ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌ ಸಮಸ್ಯೆಗೆ ಪ್ಲಾಂಕ್‌ ಆ್ಯಪ್‌ ಪರಿಹಾರ

ಸ್ಟಾರ್ಟ್‌ಅಪ್‌ ಸಾಹಸಿಗರು...
Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಕಾರುಗಳ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊಬೈಲ್‌ ಆ್ಯಪ್‌ (plonk) ಅನ್ನು ಯುವ ಉದ್ಯಮಿಗಳಿಬ್ಬರು ಅಭಿವೃದ್ಧಿಪಡಿಸಿದ್ದಾರೆ.  ಖಾಲಿ ಜಾಗದ ಮಾಲೀಕರು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು   ಹಣ ಗಳಿಸಲು ಅವಕಾಶ ಇರುವ ಮತ್ತು ವಾಹನ ಮಾಲೀಕರು ಕಾರುಗಳ ನಿಲುಗಡೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವ ಈ ಸ್ಟಾರ್ಟ್‌ಅಪ್‌ ಬಗ್ಗೆ ಕೇಶವ ಜಿ. ಝಿಂಗಾಡೆ ಅವರು ಇಲ್ಲಿ ವಿವರಿಸಿದ್ದಾರೆ.

ಬೆಂಗಳೂರು ಸೇರಿಬೆಂಗಳೂರು ಸೇರಿದಂತೆ ದೇಶದ ಮಹಾ ನಗರಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಪಾರ್ಕಿಂಗ್‌ ಸಮಸ್ಯೆ ದಿನೇ ದಿನೇ  ಬಿಗಡಾಯಿಸುತ್ತಿದೆ. ಸರಕುಗಳ ಖರೀದಿ, ಮನರಂಜನೆ ಮತ್ತಿತರ ಉದ್ದೇಶಗಳಿಗೆ ನಗರಗಳ ಪ್ರಮುಖ ಪ್ರದೇಶಗಳಿಗೆ ತೆರಳುವವರು ಸುತ್ತಮುತ್ತಲಿನ ಸ್ಥಳಗಳಲ್ಲಿ  ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಸಿಗದೆ ಪಾಲಿಕೆಗೆ ಹಿಡಿಶಾಪ ಹಾಕುತ್ತಾರೆ. ಪಾರ್ಕಿಂಗ್‌ ಸ್ಥಳಾವಕಾಶ ಸಿಗದೆ ರಸ್ತೆ ಬದಿಯಲ್ಲಿಯೂ ಸೇರಿದಂತೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಇದು ಇತರ ವಾಹನಗಳು ಮತ್ತು ಪಾದಚಾರಿಗಳ ಸುಗಮ ಓಡಾಟಕ್ಕೂ ಸಾಕಷ್ಟು ಅಡಚಣೆ ಉಂಟು ಮಾಡುತ್ತದೆ. ನಿಯಮ ಉಲ್ಲಂಘಿಸಿ ನಿಲ್ಲಿಸಿದ ವಾಹನಗಳನ್ನು ಟ್ರಾಫಿಕ್‌ ಪೊಲೀಸರು ಎಳೆದುಕೊಂಡು ಹೋಗಿರುತ್ತಾರೆ ಇಲ್ಲವೆ ಸ್ಥಳದಲ್ಲಿಯೇ ದಂಡ ವಿಧಿಸುತ್ತಾರೆ.

ನಗರಗಳಲ್ಲಿ ಸಾಮಾನ್ಯವಾಗಿ ಪ್ರತಿದಿನ ಕಂಡು ಬರುವ ಇಂತಹ ಸಮಸ್ಯೆಗೆ ಹೊಸ ಮೊಬೈಲ್‌ ಆ್ಯಪ್‌   ಪರಿಹಾರ ಕಲ್ಪಿಸಿಕೊಡಲಿದೆ. ಈ ಆ್ಯಪ್‌, ವಾಹನ ಮಾಲೀಕರ ಪಾರ್ಕಿಂಗ್‌ ತಲೆನೋವು ದೂರ ಮಾಡಲು ನೆರವಾಗಲಿದೆ. ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಪಾರ್ಕಿಂಗ್‌ ಸಮಸ್ಯೆಯ ಒತ್ತಡದಿಂದ ಮುಕ್ತರಾಗಬಹುದು.

ಎರಡು ದಶಕಗಳಲ್ಲಿ ಬೆಂಗಳೂರು ಮಹಾನಗರವು ಐ.ಟಿ ರಾಜಧಾನಿಯಾಗಿ ಬೆಳೆಯುತ್ತಿದ್ದಂತೆ, ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆಯು ಅತ್ಯಲ್ಪ ಅವಧಿಯಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿತು.  ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳು ವಿಸ್ತರಣೆಗೊಳ್ಳಲಿಲ್ಲ.  ವಾಹನ ನಿಲುಗಡೆ ಸ್ಥಳಗಳೂ ಅಭಿವೃದ್ಧಿಯಾಗಲಿಲ್ಲ.  ಕಟ್ಟಡ ನಿರ್ಮಾಣದ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಇಂಚಿಂಚೂ ಜಾಗ ಬಿಡದೆ ಕಾಂಕ್ರೀಟ್‌ ಕಟ್ಟಡ ನಿರ್ಮಾಣಕ್ಕೆ ಹಪಹಪಿಸಿದ್ದರಿಂದ  ವಾಹನಗಳ ನಿಲುಗಡೆ ಸ್ಥಳ ತುಂಬ ಕಿರಿದಾಯಿತು. ಪಾಲಿಕೆಯೂ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡುವಲ್ಲಿ ಹಿಂದೆ ಬಿದ್ದಿತು.  ನಗರವಾಸಿಗಳು ಎದುರಿಸುತ್ತಿರುವ ಈ ಸಮಸ್ಯೆಗೆ ಟ್ರಾಫಿಕ್‌ ಪೊಲೀಸರು,  ಸರ್ಕಾರ, ಮಹಾನಗರ ಪಾಲಿಕೆ, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದರೂ, ಅಂತಹ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿಲ್ಲ.

ಬೆಂಗಳೂರಿನ ಯುವ ಉದ್ಯಮಿಗಳಿಬ್ಬರು, ಐ.ಟಿ ಉದ್ಯಮದ ಹಿರಿಯ ಅನುಭವಿ ಜತೆ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಪ್ಲಾಂಕ್‌ ಆ್ಯಪ್‌, ಪಾರ್ಕಿಂಗ್‌ ಸಮಸ್ಯೆಗೆ ಬೆರಳ ತುದಿಯಲ್ಲಿಯೇ ಪರಿಹಾರ ಒದಗಿಸಲಿದೆ. ಕನ್ನಡಿಗರಾದ ಅರ್ಜುನ್‌ ಜೈರಾಜ್‌ ಮತ್ತು ಬಲರಾಂ ಜೈರಾಜ್‌ ಸೋದರರು  ತಮ್ಮ ಸ್ವಂತ ಅನುಭವ ಮತ್ತು ವಿದೇಶಗಳಲ್ಲಿನ  ಮುಂಚಿತ ಪಾರ್ಕಿಂಗ್‌  ಸೌಲಭ್ಯದಿಂದ ಪ್ರೇರಣೆಗೊಂಡು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ, ಐ. ಟಿ ಉದ್ಯಮದಲ್ಲಿ 20 ವರ್ಷಗಳ ಅನುಭವ ಹೊಂದಿರುವ ಸಾಫ್ಟ್‌ವೇರ್‌ ತಂತ್ರಜ್ಞ  ಜಾನ್‌ ಸಿಮೊನ್‌ ಅವರ ಸಹಕಾರದಲ್ಲಿ ಈ ಹೊಸ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲಿ  ಕಲಿತು ಬಂದಿರುವ ಅರ್ಜುನ್‌ (25), ಈ ಸ್ಟಾರ್ಟ್‌ಅಪ್‌ನ  ಮುಖ್ಯ ಕಾರ್ಯನಿರ್ಹವಣಾ ಅಧಿಕಾರಿಯಾಗಿದ್ದು (ಸಿಇಒ), ಇದಕ್ಕೂ ಮೊದಲು ಅರ್ನಸ್ಟ್‌ ಆಂಡ್‌ ಯಂಗ್‌ ಇಂಡಿಯಾದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಬೆಂಟ್ಲೆ ವಿಶ್ವವಿದ್ಯಾನಿಲಯದ  ಅರ್ಥಶಾಸ್ತ್ರದಲ್ಲಿ  ಪದವೀಧರರಾಗಿರುವ ಬಲರಾಂ (23), ನಗರದ ಎಚ್‌ಆರ್‌ಬಿ ಗ್ರೂಪ್‌ನ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ತೊಡಗಿಕೊಂಡಿದ್ದರು. ಇವರು ಪ್ಲಾಂಕ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿದ್ದು (ಸಿಒಒ), ದಿನನಿತ್ಯದ ವಹಿವಾಟಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.  ಜಾಣ್‌ ಸಿಮೊನ್‌ ಅವರು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದು (ಸಿಟಿಒ),  ಆ್ಯಪ್‌, ತಂತ್ರಜ್ಞಾನ ಮತ್ತು ಸಂಶೋಧನೆ ಅಭಿವೃದ್ಧಿಪಡಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಏನಿದು ಪ್ಲಾಂಕ್‌?
ಖಾಲಿ ಜಾಗದ ಸದ್ಬಳಕೆ ಉದ್ದೇಶಕ್ಕೆ ನಿಲುಗಡೆ ತಾಣಗಳು ಗಂಟೆಗಳ ಲೆಕ್ಕದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ಲಭ್ಯ ಇರುವ ಮತ್ತು ಇಂತಹ  ಕಾರು ನಿಲುಗಡೆ ತಾಣಗಳನ್ನು ಪತ್ತೆಹಚ್ಚಲು,    ವಾಹನ ನಿಲ್ಲಿಸಿದ್ದಕ್ಕೆ ಪ್ರತಿಯಾಗಿ ಮಾಲೀಕರಿಗೆ ಹಣ ಪಾವತಿಸಲು ನೆರವಾಗುವ ವಿಶಿಷ್ಟ ಮೊಬೈಲ್‌ ಆ್ಯಪ್ ಇದಾಗಿದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ,  ಫೇಸ್‌ಬುಕ್‌ ಅಥವಾ ಇ–ಮೇಲ್‌ ನಮೂದಿಸಿ  (ಲಾಗಿನ್‌ ಆಗಬೇಕು) ಹೆಸರು ನೋಂದಾಯಿಸಬೇಕು.

ನಿಗದಿತ ಸಮಯಕ್ಕೆ, ನಿರ್ದಿಷ್ಟ ದರಕ್ಕೆ, ಲಭ್ಯ ಇರುವ ಎಲ್ಲ ನಿಲುಗಡೆ ತಾಣಗಳ ವಿವರ ಆ್ಯಪ್‌ನಲ್ಲಿ ದೊರೆಯಲಿದೆ.  ನಿರ್ದಿಷ್ಟ ಸಮಯದಲ್ಲಿ ಲಭ್ಯ (real time) ಇರುವ ಪಾರ್ಕಿಂಗ್‌ ತಾಣಗಳನ್ನು  ಬಳಸಿಕೊಳ್ಳುವ  ಸೌಲಭ್ಯ ಇದಾಗಿದೆ.   ಮುಂಗಡವಾಗಿ ಕಾದಿರಿಸುವ ಸೌಲಭ್ಯ ಮಾತ್ರ ಇದರಲ್ಲಿ ಇಲ್ಲ. ನಿರ್ದಿಷ್ಟ ಸಮಯದಲ್ಲಿ ಲಭ್ಯ ಇರುವ ನಿಲುಗಡೆ ತಾಣಗಳ ವಿವರಗಳು ಮಾತ್ರ ಇಲ್ಲಿ ದೊರೆಯುತ್ತವೆ. ಪಾರ್ಕಿಂಗ್‌ ಮಾಡುವ ಸಂದರ್ಭದಲ್ಲಿ ಯಾವ ತಾಣಗಳಲ್ಲಿ ಕಾರುಗಳು ಹೆಚ್ಚಾಗಿ ನಿಲುಗಡೆಯಾಗುತ್ತಿವೆ, ಎಲ್ಲಿ ಖಾಲಿ ಇದೆ ಅಥವಾ ನಿಲುಗಡೆ ತಾಣವು ಸಂಪೂರ್ಣವಾಗಿ ಭರ್ತಿಯಾಗಿದೆ ಎನ್ನುವ ಮಾಹಿತಿಯೂ ಇಲ್ಲಿ ದೊರೆಯುತ್ತದೆ. ನಿರ್ದಿಷ್ಟ ನಿಲುಗಡೆ ತಾಣಗಳ ನಿಖರ ಮಾಹಿತಿಯೂ ಈ ಆ್ಯಪ್‌ನಲ್ಲಿ ಲಭ್ಯ ಇರುತ್ತದೆ. ಹೀಗಾಗಿ ನಗರಕ್ಕೆ ಹೊಸದಾಗಿ ಬಂದವರೂ  ನಿಲುಗಡೆ ತಾಣವನ್ನು ಸುಲಭವಾಗಿ  ತಲುಪಬಹುದು.

ತಾಣದ ಗೋಡೆಗೆ ಅಂಟಿಸಿರುವ ಕ್ಯುಆರ್‌ ಕೋಡ್‌ ಅನ್ನು ಮೊಬೈಲ್‌ ಮೂಲಕ ಸ್ಕ್ಯಾನ್‌ ಮಾಡುತ್ತಿದ್ದಂತೆ ನಿಲುಗಡೆ ಸಮಯದ ಮೀಟರ್‌ ಆರಂಭಗೊಳ್ಳುತ್ತದೆ. ಕಾರನ್ನು ಹೊರಗೆ ತೆಗೆಯುವಾಗ ಇನ್ನೊಂದು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡುತ್ತಿದ್ದಂತೆ  ಮೀಟರ್‌ ಸ್ಥಗಿತಗೊಳ್ಳುತ್ತದೆ.  ಒಂದು ಗಂಟೆಗೆ ₹ 30 ರಂತೆ ಬಾಡಿಗೆ ಪಾವತಿಸಬೇಕಾಗುತ್ತದೆ. ಇದನ್ನು ನಗದು ಅಥವಾ ಮೊಬೈಲ್‌ ವ್ಯಾಲೆಟ್‌ ಮೂಲಕ ಪಾವತಿಸಬಹುದು. ‘ವಿಶ್ವದ ಇತರ ಭಾಗಗಳಲ್ಲಿ ಇಂತಹ ಆ್ಯಪ್‌ಗಳು ಈಗಾಗಲೇ ಬಳಕೆಯಲ್ಲಿ ಇವೆ. ಭಾರತದಲ್ಲಿ ಮಾತ್ರ ಇದೇ ಮೊದಲ ಬಾರಿಗೆ ಇಂತಹ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಬಳಕೆದಾರ ಸ್ನೇಹಿ ಆ್ಯಪ್‌ ಇದಾಗಿದೆ’ ಎಂದು ಬಲರಾಂ ಅವರು   ಹೇಳುತ್ತಾರೆ.

ನಿಗದಿತ ಸ್ಥಳಕ್ಕೆ ವಾಹನ ಮಾಲೀಕರು ತಲುಪಿದ ಸಂದರ್ಭದಲ್ಲಿ (real time) ಲಭ್ಯ ಇರುವ ನಿಲುಗಡೆ ತಾಣಗಳ ವಿವರಗಳು ಲಭ್ಯ ಇರುವ ವಿಶಿಷ್ಟ ಆ್ಯಪ್‌ ಇದಾಗಿದೆ. ಈ ಆ್ಯಪ್‌, ವಾಹನ ನಿಲುಗಡೆಗೆ ಸ್ಥಳಾವಕಾಶ ಹೊಂದಿರುವವರಿಗೆ ಮತ್ತು  ವಾಹನ ಮಾಲೀಕರಿಗೆ – ಹೀಗೆ ಇಬ್ಬರಿಗೂ  ಉಪಯುಕ್ತವಾಗಿರಲಿದೆ.  ಮನೆ, ಅಪಾರ್ಟ್‌ಮೆಂಟ್‌, ಕಚೇರಿಗಳಲ್ಲಿ ಖಾಲಿ ಇರುವ  ನಿರುಪಯುಕ್ತವಾದ ಜಾಗವನ್ನು ಕಾರುಗಳ ನಿಲುಗಡೆಗೆ ನೀಡಿ  ಹಣ ಗಳಿಸಬಹುದು. 

ಉದಾಹರಣೆಗೆ ಮನೆ, ಅಪಾರ್ಟ್‌ಮೆಂಟ್‌ ಮತ್ತಿತರ ಕಡೆಗಳಲ್ಲಿ ಕಾರು ಪಾರ್ಕಿಂಗ್್ ಜಾಗೆಯು ಬೆಳಗಿನ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಖಾಲಿ ಇದ್ದರೆ ಅದನ್ನು ಈ ನಿರ್ದಿಷ್ಟ ಅವಧಿಯಲ್ಲಿ ಮಾತ್ರ  ಪಾರ್ಕಿಂಗ್‌ಗೆ ಬಳಸಿಕೊಳ್ಳಲು ನೀಡುವ ಸೌಲಭ್ಯ ಇದರಲ್ಲಿ ಇರಲಿದೆ. ‘ಆ್ಯಪ್‌ನಲ್ಲಿ ಪಟ್ಟಿಯಾಗಿರುವ ಇಂತಹ ಹಣ ಪಾವತಿಸಿ ಕಾರ್‌ ನಿಲ್ಲಿಸುವ ತಾಣಗಳನ್ನು ಕಾರ್‌ ಮಾಲೀಕರು ಗುರುತಿಸಿ ಅದನ್ನು ತಮಗೆ ಇಷ್ಟ ಬಂದಷ್ಟು ಸಮಯ ಬಳಸಿಕೊಳ್ಳಬಹುದು. ಇದಕ್ಕೆ ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ಮ್ಯಾಪ್‌ಮೇಕರ್‌ ಟೆಕ್ನಾಲಜೀಸ್‌ ಆಶ್ರಯದಲ್ಲಿ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ’  ಎಂದು ಅರ್ಜುನ್‌  ಹೇಳುತ್ತಾರೆ.

‘ನಿಲುಗಡೆ ತಾಣಗಳನ್ನು ಬಾಡಿಗೆ ನೀಡುವ ಜಾಗದ ಮಾಲೀಕರು ಸ್ಥಳದಲ್ಲಿ  ಕಾವಲುಗಾರ ನೇಮಿಸಿಕೊಂಡಿರಬೇಕು.   ಇವರು ನಗದು ಸ್ವೀಕರಿಸಬಹುದು ಇಲ್ಲವೆ ಮೊಬೈಲ್‌ ವ್ಯಾಲೆಟ್‌ ಮೂಲಕ ಹಣ ಪಾವತಿಯಾಗಿರುವುದನ್ನು ಖಾತರಿಪಡಿಸಿಕೊಳ್ಳಬಹುದು. ಅಕ್ಷರ ಜ್ಞಾನ ಇಲ್ಲದ ಕಾವಲುಗಾರ, ಮೊಬೈಲ್‌ನಲ್ಲಿನ ಆ್ಯಪ್‌ದ ಬೇರೆ, ಬೇರೆ ಬಣ್ಣಗಳನ್ನು ಆಧರಿಸಿಯೇ ಹಣ ಪಾವತಿಯಾಗಿರುವುದು ಮತ್ತು ಆಗದಿರುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ’ ಎಂದೂ  ಅರ್ಜುನ್‌ ವಿವರಿಸುತ್ತಾರೆ.

ರಿಯಲ್‌ ಎಸ್ಟೇಟ್‌ ವಹಿವಾಟು : ‘ನಿಲುಗಡೆ ಜಾಗ ಬಾಡಿಗೆ ನೀಡಲು ಇಚ್ಛಿಸುವ ಭೂ ಮಾಲೀಕರು, ರಿಯಲ್‌ ಎಸ್ಟೇಟ್‌ ವಹಿವಾಟುದಾರರು ತಮ್ಮ ಮಾಲೀಕತ್ವದಲ್ಲಿ ಇರುವ ಸ್ಥಳಾವಕಾಶದ ಛಾಯಾಚಿತ್ರ, ಒಡೆತನದ ದಾಖಲೆ ಮತ್ತಿತರ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅನುಮತಿ ನೀಡಲಾಗುವುದು. ಹೀಗಾಗಿ ವಂಚನೆಗೆ ಇಲ್ಲಿ ಅವಕಾಶ ಇಲ್ಲವೇ ಇಲ್ಲ’ ಎಂದು ಬಲರಾಂ ಸ್ಪಷ್ಟಪಡಿಸುತ್ತಾರೆ.

ಖಾಲಿ ನಿಲುಗಡೆ ತಾಣಗಳ ಮಾಲೀಕರು ಹೊಸದಾಗಿ ಬಂಡವಾಳ ಹೂಡಿಕೆ ಮಾಡದೆ ಹಣ ಗಳಿಸುವ ಸುಲಭ ಅವಕಾಶವು ಇಲ್ಲಿದೆ. ಮಾಲೀಕರು ಯಾವುದೇ ಸಂದರ್ಭದಲ್ಲಿ ನಿಲುಗಡೆ ತಾಣಗಳನ್ನು ಸೇರಿಸುವ ಮತ್ತು ಕೈಬಿಡುವ ಸ್ವಾತಂತ್ರ್ಯ ಹೊಂದಿದ್ದಾರೆ. ‘ಆರಂಭದ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ.  ಮುಂಬರುವ ದಿನಗಳಲ್ಲಿ ಚೆನ್ನೈ, ಹೈದರಾಬಾದ್‌, ಮುಂಬೈ ಮತ್ತು ಕೋಲ್ಕತ್ತಗಳಲ್ಲೂ ಈ ಆ್ಯಪ್‌ ಸೌಲಭ್ಯ ವಿಸ್ತರಿಸುವ ಉದ್ದೇಶ ತಮಗಿದೆ’ ಎಂದು   ಈ ಸ್ಟಾರ್ಟ್‌ಅಪ್‌ನ ರೂವಾರಿಗಳಾದ  ಜೈರಾಜ್‌ ಸೋದರರು ಅಭಿಪ್ರಾಯಪಡುತ್ತಾರೆ.  ಅಂತರ್ಜಾಲ ತಾಣ www.goplonk.com ದಲ್ಲಿ ವಿವರಗಳು ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT