ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಮಾಜಿ ಸದಸ್ಯ ಸಿಐಡಿ ಬಲೆಗೆ

ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
Last Updated 27 ಜುಲೈ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಅಧಿಕಾರಿಗಳು ಪಾಲಿಕೆಯ ಮಾಜಿ ಸದಸ್ಯ (ಬಿಜೆಪಿ) ಗಂಗಬೈರಯ್ಯ ಅವರನ್ನು  ಬುಧವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಸೆರೆಯಾದವರ ಸಂಖ್ಯೆ 17ಕ್ಕೆ ಏರಿದೆ. 

ರಾಜ್‌ಕುಮಾರ್‌ ವಾರ್ಡ್‌ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಗಂಗಬೈರಯ್ಯ, ಪಿಯುಸಿ ಓದುತ್ತಿದ್ದ ತಮ್ಮ ಮೊಮ್ಮಗನಿಗೆ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ತರಿಸಿ ಕೊಟ್ಟಿದ್ದರು. ಅಲ್ಲದೆ, ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ ಕೆಲ ವಿದ್ಯಾರ್ಥಿಗಳು, ಗಂಗಬೈರಯ್ಯ ಅವರ ಮನೆಯಲ್ಲೇ ಸಿದ್ಧತೆ ನಡೆಸಿದ್ದರು’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

‘ಬಸವೇಶ್ವರನಗರ ನಿವಾಸಿಯಾದ ಗಂಗಬೈರಯ್ಯ ಅವರಿಗೆ, ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್‌ನ ಪರಿಚಯವಿತ್ತು. ಹೀಗಾಗಿ, ಪಿಯುಸಿ ಓದುತ್ತಿರುವ ಮೊಮ್ಮಗನಿಗೆ ಪ್ರಶ್ನೆಪತ್ರಿಕೆ ಕೊಡುವಂತೆ ಆತನ ಬಳಿ ಕೇಳಿದ್ದರು.’

‘ಆಗ ಮಂಜುನಾಥ್, ಪ್ರಕರಣದ ಪ್ರಮುಖ ಆರೋಪಿ ಕಿರಣ್ ಅಲಿಯಾಸ್ ಕುಮಾರಸ್ವಾಮಿಯಿಂದ ಮಾರ್ಚ್ 21ರ ರಸಾಯನ ವಿಜ್ಞಾನ ಪರೀಕ್ಷೆಯ ಹಾಗೂ ಮಾರ್ಚ್ 30ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ತರಿಸಿಕೊಟ್ಟಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಒಪ್ಪಂದಕ್ಕೆ ಒಪ್ಪಿಕೊಂಡರು: ‘ಕೆಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸಬೇಕು. ಇದಕ್ಕೆ ನಿಮ್ಮ ಮನೆಯನ್ನು  ಬಳಸಿಕೊಳ್ಳುತ್ತೇವೆ. ಈ ಒಪ್ಪಂದಕ್ಕೆ ಒಪ್ಪಿಕೊಂಡರೆ ನಿಮಗೆ ಉಚಿತವಾಗಿ ಪ್ರಶ್ನೆಪತ್ರಿಕೆ ಕೊಡುತ್ತೇನೆ’ ಎಂದು ಕಿರಣ್, ಗಂಗಬೈರಯ್ಯ ಅವರಿಗೆ ಹೇಳಿದ್ದ. ಅದಕ್ಕೆ ಒಪ್ಪಿಕೊಂಡ ಅವರು,  ವಿದ್ಯಾರ್ಥಿಗಳನ್ನು ತಯಾರು ಮಾಡಲು ಎರಡು ಬಾರಿಯೂ ತಮ್ಮ ಮನೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು.’

‘ಓಬಳರಾಜ್, ರುದ್ರಪ್ಪ, ರಿಯಲ್‌ ಎಸ್ಟೇಟ್ ಉದ್ಯಮಿ ನಾರಾಯಣ್ ಅವರ ಮಕ್ಕಳು ಸೇರಿದಂತೆ 10 ವಿದ್ಯಾರ್ಥಿಗಳು ಗಂಗಬೈರಯ್ಯ ಅವರ ಮನೆಯಲ್ಲಿ ಸಿದ್ಧತೆ ನಡೆಸಿದ್ದರು. ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ‘ಗುರೂಜಿ’ಯ ಟ್ಯುಟೋರಿಯಲ್‌ಗಳಲ್ಲಿ ಕೆಲಸ ಮಾಡುವ ಶಿಕ್ಷಕರು, ಆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು’.

‘ಬಂಧಿತರು ಹಾಗೂ ಕೆಲ ವಿದ್ಯಾರ್ಥಿಗಳು ನೀಡಿದ ಹೇಳಿಕೆ ಆಧರಿಸಿ ಗಂಗಬೈರಯ್ಯ ಅವರನ್ನು ಬುಧವಾರ ಬೆಳಿಗ್ಗೆ ಕಚೇರಿಗೆ ಕರೆಸಲಾಗಿತ್ತು. ನಾಲ್ಕು ತಾಸು ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮೊದಲು ಆರೋಪ ನಿರಾಕರಿಸಿದ ಅವರು, ಕಿಂಗ್‌ಪಿನ್‌ಗೆ ಕರೆ ಮಾಡಿರುವ ವಿವರ  (ಸಿಡಿಆರ್ ದಾಖಲೆ) ಸೇರಿದಂತೆ ಕೆಲ ಸಾಕ್ಷ್ಯಗಳನ್ನು ಮುಂದಿಟ್ಟಾಗ ತಪ್ಪೊಪ್ಪಿಕೊಂಡರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನ್ಯಾಯಾಂಗ ಬಂಧನ
‘ಗಂಗಬೈರಯ್ಯ ಅವರನ್ನು ರಾತ್ರಿ 8ರ ಸುಮಾರಿಗೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿರುವುದರಿಂದ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT