ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸೇನಾಧಿಕಾರಿಗಳ ಸಭೆ

ರಾಜಕೀಯ ಬಿಕ್ಕಟ್ಟು ತೀವ್ರ: ಇಮ್ರಾನ್‌ ಪಕ್ಷದಲ್ಲಿ ಒಡಕು
Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಪಾಕಿ­ಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ನಿವಾಸದತ್ತ ಶನಿ­ವಾರ ತಡರಾತ್ರಿ ಸಾಗಿದ ಪ್ರತಿಭಟನಾಕಾರ­ರನ್ನು ಚದು­ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ­ದ ಸಂದರ್ಭದಲ್ಲಿ ಮೂವರು ಮೃತ­ಪಟ್ಟಿದ್ದು ಸುಮಾರು 500 ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನ್‌ ತೆಹರಿಕ್ ಎ–ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್ ಖಾದ್ರಿ ಅವರ ನೇತೃತ್ವದಲ್ಲಿ ಸಾವಿರಾರು ಜನರು ಈ ಪ್ರತಿಭಟನೆ­ಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ, ಭಾನುವಾರ ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಶರೀಫ್ ಅವರು ಆಂತರಿಕ ಭದ್ರತೆಯ ಬಗ್ಗೆ ಚರ್ಚಿ­ಸಲು ಕಮಾಂಡರ್‌ಗಳ ಸಭೆ ನಡೆಸಿ­ರು­ವುದು ಭಾರಿ ಕುತೂಹಲಕ್ಕೆ ಕಾರಣ­ವಾಗಿದೆ.

ರಾತ್ರಿಯಿಡೀ ನಡೆದ ಘರ್ಷಣೆಯು ಬೆಳಿಗ್ಗೆ ನಿಯಂತ್ರಣಕ್ಕೆ ಬಂದರೂ ಉದ್ವಿಗ್ನ ಸ್ಥಿತಿ ಮುಂದುವ­ರಿದಿದೆ. ಇಡೀ ದೇಶದಲ್ಲಿ ಅನಿಶ್ಚಿತ ವಾತಾವರಣ ನಿರ್ಮಾಣ ವಾಗಿದೆ. ಸಂಸತ್ ಭವನದ ಎದುರು ನಡೆ­ಯುತ್ತಿರುವ ಧರಣಿಯನ್ನು ನವಾಜ್ ಷರೀಫ್ ಮನೆ ಮುಂದೆ ನಡೆಸಬೇಕು ಎಂದು ಮುಖಂಡರು ಶನಿವಾರ ತಡ ರಾತ್ರಿ ನಿರ್ಧರಿಸಿದ ಕೂಡಲೇ ಪೊಲೀಸರು ಮೆರವಣಿಗೆ ತಡೆಯಲು ಪ್ರಯತ್ನಿಸಿದರು. ಆಗ ಭಾರಿ ಘರ್ಷಣೆ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ­ರಲ್ಲದೆ ರಬ್ಬರ್ ಗುಂಡು ಹಾರಿಸಿದರು.

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ 18 ದಿನಗ­ಳಿಂದ ಧರಣಿ ನಡೆಸಿದರೂ ಪ್ರಯೋ­ಜನ ವಾಗ­ದಿದ್ದರಿಂದ ಒತ್ತಡ ತಂತ್ರ­ವಾಗಿ ಖಾನ್ ಮತ್ತು ಖಾದ್ರಿ ಅವರು ತಮ್ಮ ಬೆಂಬಲಿಗ­ರಿಗೆ ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸುವಂತೆ ಸೂಚಿ­ಸಿದರು. ಪ್ರಧಾನಿ ಅವರ ನಿವಾಸದ ಸುತ್ತ ಮತ್ತು ಸಂಸತ್ ಭವನದೊಳಗೆ ನುಗ್ಗಲು ಯತ್ನಿಸಿದ­ವ­ರನ್ನು ತಡೆ­ಯಲು ರಬ್ಬರ್ ಗುಂಡು ಬಳಸಲಾ­ಯಿತು ಮತ್ತು ಅಶ್ರು­ವಾಯು ಷೆಲ್ ಸಿಡಿಸ­ಲಾಯಿತು.

ಘರ್ಷಣೆಯಲ್ಲಿ ಸುಮಾರು 80 ಪೊಲೀಸರು ಗಾಯಗೊಂಡಿದ್ದಾರೆ. ಗಾಯ­­ಗೊಂಡ ಸುಮಾರು 450 ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಲಾ­ಗಿದೆ. ಅವರಲ್ಲಿ ಮೂವರು ಸತ್ತಿರು­ವುದನ್ನು ಆಸ್ಪತ್ರೆಯ ಮೂಲ­ಗಳು ಖಚಿತಪಡಿಸಿವೆ. ಚುನಾವಣೆಯಲ್ಲಿ ಅಕ್ರಮವೆಸಗಿ ಆಯ್ಕೆಯಾ­ಗಿ­ರುವ ಷರೀಫ್ ರಾಜೀ­ನಾಮೆ ನೀಡುವವರೆಗೂ ಪ್ರತಿ­ಭಟನೆ ನಿಲ್ಲಿಸುವುದಿಲ್ಲ ಎಂದು ಖಾನ್ ಮತ್ತು ಖಾದ್ರಿ ತಿಳಿಸಿದ್ದಾರೆ.

ಷರೀಫ್ ಸ್ಥಳಾಂತರ: ಗಲಭೆಯ ಹಿನ್ನೆಲೆಯಲ್ಲಿ ಷರೀಫ್ ಅವರು ವಾಸ­ವನ್ನು ಇಸ್ಲಾಮಾ­ಬಾದ್‌­ನಿಂದ ಲಾಹೋ­ರ್‌ನ ನಿವಾಸಕ್ಕೆ ಸ್ಥಳಾಂತರಿಸಿದ್ದಾರೆ. ಪ್ರತಿಭ­ಟ­ನಾಕಾ-­ರರನ್ನು ತೆರವು­ಗೊಳಿಸಿ ಪರಿಸ್ಥಿತಿ ಶಾಂತವಾಗು­ವ­ವರೆಗೂ ಇಸ್ಲಾ­ಮಾ­ಬಾದ್ ನಿವಾಸಕ್ಕೆ ಬರದಿರಲು ಷರೀಫ್ ನಿರ್ಧರಿಸಿದ್ದಾರೆ.

ಅಧ್ಯಕ್ಷ ಹಾಷ್ಮಿ ಉಚ್ಚಾಟನೆ
ಪ್ರತಿ­ಭಟನೆ ನಡೆಸುವ ಬಗ್ಗೆ ಪಿಟಿಐ ಮುಖ್ಯಸ್ಥ ಇಮ್ರಾನ್‌ ಖಾನ್‌ ಮತ್ತು  ಪಕ್ಷದ ಅಧ್ಯಕ್ಷ ಜಾವೇದ್‌ ಹಾಷ್ಮಿ ನಡುವೆ ಭಿನ್ನಮತ ಕಾಣಿಸಿದ್ದು ಹಾಷ್ಮಿ ಪಕ್ಷ­ದಿಂದ ಉಚ್ಚಾಟಿಸ­ಲಾಗಿದೆ.ಇವರೊಂದಿಗೆ  ಸಂಸತ್‌  ಸ್ಥಾನಕ್ಕೆ ರಾಜೀನಾಮೆ ನೀಡಲು ಯತ್ನಿ­ಸಿದ ಪಕ್ಷದ ಮೂವರು ಸಂಸದ­ರನ್ನು ಸಹ ಉಚ್ಚಾಟನೆ ಮಾಡಲಾಗಿದೆ.

ಸಂಸತ್ತಿನ ಜಂಟಿ ಅಧಿವೇಶನ
ದೇಶ ಎದುರಿಸುತ್ತಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಸಂಸತ್ತಿನ ಜಂಟಿ ಅಧಿ­ವೇಶನ ನಡೆಸಲು  ಪ್ರಧಾನಿ ನವಾಜ್ ಷರೀಫ್ ನಿರ್ಧರಿಸಿದ್ದಾರೆ.
ಟಿವಿ ಕಚೇರಿ ಮೇಲೆ ದಾಳಿ
ಪಿಟಿಐ ಪಕ್ಷದ ಪ್ರತಿಭಟನಾಕಾರರು ಜಿಯೊ ಸುದ್ದಿ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿ­ದ್ದಾರೆ. ಕಲ್ಲು, ಕೋಲುಗಳಿಂದ ದಾಳಿ ನಡೆಸಲಾ­ಗಿದ್ದು, ವಾಹನಗಳು ಜಖಂಗೊಂಡಿವೆ. ಆದರೆ, ಪತ್ರಕರ್ತರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT