಜಿಲ್ಲೆಯ ಮುಂಚೂಣಿ ಪ್ರದೇಶಗಳಲ್ಲಿ ೨೫ರಿಂದ ೨೭ ಗ್ರಾಮ­ಗಳ ಮೇಲೆ ಮಂಗಳವಾರ ರಾತ್ರಿಯಿಂದ ಪಾಕ್‌್ ಪಡೆ ಷೆಲ್‌್ ದಾಳಿ ನಡೆಸಿದ್ದಾಗಿ ಜಿಲ್ಲಾಧಿಕಾರಿ ಅಜಿತ್‌್ ಕುಮಾರ್‌್ ಸಾಹು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಾಂಬಾ ಹಾಗೂ ಕಥುವಾ ಜಿಲ್ಲೆಗಳ ಸುಮಾರು ೧೦ರಿಂದ ೧೫ ಗ್ರಾಮಗಳು  ದಾಳಿಗೆ ಗುರಿಯಾಗಿವೆ.

ಎಲ್ಲವೂ ಸರಿಹೋಗಲಿದೆ–ಮೋದಿ
ನವದೆಹಲಿ: ಪಾಕಿಸ್ತಾನ ಪಡೆ ಕದನ ವಿರಾಮ ಉಲ್ಲಂಘಿ­ಸುತ್ತಿ­ರುವ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ‘ಶೀಘ್ರವೇ ಎಲ್ಲವೂ ಸರಿ­ಹೋಗಲಿದೆ’ ಎಂದು ಚುಟುಕಾಗಿ ಹೇಳಿದ್ದಾರೆ.‘ಪಾಕಿಸ್ತಾನ ಪ್ರಾಮಾಣಿಕವಾಗಿದ್ದರೆ ಮಾತು­ಕತೆ ಸಾಧ್ಯ. ಏನಿದ್ದರೂ ದ್ವಿಪಕ್ಷೀಯ ಮಾತುಕತೆ­ಯಿಂದಲೇ ಪರಿಹಾರ ಹುಡುಕಬೇಕು ಎಂದು ಭಾರತ ಮುಂಚಿನಿಂದಲೂ ಹೇಳುತ್ತಿದೆ. ವಿಶ್ವಸಂಸ್ಥೆ ಸೇರಿದಂತೆ ಯಾರ ಮಧ್ಯಸ್ಥಿಕೆಯನ್ನೂ ಒಪ್ಪುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT