ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಜತೆ ಮಾತುಕತೆಗೆ ಸಿದ್ಧ

ಭಯೋತ್ಪಾದನೆ ಛಾಯೆಯಿಲ್ಲದ ವಾತಾವರಣಕ್ಕೆ ಮೋದಿ ಷರತ್ತು
Last Updated 28 ಸೆಪ್ಟೆಂಬರ್ 2014, 10:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ‘ಭಯೋತ್ಪಾದನೆಯ ಕರಿ ನೆರಳು ಇಲ್ಲದ, ಶಾಂತಿಯುತ ವಾತಾವರಣದಲ್ಲಿ ಪಾಕಿ­ಸ್ತಾನದ ಜತೆ ಗಂಭೀರ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ’ ಎಂದು ಭಾರತ ಶನಿವಾರ ಇಲ್ಲಿ ಹೇಳಿದೆ.

ವಿಶ್ವಸಂಸ್ಥೆಯ 69ನೇ ಮಹಾಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, 35 ನಿಮಿಷ ನಿರ­ರ್ಗಳ­ವಾಗಿ ಹಿಂದಿ­ಯಲ್ಲಿ ಮಾತನಾಡಿ, ಪಾಕ್‌ಗೆ ಈ ಆಹ್ವಾನ ನೀಡಿದರು.

ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಕಾಶ್ಮೀರ ಸಮಸ್ಯೆ ಕುರಿತಾದ ನವಾಜ್‌ ಷರೀಫ್‌ ಹೇಳಿಕೆಯನ್ನು ನೇರ­­ವಾಗಿ  ಪ್ರಸ್ತಾಪಿಸಿದ ಮೋದಿ, ‘ಈ ವೇದಿಕೆಯಲ್ಲಿ ಸಮಸ್ಯೆ ಕುರಿತು ಮಾತನಾಡುವುದು ನಮ್ಮ ಎರಡು ರಾಷ್ಟ್ರ­­ಗಳ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವ ಪ್ರಕ್ರಿ­ಯೆಗೆ ದಾರಿ ಮಾಡಿಕೊಡುವುದಿಲ್ಲ’ ಎಂದು ತೀಕ್ಷ್ಣವಾಗಿ ಹೇಳಿದರು.

‘ಇಡೀ ವಿಶ್ವವನ್ನು ಒಂದು ಕುಟುಂಬ ಎಂದು ಭಾರತ ಭಾವಿಸುತ್ತದೆ. ಆದರೆ ಭಯೋತ್ಪಾದನೆ ಎನ್ನುವ ಪಿಡುಗು ವಿವಿಧ ಮುಖಗಳಲ್ಲಿ ವಿಶ್ವದೆಲ್ಲೆಡೆ ವ್ಯಾಪಿ­ಸುತ್ತಿ­ರುವುದು ಎಲ್ಲರಿಗೂ ಬೆದರಿಕೆಯಾಗಿದೆ. ಭಯೋ­ತ್ಪಾದನೆಗೆ ದೊಡ್ಡ ದೇಶ, ಸಣ್ಣ ದೇಶ ಎನ್ನುವ ಭೇದ-ಭಾವನೆ ಇಲ್ಲ. ಅದು (ಭಯೋತ್ಪಾದನೆ) ಹೊಸ ಸ್ವರೂಪ ಮತ್ತು ಹೆಸರಿನಲ್ಲಿ ವ್ಯಾಪಿಸುತ್ತಿದೆ’ ಎಂದರು.

‘ಭಯೋತ್ಪಾದನೆಯ ನೆರಳು ಇಲ್ಲದ ಶಾಂತಿಯುತ ವಾತಾವರಣದಲ್ಲಿ ಗೆಳೆತನ ಮತ್ತು ಸಹಕಾರ ಬೆಳೆಸಲು ಪಾಕಿಸ್ತಾನದೊಂದಿಗೆ ಗಂಭೀರ ದ್ವಿಪಕ್ಷೀಯ ಮಾತುಕತೆಗೆ ಸಿದ್ಧನಿದ್ದೇನೆ. ಅದಕ್ಕೆ ಸೂಕ್ತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕೂಡ ಅಷ್ಟೇ ಗಂಭೀರ ಹೊಣೆಗಾರಿಕೆ ಹೊರಬೇಕಾಗಿದೆ’ ಎಂದು ಹೇಳಿದರು.

‘ನಾವು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹಕ್ಕೆ ಬಲಿಯಾದ ಜನರ ಬಗ್ಗೆ ಚಿಂತಿಸಬೇಕಿದೆ. ಭಾರತದಲ್ಲಿ ನಾವು ವ್ಯಾಪಕ ಪ್ರವಾಹ ಪರಿಹಾರ ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಅಲ್ಲದೆ, ಪಾಕ್‌ ಆಕ್ರಮಿತ ಕಾಶ್ಮೀರಕ್ಕೂ ಸಹಾಯ ಹಸ್ತ ಚಾಚಿದ್ದೇವೆ’ ಎಂದರು.

‘ವಿಶ್ವಸಂಸ್ಥೆಯ ವೇದಿಕೆಯ ಹೊರತಾಗಿಯೂ ಭಯೋತ್ಪಾದನೆಯ ಬೆದರಿಕೆ ನಡುವೆ ವಿವಿಧ ದೇಶಗಳು ಗುಂಪುಗೂಡುತ್ತಿವೆ. ಇಂತಹ ಪ್ರಯತ್ನಕ್ಕೆ ಭಾರತದ ಬೆಂಬಲ ಇದೆ’.

‘ಭಾರತವು ಅಭಿವೃದ್ಧಿಶೀಲ ಜಗತ್ತಿನ ಭಾಗ. ಆದರೆ ನಮ್ಮಷ್ಟೇ ಸಹಾಯದ ಅಗತ್ಯವಿರುವ ದೇಶಗಳೊಂದಿಗೆ ನಮ್ಮಲ್ಲಿನ ಸಂಪನ್ಮೂಲವನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

‘ನಮ್ಮಲ್ಲಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ಬದಿಗಿರಿಸಿ ಉಗ್ರವಾದದ ವಿರುದ್ಧ ಹೋರಾಡುವ ಅಗತ್ಯವಿದೆ’ ಎಂದು ಮೋದಿ ಒತ್ತಿ ಹೇಳಿದರು.
ಪಾಕಿಸ್ತಾನವನ್ನೂ ಒಳಗೊಂಡಂತೆ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಕಾರ ಬಾಂಧವ್ಯವನ್ನು ವೃದ್ಧಿಸುವುದು ತಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.

‘ಭಾರಿ ಪರಿವರ್ತನೆಯ ಯುಗ ಇದು’ ಎಂದು ಬಣ್ಣಿಸಿದ ಮೋದಿ, ‘ವಿಶ್ವ ಇತ್ತೀಚಿನ ಇತಿಹಾಸದಲ್ಲೇ ಅಪರೂಪದ ಉದ್ವೇಗ ಮತ್ತು ಕ್ಷೋಭೆಯ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಯಾವುದೇ ದೊಡ್ಡ ಪ್ರಮುಖ ಯುದ್ಧಗಳು ನಡೆಯದಿದ್ದರೂ ನೈಜ ಶಾಂತಿಯ ಗೈರುಹಾಜರಿ  ಮತ್ತು ಭವಿಷ್ಯದೆಡೆಗಿನ ಅನಿಶ್ಚಿತತೆ ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಏಷ್ಯಾ ಪೆಸಿಫಿಕ್‌ ಪ್ರದೇಶದ ಕುರಿತು ಪ್ರಸ್ತಾಪಿಸದ ಅವರು, ‘ಇಲ್ಲಿನ ಪ್ರದೇಶಗಳು ಈಗಲೂ ಭವಿಷ್ಯದ ದೃಷ್ಟಿಯಿಂದ ಸಾಗರ ಭದ್ರತೆಯೇ ಮುಖ್ಯವೆಂದು ಪರಿಗಣಿಸಿವೆ’ ಎಂದು ಹೇಳಿದರು.

‘ಪಶ್ಚಿಮ ಏಷ್ಯಾದಲ್ಲಿ ಉಗ್ರವಾದಿಗಳು ಮತ್ತು ತಪ್ಪು ಹಾದಿಯಲ್ಲಿ ನಡೆಯುತ್ತಿರುವವರು ಹೆಚ್ಚುತ್ತಿದ್ದಾರೆ. ನಮ್ಮದೇ ಸ್ವಂತ ಪ್ರದೇಶ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವುದು ಮುಂದವರಿದಿದೆ’ ಎಂದು ಹೇಳಿದರು.

‘ಇವುಗಳ ವಿರುದ್ಧ ಹೋರಾಡಲು ನಾವು ನಿಜಕ್ಕೂ ಅಂತರರಾಷ್ಟ್ರೀಯ ಮಟ್ಟದ ಪ್ರಯತ್ನ ನಡೆಸುತ್ತಿದ್ದೇವೆಯೇ? ಅಥವಾ ನಾವು ನಮ್ಮ ರಾಜಕೀಯ, ನಮ್ಮ ವಲಯ, ಎರಡು ರಾಷ್ಟ್ರಗಳ ನಡುವಿನ ತಾರತಮ್ಯ, ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆಯ ವ್ಯತ್ಯಾಸ ಮಧ್ಯೆ ಇನ್ನೂ ಸಿಲುಕಿದ್ದೇವೆಯೇ?’ ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದ ಅವರು, ‘ದೇಶಗಳು ತಮ್ಮ ನೆಲೆಯಲ್ಲಿ ಭಯೋತ್ಪಾದನಾ ಸಂಘಟನೆಗಳಿಗೆ ಅವಕಾಶ ನೀಡುತ್ತಿವೆ ಅಥವಾ ಭಯೋತ್ಪಾದನೆಯನ್ನು ತಮ್ಮ ನೀತಿಯ ಸಾಧನವನ್ನಾಗಿ ಬಳಸುತ್ತಿವೆ ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇರಾಕ್‌ ಮತ್ತು ಸಿರಿಯಾದಲ್ಲಿನ ಭಯೋತ್ಪಾದನಾ ಸಂಘರ್ಷದ ಕುರಿತು ಮಾತನಾಡಿದ ಅವರು, ಇಸ್ಲಾಮಿಕ್‌ ಸ್ಟೇಟ್‌ನ ಉಗ್ರರ ಮೇಲೆ ಅಮೆರಿಕ ನೇತೃತ್ವದ ಪಡೆಗಳು ನಡೆಸುತ್ತಿರುವ ಹೋರಾಟದ ಪ್ರಯತ್ನವನ್ನು ಸ್ವಾಗತಿಸಿದರು. ಈ ಪ್ರಯತ್ನಕ್ಕೆ ಈ ಭಾಗದ ಎಲ್ಲಾ ದೇಶಗಳ ಬೆಂಬಲವೂ ಬೇಕು ಎಂದರು.

ಸಮನ್ಸ್‌ ತಲುಪಿಸಿದವರಿಗೆ ರೂ 6 ಲಕ್ಷ
ನ್ಯೂಯಾರ್ಕ್‌ (ಪಿಟಿಐ): 2001ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಕೋರ್ಟ್‌ನಿಂದ ಸಮನ್ಸ್‌ ಜಾರಿ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದ ನಾಗರಿಕ ಹಕ್ಕು ಸಂಘಟನೆ ಆ ಸಮನ್ಸ್‌ಅನ್ನು ಮೋದಿ ಅವರಿಗೆ ತಲುಪಿಸಿದವರಿಗೆ ₨ 6 ಲಕ್ಷ (10,000 ಡಾಲರ್‌) ಬಹುಮಾನ ಘೋಷಿಸಿದೆ.

ಮೋದಿ ವಿರುದ್ಧ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ದಾವೆ ಹೂಡಿದ್ದ ನ್ಯೂಯಾರ್ಕ್‌ ಮೂಲದ ಸ್ವಯಂಸೇವಾ ಸಂಸ್ಥೆ ಅಮೆರಿಕನ್‌ ಜಸ್ಟೀಸ್‌ ಸೆಂಟರ್‌ (ಎಜೆಸಿ) ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರಿಗೆ ಸಮನ್ಸ್‌ ತಲುಪಿಸಿದವರಿಗೆ ₨ 6 ಲಕ್ಷದಷ್ಟು ಭಾರಿ ಮೊತ್ತದ ಇನಾಮು ಪ್ರಕಟಿಸಿದೆ.

ಮೋದಿ ಅವರಿಗೆ ಸಮನ್ಸ್‌ ನೀಡಿ, ಅದಕ್ಕೆ ಚಿತ್ರ ಹಾಗೂ ವಿಡಿಯೊ ಪುರಾವೆಗಳನ್ನೂ ಒದಗಿಸುವ ವ್ಯಕ್ತಿಗೆ ಈ ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಕಾನೂನು ಸಲಹೆಗಾರ ಗುರ್‍ಪತ್ವಂತ್ ಸಿಂಗ್ ಪನ್ನುನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜತಾಂತ್ರಿಕ ವಿನಾಯಿತಿ
ಪ್ರಧಾನಿ ಮೋದಿ ಅವರಿಗೆ ರಾಜತಾಂತ್ರಿಕ ವಿನಾಯಿತಿಗಳು ಇರುವುದರಿಂದ ಅವರಿಗೆ ಯಾರೂ ಸಮನ್ಸ್‌ ನೀಡುವ ಪ್ರಶ್ನೆಯೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರಿಗೆ ರಾಜತಾಂತ್ರಿಕ ವಿನಾಯಿತಿಗಳಿವೆ. ಹೀಗಾಗಿ ಯಾರೂ ಯಾವುದೇ ಸಮನ್ಸ್‌ಅನ್ನು ಅವರಿಗೆ ನೀಡಲು ಆಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್‌ ಅಕ್ಬರುದ್ದೀನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT