ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಕೌನ್ಸಿಲ್‌ ಸಭೆ: ಅಧಿಕಾರಿಗಳ ವಿರುದ್ಧ ಆಕ್ರೋಶ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದುರಸ್ತಿ ಮಾಡಿದ ರಸ್ತೆಗಳಿಗೇ ಎಂಜಿನಿಯರ್‌ಗಳು ಹಣ ಖರ್ಚು ಮಾಡ್ತಾರೆ’, ‘ಆಸ್ಪತ್ರೆಗಳಲ್ಲಿ ಔಷಧಿ ವ್ಯವಸ್ಥೆ ಮಾಡದ ಈ ಜಂಟಿ ಆಯುಕ್ತರಿಗೆ ಬಡವರ ಮೇಲೆ ಕಾಳಜಿಯೇ ಇಲ್ಲ’, ‘ಪಾಲಿಕೆಗೆ ಭಾರವಾದ ಎರವಲು ಅಧಿಕಾರಿಗಳು ಏಕೆ ಬೇಕು? ತಕ್ಷಣವೇ ಹೊರಹಾಕಿ ಅವರನ್ನು’, ‘ಜನರ ಕೆಲಸ ಮಾಡದೇ ಸಂಬಳ ಪಡೆಯಲು ಅಸಹ್ಯ ಆಗುವುದಿಲ್ಲವೇ?’ –ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಅಧಿಕಾರಿಗಳ ವಿರುದ್ಧ ಸದಸ್ಯರು ಪಕ್ಷಬೇಧ ಮರೆತು ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

‘ಕಳೆದ ವರ್ಷ ದುರಸ್ತಿ ಮಾಡಿದ ರಸ್ತೆಗಳ ನಿರ್ವಹಣೆಯನ್ನು ಮಾಡುವುದು ಅವುಗಳ ಕಾಮಗಾರಿ ನಡೆಸಿದ ಗುತ್ತಿಗೆದಾರರದೇ ಹೊಣೆ. ಆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲೂ ಟೆಂಡರ್‌ ಕರೆದು ಮತ್ತೆ ಗುತ್ತಿಗೆ ನೀಡುವ ಮೂಲಕ ಹಣ ಪೋಲು ಮಾಡ­ಲಾಗಿದೆ’ ಎಂದು ಸದಸ್ಯರು ದೂರಿದರು. ಜೆಡಿಎಸ್‌ ನಾಯಕ ಆರ್‌. ಪ್ರಕಾಶ್‌ ಅವರು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಎಸ್‌. ಸೋಮಶೇಖರ್‌ ಕಾರ್ಯ ಪಾಲನಾ ವರದಿ (ಎಟಿಆರ್‌) ಮಂಡಿಸಿದರು.

‘ಕಳೆದ ವರ್ಷ 130 ರಸ್ತೆಗಳ ಅಭಿವೃದ್ಧಿಗೆ ₨ 300 ಕೋಟಿ ಬಿಡುಗಡೆ ಆಗಿತ್ತು. ಅದರಲ್ಲಿ ₨ 270 ಕೋಟಿ ಮೊತ್ತದ ಕಾಮಗಾರಿ ನಡೆಸ­ಲಾ­ಗಿದ್ದು, ₨ 240 ಕೋಟಿಯನ್ನು ಮಾತ್ರ ಪಾವತಿ ಮಾಡಲಾಗಿದೆ’ ಎಂದು ಅವರು ಹೇಳಿದರು. ‘ಪ್ರಸಕ್ತ ವರ್ಷ ಒಟ್ಟಾರೆ 1.81 ಲಕ್ಷ ಚದರ ಮೀಟರ್‌ನಷ್ಟು ಅಗಲದ ರಸ್ತೆ ಗುಂಡಿಗಳನ್ನು ಗುರುತಿಸಲಾಗಿತ್ತು. ₨ 15.72 ಕೋಟಿ ವೆಚ್ಚ­ದಲ್ಲಿ ಇದುವರೆಗೆ ಶೇ 62ರಷ್ಟು ಗುಂಡಿಗಳನ್ನು ಮುಚ್ಚ ಲಾಗಿದೆ. ಉಳಿದ ಗುಂಡಿಗಳನ್ನು ಮುಚ್ಚಲು ಇನ್ನೂ 15–20 ದಿನಗಳ ಕಾಲಾವಕಾಶ ಅಗತ್ಯವಿದೆ’ ಎಂದು ವಿವರಿಸಿದರು.

‘ರಸ್ತೆಗಳ ದುರಸ್ತಿಗೆ ನೂರಾರು ಕೋಟಿ ವ್ಯಯಿಸಿದರೂ ಇದುವರೆಗೆ ಒಂದು ರಸ್ತೆಯೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ರಸ್ತೆ ಅಭಿವೃದ್ಧಿ ಮಾಡಿದ ಗುತ್ತಿಗೆದಾರರು ಅದನ್ನು ಮೂರು ವರ್ಷಗಳ ಕಾಲ ನಿರ್ವಹಣೆ ಮಾಡ­ಬೇಕು. ಆದರೆ, ಅಂತಹ ರಸ್ತೆ ಗಳಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಹಣ ವ್ಯಯಿಸಲಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜುನಾಥ್‌ ರೆಡ್ಡಿ, ಪ್ರಕಾಶ್‌ ಮತ್ತಿತರರು ದೂರಿದರು. ಸದಸ್ಯರಾದ ಕೆ.ಚಂದ್ರಶೇಖರ್‌, ಎಸ್‌. ಹರೀಶ್‌ ಮತ್ತಿತರರು ಅದಕ್ಕೆ ದನಿ ಗೂಡಿಸಿದರು.

‘ಕಳೆದ ವರ್ಷ ದುರಸ್ತಿ ಮಾಡಿದ ಯಾವ ರಸ್ತೆಗಳಲ್ಲೂ ಈ ಸಲ ಗುಂಡಿ ಮುಚ್ಚಿಲ್ಲ. ಐದು ವರ್ಷಗಳ ಹಿಂದೆ ಕಾಮಗಾರಿ ನಡೆಸಿದ ರಸ್ತೆ­ಗಳನ್ನಷ್ಟೇ ದುರಸ್ತಿ ಮಾಡಲಾಗಿದೆ’ ಎಂದು ಸೋಮಶೇಖರ್‌ ಸಮಜಾಯಿಷಿ ನೀಡಿದರು. ‘ಅಧಿಕಾರಿಗಳು ಸುಳ್ಳು ಹೇಳುತ್ತಿ ದ್ದಾರೆ. ರಸ್ತೆ ದುರಸ್ತಿ ಮಾಡಿದ ಕಾಮ ಗಾರಿಗಳ ಸಮಗ್ರ ವಿವರವನ್ನು ಕೊಡ ಬೇಕು. ನಾನು ಲೋಕಾಯು­ಕ್ತ­ದಲ್ಲಿ ದೂರು ಸಲ್ಲಿಸಲಿದ್ದೇನೆ’ ಎಂದು ಪ್ರಕಾಶ್‌ ಪಟ್ಟು ಹಿಡಿದರು.

ಮಧ್ಯಪ್ರವೇಶಿಸಿದ ಮೇಯರ್‌ ಎನ್‌.­ಶಾಂತಕುಮಾರಿ, ‘ಕೆಲವು ರಸ್ತೆಗಳ ಸಮೀಕ್ಷೆ ನಡೆಸೋಣ. ತಪ್ಪು ಮಾಡಿ ರುವುದು ಕಂಡು­ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈ ಗೊಳ್ಳೋಣ’ ಎಂದು ಹೇಳಿದರು. ಗೋವಿಂದರಾಜನಗರದ ಕೆಳ ಸೇತುವೆ ಕಾಮಗಾರಿ­ಯನ್ನು ತಕ್ಷಣ ಆರಂಭಿಸುವಂತೆ ಮೇಯರ್‌ ಅಧಿಕಾರಿ ಗಳಿಗೆ ತಾಕೀತು ಮಾಡಿದರು. ‘ಸಂಚಾರ ಪೊಲೀಸರು ಸಂಚಾರ ಮಾರ್ಗ­ವನ್ನು ಬದಲಾಯಿಸಬೇಕಿದ್ದು, ಅವರು ಆ ವ್ಯವಸ್ಥೆ ಮಾಡಿಕೊಟ್ಟ ತಕ್ಷಣ ಕಾಮಗಾರಿ ಆರಂಭಿಸ­ಲಾಗುವುದು’ ಎಂದು ಸೋಮಶೇಖರ್‌ ಉತ್ತರಿಸಿ ದರು.

ಬಿಬಿಎಂಪಿ ಆಸ್ಪತ್ರೆಗಳಲ್ಲಿ ಔಷಧಿ ವ್ಯವಸ್ಥೆ ಮಾಡಬೇಕು ಎಂಬ ನಿರ್ಣಯವನ್ನು ಕಳೆದ ಸಭೆ­ಯಲ್ಲೇ ಕೈಗೊಂಡಿದ್ದರೂ ಅದನ್ನು ಅನುಷ್ಠಾನಕ್ಕೆ ತರದ ಜಂಟಿ ಆಯುಕ್ತ (ಆರೋಗ್ಯ) ಡಾ. ಯತೀಶ್‌ಕುಮಾರ್‌ ಅವರನ್ನೂ ಸದಸ್ಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಜ್ವರ, ಕೆಮ್ಮು ಬಂದವರಿಗೆ ವಿತರಿಸಲೂ ಆಸ್ಪತ್ರೆಯಲ್ಲಿ ಔಷಧಿ ಇಲ್ಲ. ನಿಮಗೆ ಬಡವರ ಕುರಿತು ಕಾಳಜಿ ಇಲ್ಲವೇ’ ಎಂದು ಬನಶಂಕರಿ ವಾರ್ಡ್‌ ಸದಸ್ಯ ಎ.ಎಚ್‌. ಬಸವರಾಜು ಅವರು ಆಕ್ರೋಶ  ವ್ಯಕ್ತಪಡಿಸಿದರು. ‘ತಕ್ಷಣ ಎಲ್ಲ ಆಸ್ಪತ್ರೆಗಳಲ್ಲಿ ಔಷಧಿ ವ್ಯವಸ್ಥೆ ಮಾಡಲಾಗುವುದು’ ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ಸ್ಪಷ್ಟನೆ ನೀಡಿದರು.

ತೆರಿಗೆ ಹೆಚ್ಚಳ: ನಿರ್ಧಾರ ಮತ್ತೆ ಮುಂದೂಡಿಕೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು ಎನ್ನುವ ಪ್ರಸ್ತಾವವನ್ನು ಸಭೆ­ಯಲ್ಲಿ ಮತ್ತೆ ಮುಂದೂಡ­ಲಾ­ಯಿತು. ಹಣ­ಕಾ­ಸಿನ ಮುಗ್ಗಟ್ಟಿ­ನಿಂದ ಹೊರ­ಬರಲು ಆಸ್ತಿ ತೆರಿಗೆ ಹೆಚ್ಚಳ ಮಾಡು­ವುದು ಅನಿವಾ­ರ್ಯ­ವಾ­ಗಿದ್ದು, ವಸತಿ ಕಟ್ಟ­ಡ­­ಗಳಿಗೆ ಶೇ 20 ಮತ್ತು ವಾಣಿಜ್ಯ ಕಟ್ಟಡ­ಗಳಿಗೆ ಶೇ 25ರಷ್ಟು ಆಸ್ತಿ ತೆರಿಗೆ ಏರಿಸಬೇಕು ಎಂಬ ಪ್ರಸ್ತಾ­ವವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸಭೆ ಮುಂದಿಟ್ಟಿತ್ತು.

ಗೌರವಧನ ನೀಡಲು ಸಮ್ಮತಿ
ಕನ್ನಡ ನಾಡು–ನುಡಿಗೆ ಸೇವೆ ಸಲ್ಲಿಸಿದ ನಾಲ್ಕು ಜನ ಹಿರಿಯ ಚೇತನಗಳ ಕುಟುಂಬ­ಗಳಿಗೆ ಆರ್ಥಿಕ ನೆರವು ನೀಡಲು ಬಿಬಿಎಂ­ಪಿಯ ಎಲ್ಲ 198 ಸದಸ್ಯರ ಒಂದು ತಿಂಗಳ ಗೌರವ­ಧನ­ ನೀಡಲು ನಿರ್ಧರಿಸಲಾ­ಯಿತು. ಮ. ರಾಮ­ಮೂರ್ತಿ ಅವರ ಪತ್ನಿ ಕಮಲಮ್ಮ, ಮು.­ಗೋವಿಂದ­ರಾಜು ಅವರ ಪತ್ನಿ ತಂಗಭಾಗ್ಯಮ್ಮ, ಸಿ.ವಿ. ಶಿವ­ಶಂಕರ್‌ ಹಾಗೂ ಶನಿ ಮಹ­ದೇವಪ್ಪ ಅವರಿಗೆ ಈ ಗೌರವ­ಧನದ ಒಟ್ಟು ಮೊತ್ತ­ವನ್ನು ಸಮ­ವಾಗಿ ನೀಡಲು ಸಭೆ ಒಪ್ಪಿಗೆ ಸೂಚಿಸಿತು.

ಇವೆಂಟ್‌ಗಳಿಗೆ ಅನುಮತಿ ಇಲ್ಲ
ಮ್ಯೂಜಿಕ್‌ ಕಾರ್ನಿವಲ್‌ ಹಾಗೂ ಮ್ಯೂಜಿಕ್‌ ಕನ್ಸರ್ಟ್‌ ಹೆಸರಿನಲ್ಲಿ ಯಲ­ಹಂಕ ಹಾಗೂ ರಾಜರಾಜೇಶ್ವರಿ­ನಗರ ವಲ­ಯ­ಗಳಲ್ಲಿ ನಡೆಯು­ತ್ತಿರುವ ಸಮಾ­ಜದ ಸ್ವಾಸ್ಥ್ಯವನ್ನು ಕೆಡಿಸು­ವಂ­ತಹ ಇವೆಂಟ್‌ಗಳಿಗೆ (ಕಾರ್ಯಕ್ರಮ) ಪಾಲಿಕೆ ವತಿಯಿಂದ ಅನುಮತಿ ನೀಡದಿರಲು ತೀರ್ಮಾನ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT