ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ವರ್ಡ್‌ಗೆ ಸ್ಪರ್ಶವಷ್ಟೇ ಸಾಕು!

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನಿಮ್ಮ ಬಳಿ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ ಅಥವಾ ಇನ್ನಿತರೆ ಯಾವುದೇ ಗ್ಯಾಡ್ಜೆಟ್‌ ಇದೆ ಎಂದಿಟ್ಟುಕೊಳ್ಳಿ. ಈ ಉಪಕರಣಗಳಿಗೆ ಪಾಸ್‌ವರ್ಡ್‌ ರಚಿಸಿಕೊಳ್ಳುವುದೇ ದೊಡ್ಡ ಸವಾಲು. ಪಾಸ್‌ವರ್ಡ್‌ ಹೇಗೋ ಸಿದ್ಧವಾಯಿತು ಎಂದುಕೊಳ್ಳಿ, ನಂತರ ಅದನ್ನು ಸದಾ ನೆನಪಿ­­ನಲ್ಲಿಟ್ಟು­ಕೊಳ್ಳು­ವುದು ಮತ್ತೊಂದು ಸವಾಲು.  ಗ್ಯಾಡ್ಜೆಟ್‌­ಗಳಿಗೆ ಪಾಸ್‌ವರ್ಡ್‌ ನೀಡಲು ಮತ್ತು ಪಾಸ್‌ವರ್ಡ್‌ಗಳನ್ನು ಯಾರೂ ಹ್ಯಾಕ್‌ ಮಾಡದಂತೆ ತಡೆಯಲು ‘ಜಾರ್ಜಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ಯ ಸೈಬರ್‌ ಸೆಕ್ಯುರಿಟಿ ವಿಭಾಗದ ವಿಜ್ಞಾನಿಗಳು ಹೊಸತೊಂದು ಉಪಾಯ ಕಂಡುಹಿಡಿದಿದ್ದಾರೆ.
ಹೌದು! ಇದು ಟಚ್‌ ಸಿಗ್ನೇಚರ್‌ (touch signature ). ಅಂದರೆ ಸ್ಪರ್ಶ ಸಹಿ. ಇದೊಂದು ಹೊಸ ರೀತಿಯ ಕಲ್ಪನೆ. ಹಾಗಂತ ಇದು ಬೆರಳಚ್ಚು ಆಧರಿಸಿದ ಪಾಸ್‌ವರ್ಡ್‌ ಖಂಡಿತಾ ಅಲ್ಲ. ಅದಕ್ಕಿಂತಲೂ ಒಂದು ಹಂತ ಮುಂದಿನ ತಂತ್ರಜ್ಞಾನ  ಎನ್ನಬಹುದು.

ಪ್ರತಿಯೊಬ್ಬರೂ ತಮ್ಮ  ಗ್ಯಾಡ್ಜೆಟ್‌ ಮೇಲೆ ಒಂದೊಂದು ರೀತಿಯಲ್ಲಿ ಬೆರಳಾ­ಡಿಸುತ್ತಾರೆ (taps and swipes).   ಕೆಲವರು ಸ್ಪರ್ಶ ಪರದೆಯ ಎಡದಿಂದ ಬಲಕ್ಕೆ, ಇನ್ನು ಕೆಲವರು ಬಲದಿಂದ ಎಡಕ್ಕೆ, ಮತ್ತೆ ಕೆಲವರು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಇನ್ನು ಕೆಲವರು ಉಪಕರಣದ ಮಧ್ಯಭಾಗ­ದಲ್ಲಿ ಬೆರಳು ಅದುಮುವ ರೂಢಿ ಇಟ್ಟುಕೊಂಡಿ­ರುತ್ತಾರೆ. ಮತ್ತೆ ಕೆಲವರು ಸ್ಕ್ರೀನ್‌ ಮೇಲೆ ಬೆರಳಿನಿಂದ ಏನೇನೋ ಬರೆ­ಯಲು ಪ್ರಯತ್ನಿಸು­ತ್ತಿರುತ್ತಾರೆ. ಹೀಗೆ ಬಳಕೆದಾರರು ತಮಗೆ ಇಷ್ಟವಿ­ರುವ ರೀತಿಯಲ್ಲಿ ಅಥವಾ ಅವರಿಗೆ ರೂಢಿಯಾ­ಗಿರುವ ರೀತಿಯಲ್ಲಿ ಬೆರಳಾ­ಡಿಸುವ ಮೂಲಕ ಪಾಸ್‌ವರ್ಡ್‌ ರಚಿಸಿಕೊಳ್ಳಬಹುದು.

ಈ ತಂತ್ರಜ್ಞಾನಕ್ಕೆ ‘ಲೇಟೆಂಟ್‌ ಗೆಸ್ಚರ್‌’ (Latent Gesture ) ಎಂದು ಹೆಸರಿಡಲಾಗಿದೆ. ಆಂಡ್ರಾಯ್ಡ್‌ ಗ್ಯಾಡ್ಜೆಟ್‌­ಗಳ ಮೇಲೆ ಲ್ಯಾಬ್‌ನಲ್ಲಿ ಪ್ರಯೋಗ ನಡೆಸುತ್ತಿದ್ದ ವೇಳೆ ಇದು ಬೆಳಕಿಗೆ ಬಂದಿದೆ. ಸದ್ಯ ಆಂಡ್ರಾಯ್ಡ್‌ ಕಾರ್ಯನಿರ್ವ­ಹಣಾ ತಂತ್ರಾಂಶ ಆಧರಿಸಿದ ಗ್ಯಾಡ್ಜೆಟ್‌ಗಳಲ್ಲಿ ಮಾತ್ರ ಈ ಪಾಸ್‌ವರ್ಡ್‌ ಬಳಸಬಹುದು. ಸ್ಮಾರ್ಟ್‌­­ಫೋನ್‌ಗಳಲ್ಲಿ ಇದು ಶೇ 98­ರಷ್ಟು ಟ್ಯಾಬ್ಲೆಟ್‌ಗಳಲ್ಲಿ ಶೇ 97ರಷ್ಟು ನಿಖರವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

‘ಲೇಟೆಂಟ್‌ ಗೆಸ್ಚರ್‌’ ತಂತ್ರಜ್ಞಾನದಡಿ ಗ್ಯಾಡ್ಜೆಟ್‌ಗಳ ಪರದೆಯ ಮೇಲೆ ನಿಮ್ಮ ಹೆಸರನ್ನೊ, ಇಷ್ಟದ ಸಂಖ್ಯೆಯನ್ನೋ ಬೆರಳಿನಿಂದ ಬರೆಯುವ ಮೂಲಕ ಪಾಸ್‌ವರ್ಡ್‌  ರಚಿಸಿಕೊಳ್ಳ­ಬಹುದು. ಒಟ್ಟಿನಲ್ಲಿ ಇಂತಹ ಐದು ಪಾಸ್‌­ವರ್ಡ್‌ಗಳನ್ನು ರಚಿಸಿ ಗ್ಯಾಡ್ಜೆಟ್‌­ನಲ್ಲಿಯೇ ಸಂಗ್ರಹಿಸಿಟ್ಟು­ಕೊಳ್ಳಬಹುದು.

ಐದರಲ್ಲಿ ನಿಮಗೆ ನೆನಪಿ­ರುವುದನ್ನು ಸ್ಕ್ರೀನ್‌ ಮೇಲೆ ಬೆರಳಾಡಿಸಿ ಬರೆದರೆ ಸಾಕು. ಪಾಸ್‌ವರ್ಡ್‌ ತೆರೆದು­ಕೊಳ್ಳು­ತ್ತದೆ. ನೀವು ಸಹಿ ಮಾಡುವ ರೀತಿ ಅಥವಾ ಅಕ್ಷರಗಳನ್ನು ಬರೆಯುವ ಶೈಲಿ ನಿಮಗೆ ಮಾತ್ರ ತಿಳಿದಿರುವುದರಿಂದ ಬೇರೆ ಯಾರೂ ಇದನ್ನು ನಕಲು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೀವು ಗ್ಯಾಡ್ಜೆಟ್‌ ಬಳಸುತ್ತಿರುವ ರೀತಿಯಲ್ಲಿ ಬದಲಾವಣೆ ಆದರೆ ಅದು ತನ್ನಿಂದ ತಾನೇ ಅಪ್‌ಡೇಟ್‌ ಆಗುತ್ತದೆ.

ಈ ತಂತ್ರಜ್ಞಾನ ಎಷ್ಟೊಂದು ಸುಧಾರಿತ ಎಂದರೆ ಇದು ಬಳಕೆದಾರ ಗ್ಯಾಡ್ಜೆಟ್‌ ಬಳಸುವ ಸಂಪೂರ್ಣ  ವಿಧಾ­ನ/ಪ್ರವೃತ್ತಿಯನ್ನೇ ನೆನಪಿನಲ್ಲಿಟ್ಟು­ಕೊಂಡು ಆತನ ಹೆಸರಿನಲ್ಲಿ ಒಂದು ಪ್ರೊಫೈಲ್‌ ಸೃಷ್ಟಿಸಿಕೊಂಡಿರುತ್ತದೆ. ಪ್ರತಿ ಬಾರಿ ಸ್ಕ್ರೀನ್‌ ಮೇಲೆ ಬೆರಳಾಡಿಸಿದಾಗ ಇದು ಅಸಲಿ ಬಳಕೆದಾರನ ಸ್ಪರ್ಶವೇ ಇಲ್ಲವೇ ಎನ್ನು­ವುದನ್ನು ಖಾತರಿಪಡಿಸಿ­ಕೊಳ್ಳುತ್ತದೆ.

ಸ್ಮಾರ್ಟ್‌­ಫೋನ್‌ ಅಥವಾ ಟ್ಯಾಬ್ಲೆ­ಟ್‌ನಲ್ಲಿ ಹಲವು ಪಾಸ್‌ವರ್ಡ್‌ಗಳನ್ನು ಬಳಸಲಾಗುತ್ತದೆ. ಕೆಲವರು ಮೆಸೇಜ್‌ ಇನ್‌ಬಾಕ್ಸ್‌ ಮಾತ್ರ ಲಾಕ್‌ ಮಾಡಿ­ರುತ್ತಾರೆ. ಇದಕ್ಕೆ ಪ್ರತ್ಯೇಕ ಪಾಸ್‌ವರ್ಡ್‌ ನೀಡಿರುತ್ತಾರೆ. ಇನ್ನು ಕೆಲವರು ಅಪ್ಲಿ­ಕೇಷ­ನ್ಸ್‌ಗಳಿಗೆ, ಕಾಲ್‌ಲಾಗ್‌ಗೆ, ಫೋಟೊ ಗ್ಯಾಲರಿ, ಇಂಟರ್‌ನೆಟ್ ಡೇಟಾಗೆ ಬೇರೆ ಬೇರೆ  ಪಾಸ್‌ವರ್ಡ್‌ ರಚಿಸಿಕೊಂಡಿರುತ್ತಾರೆ. ಹೀಗೆ ಬಹು­ವಿಧದ ಪಾಸ್‌ವರ್ಡ್‌ಗಳನ್ನು ಬಳಸು­ವವರಿಗೆ ‘ಟಚ್‌ ಸಿಗ್ನೇಚರ್‌’ ಹೆಚ್ಚು ಪ್ರಯೋಜ­ನಕಾರಿ ಎನ್ನುತ್ತಾರೆ ಈ ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸಿದ ಜಾರ್ಜಿಯಾ ಟೆಕ್‌ ಕಾಲೇಜಿನ ಕಂಪ್ಯೂಟಿಂಗ್‌ ವಿಭಾಗದ ಪ್ರಾಧ್ಯಾಪಕ ಪೊಲೊ ಚಾವ್.

ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ ಮೇಲೆ ಬೆರಳಾ­ಡಿಸುವಾಗ ಬೀಳುವ ಒತ್ತಡ ಬಳಕೆದಾ­ರರಿಂದ ಬಳಕೆದಾರರಿಗೆ ಭಿನ್ನವಾಗಿ­ರುತ್ತದೆ. ಲೇಟಂಟ್‌ ಗೆಸ್ಚರ್‌ ಇದನ್ನು ನಿಖರವಾಗಿ ಗುರುತಿಸುತ್ತದೆ. ಬೆರಳಚ್ಚಿನಂ­ತೆಯೇ ಈ ತಂತ್ರಜ್ಞಾನವನ್ನು ನಕಲಿಸಲು ಸಾಧ್ಯವಿಲ್ಲ. ಉದಾಹರಣೆಗೆ ಗಂಡ, ಹೆಂಡತಿ ಮಕ್ಕಳು ಒಂದೇ ಒಂದು ಗ್ಯಾಡ್ಜೆಟ್‌  ಬಳಸುತ್ತಿದ್ದರೆ ಮೂವರ ಹೆಸರಿನಲ್ಲೂ ಪ್ರತ್ಯೇಕ­ವಾಗಿ ಪಾಸ್‌­ವರ್ಡ್‌ ಪ್ರೊಪೈಲ್‌­ಗಳನ್ನು ಸೃಷ್ಟಿಸಿ­ಕೊಳ್ಳಬ­ಹುದು ಎನ್ನು­ತ್ತಾರೆ  ಈ ತಂಡದ ಮತ್ತೊಬ್ಬ ಸದಸ್ಯ ಭಾರತೀಯ ಮೂಲದ ಪ್ರೇಮ್‌ ಕುಮಾರ್‌ ಸರವಣನ್‌.

ಬಹೂಪಯೋಗಿ ಆ್ಯಪ್ ‘ಎಮು’
ಸ್ಮಾರ್ಟ್ ಫೋನ್‌ನಲ್ಲಿ ಬ್ಯಾಟರಿ ಉಳಿಸಲು, ಕ್ಯಾಲೆಂಡರ್ ನಿರ್ವಹಣೆ, ಮೆಸೇಜ್ ಕಳುಹಿಸಲು ಪ್ರತ್ಯೇಕ ಪ್ರತ್ಯೇಕವಾದ ಅಪ್ಲಿಕೇಷನ್‌ಗಳನ್ನು (ಆ್ಯಪ್) ಬಳಸುವುದಕ್ಕಿಂತ ಈ ಎಲ್ಲ ಅಗತ್ಯಗಳಿಗೂ ಒಂದೇ ಆ್ಯಪ್‌ ಇದ್ದಿದ್ದರೆ ಕೆಲಸ ಬಹಳ ಸಲೀಸಾಗುತ್ತಿತ್ತು ಎಂದು ಹಲವು ಬಳಕೆದಾರರಿಗೆ ಅನ್ನಿಸದೇ ಇರದು.

ಬಹುಶಃ ಸ್ಯಾನ್‌ಫ್ರಾನ್ಸಿಸ್ಕೋದ ತಜ್ಞರ ತಂಡಕ್ಕೂ ಇಂತಹ ಯೋಚನೆ ಬಂದಿರಬಹುದು. ಹೀಗಾಗಿಯೇ ಬಹುಪಯೋಗಿ ‘ಎಮು’ (Emu) ಆ್ಯಪ್ ತಯಾರಿಸಿದ್ದಾರೆ.

ಒಬ್ಬ ಬುದ್ಧಿವಂತ ಆಪ್ತ ಕಾರ್ಯದರ್ಶಿಯ ಕಾರ್ಯ­ಶೈಲಿಯಲ್ಲಿಯೇ ಈ ಅಪ್ಲಿಕೇಷನ್‌ ಸಹ ನಿಮ್ಮ ದಿನಚರಿ  ನಿರ್ವಹಿಸಬಲ್ಲದು.
ಪ್ರಮುಖ ವ್ಯಕ್ತಿಗಳೊಂದಿಗಿನ ಭೇಟಿ, ದಿನದ ವಿಶೇಷ ಕಾರ್ಯಕ್ರಮಗಳ ನೆನಪು, ಆಪ್ತರ, ಪ್ರೇಯಸಿಯ ಹುಟ್ಟುಹಬ್ಬ­ದಂತಹ ವಿಶೇಷ ದಿನಗಳು... ಹೀಗೆ ಎಲ್ಲಾ ಕೆಲಸಗಳನ್ನೂ  ಹೊಂದಿಸಿ­ಕೊಳ್ಳಲು ಈ ಆ್ಯಪ್ ಬಹಳ ಸೂಕ್ತವಾದುದಾಗಿದೆ ಎನ್ನುವುದು ತಜ್ಞರ ಅಭಿಮತ.

ಪ್ರೇಯಸಿ ಜತೆ ಸಿನಿಮಾ ನೋಡಲು, ಡಿನ್ನರ್ ಮಾಡಬಯಸುವವರಿಗಂತೂ ಇದು ಹೆಚ್ಚು ಉಪಯುಕ್ತ. ಇಬ್ಬರ ಮನೆಗೂ ಹತ್ತಿರದ ಥಿಯೇಟರ್ ಎಲ್ಲಿದೆ? ಅಲ್ಲಿ ಯಾವ ಸಿನಿಮಾ ನಡೆಯುತ್ತಿದೆ? ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶವಿದೆಯೇ? ಸಿನಿಮಾ ನೋಡಿದ ನಂತರ ಬಾಯಿರುಚಿಗಾಗಿ ಹೋಗುವುದಾದರೆ ಹತ್ತಿರದ  ರೆಸ್ಟೋರೆಂಟ್‌ನಲ್ಲಿ ಟೇಬಲ್ ಬುಕ್ಕಿಂಗ್  ಲಬ್ಯವಿದೆಯೇ? ಎಂಬ ಎಲ್ಲ ಮಾಹಿತಿಗಳನ್ನೂ ಈ ಆ್ಯಪ್‌ ಪ್ರೀತಪಾತ್ರರಿಬ್ಬರಿಗೂ ಒಂದೇ ಸಮಯದಲ್ಲಿ ಒದಗಿಸಬಲ್ಲದಾಗಿದೆ.

ಸ್ನ್ಯಾಪ್ ಶಾಟ್, ರೆಸ್ಟೋರೆಂಟ್ ಜಾಗ, ಟೇಬಲ್ ರಿಸರ್ವೇಷನ್, ಇತ್ಯಾದಿ ಮಾಹಿತಿಗಳನ್ನು ಆ ಮೆಸೇಜ್ ಜತೆಗೇ ಲಗತ್ತಿಸಬಹುದಾಗಿದೆ.
ಡ್ರೈವ್ ಮಾಡುವಾಗ ಮೊಬೈಲಿಗೆ ಬರುವ ಮೆಸೇಜ್‌ಗಳಿಗೂ ಈ ಆ್ಯಪ್‌ ಸ್ವಯಂಚಾಲಿತವಾಗಿಯೇ ಪ್ರತಿಕ್ರಿಯೆ ನೀಡಬಲ್ಲದಾಗಿದೆ. ಅಷ್ಟರ ಮಟ್ಟಿಗೆ ಡ್ರೈವಿಂಗ್‌ ವೇಳೆ ಮೊಬೈಲ್‌ ಮೆಸೇಜಿಂಗ್‌ ಬಹಳ ಸುಲಭದ್ದೆನಿಸಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT