ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿಗಾಗಿ ಅಲೆದಾಡಿದ ಬಂಡೆ ಪತ್ನಿ

ಎಸ್ಐ ಕುಟುಂಬಕ್ಕೆ ಇನ್ನೂ ಸಿಗದ ಪರಿಹಾರ
Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರ್ಗಿಯ ಸ್ಟೇಷನ್‌ ಬಜಾರ್ ಠಾಣೆ ಎಸ್‌ಐ ಮಲ್ಲಿಕಾರ್ಜುನ್‌ ಬಂಡೆ ಅವರು ರೌಡಿಯ ಗುಂಡೇಟಿಗೆ ಬಲಿಯಾಗಿ ಒಂದು ವರ್ಷ ಒಂಬತ್ತು ತಿಂಗಳು ಕಳೆದರೂ ಸರ್ಕಾರದಿಂದ ಸಿಗಬೇಕಾದ ಕೆಲ ಪರಿಹಾರಗಳು ಇನ್ನೂ ಅವರ ಕುಟುಂಬವನ್ನು ತಲುಪಿಲ್ಲ.

ಪರಿಹಾರ ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿರುವ ಬಂಡೆ ಪತ್ನಿ ಮಲ್ಲಮ್ಮ, ‘ಸರ್ಕಾರದ ಭಿಕ್ಷೆ ಬೇಕಾಗಿಲ್ಲ. ನಮಗೂ ತಾಳ್ಮೆ– ಸ್ವಾಭಿಮಾನ ಇದೆ. ಪಿಂಚಣಿಗಾಗಿ ಇನ್ನು ಯಾರ ಮುಂದೆಯೂ ಹೋಗಿ ನಿಲ್ಲುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಪತಿ ಸಾವಿಗೆ ಪರಿಹಾರದ ರೂಪದಲ್ಲಿ ₹ 50 ಲಕ್ಷದ ಚೆಕ್ ನೀಡಿದ್ದ ಸರ್ಕಾರ, ಸೇವಾವಧಿ ಪೂರ್ಣ ವೇತನ ಹಾಗೂ ಪಿಂಚಣಿ ನೀಡುವುದರ ಜತೆಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವ ಭರವಸೆ ನೀಡಿತ್ತು. ಆದರೆ, ಇವೆಲ್ಲ ಆ ಕ್ಷಣದ ಹೇಳಿಕೆಗಳಿಗಷ್ಟೇ ಸೀಮಿತವಾದವು’ ಎಂದು ನೋವಿನಿಂದ ನುಡಿದರು.

‘ಪತಿಗೆ ಸಿಗುತ್ತಿದ್ದ ₹ 26 ಸಾವಿರ ವೇತನವನ್ನು ಪ್ರತಿ ತಿಂಗಳು ನೀಡುತ್ತೇವೆ. ಐದು ವರ್ಷಗಳ ನಂತರ ಮಾಸಿಕ ₹ 7 ಸಾವಿರ ಕೊಡುತ್ತೇವೆ ಎಂದು ಸರ್ಕಾರ ತಿಳಿಸಿತ್ತು. ಅದಕ್ಕೆ ನಾನು ಒಪ್ಪಲಿಲ್ಲ. ಪತಿ ಕರ್ತವ್ಯದ ಅವಧಿಯಲ್ಲಿ ಮೃತಪಟ್ಟಿದ್ದರಿಂದ ಅವರ ನಿವೃತ್ತಿ ದಿನಾಂಕದವರೆಗೂ ಮಾಸಿಕ ₹ 26 ಸಾವಿರವನ್ನೇ ನೀಡಬೇಕೆಂದು ಒತ್ತಾಯಿಸಿದ್ದೆ.

‘ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿಪಿ, ಎಡಿಜಿಪಿಗಳು, ಸಂಬಂಧಪಟ್ಟ ಎಸ್ಪಿಗಳ ಕಚೇರಿಗೆ ತೆರಳಿ ಮನವಿ ಮಾಡಿದ್ದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.   

‘ಈಗ ಅಂಗನವಾಡಿಯ ಮೇಲ್ವಿಚಾರಕಿ ಆಗಿದ್ದೇನೆ. ಏಳು ವರ್ಷದ ಮಗಳು ಹಾಗೂ ಮೂರು ವರ್ಷದ ಮಗನಿದ್ದಾನೆ. ಬರುವ ವೇತನದಲ್ಲಿ ಕುಟುಂಬದ  ನಿರ್ವಹಣೆ ಕಷ್ಟವಾಗುತ್ತಿದೆ. ಮಕ್ಕಳ ಭವಿಷ್ಯದ ಬಗ್ಗೆಯೂ ಸರ್ಕಾರ ಚಿಂತಿಸುತ್ತಿಲ್ಲ. ಇಂಥ ವ್ಯವಸ್ಥೆಯನ್ನು ನೆಚ್ಚಿಕೊಂಡು ಪೊಲೀಸರೇಕೆ ಜೀವದ ಹಂಗು ತೊರೆದು ಕೆಲಸ ಮಾಡಬೇಕು’ ಎಂದು ಮಲ್ಲಮ್ಮ ಪ್ರಶ್ನಿಸಿದರು.

2014ರ ಜ.14ರಂದು ರೋಜಾ ಠಾಣೆ ವ್ಯಾಪ್ತಿಯಲ್ಲಿ ಅಡಗಿದ್ದ ರೌಡಿ ಮುನ್ನಾನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಗುಂಡಿನ ದಾಳಿ ನಡೆಸಿದ್ದ. ಆಗ ಬಂಡೆ ಸೇರಿದಂತೆ ಎಸ್‌ಐ ಹಾಗೂ ಎಎಸ್‌ಐ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದ ಬಂಡೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಸದ್ಯದಲ್ಲೇ ಪರಿಹಾರ
‘ಘೋಷಣೆ ಮಾಡಿದ್ದರಲ್ಲಿ ಕೆಲವು ಪರಿಹಾರಗಳನ್ನು ಈಗಾಗಲೇ ಬಂಡೆ ಕುಟುಂಬಕ್ಕೆ ಒದಗಿಸಲಾಗಿದೆ.  ಉಳಿದ ಸವಲತ್ತುಗಳನ್ನು ಸದ್ಯದಲ್ಲೇ ಪೂರೈಸಲಾಗುವುದು. ಸಿಬ್ಬಂದಿ ಹಾಗೂ ಅವರ ಕುಟುಂಬದ ಕಲ್ಯಾಣವೇ ನಮ್ಮ ಹೊಣೆ’ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎಸ್‌.ಕೆ.ಪಟ್ಟನಾಯಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT